ಪ್ಯೂರ್ ಲವ್ ಸ್ಟೋರಿ ಹೇಗಿರುತ್ತದೆ? ಹಾಗಾದರೆ ನೀವು ನೋಡಲೇಬೇಕು “ಜೊತೆಯಾಗಿ ಹಿತವಾಗಿ”;ಸೆ. 19ಕ್ಕೆ ಬಿಡುಗಡೆ

Most read

ಬೆಂಗಳೂರು: ಪ್ಯೂರ್ ಲವ್ ಸ್ಟೋರಿಯನ್ನು ಸಿನಿ ಪ್ರೇಮಿಗಳು ಸೋಲಿಸಿದ ಉದಾಹರಣೆಯೇ ಇಲ್ಲ. ತೆರೆಮೇಲಿನ ಪ್ರೀತಿಯನ್ನು ಪ್ರೇಕ್ಷಕರು ಮನಸ್ಸಾರೆ ಅನುಭವಿಸುವುದುಂಟು. ಅಂಥದ್ದೊಂದು ಸಿನಿಮಾ ಈಗ ಪ್ರೇಕ್ಷಕರ ಹೃದಯವನ್ನು ಕೆಣಕುತ್ತಿದೆ. ಅದೇ “ಜೊತೆಯಾಗಿ ಹಿತವಾಗಿ” ಸಿನಿಮಾ. ಇದೇ ಸೆ. 19ಕ್ಕೆ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ. ಅದಕ್ಕೂ ಮುನ್ನ ಒಂದು ಪ್ರೀಮಿಯರ್ ಶೋ ಮಾಡಲಾಗಿದ್ದು, ಸಿನಿಮಾ ನೋಡಿದ ಪ್ರೇಕ್ಷಕರು ಮನಃಸ್ಪೂರ್ತಿಯಾಗಿ ಮೆಚ್ಚಿಕೊಂಡಿದ್ದಾರೆ. ಸಿನಿಮಾದ ಲವ್ ಸ್ಟೋರಿ ಮತ್ತು ಅಪ್ಪ ಮಗನ ಸೆಂಟಿಮೆಂಟ್ ಅನ್ನು ಹಾಡಿ ಹೊಗಳಿದ್ದಾರೆ. ಪ್ರೇಕ್ಷಕ ಪ್ರಭುಗಳು ಮೆಚ್ಚಿಕೊಂಡ ಮೇಲೆ ಸಿನಿಮಾ ತಂಡಕ್ಕೆ ಅದಕ್ಕಿಂತ ಇನ್ನೇನಿದೆ ಹೇಳಿ!. ಚಿತ್ರದ ಯಶಸ್ಸಿಗೆ ಉತ್ತಮ ಮುನ್ನುಡಿ ಸಿಕ್ಕಿದೆ.

“ಜೊತೆಯಾಗಿ ಹಿತವಾಗಿ” ಸಿನಿಮಾದ ಟೈಟಲ್ ಶಿವರಾಜಕುಮಾರ್‌ ಅವರ ಚೊಚ್ಚಲ ಆನಂದ್ ಚಿತ್ರದ ಹಾಡಿನ ಮೊದಲ ಸಾಲು. ಈ ಹಾಡಿನ ಸಾಲನ್ನೇ ಟೈಟಲ್ ಆಗಿ ಇಡುವುದಕ್ಕೂ ಒಂದು ಕಾರಣ ಇದೆ. ಈ ಸಿನಿಮಾದ ನಾಯಕ ಅಗಸ್ತ್ಯ ದೊಡ್ಮನೆಯ ಅಪ್ಪಟ ಅಭಿಮಾನಿ. ಹಾಗಾಗಿ ಆ ಕುಟುಂಬದ ಚಿತ್ರದ ಹಾಡೊಂದರ ಸಾಲು ಟೈಟಲ್‌ ಆಗಿಮೂಡಿ ಬಂದಿದೆ.

“ಜೊತೆಯಾಗಿ ಹಿತವಾಗಿ” ಲವ್ ಸಬ್ಜೆಕ್ಟ್ ಇರುವ ಸಿನಿಮಾ. ಕಥೆ ಮಾಡಿಕೊಂಡಾಗ “ಒಂದೇ ಒಂದು ಸಲ” ಎಂಬ ಟೈಟಲ್ ಇಡಲಾಗಿತ್ತು. ಆದರೆ ಆಮೇಲೆ ಕಥೆಗೆ ತಕ್ಕಂತೆ ಟೈಟಲ್ ಬದಲಾವಣೆ ಮಾಡಲಾಗಿದೆ. ಮನೆಯಲ್ಲಿ ತುಂಬಾ ಫ್ರೀಡಂ ಕೊಟ್ಟರೆ ಏನಾಗುತ್ತೆ, ತೀರಾ ರಿಸ್ಟ್ರಿಕ್ಷನ್ ಇದ್ದಾಗ ಏನಾಗಬಹುದು ಎಂಬುದನ್ನು ಮನೋಜ್ಞವಾಗಿ ಹೆಣೆಯಲಾಗಿದೆ.

