Thursday, September 19, 2024

ಭಾರತದ ನೆತ್ತಿ ತಣ್ಣಗೆ ಕುದಿಯುತ್ತಿದೆ

Most read

ಇಂಜಿನಿಯರ್ ಮತ್ತು ಶಿಕ್ಷಣ ತಜ್ಞರಾದ ಸೋನಮ್ ವಾಂಗ್ಚುಕ್ ಲಡಾಖಿನ ನಾಜೂಕು ಪರಿಸರದ ಉಳಿವು ಮತ್ತು 6 ನೇ ಶೆಡ್ಯೂಲಿನೊಂದಿಗೆ ರಾಜ್ಯದ ಸ್ಥಾನಮಾನಕ್ಕೆ ಒತ್ತಾಯಿಸಿ ಗಾಂಧೀ ಮಾದರಿ ಅಹಿಂಸಾತ್ಮಕ 21 ದಿನಗಳ ಉಪವಾಸ ಸತ್ಯಾಗ್ರಹವನ್ನು ಇದೇ ಮಾರ್ಚ್ 6 ರಿಂದ ಆರಂಭಿಸಿದ್ದಾರೆ. ಸೆಕ್ಯುಲರ್ ನೆಲೆಗಟ್ಟಿನ ಚಳವಳಿಗಳೆಂದರೆ ಒಕ್ಕೂಟ ಸರ್ಕಾರ ಬೆಚ್ಚುತ್ತದೆ. ಸದ್ಯ ಲಡಾಖ್ ತಣ್ಣಗೆ ಕುದಿಯುತ್ತಿದೆ. ಲಡಾಖಿಗಳ ಕೂಗು ದೆಹಲಿಯ ಹೊರತಾಗಿ ಜಗದ ಮೂಲೆಮೂಲೆಯನ್ನು ತಲುಪುತ್ತಿದೆ. ಸೋನಮ್ ವಾಂಗ್ಚುಕ್ ಮತ್ತು ಅವರೊಡನೆ ನಿಂತವರು ತಮ್ಮ ಗುರಿ ಸಾಧಿಸಲಿ. ಕೆ.ಎಸ್‌ ರವಿಕುಮಾರ್‌, ವಿಜ್ಞಾನ ಬರಹಗಾರರು

 ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ 370 ನ್ನು ತೆರವುಗೊಳಿಸಿದಾಗ ಒಕ್ಕೂಟ ಸರ್ಕಾರ ಬೀಗಿಯೇ ಬೀಗಿತು, ಅದಕ್ಕೆ ನಗಾರಿ ಬಾರಿಸಿದ ಮಾಧ್ಯಮಗಳು ಬೀಗಿದವು. ಇವರಿಬ್ಬರನ್ನು ಸುಮ್ಮನೆ ನಂಬುವ ಕೋಟ್ಯಂತರ ಭಾರತೀಯ ಮಾನವಾತ್ಮಗಳು ಬೀಗಿ ಹೋದವು. ಜಮ್ಮು ಮತ್ತು ಕಾಶ್ಮೀರಗಳು ರಾಜ್ಯದ ಸ್ಥಾನಮಾನ ಕಳೆದುಕೊಂಡಾಗ ಅವುಗಳ ಭಾಗವಾಗಿದ್ದ ಲಡಾಖ್ ಅನ್ನು ಪ್ರತ್ಯೇಕ ರಾಜ್ಯವಾಗಿಸುವುದರ ಬದಲು ಕೇಂದ್ರಾಡಳಿತ ಪ್ರದೇಶವೆಂದು ಒಕ್ಕೂಟ ಸರ್ಕಾರ ಸಾರಿ ಅಲ್ಲಿನ ಶಾಸಕಾಂಗ ವ್ಯವಸ್ಥೆಯನ್ನೆ ರದ್ದುಗೊಳಿಸಿದ್ದು ಈಗ ಹೆಡ್ಡ ನಡೆ ಎಂದು ಸಾಬೀತಾಗಿದೆ. ಲಡಾಖ್ ಜನ ಮತ್ತೆ ತಮ್ಮ ನಾಡಿಗೆ ರಾಜ್ಯದ ಸ್ಥಾನಮಾನ ಕೇಳುತ್ತಿದ್ದಾರೆ. ಬರೀ ಕೇಳುತ್ತಿಲ್ಲ, ಜನಚಳವಳಿಯನ್ನೆ ಹುಟ್ಟುಹಾಕಿದ್ದಾರೆ. ಗಿರಿಜನರು ಹೆಚ್ಚಿರುವ ರಾಜ್ಯವೆನಿಸಿಕೊಳ್ಳುವುದರ ಜೊತೆ ಸಂವಿಧಾನದ 6 ನೇ ಶೆಡ್ಯೂಲ್ ಪ್ರಕಾರ ತ್ರಿಪುರ, ಅಸ್ಸಾಮ್, ಮೇಘಾಲಯ ಮತ್ತು ಮಿಜೊರಾಮ್‌ಗಳ ಮಾದರಿಯಲ್ಲಿ ರಕ್ಷಣೆಗೂ ಒತ್ತಾಯಿಸಿದ್ದಾರೆ. ೬ನೇ ಶೆಡ್ಯೂಲ್ ಬದಲು 371 ನೇ ಆರ್ಟಿಕಲ್ ಅಡಿ ಸ್ಥಾನಮಾನ ನೀಡಲು ಒಕ್ಕೂಟ ಸರ್ಕಾರ ಎಣಿಸುತ್ತಿದೆ. ಒಡಂಬಡಿಕೆಗೆ ಬರಲಾಗದ ಭಿನ್ನಮತ ಇರುವುದೇ ಇಲ್ಲಿ.

