ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಶೇ. 80ರಷ್ಟು ಪೂರ್ಣಗೊಂಡಿದ್ದು, ಸಮೀಕ್ಷೆಯ ಅವಧಿಯನ್ನು ವಿಸ್ತರಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮನವಿ ಮಾಡಿದೆ.
ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬೆಂಗಳೂರಿನಲ್ಲಿ ಜಾತಿಗಣತಿಯು ತಡವಾಗಿ ಆರಂಭವಾಗಿದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸಮೀಕ್ಷಾ ಕಾರ್ಯವನ್ನು ಸೆಪ್ಟೆಂಬರ್ 22ರಿಂದ ಆರಂಭಿಸಿದ್ದು, ಅಕ್ಟೋಬರ್ 7ಕ್ಕೆ ಮುಗಿಯಲಿದೆ. ಈ ಅವಧಿಯನ್ನು ಮತ್ತಷ್ಟು ಹೆಚ್ಚಿಸಬೇಕು ಮತ್ತು ಆನ್ ಲೈನ್ ನಲ್ಲಿಯೂ ಮಾಹಿತಿ ನೀಡುವ ಅವದಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಸಮೀಕ್ಷೆಗೆ ವಿರೋಧ ಪಕ್ಷ ಬಿಜೆಪಿ, ಅದರಲ್ಲೂ ಮೇಲ್ವರ್ಗದ ಮುಖಂಡರು ವಿರೋಧ ಮಾಡುತ್ತಿರುವುದು ಸರಿಯಲ್ಲ. ಒಂದು ವೇಳೆ ಇದೇ ರೀತಿ ಪ್ರತಿಪಕ್ಷಗಳ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದರೆ ಅವರ ನಿವಾಸಗಳ ಎದುರು ಹಿಂದುಳಿದ ಜಾತಿಗಳ ಒಕ್ಕೂಟವು ಧರಣಿಯನ್ನು ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು
ಈ ಸಮೀಕ್ಷೆಯು ಹಿಂದುಳಿದ ಜಾತಿಗಳ ಸಮೀಕ್ಷೆ ಮಾತ್ರ ಅಲ್ಲ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವವನ್ನು ಒಳಗೊಂಡಿರುವ ಸಾಮಾಜಿಕ ಕ್ರಾಂತಿಯಾಗಿರುತ್ತದೆ ಎಂದು ಹೇಳಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್ ವೆಂಕಟರಾಮಯ್ಯ ಮಾತನಾಡಿ, ಪ್ರಧಾನಿ ಮೋದಿ ಅವರು ದೇಶದಾದ್ಯಂತ ಜಾತಿಗಣತಿ ನಡೆಸುವುದಾಗಿ ಪ್ರಕಟಿಸಿದಾಗ ವಿರೋಧಿಸದೆ ಇದ್ದವರು ಈಗ ರಾಜ್ಯದ ಸಮೀಕ್ಷೆಯನ್ನು ಏಕೆ ವಿರೋಧಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.