“ಸಮಾಜವನ್ನು ಮುನ್ನಡೆಸಬೇಕಾದ ಸರ್ಕಾರ, ಅದರ ಭಾಗವಾಗಿರುವ ರಾಜಕೀಯ ಪಕ್ಷಗಳು, ಅದರ ನಾಯಕರು ಮಹಿಳಾ ವಿರೋಧಿ ನಡವಳಿಕೆ ತೋರಿದಾಗ ಯಾವುದೇ ರಿಯಾಯಿತಿಯಿಲ್ಲದ ಕಠಿಣವಾದ ಕ್ರಮ ಜರುಗಬೇಕು. ಇಡೀ ಸಮಾಜ ಸ್ತ್ರೀದ್ವೇಷದ ಮನಸ್ಥಿತಿಯಿಂದ ಹೊರಬರಬೇಕು, ಇದು ಕೆಲವರ ಕೆಲಸವಾಗದೆ ಎಲ್ಲರ ಕೆಲಸವಾಗಬೇಕು– ಮಲ್ಲಿಗೆ ಸಿರಿಮನೆ, ಸಾಮಾಜಿಕ ಕಾರ್ಯಕರ್ತೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ವಿಧಾನ ಪರಿಷತ್ ಸದಸ್ಯ ಮತ್ತು ಬಿಜೆಪಿಯ ದೊಡ್ಡ ಹುದ್ದೆಗಳನ್ನು ʼಅಲಂಕರಿಸಿದ್ದʼ ಹಿರಿಯ ನಾಯಕ ಸಿ.ಟಿ ರವಿ ʼprostitute’ (ವೇ…) ಎಂದು ಕರೆದು ತನ್ನ ಹೀನ ಮನಸ್ಥಿತಿಯ ಪ್ರದರ್ಶನ ಮಾಡಿ ಜೈಲು ಸೇರಿದ್ದಾರೆ. ಈ ವ್ಯಕ್ತಿ ಹೀಗೆ ಹೆಣ್ಣುಮಕ್ಕಳನ್ನು ಮುಂದಿಟ್ಟು ಬೈಯುವ ಘಟನೆ ಇದೇ ಮೊದಲ ಬಾರಿ ನಡೆದಿರುವುದಲ್ಲ ಅಥವಾ ಸರ್ಕಾರ ನಡೆಸುವ ಮಂತ್ರಿಗಳು ಮಾತ್ರವಲ್ಲ ಮುಖ್ಯಮಂತ್ರಿಗಳನ್ನೇ ಅವಹೇಳನಕಾರಿಯಾಗಿ ಲೇವಡಿ ಮಾಡುವ ಚಾಳಿ ಈತನ ರಾಜಕೀಯ ಬಂಧುಗಳಿಗಿರುವುದು ತಿಳಿಯದ ಸಂಗತಿಯೇನೂ ಅಲ್ಲ… ಸ್ವಲ್ಪ ಸಮಯದ ಹಿಂದೆ ಸಿ.ಟಿ ರವಿ ತನ್ನ ಪಕ್ಷದಿಂದ ಪಕ್ಷಾಂತರ ಮಾಡಿದ ಶಾಸಕನನ್ನು ಟೀಕಿಸುವುದಕ್ಕೆ ; ನಿತ್ಯ ಸುಮಂಗಲಿʼ ಎಂಬ ಪದ ಬಳಸಿದ್ದು ಮರೆತಿಲ್ಲ. ಹಾಗೆಯೇ ಈಗ ಮತ್ತೊಮ್ಮೆ ದೇಶದ ಪ್ರಧಾನಿಯಾದ ದೊಡ್ಡ ಹುದ್ದೆಯಲ್ಲಿರುವ ಇವರದ್ದೇ ಪಕ್ಷದ ವ್ಯಕ್ತಿ ಕಳೆದ ಅವಧಿಯಲ್ಲಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪಕ್ಷದ ಪರ ಪ್ರಚಾರ ಮಾಡುತ್ತಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ʼಓ ದೀದ್ದೀ ಓ ದೀದ್ದೀʼ ಎಂದು ಹಿಂದಿ ಹಾಡೊಂದರ ಸಾಲಿನಿಂದ ಅವಹೇಳನ ಮಾಡಿದ್ದು ಕೂಡಾ ನಮಗೆ ನೆನಪಿದೆ.