ಆರಂಭದಲ್ಲಿ “ಜೊತೆಯಾಗಿ ಹಿತವಾಗಿ” ಸಿನಿಮಾವನ್ನೇ ಒಂದು ಶಾರ್ಟ್ ಮೂವಿ ಮಾಡಬೇಕು ಎಂದು ಅಂದುಕೊಂಡಿದ್ದ ಟೀಂ, ಸಿನಿಮಾದ ಕಥೆ ಸಾಗುತ್ತಾ ಸಾಗುತ್ತಾ ಸಿನಿಮಾ ಹಂತ ತಲುಪಿತು. ಹಾಗಾಗಿ ಸಿನಿಮಾವನ್ನೇ ಮಾಡಲಾಗಿದೆ.  ಸಿನಿಮಾ ಚೆನ್ನಾಗಿ ಮೂಡಿ ಬರಬೇಕು, ಪ್ರೇಕ್ಷಕರಿಗೆ ನಿರಾಶೆ ಮೂಡಬಾರದು ಎಂಬ ಕಾರಣಕ್ಕೆ ಅದೆಷ್ಟೋ ಸೀನ್ ಗಳನ್ನು ರೀಶೂಟ್ ಮಾಡುವ ಮೂಲಕ ಬದ್ದತೆಯನ್ನು ಪ್ರದರ್ಶಸಿದ್ದಾರೆ. ಅಷ್ಟೇ ಅಲ್ಲ,ಬೆಳಗಾವಿಯನ್ನು ಮಲೆನಾಡಿನ ರೀತಿಯಲ್ಲಿ ತೋರಿಸಿರುವುದು ಚಿತ್ರದ ಮತ್ತೊಂದು ಹೈಲೈಟ್.‌

ಈ ಸಿನಿಮಾದಲ್ಲಿ ಅಗಸ್ತ್ಯ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಇವರು ಮೂಲತಃ ಬೆಳಗಾವಿಯವರು. ಶಾಳಾ ದಿನಗಳಿಂದಲೇ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಅಗಸ್ತ್ಯ ಅವರಲ್ಲಿತ್ತು. ಆದರೆ ಸ್ಯಾಂಡಲ್‌ ವುಡ್‌ ಗೆ ಎಂಟ್ರಿ ಕೊಡಲು ಮನೆಯಲ್ಲಿ ಸಪೋರ್ಟ್ ಇರಲಿಲ್ಲ. ಆ ಒಂದೇ ಒಂದು ಅವಕಾಶಕ್ಕೋಸ್ಕರ ಅಗಸ್ತ್ಯ ಅವರು ಸಿನಿಮಾದ ಟೆಕ್ನಿಕಲ್ ವಿಭಾಗದಲ್ಲಿ ಕಲಿಕೆ ಕಂಡುಕೊಂಡರು. ಎಲ್ಲಾ ಶ್ರಮದ ಫಲವಾಗಿ ಈಗ ಒಂದು ಸಿನಿಮಾದ ಹೀರೋ ಆಗಿದ್ದಾರೆ.

ಅಗಸ್ತ್ಯ ಅವರಿಗೆ ಸುವಾರ್ತಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಸದ್ಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಶ್ರೀ ರತ್ನ ಫಿಲಂ ಕಂಪನಿ ನಿರ್ಮಿಸಿರುವ ಈ ಚೊಚ್ಚಲ ಚಿತ್ರವನ್ನು ಎ ಆರ್ ಕೃಷ್ಣ ನಿರ್ದೇಶಿಸಿದ್ದಾರೆ. ಅಪ್ಪನ ಪಾತ್ರಕ್ಕೆ ಆನಂದ್ ನೀನಾಸಂ ಜೀವ ತುಂಬಿದ್ದು, ಇನ್ನುಳಿದಂತೆ ತಾರಾಗಣದಲ್ಲಿ ಚೇತನ್ ದುರ್ಗಾ, ಬಳ್ಳಾರಿ ಅರ್ಜುನ್, ಸಲೋಮಿ ಡಿಸೋಜ, ಭೂಮಿಕಾ ದೇಶಪಾಂಡೆ, ವಿನಾಯಕ್ ಮುಂತಾದವರು ಇದ್ದಾರೆ. ಚಿತ್ರವನ್ನು ನೋಡಲು ಇನ್ನೇನು ಬೇಕು ಹೇಳಿ?

More articles

Latest article