ಲಡಾಖ್ ರಾಜ್ಯದ ಮನ್ನಣೆ ಕಳಕೊಳ್ಳುತ್ತಿದ್ದಂತೆ ತನ್ನ ಭವಿಷ್ಯವನ್ನು ತನ್ನಿಷ್ಟ ಪ್ರಕಾರ ರೂಪಿಸಿಕೊಳ್ಳುವ ಅವಕಾಶ ಮತ್ತು ಹಕ್ಕನ್ನು ಕಳೆದುಕೊಂಡಿತು. ಲಡಾಖಿನಲ್ಲಿರುವ ಸಂಪನ್ಮೂಲಗಳನ್ನು ರೊಕ್ಕವಾಗಿ ಪರಿವರ್ತಿಸಲು ಉದ್ಯಮಿಗಳಿಗೆ ಒಕ್ಕೂಟ ಸರ್ಕಾರ ರತ್ನಗಂಬಳಿ ಹಾಸತೊಡಗಿದೆ. ಬಹಳ ಸೀಮಿತ ಸಂಪನ್ಮೂಲ ಹೊಂದಿರುವ ಲಡಾಖ್ ತನ್ನ ನೆಲದ ನಿವಾಸಿಗಳನ್ನು ಸಾಕುವುದಕ್ಕೇ ಹೆಣಗಬೇಕಾಗಿದೆ. ಲಡಾಖಿಗಳನ್ನು ಧಿಕ್ಕರಿಸಿರುವ ಒಕ್ಕೂಟ ಸರ್ಕಾರದ ನಿರ್ದಯಿ ಉದಾಸೀನತೆ ಒಂದು ಕಡೆಯಾದರೆ ಇನ್ನೊಂದು ಕಡೆ ಹವಾಮಾನ ಬದಲಾವಣೆ ಲಡಾಖಿನ ಮೇಲೆ ಕೆಂಗಣ್ಣು ಬೀರಿದೆ. ಲಡಾಖಿನ ವಾತಾವರಣ ಅಸಹಜವಾಗಿ ಬೆಚ್ಚಗಾಗುತ್ತ ಅಲ್ಲಿನ ಕುಡಿಯುವ ನೀರಿನ ಮೂಲಗಳಾದ ಗ್ಲೇಸಿಯರ್‌ಗಳು ಬೇಗಬೇಗ ಕರಗಿ ಬೇಸಗೆ ಬರುವ ಮುನ್ನವೆ ನೀರಿನ ಕೊರತೆ ಲಡಾಖಿಗಳನ್ನು ಕಾಡುತ್ತಿದೆ. ಕುಳ್ಳಿಹ (situation)ಹೀಗಿರುವಾಗ ಲಡಾಖಿನ ಮೇಲೆ ಉದ್ಯಮಿಗಳು ಮಗುಚಿಬಿದ್ದರೆ ಮುಂದಿನ ಕತೆಯೇನು?