2019 ರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ನಾಯಕ ವಿನಯ್ ಕಟಿಯಾರ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಗುರಿಯಾಗಿಸಿ ʼ ಸೋನಿಯಾ ಗಾಂಧಿಯವರು ರಾಹುಲ್ ಗಾಂಧಿಗೆ ಪುರಾವೆ ಕೊಡಬಲ್ಲರೇ ಅವರ ತಂದೆ ರಾಜೀವ್ ಗಾಂಧಿಯೇ ಹೌದು ಎಂದುʼ ಎಂಬ ಅತ್ಯಂತ ತುಚ್ಛವಾದ ಮಾತುಗಳನ್ನಾಡಿದ್ದರು!
ಮಧ್ಯಪ್ರದೇಶದ ಬದೌನ್‌ನಲ್ಲಿ ಇಬ್ಬರು ದಲಿತ ಹೆಣ್ಣುಮಕ್ಕಳ ಅತ್ಯಾಚಾರ ನಡೆದು ಆ ಬಗ್ಗೆ ದೊಡ್ಡ ಆತಂಕ ವ್ಯಕ್ತವಾಗುತ್ತಿದ್ದರೆ, ರಾಜ್ಯದ ಗೃಹ ಸಚಿವ ಬಾಬುಲಾಲ್ ಗೌರ್ ʼಈ ಕ್ರಿಯೆ ಸಾಮಾಜಿಕ ಅಪರಾಧ ಹೌದೋ ಅಲ್ಲವೋ ಎಂಬುದು ಹೆಣ್ಣು ಮತ್ತು ಗಂಡಿಗೆ ಬಿಟ್ಟ ವಿಚಾರ, ಕೆಲವೊಮ್ಮೆ ಅದು ಅಪರಾಧ ಕೆಲವೊಮ್ಮೆ ಅಲ್ಲʼ ಎಂದು ಅತ್ಯಂತ ನಿರ್ಲಕ್ಷ್ಯದ ಉತ್ತರ ನೀಡಿದ್ದರು. ಹರ್ಯಾಣದ ಮುಖ್ಯಮಂತ್ರಿಯಾಗಿದ್ದ ಖಟ್ಟರ್ ʼಮಹಿಳೆಯರು ಸರಿಯಾಗಿ ಬಟ್ಟೆ ಧರಿಸದಿದ್ದರೆ ಖಾಪ್ ಪಂಚಾಯ್ತಿಗಳು ಬಟ್ಟೆ ಧರಿಸುವುದನ್ನು ಕಲಿಸುತ್ತವೆʼ ಎಂದು ಅತ್ಯಂತ ಸೆಕ್ಸಿಸ್ಟ್ ಹೇಳಿಕೆ ನೀಡಿದ್ದರು. ಇಂತಹ ಘಟನೆಗಳು ಒಂದೇ ಎರಡೇ, ಗೋವಾದ ಮುಖ್ಯಮಂತ್ರಿ, ಛತ್ತೀಸ್‌ಗಢದ ಹಿರಿಯ ಬಿಜೆಪಿ ನಾಯಕ, ಕರ್ನಾಟಕದ ಬಿಜೆಪಿಯ ಮೈತ್ರಿಪಕ್ಷ ಜೆಡಿಎಸ್‌ನ ನಾಯಕ ಕುಮಾರಸ್ವಾಮಿ (ಶಕ್ತಿ ಯೋಜನೆಯ ಉಚಿತ ಬಸ್ ಬಂದ ಮೇಲೆ ಹೆಣ್ಣುಮಕ್ಕಳು ಹಾದಿ ತಪ್ಪಿದ್ದಾರೆ ಎಂದದ್ದು)….ಕೊನೆ ಮೊದಲಿಲ್ಲದೆ ಈ ಪಟ್ಟಿ ಬೆಳೆಯುತ್ತದೆ.
ಮಹಿಳೆಯರು ಎಂತಹ ಸಾಧನೆ ಮಾಡಿ ಯಾವ ಸ್ಥಾನಕ್ಕೆ ಹೋದರೂ ಅವರನ್ನು ಅವಹೇಳನ ಮಾಡುವ ಮನಸ್ಥಿತಿ ಸದಾ ಚಾಲ್ತಿಯಲ್ಲಿದ್ದೇ ಇರುತ್ತದೆ, ಕೆಲವೊಮ್ಮೆ ಪಕ್ಷಬೇಧವಿಲ್ಲದೆ ಎಲ್ಲ ಪಕ್ಷಗಳ ರಾಜಕಾರಣಿಗಳೂ, ಉನ್ನತ ಹುದ್ದೆಗಳಲ್ಲಿರುವವರಲ್ಲಿ ಅನೇಕರು ಹೀಗೆ ನಡೆದುಕೊಳ್ಳುವುದು ಸಮಾಜಕ್ಕೊಂದು ಕೆಟ್ಟ ಮಾದರಿಯಾಗಿದೆ.
