ಹರಿಯಣದಲ್ಲೂ ಆಪರೇಷನ್ ಕಮಲ! ಮೈತ್ರಿಪಕ್ಷಗಳ ಬೆನ್ನಿಗೆ ಚೂರಿ ಹಾಕುವ ಪರಂಪರೆ ಮುಂದುವರಿಕೆ

Most read

ಹೊಸದಿಲ್ಲಿ: ಮೈತ್ರಿ ಪಕ್ಷಗಳ ಬೆನ್ನಿಗೆ ಚೂರಿಹಾಕುವ ಪರಂಪರೆ ಮುಂದುವರೆದಿದ್ದು, ಹರಿಯಾಣದಲ್ಲಿ ಅಧಿಕಾರಾರೂಢ ಬಿಜೆಪಿ-ಜೆಜೆಪಿ ಮೈತ್ರಿಕೂಟದ ಭಾಗವಾಗಿದ್ದ ದುಶ್ಯಂತ್ ಚೌತಾಲಾ ಅವರ ಜೆಜೆಪಿ ಪಕ್ಷದ ಹಲವು ಶಾಸಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿ ಇಂದು ಕರೆಯಲಾಗಿದ್ದ ಜೆಜೆಪಿ ಪಕ್ಷದ ಮಹತ್ವದ ಸಭೆಗೆ ಐವರು ಶಾಸಕರು ಗೈರುಹಾಜರಾಗುವುದರೊಂದಿಗೆ ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ಐವರೂ ಶಾಸಕರು ಈಗಾಗಲೇ ಬಿಜೆಪಿ ಆಮಿಷಕ್ಕೆ ಬಲಿಯಾಗಿದ್ದು, ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ.

ಶಾಸಕರುಗಳಾದ ರಾಮ್‌ ಕುಮಾರ್‌ ಗೌತಮ್‌, ಜೋಗಿ ರಾಮ್‌ ಸಿಹಾಗ್‌, ಈಶ್ವರ್‌ ಸಿಂಗ್‌ ಮತ್ತು ಅಮರಜಿತ್‌ ಧಾಂಡಾ ಜೆಜೆಪಿ ಸಭೆಗೆ ಗೈರು ಹಾಜರಾಗಿರುವ ಶಾಸಕರು. ಇವರೊಂದಿಗೆ ಕಳೆದ ವರ್ಷವಷ್ಟೇ ಪಂಚಾಯ್ತ್‌ ರಾಜ್‌ ಇಲಾಖೆಯ ಕ್ಯಾಬಿನೆಟ್‌ ದರ್ಜೆ ಸಚಿವರಾಗಿ ನೇಮಕಗೊಂಡಿದ್ದ ದೇವೇಂದರ್‌ ಸಿಂಗ್‌ ಬಬ್ಲಿ ಕೂಡ ಭಿನ್ನಮತೀಯ ಕೂಟದ ಭಾಗವಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಜೆಪಿ ಚುನಾವಣಾಪೂರ್ವ ಹೊಂದಾಣಿಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಮುಂದಿನ ಕಾರ್ಯತಂತ್ರ ರೂಪಿಸಲು ಇಂದು ದುಶ್ಯಂತ್‌ ಚೌತಾಲ ಸಭೆ ಕರೆದಿದ್ದರು. ಆದರೆ ಬಿಜೆಪಿ ಆಮಿಷಕ್ಕೆ ಬಲಿಯಾದ ಶಾಸಕರು ಗೈರುಹಾಜರಾಗುವುದರೊಂದಿಗೆ ಹರಿಯಾಣದಲ್ಲಿ ಬಿಜೆಪಿ ಆಪರೇಷನ್‌ ಕಮಲ ನಡೆಸಿರುವುದು ದೃಢವಾಗಿದೆ.

