ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಅಸಮರ್ಪಕ ಶೌಚಾಲಯಗಳನ್ನು ಕುರಿತು ವರದಿ ನೀಡುವಂತೆ ರಾಷ್ಟ್ರೀಯ ಹಸಿರು ಮಂಡಳಿ (NGT) ಉತ್ತರ ಪ್ರದೇಶ ಸರ್ಕಾರ, ಪ್ರಯಾಗ್ ರಾಜ್ ಪ್ರಾಧಿಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.
ಸೂಕ್ತ ಮತ್ತು ಸಮರ್ಪಕ ಶೌಚಾಲಯಗಳ ವ್ಯವಸ್ಥೆ ಇಲ್ಲದಿರುವುದರಿಂದ ಯಾತ್ರಾರ್ಥಿಗಳು ಗಂಗಾ ನದಿಯ ದಡದಲ್ಲಿ ಬಯಲು ಶೌಚಕ್ಕೆ ತೆರಳುತ್ತಿದ್ದಾರೆ ಎಂದು ಈಚೆಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಮಹಾಕುಂಭ ಮೇಳ ನಡೆಯುತ್ತಿರುವ ಪ್ರಯಾಗರಾಜ್‌ನಲ್ಲಿ ಮೂರು ನದಿಗಳು ಸೇರುವ ವಿವಿಧ ಸ್ಥಳಗಳಲ್ಲಿ ಫೀಕಲ್ ಕೋಲಿಫಾರ್ಮ್ (ಎಫ್ಸಿ) ಬ್ಯಾಕ್ಟಿರಿಯಾ ಪ್ರಮಾಣವು ಅನುಮತಿಸಲ್ಪಟ್ಟ ಮಿತಿಗಿಂತ ಅಧಿಕ ಇದೆ. ನೀರು ಸ್ನಾನಕ್ಕೆ ಯೋಗ್ಯವಾದ ಗುಣಮಟ್ಟ ಹೊಂದಿಲ್ಲ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು (CPCB) ಈಚೆಗೆ ಎನ್ಜಿಟಿಗೆ ಮಾಹಿತಿ ನೀಡಿತ್ತು.
ಸಂಸ್ಕರಿಸದೇ ಇರುವ ನೀರು ಅಥವಾ ಕಲುಷಿತ ನೀರು ನದಿಗೆ ಸೇರ್ಪಡೆಗೊಂಡಾಗ ಮತ್ತು ಮಲದಲ್ಲಿ ಈ ಫೀಕಲ್ ಕೋಲಿಫಾರ್ಮ್ ಬ್ಯಾಕ್ಟಿರಿಯಾ ಕಂಡುಬರುತ್ತದೆ. ನೀರಿನಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳಿಗೆ ಈ ಬ್ಯಾಕ್ಷೀರಿಯಾಗಳು ಕಾರಣವಾಗುತ್ತವೆ. ಫೀಕಲ್ ಕೋಲಿಫಾರ್ಮ್ ಬ್ಯಾಕ್ಲೀರಿಯಾದ ಅನುಮತಿಸಿದ ಮಿತಿಯು ಪ್ರತಿ 100 ಮಿಲಿ ಲೀಟರ್ಗೆ 2,500 ಎಂಪಿಎನ್ (ಗರಿಷ್ಠ ಇರಬಹುದಾದ ಸಂಖ್ಯೆ) ಇರಬೇಕು ಎಂದು ಮಂಡಳಿ ನಿಯಮಗಳು ಹೇಳುತ್ತವೆ.