ಎಂತಹ ಸ್ಥಾನಕ್ಕೇರಿದರೂ ಮಹಿಳೆ ಕೊನೆಗೆ ʼಮಹಿಳೆʼಯೇ!
ಇದೇ ವರ್ಷದ ಫೆಬ್ರವರಿಯಲ್ಲಿ ಭಾರತದ ಹೆಮ್ಮೆಯ ಚೆಸ್ ಆಟಗಾರ್ತಿ ಇಂಟರ್ ನ್ಯಾಷನಲ್ ಮಾಸ್ಟರ್ (ಚೆಸ್‍ನಲ್ಲಿ ಎರಡನೇ ಅತಿದೊಡ್ಡ ಪದವಿ) ಆದ ದಿವ್ಯಾ ದೇಶಮುಖ್ ಅವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಆಟವನ್ನು ನೋಡುವ ನೋಡುಗರು ತಮ್ಮ ಪ್ರಾವೀಣ್ಯತೆ ಅಥವಾ ಆಟದ ಶೈಲಿಗಿಂತ ಹೆಚ್ಚು ತಾನು ಮಹಿಳೆ ಎಂಬ ಕಾರಣ ಇಟ್ಟುಕೊಂಡು ಕಮೆಂಟ್ ಮಾಡುವುದು ತನಗೆ ನೋವು ತಂದಿದೆ, ಇದು ಮಹಿಳಾ ಕ್ರೀಡಾಪಟುಗಳ ಕುರಿತ ಪೂರ್ವಾಗ್ರಹ ಎಂದು ನೋವು ತೋಡಿಕೊಂಡಿದ್ದರು.
ಟ್ವಿಟರ್‌ನಲ್ಲಿ 2018ರಿಂದ 2021ರ ನಡುವೆ ಪೋಸ್ಟ್ ಮಾಡಲಾದ 30 ಮಿಲಿಯನ್ random post ಸಂಗ್ರಹಿಸಿ ‘ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್‍ಫಾರ್‌ಮೇಶನ್’ ನಡೆಸಿದ ಒಂದು ಅಧ್ಯಯನ ಈ ಅಂಶಗಳನ್ನು ತೋರಿಸುತ್ತದೆ.
• ಆನ್‍ಲೈನ್ ಹಿಂಸೆಯ ಪಟ್ಟಿಯಲ್ಲಿ ಅತ್ಯಂತ ಸಾಧಾರಣವಾಗಿ ಹೆಚ್ಚಿನ ಪೋಸ್ಟ್‌ಗಳಲ್ಲಿ ಕಾಣಿಸಿಕೊಳ್ಳುವಂಥದ್ದು ಮಹಿಳೆಯರನ್ನು ಹೀಗಳೆಯುವ ಅಥವಾ ವ್ಯಕ್ತಿಗತ ದಾಳಿಗೆ ಗುರಿಪಡಿಸುವಂಥದ್ದಾಗಿವೆ.
• ಇವುಗಳಿಂದಾಗಿ ಅನೇಕ ಹೆಣ್ಣುಮಕ್ಕಳು ತಾವು ಆನ್‍ಲೈನ್ ಪ್ಲಾಟ್‍ಫಾರ್ಮ್‍ಗಳಿಂದ ಹೊರಹೋಗಬೇಕಾಯಿತು ಎಂಬುದನ್ನು ಹೇಳಿಕೊಂಡಿದ್ದಾರೆ.
• ಇನ್ನೂ ಹಲವರು ಖಿನ್ನತೆ, ಆತಂಕದಂತಹ ಮಾನಸಿಕ ಸಮಸ್ಯೆಗಳಿಗೆ ತುತ್ತಾಗಿದ್ದನ್ನು ದಾಖಲಿಸಿದ್ದಾರೆ.
• ಮಹಿಳೆಯರನ್ನು ಗುರಿಪಡಿಸುವ ಪೋಸ್ಟ್‌ಗಳು ಎಲ್ಲ ಮಹಿಳೆಯರನ್ನು ಸಾಮಾನ್ಯವಾಗಿ ದಾಳಿಗೊಳಪಡಿಸಿದರೂ, ಯುವತಿಯರನ್ನು ಅಥವಾ ಅಂಚಿಗೊತ್ತಲ್ಪಟ್ಟ ಸಮುದಾಯಗಳಿಗೆ ಸೇರಿದವರನ್ನು ಹೆಚ್ಚಾಗಿ ಗುರಿಪಡಿಸುವುದನ್ನು ಕಾಣಬಹುದು.
