ನಮ್ಮ ನಡುವಿನ ಕತೆಗಳನ್ನು ಕಾಲಾಂತರದಲ್ಲಿ ಜನಪದವಾಗಿ, ಮೌಖಿಕ ಇತಿಹಾಸವಾಗಿ, ಸಾಮಾಜಿಕ ದಾಖಲೆಗಳಾಗಿ… ಹೀಗೆ ವಿವಿಧ ಅವತಾರಗಳಲ್ಲಿ ಕಾಣುವುದೇ ಒಂದು ಚಂದ. ಬದುಕು ಇರುವಲ್ಲಿ ಕತೆಗಳೂ ಇರುತ್ತವೆ. ಕತೆಗಳು ಇರುವಲ್ಲಿ ಬದುಕೂ ಇರುತ್ತದೆ –ಪ್ರಸಾದ್ ನಾಯ್ಕ್, ದೆಹಲಿ
ನಿಮ್ಮದೇ ಕತೆ ಬರೀರಿ ಎಂದರವರು.
ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಮಾತು. ಶಾಲೆಯ ರಜಾದಿನಗಳೆಂದು ಉಡುಪಿಯ ಚಿತ್ರಕಲಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಶಿಬಿರವೊಂದರಲ್ಲಿ ಪಾಲ್ಗೊಂಡಿದ್ದೆ. ಆಗಲೂ ಈಗಲೂ ಆ ಜಾಗವು ಜಂಗಮಮಠವೆಂದೇ ಹೆಸರುವಾಸಿ. ಆ ದಿನಗಳಲ್ಲಿ ಚಿತ್ರಕಲೆ ಕಲಿಯಲೆಂದು ಜಂಗಮಮಠಕ್ಕೆ ಹೋಗುತ್ತಿದ್ದರೂ, ಅಲ್ಲಿಯ ಪರಿಸರವು ಒಟ್ಟಾರೆಯಾಗಿ ನನ್ನನ್ನು ಬಹಳ ಆಕರ್ಷಿಸುತ್ತಿತ್ತು. ಬಹುಷಃ ಈ ಕಾರಣದಿಂದಾಗಿಯೇ ಚಿತ್ರಕಲಾ ಮಂದಿರದ ಮುಖ್ಯ ಪ್ರವೇಶದ್ವಾರದಿಂದ ಒಳನಡೆದರೆ, ಬೇರೆಯದೇ ಒಂದು ಫ್ಯಾಂಟಸಿ ಲೋಕದೊಳಕ್ಕೆ ಕಾಲಿಟ್ಟಂತೆ ನಾನು ರೋಮಾಂಚಿತನಾಗುತ್ತಿದ್ದೆ. ಒಳಗಿದ್ದ ಹಚ್ಚಹಸಿರು, ಚಂದದ ಕಲಾಕೃತಿಗಳು, ಬಣ್ಣಗಳ ವಿಚಿತ್ರ ವಾಸನೆ, ಇನ್ನೂ ಪೂರ್ಣವಾಗಬೇಕಿದ್ದ ಮೂರ್ತಿಗಳು-ಕಲಾಕೃತಿಗಳು, ಅರ್ಧ ಬರೆದಿಟ್ಟ ಚಿತ್ರಗಳು, ಕಲೆಯ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದ-ಮಾತಾಡುತ್ತಿದ್ದ-ಕೆಲಸಗಳಲ್ಲಿ ತಲ್ಲೀನರಾಗಿದ್ದ ಉತ್ಸಾಹಿಗಳು… ಹೀಗೆ ಬಾಲ್ಯದಲ್ಲೇ ನನ್ನ ಕಲ್ಪನಾಲೋಕಕ್ಕೆ ರೆಕ್ಕೆ ತಂದುಕೊಟ್ಟ ಉಡುಪಿಯ ಚಿತ್ರಕಲಾಮಂದಿರಕ್ಕೆ ನಾನು ಸದಾ ಋಣಿ.
