ಕೋವಿಡ್-19 ಪಿಪಿಇ ಕಿಟ್‌ ಖರೀದಿ ಅಕ್ರಮ: ಯಡಿಯೂರಪ್ಪ ಮತ್ತು ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಶನ್ ಗೆ ನ್ಯಾ. ಕುನ್ಹಾ ಸಮಿತಿ ಶಿಫಾರಸ್ಸು

Most read

ಬೆಂಗಳೂರು:
ತುರ್ತು ಇಲ್ಲದಿದ್ದರೂ ದುಬಾರಿ ದರದಲ್ಲಿ ಏಪ್ರಿಲ್ 2020 ರಲ್ಲಿ ಚೀನಾದ ಎರಡು ಸಂಸ್ಥೆಗಳಿಂದ 3 ಲಕ್ಷ ಪಿಪಿಇ ಕಿಟ್‌ಗಳನ್ನು ದುಬಾರಿ ದರದಲ್ಲಿ ಖರೀದಿ ಮಾಡಿದ ಅಂದಿನ ಮುಖ್ಯಮಂತ್ರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋವಿಡ್-19 ಖರೀದಿ ಮತ್ತು ನಿರ್ವಹಣೆಯಲ್ಲಿನ ಅವ್ಯವಹಾರಗಳ ಕುರಿತು ತನಿಖೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ಆಯೋಗ ಶಿಫಾರಸು ಮಾಡಿದೆ.
ಭ್ರಷ್ಟಾಚಾರ ತಡೆ ಕಾಯಿದೆ, 1988 ರ ಸೆಕ್ಷನ್ 7 ಮತ್ತು 11 ರ ಅಡಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಶನ್ ಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಸಮಿತಿ ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.
ನ್ಯಾಯಮೂರ್ತಿ ಡಿ ಕುನ್ಹಾ ಅವರು ಆಗಸ್ಟ್ 31 ರಂದು ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಿದ್ದಾರೆ ಮತ್ತು ಸಚಿವ ಸಂಪುಟದ ಉಪಸಮಿತಿ ವರದಿಯನ್ನು ಪರಿಶೀಲಿಸುತ್ತಿದೆ.
ನ್ಯಾಯಮೂರ್ತಿ ಡಿ ಕುನ್ಹಾ ಅವರು ಆಗಸ್ಟ್ 31 ರಂದು ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಿದ್ದಾರೆ ಮತ್ತು ಪ್ರಸ್ತುತ ಸಚಿವ ಸಂಪುಟದ ಉಪಸಮಿತಿ ವರದಿಯನ್ನು ಪರಿಶೀಲಿಸುತ್ತಿದೆ.
1999 ರ ಸಾರ್ವಜನಿಕ ಸಂಗ್ರಹಣೆಯಲ್ಲಿನ ಕರ್ನಾಟಕ ಪಾರದರ್ಶಕತೆ ಕಾಯಿದೆಯಿಂದ ವಿನಾಯಿತಿ ಪಡೆಯದೆ ಮತ್ತು ಟೆಂಡರ್ ಆಹ್ವಾನಿಸದೆ 2000 ರುಗಳಂತೆ 3 ಲಕ್ಷ ಪಿಪಿಇ ಕಿಟ್‌ ಗಳನ್ನು ಖರೀದಿ ಮಾಡಲಾಗಿತ್ತು.
DHB ಗ್ಲೋಬಲ್ ಹಾಂಗ್ ಕಾಂಗ್ (ಚೀನಾ) ಮತ್ತು ಬಿಗ್ ಫಾರ್ಮಾಸ್ಯುಟಿಕಲ್ಸ್‌ನಿಂದ ಈ ಪಿಪಿಇ ಕಿಟ್‌ ಗಳನ್ನು ಕೊಂಡು ಕೊಳ್ಳಲಾಗಿತ್ತು.