ಇಂತಹ ಇನ್ನೂ ಹಲವು ಕಥೆಗಳನ್ನು ಹೇಳಬಹುದು, ಕೇಳಬಹುದು, ಆದರೆ ಇಲ್ಲಿರುವ ಮುಖ್ಯವಾದ ಪ್ರಶ್ನೆಯೆಂದರೆ ಇವು ಯಾಕೆ ಹೀಗೆ ನಡೆಯುತ್ತವೆ?
ಮಹಿಳೆಯರೆಂದರೆ ಹೀಗೆಯೇ ಇರಬೇಕು, ಇದನ್ನೇ ಮಾಡಬೇಕು ಮತ್ತು ಇದನ್ನೆಲ್ಲ ಮಾಡಬಾರದು, ಮಹಿಳೆಯರ ಬಗ್ಗೆ ಪುರುಷರು ಹೇಗೆ ಬೇಕಾದರೂ ಮಾತಾಡಬಹುದು, ನಡೆದುಕೊಳ್ಳಬಹುದು, ಅದೆಲ್ಲವನ್ನೂ ಮಹಿಳೆಯರು ಸಹಿಸಿಕೊಳ್ಳಬೇಕು ಯಾಕೆಂದರೆ ಅವರು ಮಹಿಳೆಯರು’- ಈ ಬಗೆಯ ಬಲವಾದ ತಪ್ಪಾದ ಮೌಲ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡ ವ್ಯಕ್ತಿಗಳು ಅದನ್ನು ಇಂತಹ ಯಾವುದೋ ಒಂದು ರೀತಿಯಲ್ಲಿ ತೋರಿಸುತ್ತಾರೆ. ಇದನ್ನು ‘ಮಿಸೋಜನಿ’ ಅಥವಾ ಮಹಿಳೆಯರ ವಿರುದ್ಧದ ಮನಸ್ಥಿತಿ ಎನ್ನುತ್ತೇವೆ.
ಮಿಸೋಜನಿ ಎಂಬ ಇಂಗ್ಲೀಷ್ ಪದದ ಸರಿಯಾದ ಕನ್ನಡ ಅನುವಾದ ಹುಡುಕಿದರೆ ಡಿಕ್ಷನರಿಯಲ್ಲಿ ಸಿಗವ ಪದ ʼಸ್ತ್ರೀದ್ವೇಷʼ ಅಂತ.
ಮಹಿಳಾ ವಿರೋಧಿ ಮನಸ್ಥಿತಿಯು ಬಹಳ ನಿರುಪದ್ರವಿ ಎಂದು ಮೇಲ್ನೋಟಕ್ಕೆ ಕಾಣುವಂತಹ ಮಹಿಳೆಯರನ್ನು ಲೇವಡಿ ಮಾಡುವಂತಹ ಜೋಕ್‌ಗಳು, ವ್ಯಂಗ್ಯ ಕುಹಕಗಳು, ಗಾದೆಗಳು, ಸಿನೆಮಾ ಹಾಡುಗಳು ಅಥವಾ ನೇರವಾಗಿ ಮಹಿಳೆಯರಿಗೆ ಅಪಾಯ ಉಂಟುಮಾಡುವಂಥವಲ್ಲ ಎಂಬಂತೆ ಕಾಣುವ ಆನ್‍ಲೈನ್ ಕಮೆಂಟ್‍ಗಳು, ರೀಲ್‌ಗಳ ರೂಪದಲ್ಲಿ ಕಾಣಬಹುದು; ಆದರೆ ಇದು ಇಷ್ಟಕ್ಕೆ ಮಾತ್ರ ನಿಲ್ಲದಿರಲೂ ಬಹುದು! ಈ ಮನಸ್ಥಿತಿಯು ಬಹಳ ಅಪಾಯಕಾರಿಯಾದ ರೀತಿಗಳಲ್ಲಿ- ಮಹಿಳೆಯರನ್ನು ಹಿಂಬಾಲಿಸುವುದು, ಅವರ ಮೇಲೆ ಕೆಟ್ಟಮಾತುಗಳಿಂದ ದಾಳಿಮಾಡುವುದರಿಂದ ಹಿಡಿದು ದೈಹಿಕವಾದ ಮಾರಣಾಂತಿಕ ಹಲ್ಲೆಗಳ ತನಕ, ಬಹಳ ಭೀಕರವಾದ ಕೊಲೆಗಳು- ಸಾಮೂಹಿಕ ಕೊಲೆಗಳತನಕ ಹಲವು ರೀತಿಗಳಲ್ಲಿ ಕೂಡಾ ಕಾಣಬರುತ್ತಿದೆ.