ಈಗಾಗಲೆ ಪ್ರವಾಸೋದ್ಯಮವು ನೀರಿನ ಬಳಕೆಯ ಮೇಲೆ ಭಾರೀ ಒತ್ತಡವನ್ನು ಪೇರಿಸಿದೆ. ಲಡಾಖಿಗಳಿಗೆ ಈಗ ಅರಿವಾಗಿದೆ. ಮೊದಮೊದಲು ಒಕ್ಕೂಟ ಸರ್ಕಾರದ ಬರಡು ಭರವಸೆ ಮತ್ತು ಬಡಿವಾರಗಳಿಗೆ ಮರುಳಾದ ಅವರು ಪ್ರಧಾನ ಮಂತ್ರಿ ಪ್ರತಿನಿಧಿಸುವ ಪಕ್ಷದ ಮಂದಿಯನ್ನೆ ಗೆಲ್ಲಿಸಿ ಕಳುಹಿಸಿದರು. ಎರಡು ಬಾರಿ ಅದೇ ಪಕ್ಷದ ಲೋಕಸಭಾ ಸದಸ್ಯ ಮತ್ತು Ladakh Autonomous Hill Development Council (LAHDC) ಗೆ 15 ಮಂದಿ ಆಯ್ಕೆಯಾದರು. ಅದರೆ ಆ ಮಂದಿ ದೆಹಲಿಯ ತಾಳಕ್ಕೆ ತಕ್ಕುದಾಗಿ ಕುಣಿದರು. ತಮ್ಮವರ ನಿರೀಕ್ಷೆಗಳನ್ನು ಕಡೆಗಣಿಸಿದರು. ಕೇಂದ್ರಾಡಳಿತ ಪ್ರದೇಶವಾದರೆ ಏನಾಗಬಹುದೆಂದು ತಮ್ಮ ಅಧಿಕಾರಾವಧಿಯಲ್ಲಿ ಜನರೊಡನೆ ಚರ್ಚಿಸಲಿಲ್ಲ. ಇತ್ತ ಹವಾಮಾನ ಬದಲಾವಣೆ ಲಡಾಖಿಗೆ ತರಬಹುದಾದ ಬವಣೆಗಳನ್ನೂ ಲೆಕ್ಕಿಸಲಿಲ್ಲ. ಇವರ ಹಿಂಬಾಲಕರನ್ನು ಬಳಸಿಕೊಂಡು ಕೋಮುವಾದಿ ಶಕ್ತಿಗಳು ಒಂದು ದೊಡ್ಡ ಕೋಮನ್ನು ಇನ್ನೊಂದು ದೊಡ್ಡ ಕೋಮಿನ ವಿರುದ್ಧ ಎತ್ತಿಕಟ್ಟುವ ರಾಜಕಾರಣ ಮಾಡಿದವು. ಸ್ಥಳೀಯ ಸಾಂಸ್ಕೃತಿಕ ಗುರುತುಗಳನ್ನು ಕಡೆಗಣಿಸಿ ಸಂಸ್ಕ್ರುತದ ಸಿಂಧುವನ್ನು ಹೇರಲಾಯಿತು. ಸಿಂಧು ಸೆಂಟ್ರಲ್ ಯೂನಿವರ್ಸಿಟಿ, ಸಿಂಧು ಸಂಸ್ಕ್ರತಿ ಕೇಂದ್ರ, ಸಿಂಧು ಇನ್ಫ್ರಾಸ್ಟ್ರಕ್ಚರ್ ಡೆವೆಲಪ್‌ಮೆಂಟ್ ನಿಗಮಗಳು ಹುಟ್ಟಿಕೊಂಡವು. ಸ್ಥಳೀಯರ ಪರಿಕಲ್ಪನೆಯಲ್ಲೇ ಇಲ್ಲದ ‘ಸಿಂಧು ಮಹಾಕುಂಭಮೇಳ’ವನ್ನು ನಡೆಸಲು ಹುನಾರು ನಡೆಯಿತು. ವಾಜಪೇಯಿ ಕಾಲದಲ್ಲಿ ಚಾಲ್ತಿಗೆ ತಂದಿದ್ದ ‘ಸಿಂಧು ದರ್ಶನ’ ಯಾತ್ರಾ ಚಟುವಟಿಕೆಯು ಹೆಚ್ಚು ಬಿರುಸಿನ ರೂಪ ಪಡೆಯಿತು. ಲಡಾಖಿಗಳ ಬಾಯಿ ಸಲೀಸಾಗಿ ಉಲಿಯಲಾಗದ ‘ಆಯುಷ್ಮಾನ್’ ಹೆಸರಿನ ಆರೋಗ್ಯ ‘ಮಂದಿರ’ಗಳನ್ನು ಹಳ್ಳಿಗಳಲ್ಲಿ ಜಾರಿಗೊಳಿಸುವ (ವಿಫಲ) ಪ್ರಯತ್ನಗಳು ಜರುಗಿದವು. ಸ್ಥಳೀಯರ ನುಡಿ ಮತ್ತು ನಂಬಿಕೆಗಳನ್ನು ಅಳಿಸುವ ಈ ಬೆಳವಣಿಗೆಗಳು ನಿಧಾನಕ್ಕೆ ಲಡಾಖಿಗಳ ಮನಸ್ಸಿನಲ್ಲಿ ತಬ್ಬಲಿತನದ ದಿಗಿಲು ಮೂಡಿಸಿದ್ದರಲ್ಲಿ ಅಚ್ಚರಿಯೇನು?