ಆಗ ನಾನಿನ್ನೂ ಓರ್ವ ಚಿತ್ರಕಲಾವಿದನಾಗಿದ್ದೆ. ಓದಿನ ಹಿನ್ನೆಲೆ ಕೊಂಚ ಇತ್ತಾದರೂ ಬರವಣಿಗೆಯ ನಂಟಿರಲಿಲ್ಲ. ಆದರೆ ಶಿಬಿರ ಮಾತ್ರ ಕೊಂಚ ಸಮಗ್ರವಾಗಿಯೇ ಇತ್ತು. ಮಕ್ಕಳಾದ ನಮ್ಮಿಂದ ಅವರು ಚಿತ್ರಗಳನ್ನೂ ಬಿಡಿಸಿದರು. ರಂಗಭೂಮಿಗೂ ಪರಿಚಯಿಸಿದರು. ನಾಟ್ಯವನ್ನೂ ಮಾಡಿಸಿದರು. ಈಗ ಇವುಗಳನ್ನು ಸಮಗ್ರವೆಂದು ತೂಕದ ಪದ ಬಳಸಿ ಕರೆಯುತ್ತಿರುವುದು ಹೌದಾದರೂ ಆಗ ಇವೆಲ್ಲ ಕಿರಿಕಿರಿಯೇ ಅನ್ನಿಸುತ್ತಿತ್ತು. ಸ್ವಭಾವತಃ ಅಂತರ್ಮುಖಿಯಾಗಿದ್ದ ನನಗೆ ಚಿತ್ರಕಲೆಯು ಒಂದು ಬಗೆಯ ಖಾಸಗಿ ಚಟುವಟಿಕೆಯಾಗಿ ಖುಷಿಯನ್ನು ನೀಡುತ್ತಿದ್ದಿದ್ದು ಸತ್ಯ. ಹೀಗಾಗಿ ಹಾಡು-ಕುಣಿತ-ಭಾಷಣಗಳೆಲ್ಲ ನನ್ನಂಥವನನ್ನು ಕಲಿಕೆಗೆ ಹಚ್ಚಿದ್ದಕ್ಕಿಂತ ಭಯಪಡಿಸಿದ್ದೇ ಹೆಚ್ಚು.
ನಿಮ್ಮದೇ ಕತೆ ಬರೀರಿ ಅಂತ ನಮಗೆ ಹೀಗೆ ಹೇಳಿದ್ದೇ ಅಲ್ಲಿಗೆ ಬಂದಿದ್ದ ಆಹ್ವಾನಿತ ಅತಿಥಿಯೊಬ್ಬರು. ನಮ್ಮ ಕತೆಯಲ್ಲಿ ಹಾಗೆ ಬರೆಯುವಂಥದ್ದೇನಿದೆ ಎಂದು ನಾವೆಲ್ಲ ಅಲ್ಲಿ ತಲೆಕೆಡಿಸಿ ಕೊಂಡಿದ್ದೆವು. ಅಂತೂ ಹಿಂದಿನ ದಿನ ನೋಡಿದ್ದ ಭಾರತ-ಆಸ್ಟ್ರೇಲಿಯಾ ಮ್ಯಾಚಿನ ಬಗ್ಗೆ ಬರೆದು ನಾನು ಹರಕೆ ತೀರಿಸಿದೆ. ಹಿಂದೆಲ್ಲ ಏಕದಿನ ಪಂದ್ಯಗಳನ್ನು ವೀಕ್ಷಿಸಿ, ಮರುದಿನ ಅದೇ ಪಂದ್ಯದ ಪತ್ರಿಕಾ ವರದಿಗಳನ್ನು ಓದುವುದು ನನಗೆ ಭಾರೀ ಮಜ ನೀಡುತ್ತಿತ್ತು. ಹೀಗಾಗಿ ಪಂದ್ಯವೊಂದರ ವರದಿ ಬರೆಯುವುದು ಹೇಗೆಂಬುದನ್ನು ಸುಮಾರಾಗಿ ಕಲಿತಿದ್ದೆ. ಈ ವಿದ್ಯೆಯನ್ನೇನು ಮಾಡುವುದು ಎಂಬುದು ಆಗ ಗೊತ್ತಿರಲಿಲ್ಲ ಎಂಬುದು ಬೇರೆ ಮಾತು. ಹೀಗಿರುವಾಗ ಈ ಕೌಶಲವು ಅಚಾನಕ್ಕಾಗಿ ಇಲ್ಲಿ ಕೆಲಸಕ್ಕೆ ಬಂದಿತ್ತು. ಮಾರ್ಕ್ ವ್ಹಾ ಹೀಗೆ ಹೊಡೆದ, ಗಿಲ್ ಕ್ರಿಸ್ಟ್ ಹಾಗೆ ಜಿಗಿದ, ಶೇನ್ ವಾರ್ನ್ ಹೇಗೆ ಕುಣಿದ… ಹೀಗೆ ನಿಮ್ಮ ಕತೆ ಬರೀರಿ ಎಂದರೆ, ಬೇರ್ಯಾರದ್ದೋ ಕತೆಯನ್ನು ನನ್ನದೇ ಪದಗಳಲ್ಲಿ ಬರೆದುಕೊಟ್ಟಿದ್ದೆ.