ಕ್ಷಮೆಯಿರಲಿ ಸಹೋದರಿಯರೇ…
‘ಭಾರತದಲ್ಲಿ ಪ್ರತಿ ಘಂಟೆಗೆ 26 ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ಪ್ರತಿ ಎರಡು ನಿಮಿಷಕ್ಕೊಂದು ಘಟನೆ!’
‘ದೆಹಲಿಯಲ್ಲಿ ಎರಡು ವರ್ಷಗಳಿಂದ ಜೊತೆಗಾತಿಯಾಗಿದ್ದ ಗೆಳತಿಯನ್ನು ಕೊಲೆಮಾಡಿ 35 ತುಂಡುಗಳಾಗಿ ಕತ್ತರಿಸಿ ಎಸೆದು, ಆರು ತಿಂಗಳು ಯಾರಿಗೂ ಸುದ್ದಿ ಗೊತ್ತಾಗದಂತೆ ತಪ್ಪಿಸಿಕೊಂಡಿದ್ದ ಆರೋಪಿ’
‘ಮಣಿಪುರದಲ್ಲಿ ಇಬ್ಬರು ಬುಡಕಟ್ಟು ಹೆಣ್ಣುಮಕ್ಕಳನ್ನು ಬೆತ್ತಲುಗೊಳಿಸಿ ಮೆರವಣಿಗೆ; ಸಾಮೂಹಿಕ ಲೈಂಗಿಕ ಹಿಂಸಾಚಾರ’
‘ಉತ್ತರ ಪ್ರದೇಶದ ಹತ್ರಾಸ್- 19 ವರ್ಷದ ದಲಿತ ಹೆಣ್ಣುಮಗಳ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ; ಎರಡು ವಾರಗಳ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟ ಸಂತ್ರಸ್ತೆ, ಶವವನ್ನು ಕುಟುಂಬಕ್ಕೂ ನೀಡದೆ ತರಾತುರಿಯಲ್ಲಿ ದಹನ ಮಾಡಿದ ಪೋಲೀಸರು’
‘ಪಶ್ಚಿಮ ಬಂಗಾಳದ ಆರ್‍ಜಿ ಕಾರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಮೇಲೆ ಕೆಲಸದ ಅವಧಿಯಲ್ಲೇ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗುತ್ತದೆ’
‘ಕರ್ನಾಟಕದ ಕೊಪ್ಪಳ ಜಿಲ್ಲೆಯ ಮರಿಯಮ್ಮ ಎಂಬ ಅಂತರ್ಜಾತಿ ವಿವಾಹವಾಗಿದ್ದ ದಲಿತ ಯುವತಿ ಗಂಡಮತ್ತು ಆತನ ಕುಟುಂಬದ ಅಸ್ಪೃಶ್ಯತೆ ಆಚರಣೆಯ ಕಾರಣದಿಂದ ಮತ್ತು ಹಿಂಸೆಯ ಕಾರಣದಿಂದ ಸಾವುʼ
‘ತೋಟದ ಮನೆಯೊಂದರಲ್ಲಿ 900ಕ್ಕೂ ಹೆಚ್ಚು ಹೆಣ್ಣು ಭ್ರೂಣಹತ್ಯೆ ಪ್ರಕರಣಗಳು, ಪಾಂಡವಪುರದಲ್ಲಿ ಕಾನೂನು ಬಾಹಿರವಾಗಿ ಲಿಂಗಪತ್ತೆಯಲ್ಲಿ ತೊಡಗಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಬಂಧನ’
ಉತ್ತರ ಪ್ರದೇಶದ ಸಂಸದನಾಗಿದ್ದ ಮತ್ತು ಕುಸ್ತಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದ ಬ್ರಿಜ್‍ಭೂಷಣ್ ಸಿಂಗ್‍ನ ವಿರುದ್ಧ ಭಾರತದ ಹೆಮ್ಮೆಯ ಮಹಿಳಾ ಕುಸ್ತಿಪಟುಗಳು ಲೈಂಗಿಕ ಹಿಂಸಾಚಾರದ ಆರೋಪ ಹೊರಿಸಿ ತಿಂಗಳುಗಟ್ಟಲೆ ಹೋರಾಡಿದರೂ ಏನೂ ಕ್ರಮ ಜರುಗಿಸಲಾಗುವುದಿಲ್ಲ; ಆತನ ಮಗನಿಗೆ ಆ ನಂತರ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸುವ ಅವಕಾಶ ನೀಡಲಾಗುತ್ತದೆ.’
