ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ ದೊರಕುತ್ತಿರುವ ಪಿಂಚಣಿ ಮೊತ್ತದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ನ್ಯಾಯಯುತ ಪರಿಹಾರ ಕಂಡುಕೊಳ್ಳುವಲ್ಲಿ ಸಹಾಯ ಮಾಡುವಂತೆ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ನ್ಯಾಯಾಲಯ ಸೂಚಿಸಿದೆ.
ಅಖಿಲ ಭಾರತ ನ್ಯಾಯಾಧೀಶರ ಸಂಸ್ಥೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ, ನಿವೃತ್ತ ಜಿಲ್ಲಾ ನ್ಯಾಯಾಧೀಶರು 19,000- 20,000 ಪಿಂಚಣಿ ಪಡೆಯುತ್ತಿದ್ದಾರೆ. ಸುದೀರ್ಘ ಸೇವೆಯ ಬಳಿಕ ಇಷ್ಟು ಕಡಿಮೆ ಮೊತ್ತದ ಪಿಂಚಣಿ ಪಡೆದು ಅವರು ಬದುಕುವುದು ಹೇಗೆ?” ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಇದದು ಬಹಳ ಗಂಭೀರವಾದ ವಿಷಯ, ಇಷ್ಟು ದೀರ್ಘ ಸೇವೆಯ ನಂತರ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ ₹19,000 ರಿಂದ 20,000 ವೇತನ ನೀಡುವುದು ಸರಿಯಲ್ಲ. 61 & 62 ವಯಸ್ಸಿನಲ್ಲಿ ಅವರು ಖಾಸಗಿ ಪ್ರಾಕ್ಟೀಸ್‌ಗೆ ಹೋಗಲು ಸಾಧ್ಯವೇ? ನೀವೇ ಊಹಿಸಿ. ಜಿಲ್ಲಾ ನ್ಯಾಯಾಧೀಶರು ನಿಜಕ್ಕೂ ಪರದಾಡುತ್ತಿದ್ದಾರೆ ಎನ್ನುವುದು ನಿಮಗ ಗೊತ್ತೇ” ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ಸಿಜೆಐ ಚಂದ್ರಚೂಡ್ ಪ್ರಶ್ನಿಸಿದ್ದಾರೆ.
ಕೆಲ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ಪಿಂಚಣಿ ನೀಡಲಾಗುತ್ತಿಲ್ಲ. ಈ ಬಗ್ಗೆಯೂ ಗಮನಹರಿಸಿ ಎಂದು ಅಟಾರ್ನಿ ಜನರಲ್ ಅವರಿಗೆ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಪರ ಹಾಜರಾದ ಅಟಾರ್ನಿ ಜನರಲ್ ಕೆ ವೆಂಕಟರಮಣಿ, ಈ ವಿಷಯದ ಬಗ್ಗೆ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.
“ಸೇವೆಯಲ್ಲಿರುವ ನ್ಯಾಯಾಧೀಶರು ಘನತೆಯುತ ಅಸ್ತಿತ್ವವನ್ನು ಹೊಂದುವಂತೆ ಸೇವೆಯ ಸ್ಥಿತಿ ಇರಬೇಕು. ನಿವೃತ್ತಿ ನಂತರದ ಸೇವಾ ಪರಿಸ್ಥಿತಿಯು ನ್ಯಾಯಾಧೀಶರ ಕಚೇರಿಯ ಘನತೆ ಮತ್ತು ಸ್ವಾತಂತ್ರ್ಯದ ಹಾಗೂ ಅದನ್ನು ಸಮಾಜ ಹೇಗೆ ಗ್ರಹಿಸಿದೆ ಎಂಬುದರ ಕುರಿತಂತೆ ನಿರ್ಣಾಯಕ ಸ್ಥಾನವನ್ನು ಹೊಂದಿರುತ್ತದೆ. ನ್ಯಾಯಾಂಗ ಸೇವೆಯು ಪ್ರತಿಭಾವಂತರನ್ನು ಆಕರ್ಷಿಸುವ ಜೀವಶಕ್ತಿಯುಳ್ಳ ವೃತ್ತಿಯಾಗಿದ್ದರೆ, ಸೇವೆಯಲ್ಲಿರುವ ಹಾಗೂ ನಿವೃತ್ತ ಅಧಿಕಾರಿಗಳ ಸೇವಾ ಪರಿಸ್ಥಿತಿಯು ಭದ್ರತೆ ಹಾಗೂ ಘನತೆಯನ್ನು ನೀಡುವಂತೆ ಇರಬೇಕು” ಎಂದು ಸಿಜೆಐ ಚಂದ್ರಚೂಡ್, ನ್ಯಾ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.
ನಾಗರಿಕರಿಗೆ ಕಾನೂನಿನ ಮೇಲಿನ ವಿಶ್ವಾಸ ಉಳಿಸಲು ನ್ಯಾಯಾಂಗ ಸ್ವಾತಂತ್ರ್ಯ ಅಗತ್ಯವಾಗಿದೆ. ಇದು ನ್ಯಾಯಾಧೀಶರು ಆರ್ಥಿಕ ಘನತೆಯ ಪ್ರಜ್ಞೆಯೊಂದಿಗೆ ಎಷ್ಟು ಸುದೀರ್ಘ ಸಮಯ ಬದುಕಲು ಸಾಧ್ಯವೋ, ಅಲ್ಲಿಯವರೆಗೂ ಉಳಿಸಲು ಮಾತ್ರ ಸಾಧ್ಯ ಎಂದು ಕೋರ್ಟ್ ಹೇಳಿದೆ.