ಬೆಂಗಳೂರು: ದೀಪಾವಳಿ ಆರಂಭವಾಗಿದ್ದು ಅಕ್ಟೋಬರ್ 31 ರ ರಾತ್ರಿ ಬೆಂಗಳೂರಿನ ವಾಯು ಗುಣಮಟ್ಟ ಕುಸಿತವಾಗಿದೆ. ಬೆಂಗಳೂರಿನ 13 ವಾಯು ಗುಣಮಟ್ಟ ಸೂಚ್ಯಂಕ ಕೇಂದ್ರಗಳ ವರದಿ ಪ್ರಕಾರ ಕಳೆದ ವಾರಕ್ಕೂ ನಿನ್ನೆ ರಾತ್ರಿಗೂ ವಾಯುವಿನ ಗುಣಮಟ್ಟ ಕುಸಿತವಾಗಿದೆ. ಇದು ಸಾಧಾರಣ ಗುಣಮಟ್ಟ ಎಂದು ಹೇಳಬಹುದಾಗಿದ್ದರೂ ಆತಂಕ ತಪ್ಪಿದ್ದಲ್ಲ. ಉಸಿರಾಟಕ್ಕೆ ತೊಂದರೆ, ಅಸ್ತಮಾ ಮತ್ತು ಹೃದ್ರೋಗಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.
ಬಿಟಿಎಂ ಲೇ ಔಟ್ ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಅ.24 ರಂದು 48ರಷ್ಟಿದ್ದರೆ ಅ.31ರಂದು 143ಕ್ಕೆ ಏರಿಕೆಯಾಗಿದೆ. ಇದೇ ದಿನಾಂಕಗಳ ಅವಧಿಯಲ್ಲಿ ಬಾಪೂಜಿ ನಗರದಲ್ಲಿ 79ರಿಂದ 117ಕ್ಕೆ ಮೆಜೆಸ್ಟಿಕ್ ನಲ್ಲಿ 74ರಿಂದ 150ಕ್ಕೆ, ಹೆಬ್ಬಾಳದಲ್ಲಿ 64ರಿಂದ 126ಕ್ಕೆ ಹೊಂಬೇಗೌಡ ನಗರದಲ್ಲಿ 47ರಿಂದ 99ಕ್ಕೆ, ಜಯನಗರ 5ನೇ ಬ್ಲಾಕ್ ನಲ್ಲಿ 59ರಿಂದ 113ಕ್ಕೆ. ಜಿಗಣಿಯಲ್ಲಿ 53ರಿಂದ 148ಕ್ಕೆ ಕಸ್ತೂರಿನಗರದಲ್ಲಿ 59ರಿಂದ 131ಕ್ಕೆ, ಪೀಣ್ಯದಲ್ಲಿ 58ರಿಂದ 84ಕ್ಕೆ, ಮೈಲಸಂದ್ರದಲ್ಲಿ 102ರಿಂದ 124ಕ್ಕೆ ಸಾಣೆಗುರುವನಹಳ್ಳಿಯಲ್ಲಿ 40 ರಿಂದ 72ಕ್ಕೆ, ಶಿವಪುರದಲ್ಲಿ 58ರಿಂದ 128ಕ್ಕೆ ಸಿಲ್ಕ್ ಬೋರ್ಡ್ ನಲ್ಲಿ 102ರಿಂದ 110ಕ್ಕೆ ಹೆಚ್ಚಳವಾಗಿದೆ.
ಅದರಲ್ಲೂ ರಾತ್ರಿ 10 ಗಂಟೆಯ ನಂತರ ವಾಯುಗುಣಮಟ್ಟ ಕುಸಿತವಾಗಿದೆ.
ಕಳೆದ ಹಲವು ದಿನಗಳಿಂದ ಸರ್ಕಾರ ಹಸಿರು ಪಟಾಕಿ ಸಿಡಿಸಲು ಉತ್ತೇಜನ ನೀಡುತ್ತಾ ಬಂದಿದೆ. ಬೆಂಗಳೂರಿನಲ್ಲಿ ಕಠಿಣ ಕ್ರಮಗಳನ್ನು ಜರುಗಿಸಿದರೂ ಸಾರ್ವಜನಿಕರು ನೆರೆಯ ಹೊಸೂರಿನಿಂದ ಪಟಾಕಿಗಳನ್ನು ಕೊಂಡು ತರುತ್ತಾರೆ. ನಿಷೇಧಿತ ಹಸಿರು ಪಟಾಕಿಗಳೂ ಪರಿಹಾರವಲ್ಲ. ಒಟ್ಟಾರೆ ಪಟಾಕಿಗಳನ್ನು ಹೊಡೆಯುವುದನ್ನೇ ಬಿಡಬೇಕು. ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಆರೋಗ್ಯದ ದೃಷ್ಟಿಯಿಂದ ಪಟಾಕಿಗಳನ್ನು ಸಿಡಿಸುವುದನ್ನು ನಿಲ್ಲಿಸವುದು ಮಾತ್ರ ಪರಿಹಾರ ಎಂದು ತಜ್ಞರು ಹೇಳುತ್ತಾರೆ.