ನೀವು ಯಾರಿಗಾದರೂ ಇಷ್ಟವಾಗುತ್ತಿಲ್ಲ, ಅವರು ಒಳಗೊಳಗೇ ನಿಮ್ಮ ಬಗ್ಗೆ ಕುದಿಯುತ್ತಿದ್ದಾರೆ ಅಥವಾ ಅಸಹನೆ ಇದೆ ಆದರೆ ಹೊರಗೆ ಹೇಳಿಕೊಳ್ಳಲಾರರು ಅನ್ನುವುದನ್ನು ಹೇಗೆ ಕಂಡು ಹಿಡಿಯುವುದು?
ಮನುಷ್ಯ ಮಾತಿನಲ್ಲಿ ಸುಳ್ಳು ಹೇಳಬಹುದು ಆದರೆ ಮಾತನ್ನು ಪೋಣಿಸುವ ರೀತಿ ಹಾಗೂ ವರ್ತನೆಯಲ್ಲಿ ಸುಳ್ಳು ಹೇಳಲಾರ. ಹಾಗಾಗಿ ಮಾತಾಡಿದ ಪದಗಳಿಗಿಂತ ಅವರ ಭಾವ ಬಹಳ ಹೇಳುತ್ತದೆ. ಆದರೆ ಬಹಳಷ್ಟು ಸಮಯ ನಾವು ಪದಗಳಿಗೆ ಕೊಡುವ ಮಹತ್ವವನ್ನು ಅವರ ಹಾವ ಭಾವ ಚಲನ ವಲನಗಳಿಗೆ ಕೊಡುವುದಿಲ್ಲ.
ಪದಗಳನ್ನು ಕೇಳಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಗಮನಿಸುವುದರಲ್ಲಿ ನಿರತರಾದಾಗ ಅತೀ ಹೆಚ್ಚು ಸುಳಿವುಗಳನ್ನು ಹುಡುಕಬಹುದು.
ನಿಮ್ಮ ಜೊತೆಯಲ್ಲಿಯೇ ಇದ್ದು ನಿಮ್ಮ ಮೇಲೆ ಅಸೂಯೆ ಇರುವ ವ್ಯಕ್ತಿ ಅಥವಾ ನಿಮ್ಮ ಬಗ್ಗೆ ಅಸಹನೆ ಇರುವ ವ್ಯಕ್ತಿಯನ್ನು ಪತ್ತೆಹಚ್ಚಲು ನಿಮ್ಮೊಂದಿಗೆ ಮಾತಾಡುವಾಗ ಸಾಮಾನ್ಯವಾಗಿ ಈ ರೀತಿಯ ಹಾವಭಾವಗಳನ್ನು ತೋರಿಸುತ್ತಾರೆ.
ನಿಮ್ಮ ಕಣ್ಣಿನ ಸಂಪರ್ಕವನ್ನು ತಪ್ಪಿಸುವುದುಃ
1. ನೀವು ಏನೋ ಮಾತಾಡಲು ತೊಡಗಿದರೆ ಬೇರೆಲ್ಲೋ ನೋಡುವುದು ಅಥವಾ ಫೋನ್ ಅನ್ನು ನೋಡುವುದು.
2. ನಿಮ್ಮ ಜೊತೆ ಇರುವಾಗ ಸಾಧಾರಣವಾಗಿ ಕೈಕಟ್ಟಿಕೊಂಡೇ ನಿಂತಿರುವುದು.
3. ಮಾತನಾಡುವಾಗ ತಮ್ಮ ದೇಹವನ್ನು ವಿರುದ್ಧ ದಿಕ್ಕಿಗೆ ವಾಲಿಸುವುದು. ಸಂಭಾಷಣೆಯ ಸಮಯದಲ್ಲಿ ಅವರ ಭುಜಗಳು ಮತ್ತು ಕಾಲುಗಳು ನಿಮ್ಮಿಂದ ಗಮನಿಸಬಹುದಾದ ಅಂತರದಲ್ಲಿರುತ್ತವೆ.