ಖರೀದಿಗೆ ಕನಿಷ್ಠ ಮೂಲಭೂತ ನಿಯಮಗಳನ್ನು ಅನುಸರಿಸದೆ ಸಂಪೂರ್ಣವಾಗಿ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ನಿರ್ದೇಶನದ ಮೇರೆಗೆ ಖರೀದಿಸಲಾಗಿದೆ ಎನ್ನುವುದನ್ನು ಸಮಿತಿ ಗುರುತಿಸಿದೆ.
ವಾಮ ಮಾರ್ಗದಲ್ಲಿ ಲಾಭ ಪಡೆದುಕೊಳ್ಳಲು ತಮಗೆ ಬೇಕಾದ ಮತ್ತು ಆಯ್ದ ಗುತ್ತಿಗೆದಾರರಿಗೆ ಸರಬರಾಜು ಮಾಡುವ ಟೆಂಡರ್ ನೀಡಲಾಗಿದೆ ಎಂದು ಸಮಿತಿ ಹೇಳಿದೆ.
ಮಾರ್ಚ್ 18, 2020 ರಂದು ರಾಜ್ಯಕ್ಕೆ 12 ಲಕ್ಷ ಪಿಪಿಇ ಕಿಟ್‌ಗಳ ಅಗತ್ಯವಿದೆ ಎಂದು ನೀಡ್ ಅಸೆಸ್‌ಮೆಂಟ್ ಸಮಿತಿ ಹೇಳಿತ್ತು. ಏಪ್ರಿಲ್ 1, 2020 ರಂದು ಸಭೆ ಸೇರಿದ ಬೆಲೆ ನಿಗದಿ ಸಮಿತಿಯು ಸಾರ್ವತ್ರಿಕ ಪಿಪಿಇ ಕಿಟ್‌ನ ಬೆಲೆ ರೂಪಾಯಿ 2117.53 ಎಂದು ಅಂದಾಜಿಸಲಾಗಿದೆ ಎಂದು ಹೇಳಿತ್ತು. ನಂತರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕರು ಅಂದಾಜು ಬೆಲೆ ಆಧಾರದ ಮೇಲೆ ಮೂರು ಸಂಸ್ಥೆಗಳು ಬೆಲೆಯನ್ನು ಕಳುಹಿಸಿವೆ ಎಂದು
ಇ ಮೇಲ್ ಮೂಲಕ ತಿಳಿಸಿದ್ದರು. ಆದರೆ ಅಧಿಕೃತವಾಗಿ ದರಗಳನ್ನು ಆಹ್ವಾನಿಸಿರಲಿಲ್ಲ ಎನ್ನುವುದನ್ನು ಸಮಿತಿ ಗುರುತಿಸಿದೆ.
ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಸೂಚನೆ ಮೇರೆಗೆ ತುರ್ತು ಇರುವುದರಿಂದ ಮೇಲಿನ ಎರಡು ಕಂಪನಿಗಳಿಂದ 2117.53 ರೂ. ದರದಲ್ಲಿ 1 ಲಕ್ಷ ಪಿಪಿಇ ಕಿಟ್ ಖರೀದಿ ಮಾಡಲು ನಿರ್ಧರಿಸಲಾಗುತ್ತದೆ.
ಏಪ್ರಿಲ್ 10 ರಂದು ಮತ್ತೆ 2104.53 ಮತ್ತು 2049. 84 ರೂಪಾಯಿ ದರದಲ್ಲಿ ಮತ್ತೆ ಮೇಲಿನ ಎರಡು ಕಂಪನಿಗಳಿಂದ ಖರೀದಿ ಮಾಡಲು ನಿರ್ಧರಿಸಲಾಗುತ್ತದೆ. ಈ ಬೆಲೆ ನಿಗದಿಯಿಂದ 1.22 ಕೋಟಿ ರೂಪಾಯಿ ನಷ್ಟ ಉಂಟಾಗಿದೆ.
2020ರ ಜುಲೈ 2 ರಂದು ಮುಖ್ಯಮಂತ್ರಿ ಗಳಿಂದ ಒಪ್ಪಿಗೆ ಪಡೆಯಲಾಗಿದೆ ಎಂದು ಕಡತಗಳನ್ನು ಸೃಷ್ಟಿಸಲಾಗಿದ್ದರೂ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಖರೀದಿಸಲಾಗಿದೆ. ಇಡೀ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಮತ್ತು ವಂಚನೆಯಿಂದ ಕೂಡಿದೆ ಎಂದು ಸಮಿತಿ ಹೇಳಿದೆ.

