ಸಂಘವು ನಡೆದು ಬಂದ ದಾರಿ
ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ನವೀಕೃತ ಕಟ್ಟಡ‘ ಸಾಹಿತ್ಯ ಸದನ’ದ ಉದ್ಘಾಟನೆಯನ್ನು ಇದೇ 13ರಂದು ಬೆಳಿಗ್ಗೆ 10.30ಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಲೇಖಕಿ ಬಿ ಎಂ ರೋಹಿಣಿಯವರು ಸಂಘವು ನಡೆದು ಬಂದ ಹಾದಿಯ ಬಗ್ಗೆ ಬರೆದಿದ್ದಾರೆ
ಅಂತಾರಾಷ್ಟ್ರೀಯ ಮಹಿಳಾ ದಶಕ (1975-1985)ದ ಅವಧಿಯಲ್ಲಿ ಮಹಿಳಾ ಸಂಘಟನೆಗಳು ಹುಟ್ಟಿಕೊಂಡವು. ಅನೇಕ ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ಆಗ ತಾನೇ ಪ್ರವೇಶ ಪಡೆದಿದ್ದರು ಮಾತ್ರವಲ್ಲ ಉತ್ತಮ ಕೃತಿಗಳನ್ನು ಪ್ರಕಟಿಸಿದ್ದರು. ಆದರೆ ಆಗ ಅದನ್ನು ಗುರುತಿಸುವವರೇ ವಿರಳವಾಗಿದ್ದ ಕಾಲವಾಗಿತ್ತು. ಇಂತಹ ಸಮಯದಲ್ಲಿ ಕರ್ನಾಟಕ ಲೇಖಕಿಯರ ಸಂಘವು (1979) ಸ್ಥಾಪನೆಯಾಗಿ ಮಹಿಳೆಯರ ಸಾಹಿತ್ಯಾಸಕ್ತಿಗೆ ಪ್ರೋತ್ಸಾಹ ನೀಡತೊಡಗಿತು. ಇದು ನಮಗೆ ಪ್ರೇರಣೆಯಾಯಿತು. ಮಂಗಳೂರಿನ ಕನ್ನಡ ಸಂಘದ ಕಾರ್ಯದರ್ಶಿಯಾಗಿದ್ದ ಚಂದ್ರಕಲಾ ನಂದಾವರ ಇವರು ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಕಾಸರಗೋಡಿನ ಕನ್ನಡ ಸಂಘದ ಸಹಯೋಗದೊಂದಿಗೆ 1986ರಲ್ಲಿ ಮಹಿಳಾ ಸಾಹಿತ್ಯಗೋಷ್ಠಿಯೊಂದನ್ನು ಇಲ್ಲಿ ಏರ್ಪಡಿಸಿದರು. ಮರುವರ್ಷ 1987ರಲ್ಲಿ ಪುತ್ತೂರಿನ ಕರ್ನಾಟಕ ಸಂಘವು ಮಹಿಳಾ ಸಾಹಿತ್ಯಗೋಷ್ಠಿಯೊಂದನ್ನು ಅಲ್ಲಿ ಆಯೋಜಿಸಿತು. ಶ್ರೀಯುತ ಬಿ.ವಿ. ಅರ್ತಿಕಜೆ ಮತ್ತು ಬೋಳಂತಕೋಡಿ ಈಶ್ವರ ಭಟ್ಟರು ಲೇಖಕಿಯರು ಸಂಘಟಿತರಾಗುವಂತೆ ಪ್ರೋತ್ಸಾಹಿಸಿದರು. ಇದು ಮುಂದೆ 5-12-1987ರಲ್ಲಿ ಮಂಗಳೂರಿನಲ್ಲಿ ಪದ್ಮಾ ಶೆಣೈ ಅವರ ಅಧ್ಯಕ್ಷತೆಯಲ್ಲಿ ಕರಾವಳಿ ಲೇಖಕಿಯರ ಸಂಘ ಸ್ಥಾಪನೆಗೆ ನಾಂದಿಯಾಯಿತು.