‘ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಂದ ಹತ್ತಾರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ಹಿಂಸಾಚಾರ ಮತ್ತು ಅದರ ವಿಡಿಯೋ ಚಿತ್ರೀಕರಣ’
ಇವೆಲ್ಲ ಸ್ತ್ರೀದ್ವೇಷವು ಅತ್ಯಂತ ಕಡುಕ್ರೂರ ರೂಪ ಪಡೆದಾಗ ಸಂಭವಿಸಿದ ಘೋರ ಪ್ರಕರಣಗಳ ಕೆಲವೇ ಉದಾಹರಣೆಗಳು!
36 ವರ್ಷಗಳ ಕಾಲ ನೊಂದ ಮಹಿಳೆಯರೊಂದಿಗೆ ಕೆಲಸ ಮಾಡುತ್ತಾ ಬಂದಿರುವ ಡೋನಾ ಜಾನ್‍ಸನ್ ಎಂಬ ಮಹಿಳೆ ಹೇಳುತ್ತಾರೆ “ಈ ಎಲ್ಲ ವರ್ಷಗಳನ್ನು ನಾನು ಹೇಗೆ ಕಳೆದೆ ಎಂದು ಕೆಲವೊಮ್ಮೆ ಯೋಚಿಸುತ್ತೇನೆ, ಈ ವರ್ಷಗಳನ್ನು ನಾನು ಕ್ಷಮೆ ಕೇಳುತ್ತಲೇ ಕಳೆದಿದ್ದೇನೆ ಅನಿಸುತ್ತದೆ….. ತಮ್ಮ ಬಾಲ್ಯವನ್ನು ಮುಗ್ಧವಾಗಿ ನಿರಾತಂಕವಾಗಿ ಕಳೆಯಲು ಸಾಧ್ಯವಾಗದ ಲೈಂಗಿಕ ದೌರ್ಜನ್ಯಕ್ಕೊಳಗಾದ ಪುಟ್ಟಹೆಣ್ಣುಮಕ್ಕಳ ಕ್ಷಮೆ ಕೇಳುತ್ತಾ; ಪ್ರತಿದಿನ ಕೆಲಸದ ಸ್ಥಳಗಳಲ್ಲಿ, ಕಾಲೇಜುಗಳಲ್ಲಿ, ಮನೆಗಳಲ್ಲಿ ಅತ್ಯಾಚಾರಕ್ಕೊಳಗಾಗುತ್ತಾ, ಸಾಕ್ಷಿ ಇಲ್ಲವೆಂಬ ಕಾರಣಕ್ಕೆ ಅಪರಾಧಿಗಳ ಬಿಡುಗಡೆಯಾಗುವುದನ್ನು ನೋಡುವ ಬಲಿಪಶುಗಳ ಕ್ಷಮೆ ಕೋರುತ್ತಾ, ಇಡೀ ದಿನ ಮನೆಯ ಹೊರಗೂ ಒಳಗೂ ಯಂತ್ರಗಳಂತೆ ಎಲ್ಲರಿಗಾಗಿ ದುಡಿಯುತ್ತಾ ಅದರ ಹೊರತಾಗಿ ತಮಗೊಂದು ಬದುಕಿದೆ ಎಂಬುದನ್ನೇ ಮರೆತಿರುವ ಅಸಂಖ್ಯಾತ ಹೆಣ್ಣುಮಕ್ಕಳ ಕ್ಷಮೆ ಕೋರುತ್ತಾ….. ವಿವಾಹ ವಿಚ್ಛೇದನದ ಸಂದರ್ಭದಲ್ಲಿ ತಾಯಿಯೊಬ್ಬಳು ಮಕ್ಕಳಿಗೆ ಉತ್ತಮ ಪೋಷಕಳಾಗಬಲ್ಲಳು ಎಂಬುದನ್ನು ಒಪ್ಪಲಾಗದ ಕೋರ್ಟುಗಳ ಕಾರಣಕ್ಕೆ ತಮ್ಮ ಕರುಳಿನ ಕುಡಿಗಳನ್ನು ಹೊಡೆಯುವ ಬಡಿಯುವ ಮಾಜಿ ಗಂಡನ ಕೈಗೆ ಒಪ್ಪಿಸಿ ಬರುವ ತಾಯಂದಿರ ಸಂಕಟದ ಎದುರು ಕ್ಷಮೆ ಕೋರುತ್ತಾ… ಅಥವಾ ಸಮಾಜ ಏನನ್ನುತ್ತದೋ ಎಂದು ಬೆದರಿ ಕ್ರೌರ್ಯದಿಂದ ತುಂಬಿದ್ದ ಮದುವೆಯಿಂದ ಹೊರಬರುವ ಧೈರ್ಯವನ್ನೂ ಮಾಡಲಾಗದೆ ಕೊನೆಗೆ ಅದರಲ್ಲೇ ಕೊಲೆಯಾಗುವ ಎಲ್ಲ ಹೆಣ್ಣುಮಕ್ಕಳ ಕ್ಷಮೆ ಕೋರುತ್ತಾ… ಈ ಸ್ತ್ರೀದ್ವೇಷವನ್ನು ನಮ್ಮಿಂದ ಕೊನೆಗಾಣಿಸಲಾಗಲಿಲ್ಲವೆಂದು ಇವರೆಲ್ಲರ ಕ್ಷಮೆ ಕೋರುತ್ತಲೇ ನನ್ನ ಬದುಕನ್ನು ಕಳೆದೆನೆನಿಸುತ್ತದೆ”!ಡೋನಾ ಅವರ ಈ ಮಾತುಗಳು ಸ್ತ್ರೀದ್ವೇಷದ ಆಳ-ಅಗಲಗಳನ್ನು ಸೂಚಿಸುತ್ತವೆ ಮತ್ತು ನಡುಕ ಹುಟ್ಟಿಸುತ್ತವೆ