4. ನೀವು ಏನಾದರೂ ತಮಾಷೆ ಅಥವಾ ಕುತೂಹಲದ ವಿಷಯ ಹಂಚಿಕೊಂಡರೂ ಅವರು ನಗುವುದು ಅಥವಾ ಪ್ರತಿಕ್ರಿಯಿಸುವುದು ಬಹಳ ಕಡಿಮೆ.
5. ಅವರ ಭುಜಗಳು ಬಿಗಿಯಾಗಿರುತ್ತವೆ ಮತ್ತು ಅವರು ನಿಮ್ಮ ಜೊತೆ ಇರುವುದು ಇಷ್ಟವಿಲ್ಲ ಹೊರಡಬೇಕು ಎಂಬುದು ಎದ್ದು ಕಾಣುವಂತೆ ಉದ್ವಿಗ್ನತೆ ಇರುತ್ತದೆ.
6 ನೀವು “ಹೇಗಿದ್ದೀರಿ?” ಎಂದು ಕೇಳಿದಾಗ ಸಂಕ್ಷಿಪ್ತವಾದ ಉತ್ತರಗಳನ್ನು ನಿರೀಕ್ಷಿಸಬಹುದು. ಅವರು ” ನಾನು ಫೈನ್” ಅಂತಷ್ಟೇ ಹೇಳಬಹುದು ಮತ್ತು ಅದಕ್ಕಿಂತ ಹೆಚ್ಚಾಗಿ ಮಾತು ಬೆಳೆಸುವ ಆಸಕ್ತಿ ಅವರ ವರ್ತನೆಯಲ್ಲಿ ಕಾಣುವುದಿಲ್ಲ. ಅವರು ನೀವು ಮಾತಾಡುವ ವಿಷಯವನ್ನು ಬದಲಾಯಿಸಲು ಅಥವಾ ನಿಲ್ಲಿಸಲು ವಾಕ್ಯವನ್ನು ಪೂರ್ಣಗೊಳಿಸುವ ಮೊದಲೇ ನಿಮ್ಮನ್ನು ತಡೆಯುತ್ತಾರೆ.
8. ನೀವು ಒಂದು ಸಲಹೆಯನ್ನು ಕೊಡಿ ಅಥವಾ ಯಾವುದೋ ವಿಷಯ ಹೇಳಿ ಅದಕ್ಕೆ ಉತ್ತರದಲ್ಲಿ ವ್ಯಂಗ್ಯ ಅಡಗಿರುತ್ತದೆ.
ಉದಾಹರಣೆಗೆ- ಯಾವುದೋ ವಿಷಯದ ಬಗ್ಗೆ ನಿಮ್ಮ ಸಲಹೆ ಹೇಳಿದಾಗ ಅದಕ್ಕೆ “ ಅದೇನು ಮಹಾ, ನಾನು ಇದಕ್ಕಿಂತ ಹೆಚ್ಚಿನ ಸಲಹೆ ಕೊಟ್ಟಿದ್ದೇನೆ ” ಎಂಬ ಉತ್ತರ.
ಹಾಗೇ ನೀವೊಂದು ಅಭಿಪ್ರಾಯವನ್ನು ಹಂಚಿಕೊಂಡರೆ, ಅವರು “ಏನೋ ಒಂದು ಇರಲಿ ಬಿಡಿ (who cares ) ಎನ್ನುವ ಮನೋಭಾವ ನಿಮ್ಮದು ” ಎಂದು ಪ್ರತಿಕ್ರಿಯಿಸುತ್ತಾರೆ.
ಪ್ರಶಂಸಾ ರೂಪದ ಟೀಕೆಗಳನ್ನು ಕೊಡುವುದು ಹೀಗೆ..
ಓ ಇವತ್ತೇನು ಚೆನ್ನಾಗಿ ಕಾಣ್ತಿದ್ದೀರಿ(ಅಪರೂಪಕ್ಕೆ), ನೀವು ಫೋಟೋದಲ್ಲಿ ತುಂಬಾ ಚೆನ್ನಾಗಿದ್ದೀರಿ. ಅಡುಗೆ ಮಾತ್ರ ಚೆನ್ನಾಗಿ ಮಾಡ್ತೀರಿ…
ನೀವೇನೇ ಹೇಳಿ ಒಂದು ರೀತಿ ನೆಗೆಟೀವ್ ಆಗಿ ತಳ್ಳಿ ಹಾಕುತ್ತಾರೆ.