ಒಮ್ಮೆ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮವೊಂದರಲ್ಲಿ ಖಾಸಗಿ ಡೈರಿ ಬರೆಯುವ ರೂಢಿಯ ಬಗ್ಗೆ ಆಸಕ್ತರೊಬ್ಬರು ಕೇಳಿದ್ದರು. ಈಗೆಲ್ಲ ಈ ಜರ್ನಲಿಂಗ್ ಬಗ್ಗೆ ಮನೋವೈದ್ಯರು, ಆಪ್ತಸಮಾಲೋಚಕರು ಮತ್ತು ಲೈಫ್ ಕೋಚ್ ಗಳು ಕೂಡ ಬಹಳಷ್ಟು ಮಂದಿಗೆ ಸಲಹೆಯನ್ನು ನೀಡುತ್ತಾರೆ. “ಜರ್ನಲಿಂಗ್ ಅನ್ನುವುದು ಬಹಳ ಪರಿಣಾಮಕಾರಿ ಎಂಬ ಬಗ್ಗೆ ಸಂದೇಹವೇ ಇಲ್ಲ. ಆದರೆ ವೈಯಕ್ತಿಕ ನೆಲೆಯಲ್ಲಿ ನನಗದು ಹೊಂದಾಣಿಕೆಯಾಗುವುದಿಲ್ಲ. ಹೀಗಾಗಿ ನನಗೆ ಡೈರಿ ಬರೆದಿಡುವ ಅಭ್ಯಾಸವಿಲ್ಲ”, ಎಂದು ನಾನಾಗ ಉತ್ತರಿಸಿದ್ದೆ. ಬರವಣಿಗೆಗೆ ಸಂಬಂಧಪಟ್ಟಂತೆ ನಿಯಮಿತ ಶಿಸ್ತಿಲ್ಲದಿರುವುದು ಇದಕ್ಕೆ ಒಂದು ಕಾರಣವಾದರೆ, ನನ್ನ ಖಾಸಗಿ ಬದುಕನ್ನು ಹೀಗೆ ಅಕ್ಷರ ರೂಪದಲ್ಲಿ ದಾಖಲಿಸುವುದು ಯಾವತ್ತೂ ಅಷ್ಟಾಗಿ ರುಚಿಸದೆ ಹೋಗಿದ್ದು ಇನ್ನೊಂದು ಕಾರಣ.
ಒಟ್ಟಿನಲ್ಲಿ ನಮ್ಮ ಕತೆಯಲ್ಲಿ ಬರೆಯುವಂಥದ್ದೇನಿದೆ ಎಂಬ ಗೊಣಗುವಿಕೆಯು ಬಾಲ್ಯಕ್ಕಷ್ಟೇ ಸೀಮಿತವಾಗಿಲ್ಲ ಎಂಬುದನ್ನು ನಾನು ಕ್ರಮೇಣ ಕಂಡುಕೊಂಡಿದ್ದೇನೆ. ಅವರಿವರು ಹಾಗಿರಲಿ. ಖುದ್ದು ಬರಹಗಾರರಿಗೂ ಇಂತಹ ಗೊಂದಲಗಳಿರುತ್ತವೆ. ಯಾವ ವಿಷಯಗಳನ್ನು ಹೇಳಿಕೊಂಡರೆ ಕ್ಷೇಮ, ಯಾವುದು ಓದುಗರಿಗೆ ರುಚಿಸಬಹುದು, ಯಾವುದು ಕೆಲಸಕ್ಕೆ ಬಾರದ್ದು… ಹೀಗೆ ಖಾಸಗಿ ಸಂಗತಿಗಳನ್ನು ಬರೆಯುವ ಮುನ್ನ ಎಲ್ಲರೂ ಸಣ್ಣ ಎಚ್ಚರಿಕೆಯೊಂದನ್ನಂತೂ ಖಂಡಿತ ಇಟ್ಟುಕೊಂಡಿರುತ್ತಾರೆ. ಇತ್ತೀಚೆಗೆ ಖ್ಯಾತನಾಮರೊಬ್ಬರ ಆತ್ಮಕತೆಯನ್ನು ಓದಿದ್ದ ನನ್ನ ಗೆಳೆಯ, “ಇದೆಂತ ಆತ್ಮಕತೆ! ನಾನು ಅಲ್ಲಿ ಚಾ ಕುಡಿದೆ, ಇಲ್ಲಿ ಕಷಾಯ ಕುಡಿದೆ, ಇಡ್ಲಿ ಸಾಂಬಾರು ತಿಂದೆ… ಅಂತೆಲ್ಲ ಬರೆದಿಟ್ಟಿದ್ದಾರೆ. ಅವರು ಉಪ್ಪಿಟ್ಟು ತಿಂದ ಕತೆ ಕಟ್ಟಿಕೊಂಡು ನಮಗೇನಾಗಬೇಕಿದೆ?”, ಎಂದಿದ್ದರು. ಓರ್ವ ಓದುಗನಾಗಿ ಅವರು ಹೇಳುವುದೇನೋ ಸತ್ಯವೇ. ಹಾಗಂತ ಆತ್ಮಕತೆಯ ನಿರೂಪಣೆಯಲ್ಲಿ ಕೆಲವೊಮ್ಮೆ ಕೆಲಸಕ್ಕೆ ಬಾರದ ಸಂಗತಿಗಳೂ ಬಂದುಹೋಗುವುದು ಅಪರೂಪದ ಸಂಗತಿಯೇನಲ್ಲ. ಆತ್ಮಕತೆಯೆಂಬ ಸೃಷ್ಟಿಯ ಪ್ರಕ್ರಿಯೆಯಲ್ಲಿ ಅದು ಸಹಜವೂ ಹೌದೇನೋ.
ಆದರೆ ಸ್ವಾರಸ್ಯಕರ ಸತ್ಯವೇನೆಂದರೆ ಬಹಳಷ್ಟು ಬಾರಿ ನಾವು ನಮ್ಮದೇ ಕತೆಗಳನ್ನು ಕಡೆಗಣಿಸಿ ಬಿಡುತ್ತೇವೆ ಎಂಬ ಸಂಗತಿ. ಅಸಲಿಗೆ ನಮ್ಮ ಬಳಿಯಿರುವ ಕತೆಗಳು ಇತರರಿಗೆ ಹೇಳಲಿಕ್ಕೆ ಯೋಗ್ಯ ಎಂಬುದನ್ನು ನಾವೆಂದೂ ಗಂಭೀರವಾಗಿ ಪರಿಗಣಿಸಿಯೇ ಇರುವುದಿಲ್ಲ. ನಾವು ಮಹಾಸಾಧಕರಲ್ಲದಿದ್ದರೆ, ಖ್ಯಾತನಾಮರಲ್ಲದಿದ್ದರೆ ನಮ್ಮ ಕತೆಗಳನ್ನು ದಾಖಲಿಸುವ ಅವಶ್ಯಕತೆಯೇ ಇಲ್ಲವೆಂದು ನಾವು ಸಾಮಾನ್ಯವಾಗಿ ಭಾವಿಸುತ್ತೇವೆ. ಹೀಗೆ “ನಮ್ಮ ಕತೆಯಲ್ಲೇನಿದೆ ಮಣ್ಣು” ಎಂದು ಹೇಳುತ್ತಾ ನಮ್ಮಂತಹ ಸಾಮಾನ್ಯರ ಕತೆಗಳು ಸದ್ದಿಲ್ಲದೆ ಮಣ್ಣುಮುಕ್ಕುವುದೇ ಹೆಚ್ಚು.
