ರಾಮನಗರ: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳ ತನಿಖೆ ಕುರಿತು ಬಿಜೆಪಿ ಮುಖಂಡರು ಮಗುವನ್ನು ಚಿವುಟಿ, ತೊಟ್ಟಿಲನ್ನೂ ತೂಗುವ ಕೆಲಸ ಮಾಡುತ್ತಿದೆ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ವ್ಯಂಗ್ಯವಾಡಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ ನಂತರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಿರುಮ್ಮಳರಾಗಿದ್ದಾರೆ. ಆದರೆ, ಬಿಜೆಪಿ ಮತ್ತು ಜೆಡಿಎಸ್ ನವರು ಧರ್ಮಸ್ಥಳ ಯಾತ್ರೆ ಹೆಸರಿನಲ್ಲಿ ನಾಟಕವಾಡುತ್ತಿದ್ದಾರೆ. ಒಂದು ವೇಳೆ ನಮ್ಮ ಸರ್ಕಾರ ಎಸ್‌ಐಟಿ ರಚಿಸದೇ ಇದ್ದರೆ ಧರ್ಮಾಧಿಕಾರಿಗಳ ಕುಟುಂಬ ನಿತ್ಯ ನೋವು ಅನುಭವಿಸಬೇಕಾಗುತ್ತಿತ್ತು ಎಂದರು. ಎಸ್ ಐಟಿ ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಸತ್ಯವನ್ನು ಹೊರತಂದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲುತ್ತದೆ ಎಂದರು.
ಬಿಜೆಪಿ ಮತ್ತು ಜೆಡಿಎಸ್ ನವರು ಡ್ರಾಮಾ ಕಂಪನಿಯ ಡ್ರಾಮಾ ಮಾಸ್ಟರ್ ಗಳಿದ್ಧಂತೆ ಎಂದು ಕುಟುಕಿದ ಬಾಲಕೃಷ್ಣ ಅವರು, ಎಸ್‌ಐಟಿ ವರದಿಗೂ ಮುಂಚಿತವಾಗಿ ಬಿಜೆಪಿ–ಜೆಡಿಎಸ್ ಮುಖಂಡರು ಧರ್ಮಸ್ಥಳಕ್ಕೆ ಓಡಿ ಹೋಗಿದ್ದಾರೆ. ಸೌಜನ್ಯ ಪ್ರಕರಣದಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ. ಈ ದುರಂತ ಘಟನೆ ನಡೆದಾಗ ಅವರದ್ದೇ ಸರ್ಕಾರವಿದ್ದರೂ ಸೂಕ್ತ ತನಿಖೆ ಮಾಡಿ ಏಕೆ ನ್ಯಾಯ ಕೊಡಿಸಲಿಲ್ಲ ಎಂದು ಪ್ರಶ್ನಿಸಿದರು.
ಆರಂಭದಲ್ಲಿ ಬಿಜೆಪಿ ಎಸ್ಐಟಿ ರಚನೆಗೆ ಸ್ವಾಗತಿಸಿತ್ತು. ಆದರೆ ವರದಿ ಬರುವುದಕ್ಕೆ ಮುಂಚಿತವಾಗಿಯೇ ಎನ್ಐಎ ತನಿಖೆಗೆ ಒತ್ತಾಯಿಸುತ್ತಿದೆ. ಧರ್ಮಸ್ಥಳ ಪ್ರಕರಣ ಸೇರಿದಂತೆ ಎಲ್ಲಾ ಪ್ರಕರಣಗಳಲ್ಲೂ ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋಧಿಯಂತೆ ಬಿಂಬಿಸುತ್ತಿದೆ. ನಮ್ಮದು ಜಾತ್ಯತೀತ ದೇಶ. ಪ್ರತಿ ಬಾರಿ ನಾವು ಹಿಂದೂ ಎಂದು ಹೇಳಿಕೊಳ್ಳುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.