ನೀವು ಹೊಸ ವಿಷಯ ಹೇಳಿದರೆ “ಅದು ಉಪಯೋಗ ಆಗಲ್ಲ ” ಎಂದು ಹೇಳಿ ಅದಕ್ಕೆ ಪರ್ಯಾಯಗಳನ್ನು ನೀಡದೆ, ಅದು ಏಕೆ ಕೆಲಸ ಮಾಡುವುದಿಲ್ಲ ಎಂದೂ ಹೇಳದೆ ನಿರ್ಲಕ್ಷ್ಯ ಮಾಡುತ್ತಾರೆ.
ತಮ್ಮ ಪ್ಲಾನಿಂಗ್ ಅಥವಾ ಗುಂಪಿನ ಸಂಭಾಷಣೆಗಳಿಂದ ನಿಮ್ಮನ್ನು ಪರೋಕ್ಷವಾಗಿ ಹೊರಗಿಡುವುದು. ಉದಾಹರಣೆಗೆ- ಅವರ ಟೀಮ್ ಔಟ್ ಇದೆ ಆದರೆ ಜಾಣತನದಿಂದ ನಿಮ್ಮನ್ನು ಆಹ್ವಾನಿಸಲು ಮರೆತೇ ಬಿಡುತ್ತಾರೆ.
ನಿಮ್ಮ ಬಗ್ಗೆ ಇತರರಿಗೆ ಕಿವಿಚುಚ್ಚುವುದು
ಅದು ಗಾಸಿಪ್. ಆ ವಿಷಯ ನಿಮಗೆ ಬೇರೆಯವರಿಂದ ಗೊತ್ತಾಗುತ್ತದೆ.
ನಿಮ್ಮ ಅಭಿಪ್ರಾಯವನ್ನು ಕೇಳುವುದು ಅಥವಾ ಕೇಳದೇ ಇರುವುದು ಅಥವಾ ಕೇಳಿದರೂ ನಿರ್ಲಕ್ಷ್ಯ ಮಾಡುವುದು. ನಿಮ್ಮ ಮಾತಿಗೆ ಪ್ರಶಂಸೆ ನೀಡದೇ ಇರುವುದು
ಸಣ್ಣ ವಿಷಯಗಳಲ್ಲೂ ನಿಮ್ಮೊಂದಿಗೆ ಬೇಕೆಂತಲೆ ಭಿನ್ನಾಭಿಪ್ರಾಯ ಹೊಂದಿರುವುದು. ಉದಾಹರಣೆಗೆ
ಇವತ್ತು ತುಂಬಾ ಬಿಸಿಲು ಅಂದರೆ ಇದೇನು ಮಹಾ ನೀವು ರಾಜಾಸ್ಥಾನದಲ್ಲಿ ಇರಬೇಕಿತ್ತು ಅನ್ನುತ್ತಾರೆ.
ಅವರು ನಿಮ್ಮ ಕಲೀಗ್ ಅಥವಾ ನಿಮ್ಮ ಗುಂಪಿನಲ್ಲಿರುವ ಇತರರ ಕೆಲಸವನ್ನು ಉತ್ಸಾಹದಿಂದ ಹೊಗಳುತ್ತಾರೆ ಮತ್ತು ನಿಮ್ಮ ಪ್ರಯತ್ನಗಳನ್ನು ಬೇಕೆಂತಲೆ ನಿರ್ಲಕ್ಷಿಸುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮನ್ನು ಇಷ್ಟ ಪಡದೇ ಇರುವವರನ್ನು ಹೇಗೆ ಗುರುತಿಸಬಹುದು?
1. ನಿಮ್ಮ ಪೋಸ್ಟ್‌ಗಳು ಅಥವಾ ಕಾಮೆಂಟ್‌ಗಳನ್ನು ನೋಡದೇ ಇರುವಂತಿರುವುದು. ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರೂ ಸಹ ನೀವು ಹಂಚಿಕೊಳ್ಳುವ ಯಾವುದನ್ನೂ ಅವರು ಎಂದಿಗೂ ಲೈಕ್ ಆಗಲಿ, ಕಾಮೆಂಟ್ ಆಗಲಿ ಮಾಡುವುದಿಲ್ಲ.
