ಅನೌಪಚಾರಿಕ ಶಿಕ್ಷಣದ ಸಾಧನವಾಗಿ ಸಮಾಜವನ್ನು ತಿದ್ದಬೇಕಿದ್ದ ಮಾಧ್ಯಮವೇ ಯಾವುದನ್ನ ಖಂಡಿಸಬೇಕೋ ಅದನ್ನು ಟೊಂಕಕಟ್ಟಿ ಪ್ರಚಾರಗೊಳಿಸಿ ಕಾಲವನ್ನ ಹಿಂದಕ್ಕೆಳೆಯುತ್ತಿದೆ. ದಶಕಕ್ಕೂ ಹೆಚ್ಚಿನ ಕಾಲ ನಾಡಿನ ಮನಸಾಕ್ಷಿಯನ್ನು ಕಲಕಿರುವ ಯುವತಿಯ ಅತ್ಯಾಚಾರ ಪ್ರಕರಣವೊಂದರ ಚರ್ಚೆ ಪರ್ಯಾಯ ಮಾಧ್ಯಮಗಳ ಮೂಲಕ ನಾಡಿನ ಮನೆ ಮನೆಯನ್ನೂ ತಲುಪಿರುವಾಗ, ಅದರ ಬಗ್ಗೆ ಮುಖ್ಯವಾಹಿನಿಯ ಮಾಧ್ಯಮಗಳು ತಾಳಿರುವ ಮಹಾ ಮೌನ ಇದೇ ಸಮಯದಲ್ಲಿ ಎದ್ದು ಕಾಣುತ್ತದೆ -ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು.
ವಿಧಾನಪರಿಷತ್ ನಲ್ಲಿ ವಿಪಕ್ಷ ಸದಸ್ಯರೊಬ್ಬರು ಹಾಡಿರುವ ಜನಪದ ಹಾಡೊಂದು ವೈರಲ್ ಆಗಿದೆ. ಮುಖ್ಯವಾಹಿನಿಯ ಸುದ್ದಿಮಾಧ್ಯಮಗಳು ಇದನ್ನು ಮೆಚ್ಚಿ ಬಾರೀ ಪ್ರಚಾರ ನೀಡುತ್ತಿವೆ. ಹಾಡಿದವರಿಗೆ ಅದರಲ್ಲಿರುವ ಪುರುಷ ಯಾಜಮಾನ್ಯದ ಶೋಷಕ ರಾಜಕಾರಣದ ಪ್ರಜ್ಞೆಯೇ ಇದ್ದಂತಿಲ್ಲ . ತುಂಬಾ ಮೆಚ್ಚುಗೆಯಿಂದ ಈ ಹಾಡನ್ನು ಸಚಿವರುಗಳಾದಿಯಾಗಿ ಎಲ್ಲರೂ ಆಲಿಸುತ್ತಾರೆ. ಗಂಡಸರು ಹೆಣ್ಣಿನ ದೇಹವನ್ನ ಬಯಸುವುದು ಸಹಜ ಮತ್ತು ಕಾಪಾಡಿಕೊಳ್ಳುವ ಹೊಣೆ ಮಾತ್ರ ಅವಳದೇ ಎಂಬಂತೆ ಶೀಲದ ಹೆಸರಿನಲ್ಲಿ ಮಗಳಿಗೆ ಬೋಧಿಸುವ ಈ ಹಾಡು ಎಂತಹ ಸಮಾಜವನ್ನು ನಿರೀಕ್ಷಿಸುತ್ತಿದೆ?