ವಾಚಕಿಯರನ್ನು ಸೇರಿಸಿಕೊಂಡು ಸಂಘಟನೆ ಮಾಡಿದ್ದು ಬಹುಶಃ ಕರಾವಳಿಯ ಈ ಸಂಘ ಮಾತ್ರವೆಂಬ ಅಭಿಮಾನ ನಮಗಿದೆ. ಈ ವಾಚಕಿಯರಲ್ಲಿ ನೃತ್ಯ ವಿದುಷಿಯರು, ಸಂಗೀತ ವಿದುಷಿಯರು, ಚಿತ್ರಕಲಾವಿದೆಯರು, ರಂಗನಟಿಯರು ಹೀಗೆ ಭಿನ್ನ ಭಿನ್ನ ಕಲೆಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತೆಯರಿದ್ದರು. ಬರೆಯುವ ಆಸಕ್ತಿಯ ಜೊತೆಗೇ ಓದುವ ಆಸಕ್ತಿಯನ್ನು ಬೆಳೆಸುವ ಉದ್ದೇಶವು ಸಾರ್ಥಕವಾಯಿತು. ಯಾಕೆಂದರೆ ಅನೇಕ ವಾಚಕಿಯರು, ಲೇಖಕಿಯರಾಗಿ ಬಳಿಕ ಬೆಳಕಿಗೆ ಬಂದರು. ಕರಾವಳಿಯ ಉಡುಪಿ, ಕಾಸರಗೋಡು, ದಕ್ಷಿಣ ಕನ್ನಡದ ಉದಯೋನ್ಮುಖ ಲೇಖಕಿಯರು ಒಟ್ಟು ಸೇರಿ ಅಂದು ಸಂಘವು ಸ್ಥಾಪನೆಗೊಂಡಿತು. ಸುಮಾರು 470ರಷ್ಟು ಆಜೀವ ಸದಸ್ಯೆಯರುಳ್ಳ ಈ ಸಂಘಕ್ಕೆ ಈಗ 37ರ ಹರೆಯ.
ಸಂಘಕ್ಕೆ ಸ್ವಂತ ಸೂರಿನ ಹಂಬಲ ಹುಟ್ಟಿತು. ದೇರೆಬೈಲಿನ ಜಿಲ್ಲಾಡಳಿತವು ನೀಡಿದ ಐದು ಸೆಂಟ್ಸ್ ಜಾಗದಲ್ಲಿ 18-03-2000ರಂದು ಸಂಘವು ಸ್ವಂತ ಕಟ್ಟಡಕ್ಕೆ ಶಿಲಾನ್ಯಾಸ ಮಾಡಿತು. ಹಿತೈಷಿಗಳ, ದಾನಿಗಳ ನೆರವಿನಿಂದ 19-08-2006ರಲ್ಲಿ ಸ್ವಂತ ಕಟ್ಟಡ ಸಾಹಿತ್ಯ ಸದನ ನಿರ್ಮಾಣಗೊಂಡು ಉದ್ಘಾಟನೆಗೊಂಡಿತು. ಕರಾವಳಿ ಲೇಖಕಿಯರ ವಾಚಕಿಯರ ಈ ಸಂಘವು ಅನೇಕ ಸವಾಲುಗಳನ್ನು, ಎಡರು ತೊಡರುಗಳನ್ನು ಎದುರಿಸುತ್ತಾ ಈ ಮಟ್ಟಕ್ಕೆ ಸಾಧನೆ ಮಾಡಲು ಈವರೆಗಿನ ಅಧ್ಯಕ್ಷೆಯರು, ಕಾರ್ಯಕಾರೀ ಸಮಿತಿ ಮತ್ತು ಸರ್ವ ಸದಸ್ಯೆಯರ ಪೂರ್ಣ ರೀತಿಯ ಬೆಂಬಲವೇ ಕಾರಣ. ವಿಚಾರ ಸಂಕಿರಣ, ಕವಿಗೋಷ್ಠಿ, ಕೃತಿ ಬಿಡುಗಡೆ, ವಿಮರ್ಶಾ ಸ್ಪರ್ಧೆ, ಆಕಾಶವಾಣಿ ಕಾರ್ಯಕ್ರಮ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಿರಂತರವಾಗಿ ವರ್ಷವಿಡೀ ನಡೆಸುತ್ತಾ ಬಂದಿದೆ.
ಈ ಎಲ್ಲಾ ಹಂತಗಳನ್ನು ದಾಟಿ ಬರಲು ಸಂಘದ ಸದಸ್ಯೆಯರ ಬೆಂಬಲವು ಮುಖ್ಯವಾಗಿತ್ತು. ಮುಂದಿನ ವರ್ಷಗಳಲ್ಲಿ ಮೊದಲ ಮಹಡಿಯು MRPL ಅವರ ಧನಸಹಾಯದಿಂದ ನಿರ್ಮಾಣಗೊಂಡು ಅದರಲ್ಲಿ ಈಗ ನಮ್ಮ ಗ್ರಂಥಾಲಯವಿದೆ. ಸುಮಾರು ಆರು ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವಾಗಿದೆ. ಅಧ್ಯಯನಾಸಕ್ತರು ಈ ಗ್ರಂಥ ಭಂಡಾರದ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆ. ಈ ವರ್ಷ ಆರ್‌ಪಿಎಲ್‌ನ ಸಿಎಸ್‌ಆರ್ ನಿಧಿ ರೂ. 14.60 ಲಕ್ಷ ಹಾಗೂ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ರೂ. 6 ಲಕ್ಷದ ಅನುದಾನದಿಂದ ನವೀಕರಿಸಲಾಗಿದ್ದು ವಾಚನಾಲಯ ಮತ್ತು ಲೇಖಕಿಯರ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಸೂಕ್ತವಾಗಿ ಪುನರ್‌ನಿರ್ಮಿಸಲಾಗಿದೆ. 13-07-2024ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಉದ್ಘಾಟನೆಗೊಳ್ಳಲಿರುವ ಈ ಕಟ್ಟಡದ ನಿರ್ಮಾಣಕ್ಕೆ ತನು ಮನ ಧನದ ಸಹಕಾರವನ್ನು ನೀಡಿದ ಸರ್ವರನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತೇವೆ.
