ವಾಹ್ ತಾಜ್! ಚಹದ ಖ್ಯಾತಿಯಲ್ಲಿ ಹೆಸರಾದ ನಮ್ಮ ಝಾಕಿರ್ ಹುಸೇನ್ ಇನ್ನಿಲ್ಲ ಎಂದಾಗ ಬಂದ ಒಂದೇ ಯೋಚನೆ, ಇದು ಸಾಧ್ಯವಿಲ್ಲ. ಹಾಗಾಗಕ್ಕೆ ಆಗಲ್ಲ. ನನಗೆ ಆತ ಅಮರ. ಹಾಗಾಗಿಯೇ ಅವನ ಸಾವು ಊಹಿಸಲೂ ಸಾಧ್ಯವಿಲ್ಲ. ನನ್ನ ಸ್ನೇಹಿತೆ ಲೆಸ್ಲಿ ಆತನ ಸಾವನ್ನು ಖಚಿತ ಪಡಿಸಿದಳು.
ದಿನವಿಡೀ ಆ ಪ್ರಪೋಸಲ್ಲು ಈ ಪ್ರಪೋಸಲ್ಲು ಅಂತ ಎಷ್ಟೇ ಬ್ಯುಸಿ ಇದ್ದರೂ ಏನೋ ನನ್ನ ಹೃದಯ ನಿಂತ ಹಾಗೆ ಆಯ್ತು. ಝಾಕಿರನ ಕೈ ತಬಲ ಮೇಲೆ, ಆ ಸದ್ದು ಎಲ್ಲಿದ್ದರೂ ಝಾಕಿರ್! ಎನ್ನುವಂತೆ ಮಾಡುವ ಒಂದು ಆಹ್ಲಾದ, ಆ ನಾದವೇ ಮೈವೆತ್ತಂತೆ….
ನಾನು ಸಂಗೀತ ಕಲಿಯುತ್ತಿರುವ ಈ ಆಯಿಸ್ಸಿನಲ್ಲಿ ಸುಮಾರು ಬಾರಿ ಝಾಕಿರ್ ಹುಸೇನರನ್ನು ಭೇಟಿಯಾಗಿದ್ದೇನೆ, ಅವರ ಮುಂದೆ ಹಾಡಿದ್ದೇನೆ, ಅವರ ಕಛೇರಿಗಳಿಗೆ ತಾನ್ಪುರ ನುಡಿಸಿದ್ದೇನೆ…. ಆದರೇ ಈ ಮನುಷ್ಯನಿಗೆ ವಯಸ್ಸಾಗಬಹುದು ಎಂಬ ಯೋಚನೆಯೇ ಮನಸ್ಸಿಗೆ ಬಂದಿರಲಿಲ್ಲ.
ಅಮರ
ಆ ಮರ,
ಅದು ಬೀಳುವುದೆಂದರೆ
ಅದೆಷ್ಟೋ ಮರಗಳು
ಬೇರು ಮೇಲಾಗಿ ಉರುಳಿದಂತೆ…
ಆ ಮರ ಬಿದ್ದರೆ
ಬಟ್ಟೆಗಳೇ ಮುಚ್ಚಿ ಹೋಗಿ
ನಾದಗಳು ಹೆಜ್ಜೆ ಎಲ್ಲಿ
ನೆಡುವುದು.
ಹೆಮ್ಮರವೊಂದು ಉರುಳಿ
ಕಾಡಿಗೆ ಮೌನ….
ಹೇಳಲೇನಿದೆ?
ಎದ್ದ ಸುಂಟರಗಾಳಿಯ
ಮೌನದಲ್ಲಿ ಆಮದಿನಲ್ಲಿ
ಸ್ವೀಕರಿಸಿ,
ಯಾತ್ರೆಯ ದಫನ್ ಮಾಡುವ
ಕೆಲಸಕ್ಕೆ ಕೈ ಇಟ್ಟರೆ
ಕೈ ಸುಟ್ಟು ….
ಆ ರಸಯಾತ್ರೆಯ ಕೈಗಳ
ನಾದ
ಕಾಡು ಸುಟ್ಟು ಉರುಳಿ ಬೀಳುವ
ಭೀಕರತೆ ಮರೆ ಮಾಡಲು
ತನ್ನ ಕೈ ಚಳಕವ
ಮತ್ತೆ ಮತ್ತೆ ಮತ್ತೆ
ತೊಡಗಿದೆ…..