ಉದಾಹರಣೆಗೆ ನಾನೋರ್ವ ಬರಹಗಾರನಲ್ಲದಿದ್ದರೆ ನನ್ನ ಬಳಿಯಿದ್ದ ಬಹಳಷ್ಟು ಕತೆಗಳು ನನ್ನ ಬಳಿಯೇ ಉಳಿದು ಹೋಗುತ್ತಿದ್ದವು ಎಂದು ನನಗೆ ಹಲವು ಬಾರಿ ಅನಿಸಿದ್ದಿದೆ. ಅಲ್ಲದೆ ನಾನು ಈ ಕ್ಷೇತ್ರಕ್ಕೆ ಬರದೇ ಹೋಗಿದ್ದರೆ ಕತೆಗಳ ತಲಾಶೆಯಲ್ಲಿ ಸಾಗುವ ಸಾಧ್ಯತೆಗಳೂ ಬಹುಷಃ ಇರುತ್ತಿರಲಿಲ್ಲ. ದಿಲ್ಲಿಯಲ್ಲಿ ನನಗೆ ಖ್ಯಾತ ಚಿತ್ರಕಾರರಾದ ಬಾದಲ್ ಚಿತ್ರಕಾರ್ ಪರಿಚಯವಾಗಿದ್ದು ಚಿಕ್ಕದೊಂದು ಧೂಳು ಹಿಡಿದಿದ್ದ ಫಲಕದಿಂದಾಗಿ. “ಇಲ್ಲಿರುವ ಕಲಾವಿದನೊಬ್ಬ ತನ್ನ ರಕ್ತವನ್ನೇ ಬಳಸಿಕೊಂಡು ಗಾಂಧೀಜಿಯವರ ಕಲಾಕೃತಿಯೊಂದನ್ನು ರಚಿಸಿದ್ದಾರೆ”, ಎಂದು ಬರೆದಿತ್ತು ಆ ಬೋರ್ಡಿನಲ್ಲಿ. ಬರಹಗಾರನೊಬ್ಬನಿಗೆ ಕತೆಯೊಂದು ಬಂದು ಅಪ್ಪಿಕೊಳ್ಳಲು ಇದಿಷ್ಟು ಸಾಕು.
ಹಿಂದೆ ನನ್ನ ಸಹೋದ್ಯೋಗಿಯೊಬ್ಬರು ಮಕ್ಕಳಿಗೆ ಪಾಠ ಹೇಳಲು ಅವರ ಮನೆಗೆ ಬರುತ್ತಿದ್ದ ಶಿಕ್ಷಕನೊಬ್ಬನ ಬಗ್ಗೆ ಮಜವಾಗಿ ಹೇಳುತ್ತಿದ್ದರು. ಆ ಶಿಕ್ಷಕನ ಸಮಯಪಾಲನೆಯು ಅದೆಷ್ಟು ನಿಖರವಾಗಿತ್ತೆಂದರೆ ತನ್ನ ಒಂದೇ ಒಂದು ನಿಮಿಷವನ್ನೂ ಹೆಚ್ಚುವರಿಯಾಗಿ ವ್ಯಯಿಸಲು ಆತ ತಯಾರಿರಲಿಲ್ಲವಂತೆ. ತನ್ನ ಅವಧಿ ಮುಗಿಯುತ್ತಿರುವ ಹೊತ್ತಿನಲ್ಲಿ ವಾಕ್ಯವೊಂದನ್ನು ಹೇಳುತ್ತಿದ್ದರೆ ಅದನ್ನೂ ಅರ್ಧಕ್ಕೇ ನಿಲ್ಲಿಸಿಬಿಡುವ ಆಸಾಮಿ. ಅಂದಹಾಗೆ ಇದೊಂದು ಶ್ರೀಮಂತ ಕುಟುಂಬವಾಗಿದ್ದರಿಂದ ಕೇವಲ ಮನೆಪಾಠ ಹೇಳಲೆಂದೇ ಆತನಿಗೆ ಮಾಸಿಕ ಸುಮಾರು ಐವತ್ತು ಸಾವಿರ ರೂಪಾಯಿಗಳಷ್ಟು ಸಂಭಾವನೆ ನೀಡಲಾಗುತ್ತಿತ್ತಂತೆ. ಖಾಸಗಿ ಮನೆಪಾಠಕ್ಕಾಗಿ ಈ ಮನೆಯನ್ನೂ ಒಳಗೊಂಡಂತೆ, ಆತ ಹೀಗೆ ವಠಾರದ ಹಲವು ಮನೆಗಳನ್ನು ಹಿಡಿದಿದ್ದ. ಸಂಪಾದನೆಯು ಪರವಾಗಿಲ್ಲ ಅನ್ನುವುದಕ್ಕಿಂತ ಭರ್ಜರಿಯಾಗಿತ್ತು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಅಷ್ಟಿದ್ದರೂ ಆತ ಸೈಕಲ್ ತುಳಿಯುತ್ತಲೇ ಸುತ್ತಮುತ್ತ ತಿರುಗುತ್ತಿದ್ದನಂತೆ. ಹಾಗೆ ನೋಡಿದರೆ ಇದೊಂದು ಸಾಮಾನ್ಯವಾದ ಕತೆಯೇ. ಆದರೆ ಈ ಕತೆಯನ್ನು ಅವರು ಅದೆಷ್ಟು ರಸವತ್ತಾಗಿ ಹೇಳುತ್ತಿದ್ದರೆಂದರೆ ಅದನ್ನು ಕೇಳುವುದೇ ನಮಗೆಲ್ಲ ಒಂದು ಮೋಜೆನ್ನಿಸುತ್ತಿತ್ತು.