ಗಂಡನಿಗೊಬ್ಬಾಗ ಮೀಸಲಿರಲಿ ನಿನ್ನ ಶೀಲ ಎಂದಾಗ ಹಿರಿಯರ ಸದನ ತಲೆದೂಗಿ ಒಪ್ಪುತ್ತದೆ. ಒಪ್ಪಿದಿರಿ ಅಂದುಕೊಳ್ಳಿ. ಆಗ ಅತ್ಯಾಚಾರಕ್ಕೊಳಗಾಗಿ ಬದುಕುಳಿದ ಹೆಣ್ಣನ್ನು ಆಯಾ ಕುಟುಂಬದವರು ಹೇಗೆ ತಾನೇ ನೋಡಬೇಕು? ಇಂಥ ಮೌಲ್ಯಗಳನ್ನ ಒಪ್ಪಿದ ವ್ಯವಸ್ಥೆಯಲ್ಲಿ, ಶೀಲದ ಪ್ರಶ್ನೆಯೇ ತಮಗಲ್ಲವೆಂದುಕೊಂಡ ಗಂಡಸರು ತಮ್ಮ ಲೈಂಗಿಕ ಲೀಲೆಗಳ ಸೀಡಿಗಳಿಗೆ ತಡೆಯಾಜ್ಞೆ ತಂದು ಹನಿಟ್ರ್ಯಾಪ್ ಹೆಸರಿನಲ್ಲಿ ತಾವೇ ಬಲಿಪಶುಗಳೆಂದು ಬಿಂಬಿಸಿಕೊಳ್ಳುತ್ತಾ ಆರಾಮವಾಗಿ ವಿಧಾನಸಭೆಯಲ್ಲೇ ಕೂತಿರುವುದು ಅಚ್ಚರಿಯ ವಿಷಯ ಅಲ್ಲವೇ ಅಲ್ಲ . ಅವರ ಪ್ರಕಾರ ಅಧಿಕಾರ ಉಳಿಸಿಕೊಳ್ಳುವುದು ಅವರ ಕರ್ತವ್ಯ: ಶೀಲ ಉಳಿಸಿಕೊಳ್ಳುವುದು ಹೆಣ್ಣಿನದು. ನಾಡಿನ ರಾಜಕಾರಣದ ನೈತಿಕತೆಯ ದಿಕ್ಕುದೆಶೆಗಳ ವಿಮರ್ಶೆಯಾಗಬೇಕಾದ ಚಿಂತಕರ ಚಾವಡಿಯಲ್ಲೇ ಇದನ್ನು ಹಾಡಲಾಗಿದೆ. ಹೆಣ್ಣಿನ ಮೇಲಿನ ಅನ್ಯಾಯಗಳಿಗೆ ಅವಳನ್ನೇ ಹೊಣೆಯಾಗಿಸಿ ಅಸಹಾಯಕತೆಯಿಂದ ಕೈ ಚೆಲ್ಲುವಂತಹ ಈ ಹಾಡನ್ನು ಅಲ್ಲಿ ಒಪ್ಪಲಾಗುತ್ತಿದೆ. ಹೆಣ್ಣಿನ ಹಕ್ಕುಗಳು ಮತ್ತು ಸುರಕ್ಷತೆಯ ಕುರಿತಾಗಿ ಪ್ರಭುತ್ವಕ್ಕೆ ಎಚ್ಚರಿಸಬೇಕಾದ ವಿಪಕ್ಷವೇ ಪರತಂತ್ರ ನಿನ್ನ ಜೀವ ಎಂದು ಹಾಡುತ್ತಾ ದೇವರ ಹೆಸರಿನಲ್ಲೇ ಹೆಣ್ಣನ್ನು ಹೆದರಿಸಿ ಕಟ್ಟಿ ಹಾಕುತ್ತದೆ.
ಈ ಹಾಡು ಮುಗಿಯುತ್ತಿದ್ದಂತೆಯೇ ಎಚ್ಚೆತ್ತ ಒಂದಿಬ್ಬರು ಮಹಿಳಾ ಸದಸ್ಯರು ತಕರಾರು ಎತ್ತುತ್ತಾರೆ. ಆಘಾತಕಾರಿ ಸಂಗತಿಯೆಂದರೆ ಆ ಮಹಿಳೆಯರ ಪ್ರತಿಭಟನೆಯ ಮಾತುಗಳಿಗೆ ಕತ್ತರಿ ಹಾಕಿ, ಬರೀ ಹಾಡನ್ನಷ್ಟೇ ಮುನ್ನೆಲೆಗೆ ತಂದು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಆ ಮಹಿಳಾ ಸದಸ್ಯರು ಅಲ್ಲಿ ತೋರಿದ ಪ್ರತಿರೋಧ ಇಡೀ ರಾಜ್ಯಾದ್ಯಂತ ದೊಡ್ಡ ಮಟ್ಟದ ಸುದ್ದಿಯಾಗಬೇಕಿತ್ತು. ಆ ಪ್ರತಿರೋಧ ಸಣ್ಣ ಪ್ರಮಾಣದ್ದಾದರೂ ಅದಕ್ಕೆ ಒತ್ತು ನೀಡಬೇಕಾದದ್ದು ಮಾಧ್ಯಮದ ನೈತಿಕ ಜವಾಬ್ದಾರಿ. ಆದರೆ ತದ್ವಿರುದ್ಧವಾಗಿದೆ. ಇಡೀ ಸದನವೇ ಸೈಲೆಂಟ್ ಎಂದು