ಆ ನಾದ
ಆ ಜೀವಿ
ಆ ಸಹೃದಯೀ ಕೈ
ಅಮರವೇ ಸರಿ…..
ಹೀಗೆ ಝಾಕಿರ್ ಯಾವ ಸಮಸ್ಯೆಯನ್ನೂ ತನ್ನ ನಗುವಿನಲ್ಲೇ ತೀರಿಸಿಬಿಡುವ ವ್ಯಕ್ತಿ. ಅವರಿಗೆ ಅವರು ನುಡಿಸುವ ನೆಲೆ, ಉಸ್ತಾದ್ ಅಲಿ ಅಕ್ಬರ್ ಅವರ ಸರೋದಿಗೆ ನುಡಿಸುವ ಅಥವಾ ಪಂಡಿತ್ ದಿನ್ಕರ್ ಕಾಯ್ಕಿಣಿಯವರ ಹಾಡಿಗೆ ನುಡಿಸುವ, ಮತ್ತಾವುದೋ ಚಿಕ್ಕ ಮಗು ಹಾಡುವುದಕ್ಕೆ ನುಡಿಸುವ ವ್ಯತ್ಯಾಸಗಳ ಸೂಕ್ಷ್ಮತೆಯನ್ನು ಬಹಳ ಆಳವಾಗಿ ತಿಳಿದುಕೊಂಡ ವ್ಯಕ್ತಿ.
ಕೆಲವು ಸಂಗೀತಗಾರರ ಆಡಂಬರದ ವಿನಮ್ರತೆ ಕಂಡರೆ ಸಂಗೀತವೇ ಬಿಟ್ಟುಬಿಡಬೇಕು ಎನಿಸುತ್ತದೆ. ಇಲ್ಲಿ ಸಂಗೀತದ ಪರಂಪರೆಗೆ ಅಷ್ಟು ಭಾರವಿಲ್ಲದಿದ್ದರೂ ಸಂಗೀತಗಾರರು ತಮ್ಮದೇ ಸಂಗೀತದಲ್ಲಿ ಮುಳುಗಿ ಅವರ ತೇವಗಳ ಭಾರ ಇತರರ ಮೇಲೆ ಚೆಲ್ಲಿ ಪಡೆವ ಗೌರವಗಳಂತೆ ಅಲ್ಲ ಆ ಮನುಷ್ಯ.
ಯಾವುದೋ ದೊಡ್ಡ ಪಂಡಿತರಿಗೆ ಝಾಕಿರ್ ತಬಲ ಸಾಥ್ ನೀಡಲು ಬಂದಿದ್ದರು. ನನಗೆಲ್ಲಾ ಆ ಕಾಲದಲ್ಲಿ ಇಂಥಹ ಸ್ಟಾರ್ ಸಂಗೀತಗಾರರ ಸಂಗೀತ ಕೇಳಲು ಟಿಕೆಟ್ ಪಡೆಯಲು ಯಾರೂ ಹಣ ಕೊಡುತ್ತಿರಲಿಲ್ಲ. ಅಗ ನಮಗೆ ಸಹಾಯಕ್ಕೆ ಬರುತ್ತಿದ್ದುದು ತಾನಪುರ ನುಡಿಸುವುದು. ಅದು ನಮಗೆ ಉಸಿರಂತೆ. ಹೀಗಾಗಿ ಅವರ ಕಾರ್ಯಕ್ರಮಕ್ಕೆ ತಾನ್ಪುರ ನುಡಿಸಲು ಹೋದರೆ ಆ ದೊಡ್ಡ ಮೊತ್ತದ ಹಣ ಪಾವತಿಸದೆ ನಾವು ಕಛೇರಿಯನ್ನು ಕೇಳಬಹುದಿತ್ತು. ಹೀಗೆ ನಾನು ಆ ದೊಡ್ಡ ಪಂಡಿತರ ಜೊತೆ ಸ್ಟೇಜ್ ಮೇಲೆ ಝಾಕಿರ್ ಪಕ್ಕ ಕೂತು ತಾನ್ಪುರ ನುಡಿಸಿ ಆ ಕಾರ್ಯಕ್ರಮ ಕೇಳಿಕೊಳ್ಳಲು ಸಾಧ್ಯವಾಯಿತು. ಇಂತಹ ಕಾರ್ಯಕ್ರಮಗಳು ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯುತ್ತಿದ್ದವು.
