ಬೀದರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕನ್ನಡ ಅಭಿವೃದ್ಧಿ ತಿದ್ದುಪಡಿ ಕಾಯ್ದೆಯನ್ವಯ ಎಲ್ಲ ನಾಮಫಲಕಗಳು ಶೇ.60ರಷ್ಟು ಕನ್ನಡದಲ್ಲಿರಬೇಕು. ಇಲ್ಲವಾದಲ್ಲಿ ಮಾ.25ರ ನಂತರ ನಿಯಮ ಪಾಲಿಸದ ಅಂಗಡಿಗಳ ನಾಮಫಲಕಗಳನ್ನು ಪುಡಿಪುಡಿ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ಜಗದೀಶ ಬಿರಾದರ್ ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆ ಕುರಿತು ಜಾಗೃತಿ ಮೂಡುತ್ತಿದೆ. ಆದರೆ ಬೀದರ ಜಿಲ್ಲೆಯಲ್ಲಿ ಮಾತ್ರ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಈ ಕುರಿತು ಕಳಕಳಿ ತೋರಿಸುತ್ತಿಲ್ಲ. ಹಾಗಾದರೆ ನಿಮ್ಮ ಮೇಲೆ ಒತ್ತಡ ಏನಾದರೂ ಇದೆಯಾ? ನೀವು ಕನ್ನಡಿಗರಲ್ವಾ ಎಂದು ಪ್ರಶ್ನಿಸಿದರು.
ನಿಮಗೆ ಭಯ ಇದ್ದರೆ ನಮಗೆ ತಿಳಿಸಿ. ಎಲ್ಲರೂ ಕೂಡಿ ಕನ್ನಡ ನಾಮಫಲಕ ಅಳವಡಿಸುವ ಕಾರ್ಯ ಮಾಡೋಣ. ಸಭೆ ಕರೆದು ಆಯುಕ್ತರಿಗೆ ತಿಳಿಸಲು ಹಿಂದೇಟು ಹಾಕುತ್ತಿರುವುದು ಏಕೆ? ಎಂದು ಪ್ರಶ್ನಿಸಿದ ಅವರು ಮಾರ್ಚ್ 25ರ ಗಡುವು ನೀಡುತ್ತಿದ್ದೇವೆ. ಅಷ್ಟರೊಳಗೆ ಅಂಗಡಿ ಮುಂಗಟ್ಟುಗಳ ಮೇಲೆ ಶೇ. 60 ರಷ್ಟು ಕನ್ನಡ ನಾಮಫಲಕಗಳು ರಾರಾಜಿಸಬೇಕು. ಇಲ್ಲದಿದ್ದರೆ ನಗರಸಭೆಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು, ಅನ್ಯಭಾಷೆಯ ನಾಮಫಲಕ ಪುಡಿಪುಡಿ ಮಾಡಲಾಗುವುದು ಎಂದರು ಎಚ್ಚರಿಕೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದಾದ್ಯಂತ ನಾಡು ನುಡಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕಾರ್ಯ ಮಾಡುತ್ತಿದೆ. ಹೀಗಾಗಿ ನಾಡು ನುಡಿ ವಿಷಯ ಬಂದಾಗ ನಮ್ಮ ಮೇಲೆ ಎಷ್ಟೇ ಕೇಸ್ ಬಿದ್ದರೂ ಹೆದರುವುದಿಲ್ಲ. ದಯವಿಟ್ಟು ಜಿಲ್ಲಾ ಉಸ್ತುವಾರಿ ಸಚಿವರು ಈ ಕಡೆ ಗಮನ ಹರಿಸಬೇಕು. ತಮ್ಮದೇ ಸರ್ಕಾರ ಆದೇಶ ಹೊರಡಿಸಿರುವ ಕನ್ನಡ ನಾಮಫಲಕ ಕಡ್ಡಾಯ ನಿಯಮವನ್ನು ಜಾರಿಗೆ ತರಲು ಅಧಿಕಾರಿಗಳಿಗೆ ಸೂಚಿಸಬೇಕು. ಒಂದು ವೇಳೆ ಕನ್ನಡ ನಾಮಫಲಕ ಅಳವಡಿಕೆ ಆಗದಿದ್ದರೆ ನಗರಸಭೆಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು. ಪರಭಾಷೆಯ ನಾಮಫಲಕಗಳನ್ನು ಪುಡಿ ಪುಡಿ ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕರವೇ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ, ಪ್ರಮುಖರಾದ ಭರತನಾಗ್ ಕಾಂಬಳೆ, ವಿಶ್ವನಾಥ ಗೌರ್, ಸಚಿನ್ ಜಟಗೊಂಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.