ಸಂಘದ ಲೇಖಕಿಯರಲ್ಲಿ ಹಲವರು ರಾಜ್ಯ ಮತ್ತು ದೇಶಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆಂಬುದು ನಮಗೆ ಅಭಿಮಾನದ ವಿಷಯವಾಗಿದೆ. ಕನ್ನಡ ಮಾತ್ರವಲ್ಲ, ತುಳು, ಕೊಂಕಣಿ, ಇಂಗ್ಲಿಷ್ ಭಾಷೆಯಲ್ಲೂ ಕೃತಿಯನ್ನು ರಚಿಸಿದ ಲೇಖಕಿಯರು ನಮ್ಮ ಸದಸ್ಯೆಯರು ಎಂಬುದು ಗಮನಾರ್ಹವಾಗಿದೆ. ಸರ್ವ ಧರ್ಮ ಸಮನ್ವಯ ಮತ್ತು ಭಾವೈಕ್ಯವೇ ಸಂಘದ ಪ್ರಧಾನ ಉದ್ದೇಶವಾಗಿದೆ.
1993ರಲ್ಲಿ ಜಿಲ್ಲೆಯ ಕವಯಿತ್ರಿಯರ ಆಯ್ದ ಕವನಗಳನ್ನು ‘ಕರೆ’ ಎಂಬ ಸಂಕಲನದಲ್ಲಿ ಸಂಘವು ಪ್ರಕಟಿಸಿತು. 1998ರಲ್ಲಿ ‘ದಕ್ಷಿಣ ಕನ್ನಡದ ಮೊದಲ ಲೇಖಕಿಯರು’ ಎಂಬ ಕೃತಿಯನ್ನು ಪ್ರಕಟಿಸಿತು. ಈ ವರೆಗೆ ಅಜ್ಞಾತರಾಗಿದ್ದ ಲೇಖಕಿಯರನ್ನು ಅವರ ಸಾಧನೆಯನ್ನು ದಾಖಲಿಸಿದ ಈ ಕೃತಿಗಳು ಕರಾವಳಿಯ ಸಾಹಿತ್ಯ ಚರಿತ್ರೆಯಲ್ಲಿ ಒಂದು ಮೈಲಿಗಲ್ಲಾಗಿ ಗುರುತಿಸಲ್ಪಟ್ಟಿವೆ.
ಕಳೆದ 37 ವರ್ಷಗಳಿಂದ ಕರಾವಳಿಯ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲಿ ಲೇಖಕಿಯರ ಸಂಘವು ಮಹತ್ವದ ಕೆಲಸಗಳನ್ನು ಮಾಡಿದೆ. ಈ ವರ್ಷ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿ ಸಂಘದ ಮುಡಿಗೊಂದು ಗರಿಯನ್ನು ಸೇರಿಸಿದೆ. ಯುವ ಪೀಳಿಗೆಯಲ್ಲಿ ಸಾಹಿತ್ಯದ ಆಸಕ್ತಿಯನ್ನು ಮೂಡಿಸಲು ಕಾಲೇಜುಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಸಂಯೋಜಿಸುವುದರ ಜತೆಗೆ ವಿವಿಧ ರೀತಿಯ ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ಸಂಘದ ಅಭಿಮಾನಿಗಳು, ಹಿರಿಯ ಲೇಖಕಿಯರು ನೀಡಿದ ದತ್ತಿನಿಧಿಯಿಂದ ಈ ಸಾಹಿತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಿ, ಬಹುಮಾನ ಮತ್ತು ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವುದು ಸಂಘಕ್ಕೆ ಗೌರವದ ವಿಷಯವಾಗಿದೆ.