ಅಂದು ನಾನು ನೀಟಾಗಿ ಡ್ರೆಸ್ ಮಾಡಿಕೊಂಡು (ಇದು ನನಗೆ ಯಾವಾಗಲೂ ಸಾಧ್ಯವಿಲ್ಲದ್ದು) ಹೋಗಿದ್ದೆ. ಆಗ ನಾನಿನ್ನೂ ಸುಮತಿಯಾಗಿದ್ದೆ. ಒಂದು ಗಂಟೆ ಮುಂಚಿತವಾಗಿಯೆ ಸ್ಥಳದಲ್ಲಿದ್ದೆ. ಕಲಾವಿದರು ಕಾರಿನಲ್ಲಿ ಬಂದಿಳಿದ ಬಳಿಕ ಒಳಗೆ ಸ್ವಾಗತಿಸಲು ಕಾದು ನಿಂತಿದ್ದೆ. ನಿಮಿಷ ನಿಮಿಷಕ್ಕೂ ಡ್ರೆಸ್ ಸರಿಯಾಗಿದೆಯೆ ಎಂದು ನಾನು ನೋಡಿಕೊಂಡಿದ್ದು ಬಹುಷ: ಮೊದಲನೇ ಬಾರಿಗೆ. ಆಗೆಲ್ಲಾ ನನ್ನ ರೂಮಿ ಒಡಲಿಗೆ ಸುಮತಿಯ ತೆರೆ ಇತ್ತು.
ಮೊದಲಿಗೊಂದು ಕಾರು ಬಂದಿತು. ನನ್ನ ಜೀವ ಬಡಿದುಕೊಳ್ಳಲು ಶುರುವಾಯಿತು. ನಾನು, ಆ ಕಾರಿನಲ್ಲಿ ಝಾಕಿರ್ ಬಂದರೆ ಎಷ್ಟು ಚೆಂದ ಎಂದು ಎಣಿಸಿಕೊಳ್ಳುತ್ತಿದ್ದೆ. ನನ್ನ ಊಹೆ ತಪ್ಪಾಗಿ ಬಂದದ್ದು ಆ ದೊಡ್ಡ ಪಂಡಿತರು. ನಾನು ಹಿಂದೆ ಸರಿದು ನನ್ನಂತೆಯೆ ತಾನ್ಪುರ ನುಡಿಸಲು ಬಂದಿದ್ದ ಇನ್ನೊಬ್ಬ ಸಂಗೀತದ ಶಿಷ್ಯರಿಗೆ ಜಾಗ ಮಾಡಿಕೊಟ್ಟೆ. ಅವರು ಮುಂದೆ ಬಂದರು. ಅಂದು ನಾನು ಮೊದಲಬಾರಿಗೆ ಈ ಮನುಷ್ಯನ ಮೋಹದಲ್ಲಿ ಬಿದ್ದೆ.
