ಮಂಗಳೂರು: ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿ ಇಲ್ಲಿನ ಬಿಜೈ ಪ್ರದೇಶದ ಮಸಾಜ್ ಪಾರ್ಲರ್ ಮೇಲೆ ಸಂಘಟನೆಯೊಂದರ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಪ್ರಸಾದ್ ಅತ್ತಾವರ ನೇತೃತ್ವದ ಸಂಘಟನೆ ಈ ದಾಳಿ ನಡೆಸಿದ್ದು ಮಸಾಜ್ ಸೆಂಟರ್ ನ ಪೀಠೋಪಕರಣಗಳನ್ನು ಧ್ವಂಸ ಮಾಡಿದೆ. ದಾಳಿ ನಡೆಸಿದವರು ರಾಮಸೇನೆ ಸಂಘಟನೆಯವರು ಎಂದು ಮೂಲಗಳು ತಿಳಿಸಿವೆ. ಆದರೆ ದಾಳಿಗೂ ತಮ್ಮ ಸಂಘಟನೆಗೂ ಸಂಬಧ ಇಲ್ಲ ಎಂದು ಶ್ರೀರಾಮ ಸೇನೆಯ ಸ್ಥಳೀಯ ಪದಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ, ಈ ದಾಳಿ ಏಕೆ ನಡೆದಿದೆ ಎಂಬ ಮಾಹಿತಿ ಇಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮಂಗಳೂರು ನಗರದಾದ್ಯಂತ ಇರುವ ಮಸಾಜ್ ಸೆಂಟರ್ಗಳನ್ನು ಮುಚ್ಚುವಂತೆ ರಾಮ ಸೇನಾ ಆಗ್ರಹಪಡಿಸಿದೆ. ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ಪ್ರತಿಕ್ರಿಯಿಸಿ, ರಾಮಸೇನೆ ಸಂಘಟನೆ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಮಸಾಜ್ ಸೆಂಟರ್ನಲ್ಲಿ ಡ್ರಗ್ಸ್ ನೀಡಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. 16-17 ವರ್ಷದ ಹೆಣ್ಣುಮಕ್ಕಳನ್ನು ಬಳಸಿಕೊಳ್ಳಲಾಗುತ್ತಿತ್ತು ಎಂದು ಅವರು ಆರೋಪ ಮಾಡಿದ್ದಾರೆ. ನಮ್ಮ ಕಾರ್ಯಕರ್ತನ ಸಂಬಂಧಿ ಯುವತಿ ಇಲ್ಲಿ ಸಿಲುಕಿದ್ದಾಳೆ ಎಂದು ಹೇಳಿದ್ದಾರೆ. ಮಸಾಜ್ ಸೆಂಟರ್ ಮಾಲೀಕ ಸುಧೀರ್ ಪ್ರತಿಕ್ರಿಯೆ ನೀಡಿದ್ದು, ದಾಳಿ ಮಾಡಿದವರೇ ಕೆಲವು ವಸ್ತುಗಳನ್ನು ತಂದು ಪಾರ್ಲರ್ ಒಳಗೆ ಬಿಸಾಡಿದ್ದಾರೆ. ವಾರಕ್ಕೊಮ್ಮೆ ಅಧಿಕಾರಿಗಳು ಮಸಾಜ್ ಸೆಂಟರ್ ಪರಿಶೀಲಿಸುತ್ತಿದ್ದಾರೆ. ಕಾನೂನು ಪ್ರಕಾರ ಅನುಮತಿ ಪಡೆದು ಕಳೆದ 2 ವರ್ಷದಿಂದ ನಾವು ಮಸಾಜ್ ಸೆಂಟರ್ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಸುಮಾರು 12 ಮಂದಿಯ ತಂಡ ಇಂದು ಏಕಾಏಕಿ ದಾಳಿ ನಡೆಸಿದೆ. ಈ ರೀತಿ ದಾಳಿ ಮಾಡಿದರೆ ನಾವು ವ್ಯವಹಾರ ನಡೆಸುವುದು ಹೇಗೆ? ದಾಳಿ ನಡೆಸಿದವರ ಪೈಕಿ ನಮಗೆ ಯಾರೂ ಪರಿಚಯ ಇಲ್ಲ. ನಮಗೆ ಯಾರೂ ಶತ್ರುಗಳಿಲ್ಲ ಎಂದು ತಿಳಿಸಿದ್ದಾರೆ.