Tuesday, May 20, 2025

ಬೆಂಗಳೂರು ಮಳೆ ತಂದ ಅವಾಂತರ: ಧರೆಗುರುಳಿದ 30 ಮರ, 29 ಕೆರೆಗಳು ಭರ್ತಿ, ಮನೆ ಅಪಾರ್ಟ್‌ ಮೆಂಟ್‌ ಗಳು ಜಲಾವೃತ

Most read

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ವಿವಿಧ ಭಾಗಗಳಲ್ಲಿ ನಗರದಲ್ಲಿ 30 ಕ್ಕೂ ಹೆಚ್ಚು ಮರಗಳು ಹಾಗೂ 50 ಕ್ಕೂ ಹೆಚ್ಚು ರೆಂಬೆಗಳು ಧರೆಗುರುಳಿವೆ. ಇವುಗಳನ್ನು ತೆರವುಗೊಳಿಸುವಲ್ಲಿ 30 ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಯಲಹಂಕ ವಲಯ ವ್ಯಾಪ್ತಿಯಲ್ಲಿ 29 ಕೆರೆಗಳಿದ್ದು ಎಲ್ಲಾ ಕೆರೆಗಳೂ ಸಂಪೂರ್ಣ ತುಂಬಿವೆ ಎಂದು ಬಿಬಿಎಂಪಿ ತಿಳಿಸಿದೆ.

ಮಳೆಯಿಂದಾಗುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ನಾಗರಿಕರು ಬಿಬಿಎಂಪಿ ಸಹಾಯವಾಣಿ 1533ಗೆ ಕರೆ ಮಾಡಿ ಮಾಹಿತಿ ನೀಡಬಹುದು.

ಗಾಳಿ ಆಂಜನೇಯ ದೇವಸ್ಥಾನದ ಬಳಿ ವೃಷಭಾವತಿ ವ್ಯಾಲಿ ಜಲಾವೃತವಾಗಿ ಮನೆಗಳಿಗೆ ನೀರು ನುಗ್ಗಿದೆ. ಬೆಳ್ಳಂದೂರು ಬಳಿ ಮಳೆ ನೀರಿನ ಹರಿವಿನ ಮಟ್ಟವನ್ನು ಕಡಿಮೆ ಮಾಡಲು ತಾತ್ಕಾಲಿಕವಾಗಿ ಜೆಸಿಬಿ ಮೂಲಕ ಬಂಡ್ ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗಿದೆ. ಯಲಹಂಕ ವಲಯದ ಚೌಡೇಶ್ವರಿ ನಗರದ ಅಟ್ಟೂರು ವ್ಯಾಪ್ತಿಯಲ್ಲಿ ಸುಮಾರು 15 ಮನೆಗಳಿಗೆ ಡಿಫೆನ್ಸ್ ಲೇಔಟ್ ಹಾಗೂ ದ್ವಾರಕಾ ನಗರದಲ್ಲಿ ಸುಮಾರು ಐದು ಮನೆಗಳಿಗೆ ನೀರು ನುಗ್ಗಿದ್ದು ಪಂಪ್‌ಗಳನ್ನು ಅಳವಡಿಸಿ ನೀರು ತೆರವು ಮಾಡಲಾಗಿದೆ. ಕೆಂಗೇರಿ ಬಳಿಯ ಕೋಟೆ ಲೇಔಟ್‌ನಲ್ಲಿ ಸುಮಾರು 100 ಮನೆಗಳಿಗೆ ನೀರು ನುಗ್ಗಿದ್ದು ನಾಲ್ಕು ಪಂಪ್‌ಗಳನ್ನು ಅಳವಡಿಸಿ ನೀರು ತೆರವು ಕಾರ್ಯ ಮಾಡಲಾಗುತ್ತಿದೆ.