ಕೊನೆಗೂ ಆ ಕಾರು ಬಂದಿತು. ನನ್ನ ಎಣಿಕೆಯೆಲ್ಲಾ ತಪ್ಪಾಗಿ ಆ ಕಾರಿಂದ ಒಬ್ಬ ಜೀನ್ಸ್, ಟಿ ಶರ್ಟ್ ತೊಟ್ಟ ವ್ಯಕ್ತಿ ಇಳಿದ. ಉಫ್! ಆ ನಗು, ಆ ನಿರಾಳತೆ, ಆ ನಗು, …. ನನ್ನ ನೋಡಿ ಕಣ್ಣಲ್ಲೇ ಅವರು ಕಛೇರಿಗೆ ಹಾಕಿಕೊಳ್ಳುವ ಇಸ್ತ್ರೀ ಮಾಡಿಟ್ಟ ಉಡುಪು ಹುಷಾರಾಗಿ ತೆಗೆದುಕೊಳ್ಳಲು ಹೇಳಿ ಒಂದು ನಗೆ ಸೂಸಿದರು. ಆ ನಗು ನನ್ನ ದೇಹದ ಮನಸ್ಸಿನ ಗಾಯಗಳನ್ನೆಲ್ಲಾ ಒಂದೇ ಕ್ಷಣದಲ್ಲಿ ಮಾಯುವಂತೆ ಮಾಡಿತು. ನಾನು ಅತ್ಯಂತ ದೊಡ್ಡ ಜವಾಬ್ದಾರಿ ಹೊತ್ತಂತೆ ಅವರ ಉಡುಪನ್ನು ಕೈಯಲೆತ್ತಿಕೊಂಡು ಅವರ ಹಿಂದೆ ನಡೆದೆ. ನನಗೆ ಅಂದು ಎಲ್ಲಿಲ್ಲದ ಹೆಮ್ಮೆ. ಝಾಕಿರ್ ಜೊತೆ ಗ್ರೀನ್ ರೋಮಿನೊಳಗೆ ನಡೆದು ಆ ಮಹತ್ತರ ಪಂಡಿತರ ಕಾಲಿಗೆ ಬಿದ್ದು ನಮಸ್ಕರಿಸುವುದು ಮರೆತೆ. ಅದನ್ನು ನೆನಪಿಸಲು ಅಲ್ಲಿ ಹಜಾರು ಜನ ಇದ್ದಂತೆ ಅನಿಸಿತು. ಕಡೆಗೆ ಮಾಫಿ ಕೇಳಿ ಅಲ್ಲಿದ್ದವರೆಲ್ಲರ ಕಾಲಿಗೆ ಬಿದ್ದು ಝಾಕಿರ್ ಕಾಲಿಗೆ ಬೀಳಲು ಹತ್ತಿರ ಹೋದೆ, ಆತ ನನ್ನ ಭುಜ ಮುಟ್ಟಿ ‘ಎಯ್ ಆವ್’ ಅಂತ ಆಲಿಂಗಿಸಿ, “ಸುಮತಿ, ತೇರಿ ಗಾನ ನಹಿ ಭೂಲ” ಅಂತ ಅಂದಾಗ ನನ್ನ ಕಾಲ ಕೆಳಗಿಂದ ಜಗತ್ತೆ ಸರಿದು ಹೋದಂತೆ ಆಯ್ತು….. ಸಮುದ್ರದ ಮರಳಿನಲ್ಲಿ ನಿಂತಾಗ ಆಗುವ ಅನುಭವವಾಯ್ತು. ನಂತರ ಆ ದಿನ ನಮ್ಮನ್ನು ಊಟಕ್ಕೆ ಕರೆದುಕೊಂಡು ಹೋದರು. ಮತ್ತೊಂದು ಮಾತಿಲ್ಲ. ಅವರು ಕಣ್ಣಿನಲ್ಲೇ ಮಾತನಾಡುತ್ತಿದ್ದರು. ನಾನು ಅಂದು ತೀರಿದ್ದರೂ ನನಗೆ ಸಾಕಾಗಿತ್ತು.
