ಮಂಗಳೂರಿನ ಬಿಜೈ ಯಲ್ಲಿ ಜಾರ್ಜ್‌ ಫೆರ್ನಾಂಡಿಸ್‌ ರಸ್ತೆ ಉದ್ಘಾಟನೆ

Most read

ಮಂಗಳೂರು, 6-7-2024 : “ಆಯಸ್ಕಾದಂತೆ ಸೆಳೆಯುವ ಆಕರ್ಷಕ ವ್ಯಕ್ತಿತ್ವದ ಜಾರ್ಜ್‌ ಫೆರ್ನಾಂಡಿಸ್‌ ಅವರು ತಮ್ಮ ವಿಶಿಷ್ಟ ನಡೆ ನುಡಿ, ವ್ಯಕ್ತಿತ್ವ, ಚಾತುರ್ಯ, ನಾಯಕತ್ವ, ಇತ್ಯಾದಿ ಗುಣಗಳಿಂದ ದೇಶದ ಉದ್ದಗಲಕ್ಕೂ ಪರಿಚಿತರಾಗಿದ್ದರು. ಕಾರ್ಮಿಕರು, ಶೋಷಿತರು ಸೇರಿದಂತೆ  ದನಿ ಇಲ್ಲದವರಿಗೆ ದನಿಯಾಗಿ, ಜನ ಒಗ್ಗೂಡುವ ರೀತಿಯಲ್ಲಿ ನಡೆದು ತೋರಿದ ಅವರು ಎಲ್ಲರಿಗೂ ಪ್ರೇರಣೆಯಾಗಿದ್ದರು.  ನಾನು ಕೂಡಾ ವಿಶೇಷವಾಗಿ ಅವರಿಂದ ಪ್ರೇರಿತನಾಗಿದ್ದೇನೆ. ಚುನಾವಣೆಯ ಆರಂಭದ ದಿನ ಹಾಗೂ ಮತ ಎಣಿಕೆಯ ದಿನ ಅವರ ಸಮಾಧಿಗೆ ಕೈ ಮುಗಿದು ದಿನ ಆರಂಭಿಸಿದ್ದೆ. ಇಂತಹ ಧೀಮಂತ ನಾಯಕ ನಮ್ಮ ಊರಿನವರು ಎಂದು ಹೇಳಿಕೊಳ್ಳಲು ಹೆಮ್ಮಯಿದೆ”  ಎಂದು  ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಬ್ರಿಜೇಶ್‌ ಚೌಟ ಹೇಳಿದರು. ಅವರು ಮಂಗಳೂರಿನ ಬಿಜೈ ಯಲ್ಲಿ ಜಾರ್ಜ್‌ ಫೆರ್ನಾಂಡಿಸ್‌ ರಸ್ತೆಯ ಉದ್ಘಾಟನಾ ಸಮಾರಂಭದಲ್ಲಿ ಮಾತಾಡುತ್ತಿದ್ದರು.

ಮಂಗಳೂರಿನ ಬಿಜೈಯವರಾದ ಜಾರ್ಜ್‌ ಫೆರ್ನಾಂಡಿಸ್‌ ಅವರ ಹೆಸರನ್ನು ಶಾಶ್ವತವಾಗಿಸುವ ಹಾಗೂ ಹೊಸಪೀಳಿಗೆಗೆ ಅವರನ್ನು ಪರಿಚಯಿಸುವ  ಆಶಯದಲ್ಲಿ ನಗರದ ಸರ್ಕ್ಯೂಟ್‌ ಹೌಸ್‌ ನಿಂದ ಬಿಜೈ ಸರ್ಕಲ್‌ ತನಕದ ರಸ್ತೆಯನ್ನು  ʼಜಾರ್ಜ್‌ ಫೆರ್ನಾಂಡಿಸ್‌ ರಸ್ತೆʼ ಎಂದು ನಾಮಕರಣಮಾಡಿ, ಉದ್ಘಾಟನೆಯನ್ನು  ಶಾಸಕ ವೇದವ್ಯಾಸ ಕಾಮತ್‌ ನೆರವೇರಿಸಿದರು. ಬಳಿಕ ಸಭಾ ಕಾರ್ಯಕ್ರಮವು ಬಿಜೈ ಚರ್ಚ್‌ ಹಾಲ್‌ನಲ್ಲಿ ನಡೆಯಿತು.

“ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇದ್ದರೆ ಎಂತಹ ಸವಾಲನ್ನೂ ಎದುರಿಸಿ ಎತ್ತರಕ್ಕೇರಬಹುದು ಎನ್ನುವುದಕ್ಕೆ ಜಾರ್ಜ್‌ ಫೆರ್ನಾಂಡಿಸ್‌ ಅವರು  ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಈ ರಸ್ತೆಗೆ ಅವರ ಹೆಸರಿಟ್ಟು ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದ್ದೇವೆ” ಎಂದು ಶಾಸಕ ವೇದವ್ಯಾಸ್‌ ಕಾಮತ್‌ ಹೇಳಿದರು.

ಮತ್ತೋರ್ವ ಅತಿಥಿ ಕರ್ನಾಟಕ ವಿಧಾನ ಪರಿಷತ್‌ನ ಸದಸ್ಯ ಐವಾನ್‌ ಡಿ ಸೋಜ ಮಾತಾಡಿ “ಯಾವುದೇ ತತ್ವ ಸಿದ್ದಾಂತಗಳೊಡನೆ ರಾಜಿ ಮಾಡಿಕೊಳ್ಳದೆ ತನ್ನದೇ ಹಾದಿಯಲ್ಲಿ ನಡೆದ ಜಾರ್ಜ್‌ ದೇಶದ ಆಸ್ತಿಯಾಗಿ ಹುಟ್ಟಿಬಂದವರು” ಎಂದು ಶ್ಲಾಘಿಸಿದರು.

ಕಾರ್ಯಕ್ರಮದ ವಿಶೇಷ ಅತಿಥಿ ಜಾರ್ಜ್‌ ಅವರ ಸಹೋದರ ಮೈಕೆಲ್‌ ಫೆರ್ನಾಂಡಿಸ್‌ ತನ್ನ92 ರ ಹರೆಯದಲ್ಲೂ ಲವ ಲವಿಕೆಯಿಂದ ತನ್ನ ಅಣ್ಣನ ಬಗ್ಗೆ ಮಾತಾಡುತ್ತಿದ್ದಂತೆಯೇ ಇಡೀ ಸಭಾಂಗಣ ಸ್ತಬ್ದವಾಯಿತು.

ಜಾರ್ಜ್‌ ಅವರ ಸಹೋದರ ಮೈಕೆಲ್‌ ಫೆರ್ನಾಂಡಿಸ್‌

ಮೇಯರ್‌ ಸುಧೀರ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಭರತ್‌ ಶೆಟ್ಟಿ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಪ್ರತಿಪಕ್ಷ ನಾಯಕ ಪ್ರವೀಣ್‌ ಚಂದ್ರ ಆಳ್ವ,  ಲ್ಯಾನ್ಸಿಲಾಟ್‌ ಪಿಂಟೋ, ಗಣೇಶ್‌ ಕುಲಾಲ್‌, ಭರತ್‌ ಕುಮಾರ್‌, ಶ್ರೀಮತಿ ಶಕೀಲ ಕಾವ ಮುಂತಾದವರು ವೇದಿಕೆಯಲ್ಲಿದ್ದರು.

ಮಹಾನಗರಪಾಲಿಕೆಯ ಪಟ್ಟಣ ಯೋಜನೆಯ ಲೋಹಿತ್ ಅಮೀನ್‌ ಸ್ವಾಗತಿಸಿದರು. ರಸ್ತೆಗೆ ಜಾರ್ಜ್‌ ಹೆಸರಿಡುವ ಯೋಜನೆಯನ್ನು ಚಾಲನೆಗೆ ತರುವಲ್ಲಿ ಸುಮಾರು ಎರಡು ವರ್ಷಗಳ ಕಾಲ ಓಡಾಡಿದ ರಿಚರ್ಡ್‌ ಮೊರಾಸ್‌ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಂದನೀಯ ಗುರುಗಳಾದ ಜಾನ್‌ ಸಿಕ್ವೇರಾ ಆಶೀರ್ವಚನ ನೀಡಿದರು.

ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

More articles

Latest article