ದಾವಣಗೆರೆ: ಮುಂಬರುವ ಜಾತಿ ಗಣತಿಯ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಹಾಗೂ ಜಾತಿಯ ಕಾಲಂನಲ್ಲಿ ‘ಉಪಪಂಗಡ’ ದಾಖಲಿಸುವಂತೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ತೀರ್ಮಾನ ಕೈಗೊಂಡಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಇಂದು ಇಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, ‘ಲಿಂಗಾಯತ ಸಮುದಾಯದ ಹಲವು ಒಳಪಂಗಡಗಳು ಸರ್ಕಾರದ ಸೌಲಭ್ಯ ಪಡೆಯುತ್ತಿವೆ. ಜಾತಿ ಗಣತಿಯಲ್ಲಿ ಒಳಪಂಗಡ ನಮೂದಿಸದೇ ಇದ್ದರೆ ಈ ಸೌಲಭ್ಯ ಕೈತಪ್ಪುವ ಅಪಾಯವಿರುವುದರಿಂದ ಒಕ್ಕೂಟ ಈ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.
ಜಾತಿ ಗಣತಿಯ ಧರ್ಮದ ಕಾಲಂನಲ್ಲಿ ಲಿಂಗಾಯತವೆಂದು ನಮೂದಿಸುವ ಅವಕಾಶವನ್ನು ಕೇಂದ್ರ ಸರ್ಕಾರ ಕಲ್ಪಿಸುತ್ತಿಲ್ಲ ಎಂಬ ಮಾಹಿತಿ ಇದೆ. ಆದ್ದರಿಂದ ಧರ್ಮದ ಕಾಲಂನಲ್ಲಿ ಲಿಂಗಾಯತ ನಮೂದಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ ಎಂದು ಹೇಳಿದರು.
ಗುರು ವಿರಕ್ತ ಭಾವನೆಯೇ ಲಿಂಗಾಯತ ಧರ್ಮದಲ್ಲಿ ಇಲ್ಲ. ಪಂಚಪೀಠಾಧೀಶರು ಜಾತಿ ಗಣತಿ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ವಿರೋಧವಿಲ್ಲ. ಹಾಗಂತ ಅವರು ಹೇಳಿದ ಎಲ್ಲವನ್ನೂ ನಾವು ಒಪ್ಪುವುದಿಲ್ಲ. ಬಸವ ತತ್ವ ಪುರಾಣ ಪರಂಪರೆ ಅಲ್ಲ. ಅವರಲ್ಲಿಯೂ ವೈಜ್ಞಾನಿಕ, ವೈಚಾರಿಕ ಮನೋಭಾವ ಬೆಳೆಯುತ್ತಿರುವುದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದೇವೆ’ ಎಂದರು.
ಜಾತಿ ಗಣತಿಯಲ್ಲಿ ಹೀಗೆ ಬರೆಸಬೇಕು ಎಂಬ ಒತ್ತಡವನ್ನು ಜನರ ಮೇಲೆ ಹೇರುವುದಿಲ್ಲ. ಪಂಚಪೀಠಾಧೀಶರು ಸಿದ್ಧರಿದ್ದರೆ ಚರ್ಚಿಸಿ ಒಗ್ಗೂಡಿ ತೀರ್ಮಾನ ಕೈಗೊಳ್ಳಲು ಸಿದ್ಧರಿದ್ದೇವೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅ.5ರಂದು ನಡೆಯುವ ಬಸವತತ್ವ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಪಂಚಪೀಠಾಧೀಶರು ಬರುವುದಾದರೆ ಸ್ವಾಗತ ಕೋರುತ್ತೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ, ಪಾಂಡೊಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ, ಅಣಬೇರು ರಾಜಣ್ಣ ಹಾಜರಿದ್ದರು.