ಮಾಜಿ ಉಪಪ್ರಧಾನಿ ದೇವಿಲಾಲ್‌ ಮನೆತನದ ನಾಲ್ಕನೇ ಪೀಳಿಗೆಯ ದುಶ್ಯಂತ್ ಚೌತಾಲಾ ಅವರೊಂದಿಗೆ ಅವರ ತಾಯಿಯೂ ಆಗಿರುವ, ಭಾದ್ರಾ ಶಾಸಕಿ ನೈನಾ ಚೌತಾಲಾ, ಉಕ್ಲಾನಾ ಶಾಸಕ ಅನೂಪ್‌ ಧನಕ್‌, ನರ್ವಾನಾ ಶಾಸಕ ರಾಮ್‌ ನಿವಾಸ್, ಶಹ್ಬಾದ್‌ ಶಾಸಕ ರಾಮ್‌ ಕರಣ್‌ ಅವರುಗಳು ಮಾತ್ರ ಉಳಿದುಕೊಂಡಿದ್ದಾರೆ. ಈ ಶಾಸಕರ ಪೈಕಿಯೂ ಕೆಲವರಿಗೆ ಬಿಜೆಪಿ ಗಾಳ ಹಾಕಿದೆ ಎಂದು ತಿಳಿದುಬಂದಿದೆ. ಈ ನಡುವೆ ಬಿಜೆಪಿ ಇಂದು ಪಕ್ಷೇತರ ಶಾಸಕರೊಂದಿಗೆ ಸಭೆ ನಡೆಸುತ್ತಿದ್ದು, ಎಲ್ಲ ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ.

ಜಾಟ್‌ ಸಮುದಾಯದ ಪ್ರಭಾವಿ ನಾಯಕರಾಗಿದ್ದ ದೇವಿಲಾಲ್‌ ಹರಿಯಾಣ ಮುಖ್ಯಮಂತ್ರಿಯಾಗಿ, ಭಾರತ ಸರ್ಕಾರದ ಉಪಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು. ದೇವೀಲಾಲ್‌ ಅವರ ನಂತರ ಪ್ರಕಾಶ್‌ ಚೌತಾಲಾ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದು, ಅದಾದ ತರುವಾಯ ಪ್ರಕಾಶ್‌ ಅವರ ಪುತ್ರ ಅಜಯ್‌ ಚೌತಾಲಾ ಕೂಡ ರಾಜಕಾರಣದಲ್ಲಿದ್ದರು. ಅಜಯ್‌ ಚೌತಾಲಾ ಮತ್ತು ನೈನಾ ಚೌತಾಲಾ ದಂಪತಿಗಳ ಪುತ್ರನೇ ದುಶ್ಯಂತ್‌ ಚೌತಾಲಾ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗದ ಸಂದರ್ಭದಲ್ಲಿ ದುಶ್ಯಂತ್‌ ಚೌತಾಲಾ ತಮ್ಮ ಜೆಜೆಪಿಯ ಹತ್ತು ಮಂದಿ ಶಾಸಕರ ಬೆಂಬಲವನ್ನು ನೀಡಿ ಸರ್ಕಾರ ರಚನೆಯಲ್ಲಿ ಮುಖ್ಯಪಾತ್ರ ವಹಿಸಿದ್ದರು. ಮನೋಹರ್‌ ಲಾಲ್‌ ಕಟ್ಟರ್‌ ಸರ್ಕಾರದಲ್ಲಿ ಅವರು ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು.

ಆದರೆ ಮೈತ್ರಿ ಪಕ್ಷಗಳನ್ನು ಬಳಸಿಕೊಂಡು ನಂತರ ಅವುಗಳನ್ನು ಬದಿಗೆ ತಳ್ಳುವ ಇತಿಹಾಸ ಹೊಂದಿರುವ ಬಿಜೆಪಿ ಈಗ ಜೆಜೆಪಿ ಪಕ್ಷವನ್ನೇ ಒಡೆಯುವಲ್ಲಿ ಯಶಸ್ವಿಯಾಗಿದೆ.

ಹರಿಯಾಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಮನೋಹರ್‌ ಲಾಲ್‌ ಕಟ್ಟರ್‌ ಇಂದು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಮತ್ತೆ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದು, ಬಲಾಬಲ ಪ್ರದರ್ಶನದ ಸಂದರ್ಭದಲ್ಲಿ ಆಪರೇಷನ್‌ ಕಮಲಕ್ಕೆ ಒಳಗಾಗಿರುವ ಜೆಜೆಪಿ ಶಾಸಕರು ತಟಸ್ಥವಾಗಿ ಉಳಿದು ಬಿಜೆಪಿಗೆ ಸಹಕರಿಸುವ ಸಾಧ್ಯತೆ ಇದೆ.

More articles

Latest article