ಬೆಂಗಳೂರು: ಪತ್ನಿಯನ್ನು ಕೊಂದು ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಸೂಟ್ ಕೇಸ್ ನಲ್ಲಿ ತುಂಬಿಟ್ಟಿದ್ದ ಅಮಾನುಷ ಘಟನೆ ಬೆಂಗಳೂರಿನ ಹುಳಿಮಾವು ಸಮೀಪದ ದೊಡ್ಡ ಕನ್ನಹಳ್ಳಿಯ ಮನೆಯೊಂದರಲ್ಲಿ ನಡೆದಿದೆ. ಮಹಾರಾಷ್ಟ್ರ ಮೂಲದ ಆರೋಪಿ ಪತಿ ರಾಕೇಶ್ ಎಂಬಾತ ತನ್ನ ಪತ್ನಿ 32 ವರ್ಷದ ಗೌರಿ ಅನಿಲ್ ಸಾಂಬೆಕರ್ ಅವರನ್ನು ಹತ್ಯೆ ಮಾಡಿ ಮೃತದೇಹವನ್ನು ತುಂಡರಿಸಿ ಸೂಟ್ ಕೇಸ್ನಲ್ಲಿ ತುಂಬಿಟ್ಟಿದ್ದ. ನಂತರ ಆತನೇ ಈ ವಿಚಾರವನ್ನು ಪತ್ನಿಯ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾನೆ. ನಂತರ ಮಹಾರಾಷ್ಟ್ರ ಪೊಲೀಸರ ಮಾಹಿತಿ ಅನ್ವಯ ಬೆಂಗಳೂರಿನ ಹುಳಿಮಾವು ಪೊಲೀಸರು ರಾಕೇಶ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಕೇಶ್ ನ ಅಮಾನುಷ ವರ್ತನೆಗೆ ದೊಡ್ಡ ಕನ್ನಹಳ್ಳಿಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ಕೊನೆಗೂ ರಾಕೇಶ್ ನನ್ನು ಪುಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಒಂದು ವರ್ಷದಿಂದ ಬೆಂಗಳೂರಿನ ದೊಡ್ಡ ಕನ್ನಹಳ್ಳಿಯ ಮನೆಯಲ್ಲಿ ವಾಸವಿದ್ದ ಮಹಾರಾಷ್ಟ್ರ ಮೂಲದ ರಾಕೇಶ್ ಹಾಗೂ ಗೌರಿ ಅನಿಲ್ ಸಾಂಬೆಕರ್ ದಂಪತಿಗಳಿಬ್ಬರೂ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ವರ್ಕ್ ಫ್ರಂ ಹೋಂ ಆಯ್ಕೆ ಮಾಡಿಕೊಂಡಿದ್ದ ಇಬ್ಬರೂ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಹುಳಿಮಾವು ಪೊಲೀಸರು ಇವರ ಮನೆಗೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ರಾಕೇಶ್ ಪತ್ನಿ ಗೌರಿಯನ್ನು ಕೊಂದು ಆಕೆಯ ಮೃತದೇಹವನ್ನು ಕತ್ತರಿಸಿ ಸೂಟ್ಕೇಸ್ ನಲ್ಲಿ ತುಂಬಿಸಿಟ್ಟಿದ್ದಾನೆ. ನಂತರ ರಾಕೇಶ್, ಮಹಾರಾಷ್ಟ್ರದಲ್ಲಿರುವ ಪತ್ನಿ ಪೋಷಕರಿಗೆ ಪೋನ್ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಇದರಿಂದ ಆತಂಕಗೊಂಡ ಗೌರಿ ಪೋಷಕರು ತಕ್ಷಣವೇ ಮಹಾರಾಷ್ಟ್ರದ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ರಾಕೇಶ್ ಕೃತ್ಯವನ್ನು ತಿಳಿಸಿದ್ದಾರೆ. ಕೂಡಲೇ ಮಹಾರಾಷ್ಟ್ರ ಪೊಲೀಸರು ಹುಳಿಮಾವು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಈ ಮಾಹಿತಿ ಆಧರಿಸಿ ಹುಳಿಮಾವು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಪ್ರಕರಣ ನಡೆದ ಸ್ಥಳಕ್ಕೆ ಡಿಸಿಪಿ ಸಾರಾ ಫಾತಿಮಾ ಅವರೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂತಹುದೇ ಕೃತ್ಯ ಮಲ್ಲೇಶ್ವರಂನ ವೈಯಾಲಿಕಾವಲ್ ನಲ್ಲಿ ನಡೆದಿತ್ತು.