ಇಷ್ಟು ದಿನ ಸ್ಟಾರ್ ಗಳ ಸಿನಿಮಾಗಳಿಲ್ಲ ಅಂತ ಸಿನಿಮಾ ನಿರ್ಮಾಪಕರು, ಥಿಯೇಟರ್ ಮಾಲೀಕರು ಕೊರಗುತ್ತಿದ್ದರು. ವರ್ಷಾನುಗಟ್ಟಲೇ ಗ್ಯಾಪ್ ತೆಗೆದುಕೊಂಡ ಸ್ಟಾರ್ ಗಳ ಸಿನಿಮಾಗಳೆಲ್ಲಾ ಈಗ ಒಟ್ಟಿಗೆ ರಿಲೀಸ್ ಆಗುತ್ತಿವೆ. ಸದ್ಯಕ್ಕೆ ಸ್ಯಾಂಡಲ್ ವುಡ್ ಧೂಳೆಬ್ಬಿಸಲು ಡೆವಿಲ್, ಭೈರತಿ ರಣಗಲ್, ಮಾರ್ಟಿನ್, ಕೆಡಿ, ಭೀಮ, ಮ್ಯಾಕ್ಸ್ ಸಿನಿಮಾಗಳು ರೆಡಿ ಇದಾವೆ. ಆದರೆ ಈ ಸ್ಟಾರ್ ಸಿನಿಮಾಗಳು ಈಗ ರಿಲೀಸ್ ಡೇಟ್ ಕ್ಲ್ಯಾಶ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ದರ್ಶನ್ ಹಾಗೂ ಧ್ರುವ ನಡುವಿನ ಮುನಿಸನ್ನು ಈಗಾಗಲೇ ಎಲ್ಲರು ನೋಡಿದ್ದಾರೆ. ಈಗ ಈ ಇಬ್ಬರು ಸ್ಟಾರ್ ಗಳ ಸಿನಿಮಾಗಳೇ ಕ್ಲ್ಯಾಶ್ ಆಗಲಿವೆ. ಡಿಸೆಂಬರ್ 22ಕ್ಕೆ ಮಾರ್ಟಿನ್ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಈಗಾಗಲೇ ಅನೌನ್ಸ್ ಮಾಡಿದೆ. ದರ್ಶನ್ ಅಭಿನಯದ ಡೆವಿಲ್ ಕೂಡ ಡಿಸೆಂಬರ್ 25ಕ್ಕೆ ರಿಲೀಸ್ ಮಾಡುವುದಾಗಿ ಘೋಷಿಸಿಕೊಂಡಿದೆ.
ಮೂರು ವರ್ಷಗಳ ಬಳಿಕ ಧ್ರುವ ಸರ್ಜಾ ನಟನೆಯ ಸಿನಿಮಾ ಬೆಳ್ಳಿತೆರೆಯ ಮೇಲೆ ಬರ್ತಿದೆ. ಮಾರ್ಟಿನ್ ಹಾಗೂ ಕೆಡಿ ಈ ಎರಡು ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳು. ಆದರೆ ಇಲ್ಲಿ ನಿರ್ದೇಶಕ ಪ್ರೇಮ್ ಕೂಡ ಕೆಡಿ ಸಿನಿಮಾವನ್ನು ಡಿಸೆಂಬರ್ ನಲ್ಲಿಯೇ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ನಮ್ಮ ರಾಜ್ಯದಲ್ಲಿ ಸದ್ಯಕ್ಕೆ ಥಿಯೇಟರ್ ಗಳು ಉಳಿದಿರುವುದೇ ಕಡಿಮೆ. ಎಲ್ಲಾ ಲೆಕ್ಕ ಹಾಕಿದರೂ 500 ಸಿಕ್ಕರೂ ಹೆಚ್ಚು. ದರ್ಶನ್ ಸಿನಿಮಾ ಎಂದರೆ ಎರಡು ವಾರಗಳ ಕಾಲ 400 ಥಿಯೇಟರ್ ಲಾಕ್ ಆಗಿರುತ್ತವೆ. ಸಿನಿಮಾ ಹಿಟ್ ಆದರೆ ಅದೆ ಮುಂದುವರೆಯುತ್ತದೆ. ಹೀಗಿರುವಾಗ ಪ್ರೇಮ್ ಇದೇ ಸಮಯಕ್ಕೆ ಸಿನಿಮಾ ರಿಲೀಸ್ ಮಾಡಿದರೆ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಲೆಕ್ಕಚಾರ ಉಲ್ಟಾಪಲ್ಟಾ ಆಗುವುದು ಗ್ಯಾರಂಟಿ.
ಇನ್ನು ದರ್ಶನ್ ಹಾಗೂ ಧ್ರುವ ನಡುವಿನ ಸಂಬಂಧ ಅಷ್ಟು ಚೆನ್ನಾಗಿಲ್ಲ ಎಂಬುದು ಕಾವೇರಿ ಹೋರಾಟದ ನಡುವೆಯೇ ಅರ್ಥವಾಗಿದೆ. ಹೀಗಿರುವಾಗ ಒಂದೇ ತಿಂಗಳಲ್ಲಿ ಸಿನಿಮಾಗಳು ರಿಲೀಸ್ ಆದರೆ ಇಬ್ಬರು ನಡುವಿನ ಫ್ಯಾನ್ಸ್ ವಾರ್ ಕೂಡ ಜೋರಾಗುವ ಸಾಧ್ಯತೆ ಇದೆ.