“ನಾವು ಲಿಂಗಸಮಾನತೆಯ ಚಪ್ಪಲಿಗಳನ್ನು ಧರಿಸುತ್ತೇವೆ ಮತ್ತು ಅವುಗಳನ್ನು ಮನೆಯ ಬಾಗಿಲಿನಲ್ಲಿ ಬಿಟ್ಟು ಒಳಬರುತ್ತೇವೆ”- ಈ ಹೇಳಿಕೆಯನ್ನು ‘ದ ಗ್ರೇಟ್ ಇಂಡಿಯನ್ ಕಿಚನ್’ ಸಿನೆಮಾದ ಬಗ್ಗೆ ಮಾತಾಡುವಾಗ ಕೇರಳದ ಕ್ರೈಸ್ಟ್ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕಿ ಪ್ರೊ. ಕ್ಲಿಂಟಾ ಅವರು ಉಲ್ಲೇಖಿಸಿದ್ದಾರೆ. ಈ ಹೇಳಿಕೆಯು ಸಾರ್ಜನಿಕವಾಗಿ ಮಾತ್ರವಲ್ಲದೆ ಖಾಸಗಿ ಬದುಕಿನ ಎಲ್ಲ ಪದರುಗಳಲ್ಲೂ ಆಳವಾಗಿ ಹೊಕ್ಕಿರುವ ಲಿಂಗ ಅಸೂಕ್ಷ್ಮತೆ ಮತ್ತು ಲಿಂಗದೌರ್ಜನ್ಯವನ್ನು ಸೂಚ್ಯವಾಗಿ ಮುಂದಿಡುತ್ತದೆ.
ಸಿ.ಟಿ ರವಿ ಪ್ರಕರಣದಲ್ಲಿ ಅವರ ಪಕ್ಷವು ಘಟನೆಯ ಕುರಿತು ಕ್ಷಮೆ ಕೇಳುವ ಬದಲು ತಪ್ಪು ಮಾಡಿ ಬಂಧನಕ್ಕೊಳಗಾದವರ ಪರವಾಗಿ ಹೋರಾಟ ನಡೆಸುತ್ತಿದೆ. ಹೀಗೆಯೇ ಜಮ್ಮು-ಕಾಶ್ಮೀರದ ಕಥುವಾದಲ್ಲಿ 6 ವರ್ಷದ ಹಿಂದೆ 8 ವರ್ಷದ ಪುಟ್ಟ ಬಾಲಕಿಯನ್ನು ಒಂದು ವಾರ ದೇವಾಲಯದಲ್ಲಿ ಕೂಡಿಟ್ಟು ಸತತವಾಗಿ ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣದ ಆರೋಪಿಗಳ ಪರವಾಗಿ ನಡೆದ ಮೆರವಣಿಗೆಯಲ್ಲಿ ಅಲ್ಲಿನ ಬಿಜೆಪಿ ಮಂತ್ರಿಗಳಿಬ್ಬರು ಬಹಿರಂಗವಾಗಿ ಭಾಗವಹಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದನ್ನು ಜಂಗಲ್ ರಾಜ್ ಎಂದು ಕರೆದಿದ್ದರು! ಬಿಲ್ಕೀಸ್ ಬಾನೋ ಪ್ರಕರಣದ ಅಪರಾಧಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಿದ್ದನ್ನು ಇದೇ ಪಕ್ಷ ಸ್ವಾಗತಿಸಿದ್ದು ಮಾತ್ರವಲ್ಲ, ಆರೋಪಿಯೊಬ್ಬನ ಮಗಳಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಸಹ ನೀಡಿತು!
