ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಪದ್ಮಲತಾ, ವೇದವಲ್ಲಿ, ಮಾವುತ ನಾರಾಯಣ, ಯಮುನಾ, ಸೌಜನ್ಯ ಸೇರಿದಂತೆ ನೂರಾರು ಅಸಹಜ ಸಾವು ಪ್ರಕರಣಗಳು, ಭೂ ಅಕ್ರಮ, ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ನಡೆಯುತ್ತಿರುವ ಕಿರುಕುಳ ಮತ್ತು ಇಲ್ಲಿನ ದಲಿತ ಕುಟುಂಬಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕುರಿತು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಆಗ್ರಹಪಡಿಸಿದೆ.
ರಾಜ್ಯದ ಹಲವು ಸಮಾನ ಮನಸ್ಕ ಪಕ್ಷಗಳು, ಎಡ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ, ಸಾಂಸ್ಕೃತಿಕ ಸಂಘಟನೆಗಳ ಜಂಟಿ ಸಹಯೋಗದಲ್ಲಿ ‘ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ’ಹಮ್ಮಿಕೊಂಡಿರುವ ಈ ಸಮಾವೇಶದಲ್ಲಿ ರಾಷ್ಟ್ರ ಮತ್ತು ರಾಜ್ಯದ ಹಲವು ಚಿಂತಕರು, ಹೋರಾಟಗಾರರು, ಸಾಹಿತಿಗಳು ಈ ಭಾಗಿಯಾಗಿದ್ದಾರೆ. ಪ್ರೊ. ಎಸ್ ಜಿ ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ಮೂಡ್ನಾಕೂಡ ಚಿನ್ನಸ್ವಾಮಿ, ಡಾ. ಕೆ ಪ್ರಕಾಶ್, ಎಸ್. ಬಾಲನ್, ಸಿದ್ದನಗೌಡ ಪಾಟೀಲ್, ವೇದವಲ್ಲಿ ಮತ್ತು ಪದ್ಮಲತಾ ಕುಟುಂಬ ಸದಸ್ಯರು ಸೇರಿದಂತೆ ನೂರಾರು ಹೋರಾಟಗಾರರು ಭಾಗಿಯಾಗಿರುವ ಪ್ರಮುಖರು.
ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ನಿಕಟವರ್ತಿ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಅವರ ಪುತ್ರಿ ಸುಭಾಷಿಣಿ ಅಲಿ ಅವರು ನ್ಯಾಯ ಸಮಾವೇಶವನ್ನು ಉದ್ಘಾಟಿಸಿದರು.
ಸಮಾವೇಶದಲ್ಲಿ ಮಾತನಾಡಿದ ಗಣ್ಯರು ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಅಕ್ರಮವಾಗಿ ಹೂತುಹಾಕಿರುವ ಬಗ್ಗೆ ಎಸ್ಐಟಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. 2005ರಿಂದ ಇದುವರೆಗೆ ನಡೆದ ಅಸಹಜ ಸಾವುಗಳನ್ನು ಕುರಿತೂ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಪಡಿಸಿದರು.
ವೇದವಲ್ಲಿ, ಪದ್ಮಲತಾ, ಸೌಜನ್ಯ ಹಾಗೂ ಆನೆಮಾವುತ ಕುಟುಂಬದವರು ಯಾರನ್ನು ಆರೋಪಿಗಳು ಎಂದು ಶಂಕಿಸಿದ್ದಾರೋ ಅವರನ್ನೂ ವಿಚಾರಣೆಗೆ ಒಳಪಡಿಸಬೇಕು. ಧರ್ಮಸ್ಥಳದಲ್ಲಿ ದಲಿತರ ಜಮೀನು ಕಬಳಿಸಿದವರನ್ನು ತನಿಖೆಗೆ ಒಳಪಡಿಸಬೇಕು. ಈ ಭೂಮಿಯನ್ನು ವಶಪಡಿಸಿಕೊಂಡು ಮತ್ತೆ ದಲಿತ ಕುಟುಂಬಗಳಿಗೆ ಹಸ್ತಾಂತರಿಸಬೇಕು ಎಂದು ಗುಡುಗಿದರು.
ಇದು ಕೇವಲ ಪ್ರಾರಂಭ. ಇನ್ನು ಮುಂದೆ ಜಿಲ್ಲೆ ಜಿಲ್ಲೆಗಳಲ್ಲೂ ನ್ಯಾಯ ಸಮಾವೇಶ ನಡೆಯಲಿದೆ ಎಂದು ಆಯೋಜಕರು ಘೋಷಿಸಿದರು.