Sunday, September 8, 2024

ಸಂಘರ್ಷಕ್ಕೆ  ಇನ್ನೊಂದು ಹೆಸರಿದ್ದರೆ ಅದು ಮಹಿಳೆ- ಲಕ್ಷ್ಮಿ ಹೆಬ್ಬಾಳ್ಕರ್

Most read

ಮಂಗಳೂರು, ಜು. 13:  ಮಹಿಳೆ ಎಂದರೆ ಸಂಘರ್ಷ. ಮಹಿಳೆಯರು ತಮ್ಮ ಅಸ್ತಿತ್ವಕ್ಕೆ ಹೋರಾಟ ಮಾಡುವುದು ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ಮುಂದುವರಿದಿದೆ. ಸಾಮೂಹಿಕ ಅತ್ಯಾಚಾರ, ಬಾಲಗರ್ಭಿಣಿ, ದೌರ್ಜನ್ಯ ಇದೆಲ್ಲವನ್ನೂ ಸಮಾಜದಲ್ಲಿ ನಾವು ಕಾಣುತ್ತಿದ್ದೇವೆ. ಆದರೆ ಮಹಿಳೆ ಮಾನಸಿಕ ಸದೃಢತೆ ಹೊಂದಿರುವವಳು. ಅದರಿಂದಾಗಿಯೇ ಒಲಿಂಪಿಕ್ಸ್, ಶಿಕ್ಷಣ ಮುಂತಾದೆಡೆ  ಮಹಿಳೆ ಮುಂದೆ ಇದ್ದಾಳೆ. ಹಾಗಿದ್ದರೂ ರಾಜಕೀಯದಲ್ಲಿ ನಮ್ಮ ಹಾಜರಾತಿಗೆ ಇನ್ನೂ ಒತ್ತು ನೀಡಬೇಕಾದ ಪ್ರಸಂಗ  ಸಮಾಜದಲ್ಲಿದೆ. ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ನಗರದ ಉರ್ವಾಸ್ಟೋರ್ ನಲ್ಲಿ ಶನಿವಾರ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ನವೀಕೃತ ಸಾಹಿತ್ಯ ಸದನದ ಉದ್ಘಾಟನೆ ನೆರವೇರಿಸಿ ಅವರು ಮಾತಾಡುತ್ತಿದ್ದರು

ಮಹಿಳಾ ಲೇಖಕಿಯರ ಜೊತೆ ವಾಚಕಿಯರನ್ನು ಸೇರಿಸಿಕೊಂಡು ಸಂಘ ಮಾಡಿದ್ದು ಬಹಳ ಆಸಕ್ತಿಕರ ಅನ್ನಿಸಿತು. ಮನಸಿನ ಶಾಂತಿ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಕಲೆ, ಸಾಹಿತ್ಯ ನೀಡುವ ಖುಷಿಯನ್ನು ಬೇರೆ ಯಾವುದೂ ನೀಡಲು ಸಾಧ್ಯವಿಲ್ಲ. ಎಂದೇ ಹೊಸತನವನ್ನು ಸೃಷ್ಟಿಸುವಂತಹ ಇಂತಹ ವಿಚಾರವಂತ ವೇದಿಕೆಗಳು ಹೆಚ್ಚಾಗಬೇಕಿದೆ ಎಂದು ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘದ ಬಗ್ಗೆ  ಮೆಚ್ಚುಗೆ ವ್ಯಕ್ತ ಪಡಿಸಿದರು.

ಇದೇ ಸಂದರ್ಭದಲ್ಲಿ  ದ.ಕ. ಜಿಲ್ಲೆಗೆ 10 ಸರಕಾರಿ ಮೊಂಟೆಸರಿಗಳು ಸೇರಿದಂತೆ 25 ಅಂಗನವಾಡಿಗಳನ್ನು ಅವರು ಕೊಡುಗೆಯಾಗಿ ಘೋಷಣೆ ಮಾಡಿದರು. ಅಂಗನವಾಡಿಯೊಂದಕ್ಕೆ ತಲಾ 20 ಲಕ್ಷ ರೂ. ನೀಡಲಾಗುತ್ತದೆ ಎಂದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಸಕ್ತ ಸಾಲಿನ ರಾಜ್ಯ ಪ್ರಶಸ್ತಿಯನ್ನು ಕರಾವಳಿ ಲೇಖಕಿಯರ ವಾಚಕಿಯರ ಸಂಘಕ್ಕೆ ನೀಡುವುದಾಗಿಯೂ ಸಚಿವೆ ಘೋಷಿಸಿದರು.

ಸಮಾಜ ಹೊಸತನವನ್ನು ಮೈಗೂಡಿಸಿಕೊಂಡು ಬದಲಾಗುತ್ತಾ ಇದೆ. ಅಂಗನವಾಡಿ ಎನ್ನುವುದು 50 ವರ್ಷದ ಹಿಂದಿನ ಹೆಸರು. ಅವುಗಳನ್ನು ಇನ್ನು ಮುಂದೆ ಸರಕಾರಿ ಮೊಂಟೆಸರಿ ಎಂದು ಕರೆಯಲಾಗುವುದು. ಐಎಎಸ್ ಅಧಿಕಾರಿಗಳಿಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಆಕಾಂಕ್ಷೆ ಇರುವಂತೆ ಮನರೇಗದಲ್ಲಿ ಕೆಲಸ ನಿರ್ವಹಿಸುವ ಪೋಷಕರಿಗೂ ಇರುತ್ತದೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಜತೆಗೆ ಪೌಷ್ಠಿಕ ಆಹಾರ ನೀಡುವುದರೊಂದಿಗೆ ಅಂಗನವಾಡಿಗಳನ್ನು ಸರಕಾರಿ ಮೊಂಟೆಸರಿಗಳಾಗಿ ಪರಿವರ್ತಿಸಲಾಗುವುದು. ಮೊಂಟೆಸರಿಗಳಡಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗುವುದು ಎಂದವರು ಹೇಳಿದರು.