ಇಂತಹ ಘಟನೆಗಳನ್ನು ಹಗುರವಾಗಿ ಪರಿಗಣಿಸದೆ ಗಂಭೀರವಾಗಿ ನಿಯಂತ್ರಿಸುವ ಮತ್ತು ತಿದ್ದುವ ಕೆಲಸ ನಡೆಯದಿರುವುದರಿಂದ ಇಂದು ಇವು ಸಣ್ಣಗಲ್ಲಿಗಳಿಂದ ಹಿಡಿದು ಸಂಸತ್ತಿನವರೆಗೆ ಇಡೀ ಸಮಾಜವನ್ನು ಆವರಿಸಿಕೊಂಡಿವೆ!
ಮಹಿಳೆಯರ ಮತ್ತು ಹೆಣ್ಣುಮಕ್ಕಳ ಮೇಲಿನ ಮೌಖಿಕವಾದ ದಾಳಿಗಳು ಅಥವಾ ದೈಹಿಕ ದೌರ್ಜನ್ಯಗಳು ಖಾಯಿಲೆಯೊಂದರ ಗುಣಲಕ್ಷಣಗಳು (ಸಿಂಪ್ಟಮ್ಸ್). ಆದರೆ, ಆ ಖಾಯಿಲೆ ನಮ್ಮ ಸಮಾಜದಲ್ಲಿ ಮತ್ತು ಮನಸ್ಸುಗಳ ಆಳದಲ್ಲಿ ಹುದುಗಿರುವ ಲಿಂಗತಾರತಮ್ಯ ಮತ್ತು ಲಿಂಗದ್ವೇಷವೇ ಆಗಿದೆ.
ಈ ರೋಗವು ಗುಣವಾಗಬೇಕೆಂದು ನಾವು ಬಯಸುತ್ತೇವೆ ನಿಜ. ಆದರೆ ಬಯಸಿದ ಮಾತ್ರದಿಂದಷ್ಟೇ ಅದು ಗುಣವಾಗದು…ಅದಕ್ಕೆ ಬಹಳ ಬಲವಾದ ಇಚ್ಛಾಶಕ್ತಿ ಮತ್ತು ಕ್ರಿಯಾಶೀಲತೆ ಬೇಕಿದೆ, ನಮ್ಮಲ್ಲಿ ಪ್ರತಿಯೊಬ್ಬರ ಮನದೊಳಗೆ, ಮನೆಯೊಳಗೆ, ನೆರೆಹೊರೆಯೊಳಗೆ, ಸಮುದಾಯದೊಳಗೆ, ಧರ್ಮದೊಳಗೆ, ಸಾಮಾಜಿಕ ಸಂಸ್ಥೆಗಳೊಳಗೆ, ಆಡಳಿತದೊಳಗೆ, ಸರ್ಕಾರದ ನೀತಿಗಳೊಳಗೆ- ಎಲ್ಲೆಡೆ ನಾವು ತರುವ ಬದಲಾವಣೆಯಿಂದ ಮಾತ್ರ ನಿಜವಾಗಿ ಇದನ್ನು ಗುಣಪಡಿಸಬಹುದು.
ಮುಖ್ಯವಾಗಿ ಸಮಾಜವನ್ನು ಮುನ್ನಡೆಸಬೇಕಾದ ಸರ್ಕಾರ, ಅದರ ಭಾಗವಾಗಿರುವ ರಾಜಕೀಯ ಪಕ್ಷಗಳು, ಅದರ ನಾಯಕರು ಈ ಬಗೆಯ ನಡವಳಿಕೆ ತೋರಿದಾಗ ಯಾವುದೇ ರಿಯಾಯಿತಿಯಿಲ್ಲದ ಕಠಿಣವಾದ ಕ್ರಮ ಜರುಗಬೇಕು. ಇಡೀ ಸಮಾಜ ಸ್ತ್ರೀದ್ವೇಷದ ಮನಸ್ಥಿತಿಯಿಂದ ಹೊರಬರಬೇಕು, ಇದು ಕೆಲವರ ಕೆಲಸವಾಗದೆ ಎಲ್ಲರ ಕೆಲಸವಾಗಬೇಕು.
ಮಲ್ಲಿಗೆ ಸಿರಿಮನೆ
ಸಾಮಾಜಿಕ ಕಾರ್ಯಕರ್ತೆ
ಇದನ್ನೂ ಓದಿ- ಸಚಿವೆಯ ಚಾರಿತ್ರ್ಯಹರಣ; ನಿಂದಕನ ಬಂಧನಕ್ಕೆ ಸಂವಿಧಾನ ಕಾರಣ