ಹಳ್ಳಿ, ಊರುಗಳ ಬಗ್ಗೆ ಬಹಳ ನಾಸ್ಟಾಲ್ಜಿಕ್ ಆಗಿ ಬರೆದಿರುವುದನ್ನು ಓದಿದ ಹೆಚ್ಚಿನವರಿಗೆ ಮೆಟ್ರೋಸಿಟಿಗಳಲ್ಲಿ ಕತೆಗಳೇ ಇರುವುದಿಲ್ಲ ಅಂತನಿಸಿಬಿಡುತ್ತದೆ. ಅದು ಹಾಗಿಲ್ಲ ಎಂಬುದನ್ನು ಹೇಳುವುದಕ್ಕೆಂದೇ ಕಳೆದ ಕೆಲ ಕಾಲದಿಂದ ನಾನು ನಗರಕೇಂದ್ರಿತ ಕತೆಗಳನ್ನು ಬರೆಯುತ್ತಾ ಬಂದಿದ್ದೆ. ಮೇಲ್ನೋಟಕ್ಕೆ ನಿತ್ಯವೂ ಏಕತಾನತೆಯನ್ನು ತರಿಸುವಂತೆ ಕಾಣುವ ಲೋಕಲ್ ಟ್ರೈನುಗಳು, ಬಸ್ ಪ್ರಯಾಣಗಳಂತಹ ಚಿಕ್ಕ ಸಂಗತಿಗಳ ಬಗ್ಗೆಯೂ ಅದ್ಭುತ ಅನ್ನಿಸುವಂತಹ ಸಿನೆಮಾಗಳು, ಶಾರ್ಟ್ ಫಿಲ್ಮ್ ಗಳು ಬಂದಿವೆ. ಇರ್ಫಾನ್ ಖಾನ್ ಅಭಿನಯದ “ಲಂಚ್ ಬಾಕ್ಸ್” ಚಿತ್ರದಲ್ಲಿ ಇಂದಿಗೂ ನನಗೆ ಕಣ್ಣಿಗೆ ಕಟ್ಟಿದಂತೆ ನೆನಪಾಗುವುದು ಕಥಾನಾಯಕನ ನಿತ್ಯದ ಅದೇ ಲೋಕಲ್ ಟ್ರೈನ್ ಪ್ರಯಾಣ ಮತ್ತು ಮಾತಿನ ಹಂಗಿಲ್ಲದೇನೇ ನಮ್ಮನ್ನು ಗಾಢವಾಗಿ ತಟ್ಟುವ ಆತನ ಒಬ್ಬಂಟಿತನ.
