ಐಟಿಐ ಪ್ರವೇಶಾತಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಸೂಚನೆ

Most read

ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್‌, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮೊದಲಾದವರು ಭಾಗಿಯಾಗಿದ್ದರು.

ಪ್ರಸ್ತುತ ಬಜೆಟ್‌ನಲ್ಲಿ ಇಲಾಖೆಗೆ ರೂ.1864 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಇದುವರೆಗೆ ರೂ. 1235 ಕೋಟಿ ವೆಚ್ಚವಾಗಿದೆ. ರಾಜ್ಯದಲ್ಲಿ 50 ವರ್ಷ ಪೂರ್ಣಗೊಳಿಸಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪಾರಂಪರಿಕ ಸಂಸ್ಥೆಗಳೆಂದು ಘೋಷಿಸಿ ಉನ್ನತೀಕರಣಕ್ಕಾಗಿ ರೂ.100 ಕೋಟಿ ಒದಗಿಸಲಾಗಿದ್ದು, ಈ ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಕೌಶಲ್ಯಾಭಿವೃದ್ಧಿ ಆದರೆ ಮಾತ್ರ ಉದ್ಯೋಗ ಸಿಗಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕೌಶಲ್ಯಾಭಿವೃದ್ಧಿ ಆದರೆ ಮಾತ್ರ ಉದ್ಯೋಗ ಸಿಗಲು ಸಾಧ್ಯವಿದೆ. ಕೌಶಲ್ಯ ನೀಡಿಕೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಬೇಕು. ಸಭೆಯಲ್ಲಿ ಮುಖ್ಯಮಂತ್ರಿಗಳು ಯುವನಿಧಿ ಯೋಜನೆಯಡಿ ನೋಂದಣಿಗೊಂಡವರಿಗೆ ಆದ್ಯತೆ ಮೇರೆಗೆ ಕೌಶಲ್ಯ ತರಬೇತಿ ನೀಡಬೇಕು. ಯುವನಿಧಿ ಯೋಜನೆಯಡಿ ಇದುವರೆಗೆ 1,97,060 ಅಭ್ಯರ್ಥಿಗಳು ನೋಂದಾಯಿಸಿದ್ದು, ಇವರ ಪೈಕಿ 1,61,883 ಅರ್ಹ ಫಲಾನುಭವಿಗಳಿಗೆ ರೂ.216.38 ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದೆ. ಯೋಜನೆಯಡಿ ಅರ್ಹ ಅಭ್ಯರ್ಥಿಗಳ ನೋಂದಣಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಈ ವರ್ಷದ ಬಜೆಟ್ ನಲ್ಲಿ ಘೋಷಿಸಲಾಗಿದ್ದ, ಸುಮಾರು 20ಸಾವಿರ ಐಟಿಐ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಮತ್ತು ಕಮ್ಯುನಿಕೇಶನ್‌ ಕೌಶಲ್ಯ ತರಬೇತಿ ನೀಡುವ ಕಾರ್ಯಕ್ರಮವನ್ನು ಆದಷ್ಟು ಬೇಗನೆ ಅನುಷ್ಠಾನಗೊಳಿಸಬೇಕು.  ರಾಜ್ಯದಲ್ಲಿ ಆರಂಭಿಸಲಾಗಿರುವ ಅಕ್ಕ ಕಾಫಿ ಘಟಕಗಳ ಮಾದರಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಮಹಿಳಾ ಸ್ವಸಹಾಯ ಸಂಘಗಳ ಮೂಲಕ ನಡೆಸುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲು ಸೂಚನೆ ನೀಡಿದರು.

ಆರ್ಥಿಕ ಚಟುವಟಿಕೆಗಳಲ್ಲಿ ಗ್ರಾಮೀಣ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಗ್ರಾಮೀಣ ಮಹಿಳೆಯರಿಗೆ ಕೌಶಲ್ಯ ತರಬೇತಿಗೆ ಕ್ರಮ ವಹಿಸಬೇಕು ಮತ್ತು ಐಟಿಐ ಪ್ರವೇಶಾತಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದೂ ತಿಳಿಸಿದರು.

More articles

Latest article