ಹಾಡನ್ನು ಸಮ್ಮತಿಸಿ ಒಂದು ಮಾಧ್ಯಮದವರು ತಲೆಬರಹ ಕೊಡುತ್ತಾರೆ. ಇನ್ನೊಬ್ಬರು ಇನ್ನೂ ಅತಿರೇಕಕ್ಕೆ ಹೋಗಿ ಸಭಾಧ್ಯಕ್ಷರು ಈ ಹಾಡನ್ನು ಕೇಳಿ ಕಣ್ಣೀರು ಹಾಕಿದರು (ಇದು ಸುಳ್ಳು ) ಎನ್ನುತ್ತಾರೆ. ಈ ಪತ್ರಕರ್ತರಿಗೆ ಲಿಂಗ ಸಂವೇದನೆಯ ದೃಷ್ಟಿಯಿಂದ ಇದು ತುಂಬಾ ಅಸೂಕ್ಷ್ಮ ಮತ್ತು ಅಪಾಯಕಾರಿಯಾದ ಹಾಡು ಎಂದು ತಿಳಿಯಲಾರದೆ?. ಹಾಗೇನಿಲ್ಲ. ಇದು ಉದ್ದೇಶಪೂರ್ವಕ. ಈ ಜನಪ್ರಿಯ ಗ್ರಹಿಕೆಗಳಲ್ಲಿರುವ ಲಿಂಗ ತಾರತಮ್ಯದ ಅಸೂಕ್ಷ್ಮತೆಯ ಬಗ್ಗೆ ಚರ್ಚೆ ನಡೆಸಲು ಸಿದ್ಧವಿರುವ ಸಾಕಷ್ಟು ವಿದ್ವಾಂಸರಿದ್ದಾರೆ. ಅಂತವರನ್ನು ಈ ಮಾಧ್ಯಮಗಳೇ ಮೂಲೆಗುಂಪು ಮಾಡಿವೆ.
ಅನೌಪಚಾರಿಕ ಶಿಕ್ಷಣದ ಸಾಧನವಾಗಿ ಸಮಾಜವನ್ನು ತಿದ್ದಬೇಕಿದ್ದ ಮಾಧ್ಯಮವೇ ಯಾವುದನ್ನ ಖಂಡಿಸಬೇಕೋ ಅದನ್ನು ಟೊಂಕಕಟ್ಟಿ ಪ್ರಚಾರಗೊಳಿಸಿ ಕಾಲವನ್ನ ಹಿಂದಕ್ಕೆಳೆಯುತ್ತಿದೆ. ದಶಕಕ್ಕೂ ಹೆಚ್ಚಿನ ಕಾಲ ನಾಡಿನ ಮನಸಾಕ್ಷಿಯನ್ನು ಕಲಕಿರುವ ಯುವತಿಯ ಅತ್ಯಾಚಾರ ಪ್ರಕರಣವೊಂದರ ಚರ್ಚೆ ಪರ್ಯಾಯ ಮಾಧ್ಯಮಗಳ ಮೂಲಕ ನಾಡಿನ ಮನೆ ಮನೆಯನ್ನೂ ತಲುಪಿರುವಾಗ, ಅದರ ಬಗ್ಗೆ ಮುಖ್ಯವಾಹಿನಿಯ ಮಾಧ್ಯಮಗಳು ತಾಳಿರುವ ಮಹಾ ಮೌನ ಇದೇ ಸಮಯದಲ್ಲಿ ಎದ್ದು ಕಾಣುತ್ತದೆ. ರಂಜನೆ ಮತ್ತು ಪ್ರಚೋದನೆಯ ಮೂಲಕ ಟಿ.ಆರ್.ಪಿಯನ್ನಷ್ಟೇ ಬೆನ್ನತ್ತಿ, ಲಾಭವನ್ನೇ ಆದರ್ಶವನ್ನಾಗಿಟ್ಟುಕೊಂಡಿರುವ ಕಾರ್ಪೊರೇಟ್ ಮಾಧ್ಯಮಗಳಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ? ಜನಪರ ಪರ್ಯಾಯ ಮಾಧ್ಯಮದ ವೇದಿಕೆಗಳಾಗಿ ಒಂದಷ್ಟು ಯೂಟ್ಯೂಬರ್‌ಗಳು ಡಿಜಿಟಲ್ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳು ಬೆಳೆಯುತ್ತಿರುವುದು ಒಂದು ಸಮಾಧಾನವಷ್ಟೇ.
ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು,
ಇಂಗ್ಲಿಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಇದನ್ನೂ ಓದಿ- ಒಳಮೀಸಲಾತಿ: ಅಲೆಮಾರಿಗಳಿಗೂ ಇತರರಿಗೂ ಒಂದೇ ಮಾನದಂಡ ಸಲ್ಲದು