ಉದಾಹರಣೆ- ನೀವು ನಿಮ್ಮ ಒಂದು ಸಾಧನೆಯನ್ನು ಪೋಸ್ಟ್ ಮಾಡುತ್ತೀರಿ, ಅವರು ಬೇಕಂತಲೇ ಗಮನಿಸುವುದಿಲ್ಲ. ಇನ್ಯಾರಿಗೋ ಹೋಗಿ ಕಾಮೆಂಟ್ ಮಾಡಿ ಬಂದಿರುತ್ತಾರೆ.
2. ಪ್ಯಾಸೀವ್ ಅಗ್ರೆಸೀವ್ ಕಾಮೆಂಟ್‌ಗಳನ್ನು ಮಾಡುವುದು. ಯಾವಾಗಲೂ ಇವರು ನಿಮ್ಮ ಪೋಸ್ಟ್‌ಗಳಲ್ಲಿ ಅಸ್ಪಷ್ಟ ಅಥವಾ ವ್ಯಂಗ್ಯದ ಟೀಕೆಗಳನ್ನು ಮಾಡುತ್ತಾರೆ. ಉದಾಹರಣೆಗೆ ನಿಮ್ಮ ಪ್ರವಾಸದ ಫೋಟೋ ಹಾಕ್ತೀರಾ, ಅವರು, “ಇದೆಲ್ಲಾ ಸಾಧ್ಯ ಆಗೋದು ಪೂರ್ತಿ ವಿರಾಮ ಇರುವವರಿಗೆ” ಎಂದು ಕಾಮೆಂಟ್ ಮಾಡುತ್ತಾರೆ.
ನೀವು ಯಾವದೋ ಪುಸ್ತಕದ ಬಗ್ಗೆ ನಿಮ್ಮ ಅಭಿಪ್ರಾಯ ಹಾಕುವಿರಿ.“ನಿಮ್ಮದೂ ಒಂದು ಪುಸ್ತಕ ಇದೆ ಅಲ್ಲವಾ ಅದು ಹೇಗೆ “ಎಂದು ಕೇಳುವುದು.
3. ನಿಮ್ಮನ್ನು ವಿನಾಕಾರಣ ಅನ್‌ಫಾಲೋ ಮಾಡುವುದು ಅಥವಾ ಅನ್‌ಫ್ರೆಂಡ್ ಮಾಡುವುದು.
4. ಅವರು ರೀಲ್ ಅಥವಾ ಪೋಸ್ಟ್‌ಗಳಲ್ಲಿ ನಿಮ್ಮನ್ನು ಗುರಿಯಾಗಿಸಿ ಕೊಂಡಂತೆ ತೋರುವ ಅಸ್ಪಷ್ಟ, ಪರೋಕ್ಷ ಸಂದೇಶಗಳನ್ನು ಪೋಸ್ಟ್ ಮಾಡುತ್ತಾರೆ.
ಉದಾಹರಣೆಗೆ “ಕೆಲವರು ನಿಜವಾಗಿಯೂ ತಾವು ಎಲ್ಲರಿಗಿಂತ ಸುಂದರಿ ಎಂದು ಭ್ರಮಿಸಿಕೊಂಡು ಅದೇನು ಫೋಟೋಗಳನ್ನು ಶೇರ್ ಮಾಡುತ್ತಾರಪ್ಪ” ಅಂತ ಸ್ಟೇಟಸ್ ಹಾಕಿಕೊಂಡಿರುತ್ತಾರೆ, ಅದೇ ದಿನ ನೀವು ನಿಮ್ಮ ಫೋಟೋ ಪೋಸ್ಟ್ ಹಾಕಿಕೊಂಡಿರುತ್ತೀರಿ.
5. ಅವರು ನಿಮ್ಮ ನೇರ ಸಂದೇಶಗಳನ್ನು ನೋಡದೇ ಇರುವ ಹಾಗಿರುವುದು ಅಥವಾ ಉತ್ತರಿಸಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ, ರಿಪ್ಲೈ ಸಹಾ ಕಡಿಮೆ ನೀಡುತ್ತಾರೆ.
