ಮುಡಾ ಬದಲಿ ನಿವೇಶನ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ 10 ದಿನಗಳ ಕಾಲ ರಿಲೀಫ್ ಕೊಟ್ಟ ಬೆನ್ನಲ್ಲೇ ಕೇಂದ್ರ ಸಚಿವ ಕುಮಾರಸ್ವಾಮಿ ಮಾಡಿರುವ ಹಗರಣವನ್ನೇ ಇಟ್ಟುಕೊಂಡು ಕೌಂಟರ್ ತಂತ್ರಗಾರಿಕೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಕುಮಾರಸ್ವಾಮಿ ಅವರ ಅಕ್ರಮ ಗಣಿ ಗುತ್ತಿಗೆ ಪ್ರಕರಣ ಕುರಿತು ಆರೋಪ ಪಟ್ಟಿ ಸಲ್ಲಿಸಲು ಅನುಮತಿಯನ್ನು ಕೋರಿ ಲೋಕಾಯುಕ್ತ ವಿಶೇಷ ತನಿಖಾ ತಂಡ ರಾಜ್ಯಪಾಲರಿಗೆ ಸೋಮವಾರ ಮತ್ತೆ ಪ್ರಸ್ತಾಪ ಸಲ್ಲಿಸಿದೆ. ರಾಜ್ಯಪಾಲರು ಈ ಕುರಿತಾಗಿ ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದು ಈಗ ಕುತೂಹಲಕಾರಿ ವಿಷಯವಾಗಿದೆ.
ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ನಿಯಮ ಉಲ್ಲಂಘಿಸಿ ಗಣಿ ಗುತ್ತಿಗೆ ಮಂಜೂರು ಮಾಡಿರುವ ಆರೋಪ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಇದೆ. ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಲು ಅನುಮತಿಯನ್ನು ಕೋರಿ ಲೋಕಾಯುಕ್ತ ವಿಶೇಷ ತನಿಖಾ ತಂಡ ರಾಜ್ಯಪಾಲರಿಗೆ ಸೋಮವಾರ ಮತ್ತೆ ಪ್ರಸ್ತಾಪ ಸಲ್ಲಿಸಿದೆ.
2006ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಮುಖ್ಯಮಂತ್ರಿಯಾಗಿದ್ದ ಎಚ್ ಡಿ ಕುಮಾರಸ್ವಾಮಿ ಅವರು ಎಂಸಿಆರ್ ನಿಯಮಾವಳಿಗಳನ್ನು ಉಲ್ಲಂಘಿಸಿ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ವಿನೋದ್ ಗೋಯಲ್ ಎಂಬ ವ್ಯಕ್ತಿಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಎನ್‌ಇಬಿ ರೇಂಜ್‌ನಲ್ಲಿನ 550 ಎಕರೆ ಭೂಮಿ ಮಂಜೂರು ಮಾಡಲು ಒಳಸಂಚು ರೂಪಿಸಿದ್ದಾರೆ ಎಂಬುದು ಆರೋಪವಾಗಿದೆ. ಈ ಕುರಿತು ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಸಲ್ಲಿಸಿದ್ದ ವರದಿಯನ್ನು ಉಲ್ಲೇಖ ಮಾಡಲಾಗಿದೆ. ಇದರ ತನಿಖೆಯನ್ನು ಈಗ ಲೋಕಾಯುಕ್ತ ನಡೆಸುತ್ತಿದೆ.
ಈ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ವಿನೋದ್ ಗೋಯಲ್ ಅವರನ್ನು ಪ್ರಥಮ ಆರೋಪಿಯೆಂದೂ, ಎಚ್ ಡಿ ಕುಮಾರಸ್ವಾಮಿ ಅವರನ್ನು ಎರಡನೇ ಆರೋಪಿಯೆಂದೂ, ಕೆ ಜಯಚಂದ್ರ ಹಾಗೂ ಜವರೇಗೌಡ ಅವರನ್ನು ಕ್ರಮವಾಗಿ ಮೂರು ಮತ್ತು ನಾಲ್ಕನೇ ಆರೋಪಿಗಳನ್ನಾಗಿ ದಾಖಲಿಸಿದ್ದಾರೆ.
ಇದರ ಜೊತೆಗೆ ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿಯಲ್ಲಿ ಗೋಮಾಳ ಜಮೀನನ್ನು ಅತಿಕ್ರಮಣ ಮಾಡಲಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್ ಆರ್ ಹಿರೇಮಠ್ ಅವರು ಆರೋಪ ಮಾಡಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆಗೆ 2014 ರಲ್ಲೇ ಆದೇಶ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಂಜೂರಾತಿ ದಾಖಲೆ ಪತ್ರಗಳ ಸಿಗದಿದ್ದರೆ ತಪ್ಪಿತಸ್ಥರ ವಿರುದ್ಧ ನೋಟಿಸ್ ಜಾರಿಗೊಳಿಸಿ ಸರ್ಕಾರ ಆ ಜಾಗವನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಈ ಕುರಿತು ಸಮಗ್ರ ತಿನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸಮಾನ್ಯ ವ್ಯಕ್ತಿಯೊಬ್ಬ ನೀಡಿದ ದೂರಿನ ಮೇಲೆ ರಾಜ್ಯಪಾಲರು ಒಂದೇ ದಿನದಲ್ಲಿ ಸಿಎಂ ಸಿದ್ದರಾಮಯ್ಯಗೆ ನೋಟಿಸ್ ನೀಡಿ ನಂತರ ಪ್ರಾಸಿಕ್ಯೂಷನ್ ಗೆ ಅನುಮತಿ ಸಹ ನೀಡಿದ್ದರು. ಕುಮಾರಸ್ವಾಮಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಹತ್ತು ತಿಂಗಳ ಹಿಂದೆ ಲೋಕಾಯುಕ್ತ ಸಲ್ಲಿಸಿದ್ದ ವರದಿಯನ್ನು ರಾಜ್ಯಪಾಲರು ನಿರ್ಲಕ್ಷ್ಯ ಮಾಡಿದ್ದರು. ಈಗ ಮತ್ತೆ ವರದಿ ಸಲ್ಲಿಸಿದ್ದು ರಾಜ್ಯಪಾಲರು ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡ್ತಾರಾ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಭೂಅಕ್ರಮಗಳ ಆರೋಪಗಳಿವೆ, ಅವರ ವಿರುದ್ಧ ಗಣಿ ಗುತ್ತಿಗೆ ಮಂಜೂರು ಆರೋಪವೂ ಇದ್ದು, ಅವರಿಗೆ ಈ ಪ್ರಕರಣಗಳೇ ಮುಳ್ಳಾಗುವ ಸಾಧ್ಯತೆ ಇದೆ.