ನನಗೆ ಸುಮಾರು 17 ವರ್ಷಗಳಿರಬಹುದು. ಆಗ ಸುರ್ಸಾಗರ್ ಎಂಬ ಸಂಸ್ಥೆಯಿಂದ ಸ್ಕಾಲರ್ಶಿಪ್ ಸಿಕ್ಕಿತ್ತು. ನನ್ನ ಮನೆಯಿಂದ ಸಂತೋಷದಿಂದ ಬರಲು, ನನ್ನ ತಾಯಿ ಕನಕಾಮೂರ್ತಿಗೆ ಬಿಡುವಿರಲಿಲ್ಲ! ಏಕೆಂದರೆ ಅವರು ಗೊತ್ತಿದ್ದೂ ಗೊತ್ತಿದ್ದೂ ಮತ್ತೊಂದು ಕಾರ್ಯಕ್ರಮ ಒಪ್ಪಿಕೊಂಡಿದ್ದರು. ಇನ್ನು ನನ್ನ ತಂದೆ ಹೇಳಿದ್ದು- ಅಲ್ಲಿ ನಾನು ಸ್ಕಾಲರ್ಶಿಪ್ ಪಡೆಯುವುದನ್ನು ಕಾಣಲು ಬಂದರೆ ಅವರ ಗೌರವ ಕಡಿಮೆಯಾಗುವುದಂತೆ.. ಅಂದು ನನ್ನ ಅಳುವಿಗೆ ಕೊನೆಯೇ ಇರಲಿಲ್ಲ. ಸೀರೆ ಉಟ್ಟು ಹೋಗಬೇಕೆಂದು ಹೇಳಿದ್ದರು ವ್ಯವಸ್ಥಾಪಕರು. ಆದರೆ ನಾನು ಕೈಗೆ ಸಿಕ್ಕ ಉಡುಪು ಧರಿಸಿ ಅನಾಥನಾಗಿ ಬಸ್ಸು ಹತ್ತಿ ಆ ಕಾರ್ಯಕ್ರಮಕ್ಕೆ ಹೋದೆ. ನನ್ನಂಥ ಸುಮಾರು ಹತ್ತು ಮಂದಿ ಸಂಗೀತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೊಡುವ ಕಾರ್ಯಕ್ರಮ ಅದಾಗಿದ್ದು ನಾವೆಲ್ಲಾ ಸೇರಿ ಸ್ವಾಗತ ಗೀತೆ ಹಾಡಬೇಕಿತ್ತು. ಅದಾದ ಮೇಲೆ ನಮಗೆ ಸ್ಕಾಲರ್ಶಿಪ್ ಕೊಡುವುದಿತ್ತು. ನಾವೆಲ್ಲರೂ ಸ್ಟೇಜ್ ಹಿಂದೆ ಇದ್ದೆವು. ಒಬ್ಬೊಬ್ಬರನ್ನು ಕರೆದು ಝಾಕಿರ್, ರವಿಶಂಕರ್ ಮತ್ತೆ ಝಾಕಿರ್ ತಂದೆ ಉಸ್ತಾದ್ ಅಲ್ಲಾ ರಖಾ ಖಾನ್ ಸಾಹೇಬರು ನಮ್ಮನ್ನು ಬೆಂಬಲಿಸಿ ಸ್ಕಾಲರ್ಶಿಪ್ ಕೊಡುತ್ತಿದ್ದರು. ನನ್ನ ಹೆಸರು ಕೊನೆಗೆ ಕರೆಯಲಾಗಿತ್ತು. ಎಲ್ಲರಿಗಿಂತ ಹೈಯೆಸ್ಟ್ ಸ್ಕಾಲರ್ಶಿಪ್ ನನ್ನದಾಗಿತ್ತು. ನಾನು ಅವರು ಕರೆದಾಗ ಮಾಸಿದ ಉಡುಪು, ಕಣ್ಣಲ್ಲಿ ನೀರು, ನನ್ನವರಾರಿಲ್ಲದ ಸಭೆಯಲ್ಲಿ ಕಾಲಿಟ್ಟು ಮುಖ ಎತ್ತಿದೆ.. ಝಾಕಿರ್ ಸಾಹೇಬರು ನನ್ನ ಕೈ ಹಿಡಿದು ಎಳೆದುಕೊಂಡು ಹೋಗಿ ಅಲ್ಲ ರಖಾ ಖಾನ್ ಸಾಹೇಬರ ಕಾಲ್ ಮುಟ್ಟಿ ನನ್ನ ಮತ್ತೆ ಆಲಂಗಿಸಿದರು. ನನಗೆ ಅಳು ತಡೆಯಲಾಗದೆ ಅತ್ತೆ…. “ಮತ್ತೆಂದೂ ನನ್ನ ಕುಟುಂಬದವರ ಬೆಂಬಲ ನನಗೆ ಬೇಕಾಗಿರಲಿಲ್ಲ. ಆ ಆಲಿಂಗನ ಬೆಚ್ಚಗೆ ಇನ್ನೂ ಉಳಿದಿದೆ ನನ್ನ ಹತ್ತಿರ ಝಾಕಿರ್ ಸಾಹೇಬರೆ….”
ರೂಮಿ ಹರೀಶ್
ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು ಕಳೆದ ಸುಮಾರು 25 ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ ಮತ್ತು ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.
ಇದನ್ನೂ ಓದಿ- ಮತಯಂತ್ರದಿಂದ ಮೋಸ ಸಾಧ್ಯವೇ?