ಪಾಲಿಕೆ ಮೂಲಗಳ ಪ್ರಕಾರ ಮಹದೇವಪುರ ವಲಯದಲ್ಲಿ 10 ಪ್ರದೇಶಗಳು ಜಲಾವೃತವಾಗಿವೆ. ಸಾಯಿ ಲೇಔಟ್ ಈ ವರ್ಷವೂ ಸಂಪೂರ್ಣ ಜಲಾವೃತವಾಗಿದ್ದು 35 ಸಿಬ್ಬಂದಿ 6 ಟ್ರ್ಯಾಕ್ಟರ್ 2 ಜೆಸಿಬಿ 3 ಅಗ್ನಿ ಶಾಮಕ ವಾಹನ ಎಸ್‌ಡಿಆರ್‌ಎಫ್ ತಂಡದಿಂದ 2 ಬೋಟ್ ಮೂಲಕ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸ್ಥಳೀಯ ನಿವಾಸಿಗಳಿಗೆ ಉಪಾಹಾರ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.
ಮಾರತ್‌ ಹಳ್ಳಿಯ ದೀಪ ನರ್ಸಿಂಗ್ ಹೋಂ ಚಿನ್ನಪ್ಪನಹಳ್ಳಿ 5ನೇ ಕ್ರಾಸ್ ಪಣತ್ತೂರ್ ರೈಲ್ವೆ ಕೆಳಸೇತುವೆ ಗ್ರೀನ್ ಹುಡ್ ಇಬ್ಬಲೂರು ಜಂಕ್ಷನ್ ಬಾಲಾಜಿ ಲೇಔಟ್ – ಕೊತ್ತನೂರು ಎ. ನಾರಾಯಣಪುರದ ಕೃಷ್ಣ ನಗರ ಸುನೀಲ್ ಲೇಔಟ್ ಹರಳೂರು ಬಿ.ಎಸ್‌.ಪಿ ಲೇಔಟ್‌ನ ಕಸವನಹಳ್ಳಿ ಕಡೆಗಳಲ್ಲಿ ರಸ್ತೆಗಳ ಮೇಲೆ ನೀರು ಮತ್ತು ಮನೆಗಳಿಗೆ ನೀರು ನುಗ್ಗಿದ್ದು ಬಹುತೇಕ ಕಡೆ ಸಮಸ್ಯೆ ಬಗೆಹರಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ರಾಜರಾಜೇಶ್ವರಿ ನಗರ ವಲಯದ ಐಡಿಯಲ್ಸ್ ಹೋಮ್ಸ್ 1ನೇ ಎ ಕ್ರಾಸ್ ವೃಷಭಾವತಿ ವ್ಯಾಲಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಹಿಮ್ಮುಖವಾಗಿ ಚಲಿಸಿದ ಪರಿಣಾಮ ಮೂರು ಹಸು ಒಂದು ಕರು ಹಾಗೂ ಒಂದು ಎಮ್ಮೆ ಸೇರಿ 5 ಜಾನುವಾರಗಳು ಅಸುನೀಗಿವೆ.

ಪೂರ್ವ ವಲಯದಲ್ಲಿ ರಾಜಕಾಲುವೆಯಲ್ಲಿ ನೀರು ತುಂಬಿ ಹಿಮ್ಮುಖವಾಗಿ ಚಲಿಸಿದ್ದು ಎಚ್‌ಬಿಆರ್ 5 6 7 8ನೇ ಬ್ಲಾಕ್ ಬೈರಸಂದ್ರ ಲೇಔಟ್ ಕೆಂಪೇಗೌಡ ರಸ್ತೆ ಕಾಮರಾಜ ನಗರ ಪ್ರದೇಶಗಳು ಜಲಾವೃತವಾಗಿವೆ.