ಸಂಘವು ಸ್ಥಾಪನೆಯಾದ ಪ್ರಾರಂಭದಲ್ಲಿ ಕರಾವಳಿಯರ ಲೇಖಕಿಯರು ಬರೆದದ್ದು ಸಾಹಿತ್ಯವೆಂದು ಮೆಚ್ಚುವವರ, ಗೌರವಿಸುವವರ ಸಂಖ್ಯೆ ಬಹಳ ಕಡಿಮೆ ಇತ್ತು. ಲೇಖಕಿಯರಿಗೆ ತಮ್ಮ ಕೃತಿಗಳನ್ನು ಪ್ರಕಟಿಸುವ ಅವಕಾಶವೂ ಇರಲಿಲ್ಲ. ಬರೆದದ್ದನ್ನು ವಿಮರ್ಶಿಸುವವರೂ ಇರಲಿಲ್ಲ. ಈಗ ಕರಾವಳಿಯಲ್ಲಿ ನೂರಾರು ಮಂದಿ ಭರವಸೆಯ ಲೇಖಕಿಯರು ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧರಾಗಿದ್ದಾರೆ. ಅವರ ಪಟ್ಟಿ ದೀರ್ಘವಾಗಿದೆ. ಕವಯಿತ್ರಿಯರು, ಕಾದಂಬರಿಗಾರ್ತಿಯರು, ಕತೆಗಾರ್ತಿಯರು, ನಾಟಕಗಾರ್ತಿಯರು, ವಿಮರ್ಶಕಿಯರು ಹೀಗೆ ಎಲ್ಲಾ ಪ್ರಕಾರಗಳಲ್ಲಿ ಅತ್ಯುತ್ತಮ ಕೃತಿಗಳನ್ನು ರಚಿಸಿದ ಕೀರ್ತಿ ಕರಾವಳಿಗಿದೆ.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕರಾವಳಿಯ ಸಾಹಿತ್ಯಕ್ಕೆ ಒಂದು ವಿಶೇಷ ಸ್ಥಾನವಿದೆ. ಹಾಗೆಯೇ ಮಹಿಳೆಯರು ಬರೆದ ಕೃತಿಗಳಿಗೂ ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಮಹತ್ವದ ಮತ್ತು ಉನ್ನತವಾದ ಸ್ಥಾನ ಲಭಿಸಿದೆ. ನಮ್ಮ ಸಂಘದ ಸದಸ್ಯೆಯರು ಎಂಬ ಧನ್ಯತಾ ಭಾವ ಈ ಕರಾವಳಿ ಲೇಖಕಿಯರ-ವಾಚಕಿಯರ ಸಂಘಕ್ಕೆ ಇದೆ ಎಂದು ನಮ್ರತೆಯಿಂದ ಹೇಳಬಯಸುತ್ತೇನೆ. ಪದ್ಮಾ ಶೆಣೈಯವರಿಂದ ಮೊದಲ್ಗೊಂಡು ಆನಂದಿ ಸದಾಶಿವ ರಾವ್, ಡಾ. ಕೆ.ವಿ ಜಲಜಾಕ್ಷಿ, ಸಾರಾ ಅಬೂಬಕ್ಕರ್, ಮನೋರಮಾ ಎಮ್. ಭಟ್, ಡಾ. ಸಬೀಹಾ ಭೂಮಿಗೌಡ, ಲೀಲಾವತಿ ಎಸ್. ರಾವ್, ಸಾವಿತ್ರಿ ಎಮ್. ಭಟ್, ರತ್ನಾ ಜಿ. ಕೆ. ಶೆಟ್ಟಿ, ಚಂದ್ರಕಲಾ ನಂದಾವರ, ಎ.ಪಿ. ಮಾಲತಿ, ಜಾನಕಿ ಬ್ರಹ್ಮಾವರ, ಡಾ. ಶೈಲಾ ಯು., ವಿಜಯಲಕ್ಷ್ಮೀ ಭಟ್ ಉಳುವಾನ, ಶಶಿಲೇಖಾ ಬಿ. ಮುಂತಾದವರ ಅಧ್ಯಕ್ಷತೆಯಲ್ಲಿ ಮುನ್ನಡೆಯುತ್ತಾ ಬಂದು ಈಗ ಡಾ. ಜ್ಯೋತಿ ಚೇಳಾೈರು ಇವರ ಅಧ್ಯಕ್ಷತೆಯಲ್ಲಿ ಸಂಘವು ಗಟ್ಟಿ ಹೆಜ್ಜೆಗಳನ್ನೂರುತ್ತಾ ಸಾಗುತ್ತಿದೆ. ಸಂಘವು ಕರಾವಳಿಯ ಸಾಹಿತ್ಯಾಸಕ್ತ ಮಹಿಳೆಯರಿಗೆ ಭರವಸೆಯ ದಾರಿದೀಪವಾಗಿ ಮಮತೆಯ ಆಸರೆಯಾಗಿ, ಆಪ್ತ ಸಖಿಯಾಗಿ ಕೈ ಹಿಡಿದು ಮುನ್ನಡೆಸುತ್ತಿದೆ.