ಇನ್ನು ನಮ್ಮ ನಡುವಿನ ಸಾಮಾನ್ಯರ ಕತೆಗಳು ಹೆಚ್ಚಿನ ಮಂದಿಯನ್ನು ಪರಿಣಾಮಕಾರಿಯಾಗಿ ತಲುಪದಿರುವ ಹಿಂದೆ ನಮ್ಮೆಲ್ಲರ ಯೋಚನಾ ವಿಧಾನ, ಮಾಧ್ಯಮಗಳು, ಮಾರುಕಟ್ಟೆ ವ್ಯವಸ್ಥೆ… ಹೀಗೆ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಕೂಡ ಕಾರಣವಾಗಿರುತ್ತವೆ. ಉದಾಹರಣೆಗೆ ಎರಡು ಸುದ್ದಿಗಳನ್ನು ಕೈಗೆತ್ತಿಕೊಳ್ಳೋಣ. ಸುದ್ದಿ ನಂಬರ್ 1 ಹೀಗಿದೆ: “ಉತ್ಸಾಹಿ ವಿದ್ಯಾವಂತ ಯುವಕನೊಬ್ಬ ತನ್ನ ಗೆಳೆಯರ ತಂಡದೊಂದಿಗೆ ಹಳ್ಳಿಯಲ್ಲಿ ಶಾಲೆಯೊಂದನ್ನು ತೆರೆದನು”. ಸುದ್ದಿ ನಂಬರ್ 2 ಹೀಗಿದೆ: “ಯುವಕನೊಬ್ಬ ತನ್ನ ಪ್ರೇಯಸಿಯ ಕೈಕಾಲುಗಳನ್ನು ಬರ್ಬರವಾಗಿ ಮಚ್ಚಿನಿಂದ ತುಂಡರಿಸಿ, ಚೀಲವೊಂದರಲ್ಲಿ ತುಂಬಿಸಿ ಊರಾಚೆಯ ನದಿಗೆಸೆದುಬಿಟ್ಟ”. ಇಲ್ಲಿ ಮೊದಲನೇ ಸುದ್ದಿಗಿಂತ ಎರಡನೇ ಸುದ್ದಿಯು ಹೆಚ್ಚಿನ ಮಂದಿಯನ್ನು ಆಕರ್ಷಿಸುತ್ತದೆ ಮತ್ತು ಸದ್ದು ಮಾಡುತ್ತದೆ ಎಂದು ತೀರ್ಪು ನೀಡಲು ಮಾಧ್ಯಮ ತಜ್ಞರನ್ನೇನೂ ಕರೆಸಬೇಕಿಲ್ಲ. ಹೀಗೆ ಕಂಟೆಂಟ್ ಗಳನ್ನು ಬಳಸುವವರ ಅಭಿರುಚಿಗನುಗುಣವಾಗಿ ಕಂಟೆಂಟ್ ಗಳನ್ನು ಸೃಷ್ಟಿಸಲಾಗುವುದು ಹೊಸ ಬೆಳವಣಿಗೆಯೂ ಅಲ್ಲ.
ಹೀಗೆ ಒಟ್ಟಾರೆಯಾಗಿ ಕತೆಯೊಂದಕ್ಕೆ ಸಿಗುವ ಪ್ರತಿಕ್ರಿಯೆಯ ಪ್ರಮಾಣವು, ಕತೆಯ ಗುಣಮಟ್ಟದ ಅಳತೆಗೋಲಾಗಿ ಬದಲಾಗಿರುವುದು ಕೂಡ ನಮ್ಮ ಕತೆಗಳನ್ನು ಕೊಂಚ ಮಂಕಾಗಿಸಿರುವುದು ಸತ್ಯ. ಇಂದು ವಿವಿಧ ವೇದಿಕೆಗಳಿಗೆ ಅನುಗುಣವಾಗಿ ಲೈಕ್ಸ್, ಕಾಮೆಂಟ್ಸ್, ರೀ-ಟ್ವೀಟ್, ವೈರಲ್… ಇತ್ಯಾದಿ ಹೊಸ ಹೆಸರುಗಳೆಲ್ಲ ಇದಕ್ಕೆ ಬಂದಿವೆ. ಹಿಂದೆಲ್ಲ ಹಿರಿಯ ಕವಿ ಡಾ. ಸಿದ್ಧಲಿಂಗಯ್ಯರವರು ದಿಲ್ಲಿಗೆ ಬಂದಾಗ ನಾವು ತಾಸುಗಟ್ಟಲೆ ಹರಟುವುದಿತ್ತು. ಅವರ ಮಾತುಗಳನ್ನು ಕೇಳಲೆಂದೇ ನಾನು ಆಫೀಸು ಮುಗಿಸಿ, ಒಂದೂವರೆ ತಾಸು ಪ್ರಯಾಣ ಮಾಡಿ ಅವರಿದ್ದಲ್ಲಿಗೆ ಹೋಗುತ್ತಿದ್ದೆ. ಅವರ ಕತೆಗಳು ಅದೆಷ್ಟು ರಸವತ್ತಾಗಿ ಮತ್ತು ಹಾಸ್ಯಮಯವಾಗಿ ಇರುತ್ತಿತ್ತೆಂದರೆ ತಾಸುಗಟ್ಟಲೆ ನಕ್ಕು, ಕೆನ್ನೆ ನೋಯುತ್ತಿದ್ದ ಸಂದರ್ಭಗಳೂ ಇರುತ್ತಿದ್ದವು.