6. ನೀವು ಮತ್ತು ನಿಮ್ಮ ಸ್ನೇಹಿತರು ಒಂದೇ ಘಟನೆಯ ಬಗ್ಗೆ ಪೋಸ್ಟ್ ಮಾಡುತ್ತೀರಿ ಅಂದುಕೊಳ್ಳಿ. ಅವರು ನಿಮ್ಮ ಫ್ರೆಂಡ್ ಪೋಸ್ಟ್ ಗೆ ಮಾತ್ರ ಕಾಮೆಂಟ್ ಮಾಡುತ್ತಾರೆ.
ನಿಮ್ಮ ಅಭಿಪ್ರಾಯಗಳನ್ನು ವಿರೋಧಿಸುವ ಅಥವಾ ತಿರಸ್ಕರಿಸುವ ಪೋಸ್ಟ್‌ಗಳನ್ನು ಹಾಕುವುದು.
ನೀವು ಯಾವುದೋ ವಿಷಯದ ಕೆಡುಕಿನ ಬಗ್ಗೆ ಪೋಸ್ಟ್ ಹಾಕಿದರೆ ಮತ್ತು ಅವರು “ಉಪದೇಶ ಕೊಡುವವರೇ ಜಾಸ್ತಿ ಆಗಿದ್ದಾರೆ” ಎನ್ನುವುದು,
ನಿಮ್ಮ ಇನ್‌ಬಾಕ್ಸಿಗೆ ಅತಿಕ್ರಮ ಪ್ರವೇಶ ಮಾಡಿ ಕೆಟ್ಟ ಮೆಸೇಜ್ ಹಾಕಿದವನ ಬಗ್ಗೆ ಬರೆದರೆ, ನಿಮ್ಮ ಬಗ್ಗೆಯೇ ಕೆಟ್ಟ ಅಸಭ್ಯ ಭಾಷೆ ಬಳಸಿ ಹೆಸರು ಹೇಳದೇ ಪೋಸ್ಟ್ ಮಾಡುವುದು.
ಜೊತೆಯಲ್ಲಿಯೇ ಇದ್ದೂ ನಮ್ಮ ಮೇಲೆ ಕತ್ತಿ ಮಸೆಯುವವರನ್ನು ಹೇಗೆ ನಿರ್ವಹಿಸುವುದು?
ನಿರ್ಲಕ್ಷ್ಯ ಮಾಡುವುದು ಎಂದು ಒಂದೇ ಉತ್ತರ ಹೇಳುವವರು ಬಹಳ. ಆದರೆ ನಿರ್ಲಕ್ಷಿಸಿದಷ್ಟೂ ಅವರ ಕತ್ತಿ ಇನ್ನೂ ತೀಕ್ಷ್ಣವಾಗುತ್ತಾ ಹೋಗುತ್ತದೆ.
ಆದ್ದರಿಂದ ಇಂತಹ ಜನರನ್ನು ಗಮನಿಸಿ ನೇರ ಮಾತಿನಲ್ಲಿ ಕೇಳಿ ತಿಳಿ ಹೇಳಿ ಅರ್ಥ ಮಾಡಿಸಲು ಪ್ರಯತ್ನಿಸುವುದು. ಇಲ್ಲವಾದರೆ ಇಂತಹವರನ್ನು ಭಾವನಾತ್ಮಕ ಹಾಗು ಸ್ನೇಹ ವಲಯದಿಂದ ಹೊರಗಿಡುವುದು ಒಳ್ಳೆಯದು.
ಡಾ ರೂಪಾ ರಾವ್
ಮನ:ಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ
ಬೆಂಗಳೂರು ವಾಸಿಯಾಗಿರುವ ಇವರು ಮನಃಶಾಸ್ತ್ರದಲ್ಲಿ ಹಾಗೂ ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ಸಂಪರ್ಕ ಸಂಖ್ಯೆ: 97408 66990
ಇದನ್ನೂ ಓದಿ- ಮಕ್ಕಳಿಗೂ ತಿಳಿಯಲಿ ನೋವು, ನಿರಾಸೆ, ಕಾದು ಪಡೆವ ಆನಂದ