Leaders demanding State hood

2019 ರಲ್ಲಿ ಲಡಾಖ್ ಚುನಾಯಿತ ಶಾಸನ ಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಯಿತು. 2022 ರಲ್ಲಿ 797 ಗೆಜೆಟೆಡ್ ಅಲ್ಲದ ಹುದ್ದೆಗಳಿಗೆ ಸರ್ಕಾರಿ ನೇಮಕಾತಿಗೆ ಅಲ್ಲಿ ಅರ್ಜಿ ಕರೆದಾಗ ಲಡಾಖಿನ 30,000 ತರುಣ ತರುಣಿಯರು ಅರ್ಜಿ ಸಲ್ಲಿಸಿದರು. 7 ಮಂದಿ ಲಡಾಖಿ ಪದವೀಧರರು ಕಸ ಗುಡಿಸುವ ಹುದ್ದೆಗೆ ಆಯ್ಕೆಯಾದದ್ದು ವಿಶೇಷವಿತ್ತು. ಲಡಾಖಿನಲ್ಲಿ ಶೇಕಡಾ 26 ರಷ್ಟು ನಿರುದ್ಯೋಗವಿದೆ. 2019 ರಿಂದ ನೌಕರಿ ಅವಕಾಶಗಳು ಕುಗ್ಗುತ್ತಿವೆ. ಈ ನಡುವೆ ಪರಿಸರದ ಮೇಲಾಗುವ ಹಾನಿಗಳನ್ನು ಚರ್ಚಿಸದೆ ಲಡಾಖಿಗೆ ದೊಡ್ಡ ದೊಡ್ಡ ಪ್ರೋಜೆಕ್ಟ್‌ ಗಳನ್ನು ತರಲಾಗುತ್ತಿದೆ. ಈ ಸಂಬಂಧದ ಗುತ್ತಿಗೆದಾರರು ಮತ್ತು ಮುಖ್ಯ ಉದ್ಯೋಗಿಗಳೆಲ್ಲ ಹೊರಗಿನವರು. ಇರುವ ಅಲ್ಪಸ್ವಲ್ಪ ಮಟ್ಟಸ ಜಾಗಗಳೆಲ್ಲ ಹೊರಗಿನ ಉದ್ಯಮಿಗಳ ಪಾಲಾಗುತ್ತಿವೆ. ಅವರು ಅಲ್ಲಿ ಯೋಜನೆ ತರುತ್ತಾರೊ, ಮತ್ತೇನು ಮಸಲತ್ತು ನಡೆಸುತ್ತಾರೊ ಗೊತ್ತಿಲ್ಲ. ಸಾಲದ್ದಕ್ಕೆ ಲೆಹ್ ಮತ್ತು ಕಾರ್ಗಿಲ್ ಅನ್ನು ಪ್ರತಿನಿಧಿಸುವ LAHDC ಯಿಂದ ಎಲ್ಲ ಬಗೆಯ ಹಣಕಾಸು, ರೆವೆನ್ಯೂ ಮತ್ತು ಸಂವಿಧಾನಾತ್ಮಕ ನಿರ್ಣಯ ತೆಗೆದುಕೊಳ್ಳಬಲ್ಲ ಹಕ್ಕುಗಳನ್ನು ಕಿತ್ತೊಗೆಯಲಾಗಿದೆ. ಲಡಾಖಿಗಳೀಗ ಬಾಯಿಕಟ್ಟಿದ ನೋಟಕರಷ್ಟೆ.