ಮಹಿಳೆಯರಿಗೆ ತಮ್ಮ ಅಸ್ತಿತ್ವವನ್ನು ಗಟ್ಟಿ ಮಾಡಿಕೊಳ್ಳಲು, ಮಹಿಳೆಯರನ್ನು ಸ್ವಾವಲಂಬಿಗಳಾಗಿ ರೂಪಿಸಲು, ಅಶಕ್ತ ಮಹಿಳೆಯರನ್ನು ಸಶಕ್ತಗೊಳಿಸಲು ಗೃಹಲಕ್ಷ್ಮಿ, ಶಕ್ತಿ ಯೋಜನೆಗಳನ್ನು ಜಾರಿ ಗೊಳಿಸಲಾಗಿದೆ. ಗೃಹಲಕ್ಷ್ಮಿ ರಾಜಕೀಯ ದುರುದ್ದೇಶಕ್ಕಾಗಿ ಎಂದಿಗೂ  ಕಾಣೆಯಾಗದು ಎಂದೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟ ಪಡಿಸಿದರು.

ಮುನ್ನೋಟದ ಮಾತುಗಳನ್ನಾಡಿದ ತರೀಕೆರೆ ಪ್ರಥಮದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಸಬಿತಾ ಬನ್ನಾಡಿಯವರು” ಮಹಿಳೆಯರು ತಾವು ಸಮರ್ಥವಾಗಿ ಕೆಲಸ ಮಾಡಬಲ್ಲೆವು ಎಂಬುದನ್ನು ನಿರೂಪಿಸುತ್ತಲೇ ಇರಬೇಕಾಗುತ್ತದೆ. ಸೋಲಲೂ ನಮ್ಮನ್ನು ಬಿಟ್ಟು ಬಿಡಬೇಕು. ಆದರೆ ಸೋತೆವೆಂದು ಪ್ರಯತ್ನ ಮಾತ್ರ ಬಿಡಬಾರದು. ಮಹಿಳೆಯರು ಏನಾದರೂ ಮಾಡಬೇಕಿದ್ದರೆ ಬೇರೆಯವರ ಪ್ರೋತ್ಸಾಹ ಬೇಕೆನ್ನುವುದು ಸುಳ್ಳು. ಮಹಿಳೆಯರೇ ಅವಕಾಶಗಳನ್ನು ಸೃಷ್ಟಿ ಮಾಡಿಕೊಳ್ಳಬೇಕು. ಆಗ ಸಂಘರ್ಷ ಸಹಜ. ಮಹಿಳೆಯರಿಗೆ ಖಚಿತ ರಾಜಕೀಯ ಪ್ರಜ್ಞೆ ಇರಲೇ ಬೇಕು  ಎಂದು ಕಿವಿಮಾತು ಹೇಳುತ್ತಾ ಈ ಕಟ್ಟಡ ಬರೀ ಕಟ್ಟಡವಲ್ಲ, ಇದೊಂದು ಹೊಸ ಸಾಹಿತ್ಯದ ಮಾದರಿಯಾಗಲಿ, ಅರಿವಿನ ಮನೆಯಾಗಿ ಬೆಳೆಯಲಿ, ಮಾನವತೆಯ ದೀಪ ಬೆಳಗುವ ಮಂಟಪವಾಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶಾಸಕ ವೇದವ್ಯಾಸ ಕಾಮತ್  “ನಗರ ವ್ಯಾಪ್ತಿಯಲ್ಲಿ 30 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿವೆ. ಆರು ಕಟ್ಟಡಗಳ ಕಾಮಗಾರಿ ನಡೆಯುತ್ತಿದೆ. ಈ ಬಗ್ಗೆ ಗಮನ ಹರಿಸಬೇಕು” ಎಂದು ಆಗ್ರಹಿಸಿದರು.

ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಶ್ರೀನಾಥ್ ಎಂ. ಪಿ, ಎಂ ಆರ್ ಪಿ ಎಲ್ ಅಧಿಕಾರಿ ಮೀನಾಕ್ಷಿ , ಮನಪಾ ಸದಸ್ಯ ಗಣೇಶ್, ಸಂಘದ ಅಧ್ಯಕ್ಷೆ ಜ್ಯೋತಿ ಚೇಳ್ಯಾರು, ಹಿರಿಯ ಲೇಖಕಿ ಇಂದಿರಾ ಹಾಲಂಬಿ ಮೊದಲಾದವರು ಉಪಸ್ಥಿತರಿದ್ದರು.

ಡಾ. ಸುಧಾರಾಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರೂಪಕಲಾ ಆಳ್ವ ವಂದಿಸಿದರು.

ಸಂಘದ ಸದಸ್ಯೆಯರಿಂದ ವಿವಿಧ ವಿನೋದಾವಳಿಗಳು ನಡೆದವು.


ಇದನ್ನೂ ಓದಿ- ಕರಾವಳಿ ಲೇಖಕಿ ವಾಚಕಿಯರ ಸಂಘದ ನವೀಕೃತ ಕಟ್ಟಡ ಉದ್ಘಾಟನೆ

More articles

Latest article