ಭಾರತೀಯ ಸಂಸ್ಥೆಗಳು ಏಕಿಲ್ಲ?
ಸ್ಥಳೀಯ ಪೂರೈಕೆದಾರರು 5 ಲಕ್ಷ ಪಿಪಿಇ ಕಿಟ್‌ಗಳನ್ನು ಪೂರೈಸುವ ಸ್ಥಿತಿಯಲ್ಲಿಲ್ಲ ಎಂಬ ವಿವರಣೆಯನ್ನು ನಂಬುವಂತಿಲ್ಲ. ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಗುರುತಿಸಿದ ಆಯ್ದ ಪೂರೈಕೆದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಿರುವಂತೆ ಕಾಣಿಸುತ್ತಿದೆ. ಕೇವಲ ನೋಟ್ ಶೀಟ್ ನಲ್ಲಿ ಸ್ಥಳೀಯ ಗುತ್ತಿಗೆದಾರರಿಂದ 5 ಲಕ್ಷ ಪಿಪಿಇ ಕಿಟ್‌ಗಳನ್ನು ಪೂರೈಕೆ ಮಾಡಲು ಅಸಾಧ್ಯ ಎಂದು ಹೇಳಲಾಗಿದೆ. ಆದರೆ ಭಾರತದ ಯಾವುದೇ ಪೂರೈಕೆದಾರರು ತಮ್ಮ ಅಸಹಾಯಕತೆಯನ್ನು ತೋರಿಸಿಲ್ಲ ಎಂದೂ ಹೇಳಿದೆ.
2020ರ ಏಪ್ರಿಲ್ 20 ರಂದು ಚೀನಾದ ಎರಡು ಕಂಪನಿಗಳಿಂದ ಭಾರೀ ಪ್ರಮಾಣದಲ್ಲಿ ಪಿಪಿಇ ಕಿಟ್‌ಗಳನ್ನು ಆಮದು ಮಾಡಿಕೊಂಡ ನಂತರ ಮತ್ತು ಮುನ್ನ ಸ್ಥಳೀಯ ಕಂಪನಿಗಳಿಂದ ಈ ಕಿಟ್ ಗಳನ್ನು ತರಿಸಿಕೊಂಡ ಅನೇಕ ಉದಾಹರಣೆಗಳಿವೆ.
ಉದಾಹರಣೆಗೆ 2020, ಮಾರ್ಚ್ 14 ರಂದು ರಾಜ್ಯ ಸರ್ಕಾರದ ಸೂಚನೆ ಮೇರೆಗೆ 1.5 ಲಕ್ಷ ಪಿಪಿಇ ಕಿಟ್‌ಗಳನ್ನು ಪ್ಲಾಸ್ತಿ ಸರ್ಜ್ ಇಂಡಸ್ಟ್ರೀಸ್ ಪ್ರತಿ ಕಿಟ್ ಗೆ ರೂ. 330.40 ದರದಲ್ಲಿ ಪೂರೈಕೆ ಮಾಡಿದೆ. ಇದೇ ಪೂರೈಕೆಗೆ 2020, ಮಾರ್ಚ್ 27ರಂದು ಪ್ರತಿ ಪಿಪಿಇ ಕಿಟ್‌ ಗೆ 725 ರೂಪಾಯಿ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಈ ಅಕ್ರಮ ಆದೇಶಕ್ಕೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ನ್ಯಾ. ಕುನ್ಹಾ ಸಮಿತಿ ಶಿಫಾರಸ್ಸು ಮಾಡಿದೆ

More articles

Latest article