Students From Leh

ದೆಹಲಿಯ ರಿಮೋಟ್‌ನಿಂದ ಲಡಾಖನ್ನು ನಿಯಂತ್ರಿಸುವ ಒಕ್ಕೂಟ ಸರ್ಕಾರ ಈ ಹಿಂದೆ ಶಹಿನ್‌ಬಾಗ್ ಮತ್ತು ರೈತರ ಅಹಿಂಸಾತ್ಮಕ ಚಳವಳಿಗಳನ್ನು ಹೇಗೆ ನಡೆಸಿಕೊಂಡಿತು ಎಂಬುದು ನಮಗೆಲ್ಲ ತಿಳಿದೇ ಇದೆ. ಸೆಕ್ಯುಲರ್ ನೆಲೆಗಟ್ಟಿನ ಚಳವಳಿಗಳೆಂದರೆ ಒಕ್ಕೂಟ ಸರ್ಕಾರ ಬೆಚ್ಚುತ್ತದೆ. ಸದ್ಯ ಲಡಾಖ್ ತಣ್ಣಗೆ ಕುದಿಯುತ್ತಿದೆ. ಲಡಾಖಿಗಳ ಕೂಗು ದೆಹಲಿಯ ಹೊರತಾಗಿ ಜಗದ ಮೂಲೆಮೂಲೆಯನ್ನು ತಲುಪುತ್ತಿದೆ. ಸೋನಮ್ ವಾಂಗ್ಚುಕ್ ಮತ್ತು ಅವರೊಡನೆ ನಿಂತವರು ತಮ್ಮ ಗುರಿ ಸಾಧಿಸಲಿ. ಹವಾಮಾನ ಬದಲಾವಣೆಯನ್ನು ಚರ್ಚಿಸುವ ಮತ್ತು ಒಕ್ಕೂಟ ಸರ್ಕಾರದ ಒಡೆದಾಳುವ ನೀತಿಗಳನ್ನು ಪ್ರಶ್ನಿಸುವ ಜನ ಚಳವಳಿಗಳು ದೇಶದ ಇತರೆಡೆಗಳಲ್ಲೂ ಒಂದೇಸಮನೆ ಹುಟ್ಟಿಬರಲಿ.

ಕೆ ಎಸ್‌ ರವಿಕುಮಾರ್, ಹಾಸನ

ವಿಜ್ಞಾನ ಬರಹಗಾರರು

ಇದನ್ನೂ ಓದಿ-

More articles

Latest article