ನೀರು ಹೊರ ಹಾಕಲು ನಿರ್ವಹಣಾ ತಂಡಗಳು ಆರು ಟ್ರ್ಯಾಕ್ಟರ್‌ಗಳ ತಂಡ ಎರಡು ಜೆಸಿಬಿಗಳು ಹಾಗೂ 10 ಪಂಪ್‌ಗಳು ಕಾರ್ಯನಿರ್ವಹಿಸುತ್ತಿವೆ. ಬೊಮ್ಮನಹಳ್ಳಿ ವಲಯದ ಎಚ್.ಎಸ್.ಆರ್ ಲೇಔಟ್ 6 ಮತ್ತು 7ನೇ ಸೆಕ್ಟರ್ ಮತ್ತು ಬನ್ನೇರುಘಟ್ಟ ಬಿಳೇಕಹಳ್ಳಿ ಸಿಗ್ನಲ್‌ ರಸ್ತೆಯಲ್ಲಿ ನೀರು ತುಂಬಿದ್ದು ಯಲಚೇನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ನಿರ್ವಹಣಾ ತಂಡ ಹಾಗೂ ಪಂಪ್‌ಗಳ ವ್ಯವಸ್ಥೆ ಮಾಡಿ ಸಮಸ್ಯೆ ಬಗೆಹರಿಸಲಾಗಿದೆ.

ದಾಸರಹಳ್ಳಿ ವಲಯ ಕೆ.ಜಿ ಹಳ್ಳಿ ಡಿಫೆನ್ಸ್ ಕಾಲೊನಿ ಮೇಡರಹಳ್ಳಿಯ ಶ್ರೀದೇವಿ ಬಡಾವಣೆ ರುಕ್ಮಿಣಿ ನಗರ ವಿದ್ಯಾನಗರ ಬಿಟಿಎಸ್ ಲೇಔಟ್‌ಗಳಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿದ್ದು ಪಂಪ್‌ಗಳನ್ನು ಅಳವಡಿಸಿ ನೀರು ತೆರವುಗೊಳಿಸಲಾಗಿದೆ. ಪಶ್ಚಿಮ ವಲಯದಲ್ಲಿ ಕೆ.ಪಿ ಅಗ್ರಹಾರದಲ್ಲಿ ರಾಜಕಾಲುವೆಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಾಗಿ 20 ಮನೆಗಳಿಗೆ ನೀರು ನುಗ್ಗಿದ್ದು ನಾಲ್ಕು ಪಂಪ್‌ಗಳನ್ನು ಅಳವಡಿಸಿ ನೀರು ತೆರವುಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.

ವಲಯದ ಯಾವ ಪ್ರದೇಶದಲ್ಲಿ ಅತಿಹೆಚ್ಚು ಮಳೆ?
• ರಾಜರಾಜೇಶ್ವರಿ ನಗರ ವಲಯದ ಕೆಂಗೇರಿಯಲ್ಲಿ 13.2 ಸೆಂ.ಮೀ
• ಯಲಹಂಕ ವಲಯದ ಚೌಡೇಶ್ವರಿ ನಗರದಲ್ಲಿ 10.3 ಸೆಂ.ಮೀ
• ದಕ್ಷಿಣ ವಲಯದ ಕೋರಮಂಗಲದಲ್ಲಿ 9.6 ಸೆಂ.ಮೀ
• ಮಹದೇವಪುರ ವಲಯದ ಎಚ್‌ಎಎಲ್ ವ್ಯಾಪ್ತಿಯಲ್ಲಿ 9.3 ಸೆಂ.ಮೀ
• ದಾಸರಹಳ್ಳಿ ವಲಯದ ಬಾಗಲಗುಂಟೆಯಲ್ಲಿ 8.9 ಸೆಂ.ಮೀ
• ಪಶ್ಚಿಮ ವಲಯ ಕಾಟನ್‌ಪೇಟೆಯಲ್ಲಿ 8.9 ಸೆಂ.ಮೀ
• ಪೂರ್ವ ವಲಯದ ಬಾಣಸವಾಡಿಯಲ್ಲಿ 8.5 ಸೆಂ.ಮೀ
• ಬೊಮ್ಮನಹಳ್ಳಿ ವಲಯದ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ 7.3 ಸೆಂ.ಮೀ

More articles

Latest article