ಆದರೆ ಇಷ್ಟು ಮಾತುಗಾರರಾಗಿದ್ದ ಸಿದ್ಧಲಿಂಗಯ್ಯರವರು ಮೌನವಾಗಿ ತನ್ನ ಸುತ್ತಲಿದ್ದ ಜಗತ್ತನ್ನು ಗಮನಿಸುವುದನ್ನೂ ನಾನು ಕಂಡಿದ್ದೆ. ದಿಲ್ಲಿಯ ಸರೋಜಿನಿ ಮಾರ್ಕೆಟ್ಟಿನಲ್ಲಿ ಚಕ್ಕಳಮಕ್ಕಳ ಹಾಕಿ ಕೂತು, ಎಲ್ಲೆಲ್ಲೂ ಇರುವೆಗಳಂತೆ ಓಡಾಡುತ್ತಿದ್ದ ಜನಜಂಗುಳಿಯನ್ನೇ ನಾವಿಬ್ಬರು ಸುಮ್ಮನೆ ಮೂಕಿ ಸಿನೆಮಾದಂತೆ ವೀಕ್ಷಿಸಿದ್ದೇವೆ. ಹೀಗೆ ಬಹಳ ಅದ್ದೂರಿಯಲ್ಲದ, ನಮ್ಮ ನಿತ್ಯದ ಜಗತ್ತಿನ ಆಗುಹೋಗುಗಳಲ್ಲೂ ಚಂದದ ಕತೆಗಳು ನಮಗೆ ಅಚಾನಕ್ಕಾಗಿ ಸಿಕ್ಕಿಬಿಡುತ್ತವೆ. ರಸ್ಕಿನ್ ಬಾಂಡ್ ಆತ್ಮಕತೆಯನ್ನು ಓದುತ್ತಿದ್ದರೆ 1940 ರ ದಶಕದ ದಿಲ್ಲಿ ನನ್ನ ಕಣ್ಣೆದುರು ಬಂದು ನಿಲ್ಲುತ್ತದೆ. ಇನ್ನು ಪಿ. ಸಾಯಿನಾಥ್ ರಂತಹ ದಿಗ್ಗಜರಂತೂ ದೇಶದಾದ್ಯಂತ ಇಂತಹ ಕತೆಗಳನ್ನು ಕಲೆ ಹಾಕುತ್ತಲೇ ಒಂದಿಡೀ ಕಾಲಘಟ್ಟವನ್ನು ಅದ್ಭುತವಾಗಿ ದಾಖಲಿಸುತ್ತಾ ಹೋಗುತ್ತಾರೆ. ನಮ್ಮ ನಡುವಿನ ಕತೆಗಳನ್ನು ಕಾಲಾಂತರದಲ್ಲಿ ಜನಪದವಾಗಿ, ಮೌಖಿಕ ಇತಿಹಾಸವಾಗಿ, ಸಾಮಾಜಿಕ ದಾಖಲೆಗಳಾಗಿ… ಹೀಗೆ ವಿವಿಧ ಅವತಾರಗಳಲ್ಲಿ ಕಾಣುವುದೇ ಒಂದು ಚಂದ.
ಬದುಕು ಇರುವಲ್ಲಿ ಕತೆಗಳೂ ಇರುತ್ತವೆ. ಕತೆಗಳು ಇರುವಲ್ಲಿ ಬದುಕೂ ಇರುತ್ತದೆ.
ಪ್ರಸಾದ್ ನಾಯ್ಕ್, ದೆಹಲಿ
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.
ಇದನ್ನೂ ಓದಿ- http://“ಫ್ರಂ ದೇವರು ಟು ಡೆವಿಲ್ಲು” https://kannadaplanet.com/from-god-to-devil/