Saturday, July 27, 2024

ಮಂಡ್ಯಕ್ಕೆ ಬೆಂಕಿ ಹಚ್ಚಲು ಹೋಗಿರಲಿಲ್ಲ, ತಪ್ಪು ಮಾಡಿದ್ದರೆ ನೇಣಿಗೆ ಹಾಕಿ : HDK

Most read

ಬೆಂಗಳೂರು: ಕುಮಾರಸ್ವಾಮಿ ಅವರು ಬಂದು ಮಂಡ್ಯದಲ್ಲಿ ಅಶಾಂತಿ ಉಂಟು ಮಾಡಿದ್ದಾರೆ ಎಂದು ಹೇಳಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು, ‘ಅತಿ ವಿನಯಂ ದೂರ್ತ ಲಕ್ಷಣಂ’ ಎಂಬ ಮನೋಭಾವನೆಯ ವ್ಯಕ್ತಿ ಅವರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಮಂಡ್ಯಕ್ಕೆ ಬೆಂಕಿ ಹಚ್ಚಲು ಹೋಗಿರಲಿಲ್ಲ. ಸರಕಾರ ಮಾಡಿರುವ ತಪ್ಪುಗಳನ್ನು ಜನರಿಗೆ ತಿಳಿಸಲು ಹೋಗಿದ್ದೆ. ಗಣರಾಜ್ಯ ದಿನ ಕೆರಗೋಡುನಲ್ಲಿ ಜನವರಿ 26ರಂದು ಗ್ರಾಮಸ್ಥರು ತ್ರಿವರ್ಣ ದ್ವಜ ಹಾರಿಸಿ ಸಂಜೆ ಅದನ್ನು ಇಳಿಸಿದ್ದಾರೆ. ಆ ಗ್ರಾಮದ ಸರಕಾರಿ ಕಾರ್ಯಕ್ರಮಕ್ಕೆ ಸ್ಥಳಿಯ ಶಾಸಕರನ್ನು ಆಹ್ವಾನ ಮಾಡಿಲ್ಲ ಎಂಬ ಕಾರಣಕ್ಕಾಗಿ ಇದೆಲ್ಲಾ ಶುರು ಮಾಡಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ಗಂಭೀರ ಆರೋಪ ಮಾಡಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಂಡ್ಯದಲ್ಲಿ ಇಂದು ಮಾಧ್ಯಮಗಳ ಜತೆ ಸಚಿವರು ಮಾತನಾಡಿದ್ದನ್ನು ನೋಡಿದೆ. ಅವರ ನಯ ವಿನಯ ನಾಜೂಕುತನವನ್ನು ಗಮನಿಸಿದೆ. ‘ಅತಿ ವಿನಯಂ ದೂರ್ತ ಲಕ್ಷಣಂ’ ಎಂಬಂತೆ ಇತ್ತು ಅವರ ಹಾವಭಾವ ಎಂದು ಲೇವಡಿ ಮಾಡಿದರು.

ಹುಳುಕು ಮುಚ್ಚಿಕೊಳ್ಳಲು ಆರೋಪ:

ನಮ್ಮ ಹಳೆಯ ಸ್ನೇಹಿತರು ಕೆಲವು ಸಲಹೆಗಳನ್ನು ಕೊಟ್ಡಿದ್ದಾರೆ. ಮಂಡ್ಯ ಜಿಲ್ಲೆ ಹಾಳು ಮಾಡಲು ನಾನು ಮಂಡ್ಯಕ್ಕೆ ಹೊಗಿದ್ದೆ ಅಂದಿದ್ದಾರೆ. ಮಂಡ್ಯದ ಘಟನೆಗೂ ನನಗೂ ಏನು ಸಂಬಂಧ ಇದೆ ಎನ್ನುವುದು ಆ ಜಿಲ್ಲೆಯ ಜನರಿಗೆ ಗೊತ್ತಿದೆ. ನಿಮ್ಮ ಆಡಳಿತ ವೈಫಲ್ಯ, ನಡವಳಿಕೆ ಕೆರಗೋಡು ಘಟನೆಗೆ ಕಾರಣ. ಆದರೆ, ತಮ್ಮ ಹಾಗೂ ಸರಕಾರದ ಹುಳುಕು ಮುಚ್ಚಿಟ್ಟಿಕೊಳ್ಳಲು ನನ್ನ ಮೇಲೆ ಅರೋಪ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಕೆರಗೋಡು ಗ್ರಾಮದಲ್ಲಿ ಧ್ವಜಸ್ತಂಭ ಇಳಿಸಿದ ಘಟನೆಯ ಹಿಂದೆ ಏನೆಲ್ಲಾ ನಡೆದಿದೆ ಎನ್ನುವುದು ನನಗೆ ಗೊತ್ತಿದೆ. ಸರ್ಕಾರವೇ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಲಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಈ ಘಟನೆಯನ್ನು ಖಂಡಿಸಿವೆ. ಒಟ್ಟಿಗೆ ಪ್ರತಿಭಟನೆ ಮಾಡಿವೆ. ಬಿಜೆಪಿ ನಾಯಕರ ಜತೆ ನಾನೂ ಆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇನೆ. ಅಲ್ಲಿ ನಾನು ಏನು ಹೇಳಿದೆ ಎನ್ನುವುದು ಈ ವ್ಯಕ್ತಿಗೆ ಗೊತ್ತಿಲ್ಲವೇ? ನಾನು ತಪ್ಪು ಮಾಡಿದ್ದರೆ ನೇಣಿಗೆ ಹಾಕಿ ಎಂದು ಅವರು ಗುಡುಗಿದರು.

ಕೇಸರಿ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಸಂಕುಚಿತ ಮನೋಭಾವ:

ಪಕ್ಷದ ನಾಯಕರ, ಕಾರ್ಯಕರ್ತರ ದುಡಿಮೆಯನ್ನು ನಾನು ಕೇಸರಿ ಶಾಲು ಹಾಕಿಕೊಂಡು ಬಿಜೆಪಿಗೆ ಒಪ್ಪಿಸಿಬಿಟ್ಟಿದ್ದೇನೆ ಎಂದು ಸಚಿವರು ಟೀಕೆ ಮಾಡಿದ್ದಾರೆ. ಕೇಸರಿ ಶಾಲು ಅಷ್ಟೇ ಅಲ್ಲ, ದಲಿತ ಸಮಾವೇಶಗಳಿಗೆ ಹೋದಾಗ ನೀಲಿ ಶಾಲನ್ನು ಹಾಕಿಕೊಂಡಿದ್ದೇನೆ. ರೈತರ ಸಮಾವೇಶಕ್ಕೆ ಹೋದಾಗ ಹಸಿರು ಶಾಲು ಹಾಕಿದ್ದೇನೆ. ನಾನು ಮಂಡ್ಯದಲ್ಲಿ ಕೇಸರಿ ಶಾಲು ಹಾಕಿದ್ದೆ ಸರಿ, ನನ್ನ ಉಡುಪು ಬಿಳಿ, ನಮ್ಮ ಪಕ್ಷದ ಬಣ್ಣ ಹಸಿರು. ಆದರೆ, ಕೇಸರಿ ಬಗ್ಗೆ ಮಾತ್ರ ಕಾಂಗ್ರೆಸ್ ನಾಯಕರಿಗೆ ಸಂಕುಚಿತ ಮನೋಭಾವ ಇದೆ ಎಂದು ಮಾಜಿ ಮುಖ್ಯಮಂತ್ರಿ ಟೀಕಾಪ್ರಹಾರ ನಡೆಸಿದರು.

ಕಾಂಗ್ರೆಸ್ ನವರು ತಿರಂಗದ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ತಿರಂಗದಲ್ಲಿ ಕೇಸರಿ, ಬಿಳಿ, ಹಸಿರು ಮೂರು ಬಣ್ಣಗಳಿವೆ. ಕೇಸರಿ ಇಲ್ಲದೆ ತಿರಂಗವನ್ನು ನಾವು ಊಹೆ ಮಾಡಿಕೊಳ್ಳಲು ಆಗುತ್ತದೆಯೇ? ಕಾಂಗ್ರೆಸ್ ಕೇಸರಿ ನೆಪದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

More articles

Latest article