ಬೆಂಗಳೂರು: ಗೋದಾವರಿ-ಕೃಷ್ಣ-ಕಾವೇರಿ ನೀರಾವರಿ ಯೋಜನೆಯಲ್ಲಿ ಕರ್ನಾಟಕಕ್ಕೆ 25 ಟಿಎಂಸಿ ಅಡಿ ನೀರು ಹಂಚಿಕೆ ಆಗಬೇಕು. ಈ ಗುರಿ ಸಾಧನೆಗಾಗಿ ಎಲ್ಲಾ ಪಕ್ಷಗಳನ್ನು.ಒಳಗೊಂಡು ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ. 25 ಟಿಎಂಸಿ ಅಡಿ ನೀರು ಪಡೆಯುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಸಂಸದರ ಜತೆಗೂಡಿ ಹೋರಾಟ ನಡೆಸಲು ನನಗೆ ಯಾವುದೇ ಹಿಂಜರಿಕೆ ಇಲ್ಲ ಎಂದ ಅವರು; ನಾಡಿನ ವಿಷಯ ಬಂದಾಗ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎನ್ನುವ ಭೇಧ ಮರೆತು ಒಟ್ಟಾಗಿ ಕೆಲಸ ಮಾಡಬೇಕು. ಇಂತಹ ಸಂಘಟಿತ ಪ್ರಯತ್ನಕ್ಕೆ ನಾನು ಹಿಂಜರಿಯುವುದಿಲ್ಲ ಎಂದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನೀರಾವರಿ ಯೋಜನೆಗಳ ಜಾರಿ ವಿಷಯದಲ್ಲಿ ಜೆಡಿಎಸ್ ಸುಮ್ಮನೆ ಕೂತಿಲ್ಲ, ಕೂರುವುದೂ ಇಲ್ಲ ಎಂದು ಹೇಳಿದ ದೇವೇಗೌಡರು; ನದಿ ಜೋಡಣೆ ಮತ್ತು ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಸಹಕಾರ ಕೊಡುತ್ತೇವೆ.ನೀರಾವರಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಅದು ಸರಿಯಲ್ಲ. ಹಿಂದೆ ಸಿದ್ದರಾಮಯ್ಯ ಅವರು ನೀರಾವರಿ ಬಗ್ಗೆ ಚರ್ಚೆ ಮಾಡುವುದಕ್ಕೆ ನಮ್ಮ ಮನೆಗೆ ಬಂದಿದ್ದರು. ಆಗ ನನಗೂ ಅವರಿಗೂ ಮಾತೇ ಇರಲಿಲ್ಲ. ಆದರೂ ನಾನು ಅವರ ಹಿಂದೆ ಹೋದೆ. ನನಗೇನು ಬೇಸರ ಇಲ್ಲ. ನೀರಾವರಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಬೇಡ ಎಂದರು.
ಸಂಸತ್ ಅಧಿವೇಶನದಲ್ಲಿ ಇದೇ ವಿಷಯ ಪ್ರಸ್ತಾಪ ಮಾಡಿ ಚರ್ಚೆ ಮಾಡಿದ್ದೇನೆ. ಗೋದಾವರಿ- ಕೃಷ್ಣ-ಕಾವೇರಿ ಯೋಜನೆ ವಿಚಾರವಾಗಿ ರಾಜ್ಯಕ್ಕೆ ನೀರಿನ ಹಂಚಿಕೆ ಹೆಚ್ಚಳ ಮಾಡುವಂತೆ ನಾನು ಪ್ರಧಾನಿಗಳು ಹಾಗೂ ಕೇಂದ್ರದ ಜಲಶಕ್ತಿ ಸಚಿವರಿಗೆ ಮನವಿ ಮಾಡಿದ್ದೇನೆ. ಈ ಬಗ್ಗೆ 2022, 2024ರಲ್ಲಿ ಜಲಶಕ್ತಿ ಸಚಿವರಿಗೆ ಪತ್ರ ಬರೆದಿದ್ದೆ. ಸದ್ಯ ಈ ಯೋಜನೆಯಲ್ಲಿ ಕರ್ನಾಟಕಕ್ಕೆ 15.891 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಆದರೆ, ಈ ಪ್ರಮಾಣವನ್ನು 25 ಟಿಎಂಸಿಗೆ ಹೆಚ್ಚಳ ಮಾಡಬೇಕು ಅಂತ ಒತ್ತಾಯ ಮಾಡಿದ್ದೇನೆ ಎಂದು ಅವರು ಪುನರುಚ್ಚಾರ ಮಾಡಿದರು. ಗೋದಾವರಿ ನದಿಯಿಂದ ರಾಜ್ಯಕ್ಕೆ 15.91 ಟಿಎಂಸಿ ಅಡಿಯಷ್ಟು ನೀರು ಹಂಚಿಕೆ ಮಾಡಿ, ಆ ನೀರನ್ನು ಘಟಪ್ರಭಾ ನದಿಗೆ ಹರಿಸುತ್ತೇವೆ ಎಂದು ಹೇಳಿದ್ದಾರೆ. ಇದು ಹೇಗೆ ಸಾಧ್ಯ? ಯಾವ ರೀತಿ ಸಾಧ್ಯ ಮಾಡುತ್ತೀರಿ? ಎನ್ನುವ ಪ್ರಶ್ನೆಯನ್ನು ನಾನು ಸಂಸತ್ತಿನಲ್ಲಿ ಕೇಳಿದ್ದೇನೆ. ಜತೆಗೆ, ಕರ್ನಾಟಕಕ್ಕೆ ಗೋದಾವರಿಯಿಂದ ಹರಿಸುವ ನೀರನ್ನು ಕಾವೇರಿಗೆ ಎಲ್ಲಿ ಜೋಡಿಸುತ್ತೀರಿ? ಎಂದು ಸಹ ಕೇಳಿದ್ದೇನೆ. ಈ ಬಗ್ಗೆ ಯೋಜನೆಯಲ್ಲಿ ಸ್ಪಷ್ಟವಾಗಿ ತೋರಿಸಿಲ್ಲ. ಆ ಬಗ್ಗೆ ರಾಜ್ಯಕ್ಕೆ ನಿಖರವಾದ ಮಾಹಿತಿ ಬೇಕಿದೆ. ಇದರ ಕುರಿತಂತೆ ಪ್ರಧಾನಿಗಳಿಗೆ ಪತ್ರ ಬರೆಯುತ್ತೇನೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ತಮಿಳುನಾಡಿಗೆ ನೀರಿನ ಸಮಸ್ಯೆ ಇಲ್ಲ. ಯಥೇಚ್ಚವಾಗಿ ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಈ ಬಗ್ಗೆ ಸಂಸತ್ ನಲ್ಲಿ ಮಾತಾಡೋವಾಗ ತಮಿಳುನಾಡಿನವರು ವಿರೋಧ ಮಾಡಲಿಲ್ಲ. ನೀರು ಪಡೆಯಲು ನಾವು ಪಕ್ಷಬೇಧ ಮರೆತು ಒಟ್ಟಾಗಿ ಹೋರಾಟ ಮಾಡುತ್ತೇವೆ. ನನಗೆ ಆ ವಿಶ್ವಾಸ ಇದೆ ಎಂದು ಮಾಜಿ ಪ್ರಧಾನಿಗಳು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಗೋದಾವರಿ-ಕಾವೇರಿ ಬಗ್ಗೆ ಸಂಸತ್ ನಲ್ಲಿ ನಾನು ಮಾತಾಡಿದ್ದೇನೆ. ತಮಿಳುನಾಡಿನ ಎಲ್ಲಾ ರಾಜ್ಯಸಭೆ ಸದಸ್ಯರು ಒಕ್ಕೊರಳಿನಿಂದ ಗೋದಾವರಿ, ಕಾವೇರಿ ಅಂತ ಕೂಗಿದರು. ಇದರಲ್ಲಿ ಕರ್ನಾಟಕದ ಹೋರಾಟ ಮೊದಲಿನಿಂದಲೂ ಇದೆ. ನಾನು ನೀರಾವರಿ ಮಂತ್ರಿ ಆಗಿದ್ದಾಗಿನಿಂದ ಹೋರಾಟ ನಡೆಯುತ್ತಲೇ ಇದೆ. ಕಾವೇರಿ ನೀರು ಹಂಚಿಕೆಯಲ್ಲಿ ನಮಗೆ ಅನ್ಯಾಯವಾಗಿದೆ. ಇದನ್ನು ಮೋದಿ ಅವರ ಗಮನಕ್ಕೆ ತಂದಿದ್ದೇನೆ. ರಾಜ್ಯಕ್ಕೆ ನೀರಿನ ವಿಷಯದಲ್ಲಿ ನ್ಯಾಯ ಸಿಗಬೇಕು. ಅದೇ ನನ್ನ ಜೀವನದ ಕೊನೆಯ ಆಸೆ. ಈ ದೇಹ ಅಂತ್ಯ ಆಗುವುದರ ಒಳಗಾಗಿ ನಮ್ಮ ರಾಜ್ಯಕ್ಕೆ ನೀರಾವರಿ ವಿಷಯದಲ್ಲಿ ಆಗಿರುವ ಅನ್ಯಾಯ ಸರಿ ಹೋಗಬೇಕು. ನಾನು ಇನ್ನೂ ನಾಲ್ಕಾರು ವರ್ಷ ಬದುಕಿರುತ್ತೇನೆ. ಅಷ್ಟರಲ್ಲಿ ಈ ನೀರಿನ ಸಮಸ್ಯೆ ಬಗೆಹರಿಸಬೇಕು ಎನ್ನುವ ಛಲವಿದೆ, ಬಗೆಹರಿಸುತ್ತೇನೆ. ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ನಾನು ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿಗಳು ಭಾವುಕರಾಗಿ ಹೇಳಿದರು.
ಕಾವೇರಿ, ಕಳಸಾ ಬಂಡೂರಿ ಯೋಜನೆಗಳಲ್ಲಿ ರಾಜ್ಯಕ್ಕೆ ಭಾರೀ ಅನ್ಯಾಯ ಆಗಿದೆ. ಈಗ ಗೋದಾವರಿ – ಕಾವೇರಿ ಜೋಡಣೆ ಯೋಜನೆಯಲ್ಲಿಯೂ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ನಾವು ದನಿಯೆತ್ತಬೇಕಿದೆ. ಕಳಸಾ ಬಂಡೂರಿ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಆದರೆ, ಈ ವಿವಾದ ಸುಪ್ರೀಂ ಕೋರ್ಟಿನಲ್ಲಿದೆ. ಹೀಗಾಗಿ ಪ್ರಧಾನಿಗಳು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ವಕೀಲರು ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸಿ ಗೆಲ್ಲಬೇಕು. ರಾಜ್ಯ ಸರ್ಕಾರಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕಿದೆ ಎಂದು ಅವರು ಪ್ರತಿಪಾದಿಸಿದರು.