5 ಗಂಟೆಗಳಲ್ಲಿ ಸಂಚಾರಿ ಪೊಲೀಸರು ದಾಖಲಿಸಿದ ಪ್ರಕರಣಗಳೆಷ್ಟು? ಸಂಗ್ರಹಿಸಿದ ದಂಡವೆಷ್ಟು? ಇಲ್ಲಿದೆ ಮಾಹಿತಿ

Most read

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರು ನಗರದಾದ್ಯಂತ ಸಂಚಾರ ನಿಯಮಗಳ ಉಲ್ಲಂಘನೆ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಶನಿವಾರ ನಡೆಸಿದ ಈ ವಿಶೇಷ ಕಾರ್ಯಾಚರಣೆಯಲ್ಲಿ ಕೇವಲ 5 ಗಂಟೆಗಳಲ್ಲಿ 7.62 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ. ಶನಿವಾರ ಬೆಳಗ್ಗೆ 11ರಿಂದ ಸಂಜೆ 4 ಗಂಟೆವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಅಕ್ರಮ ಪಾರ್ಕಿಂಗ್, ನೋ ಎಂಟ್ರಿ ಉಲ್ಲಂಘನೆ, ಪಾದಾಚಾರಿ ರಸ್ತೆ ಮೇಲೆ ವಾಹನ ಸವಾರಿ ಮತ್ತು ಒನ್ ವೇ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಒಟ್ಟು 1,507 ಪ್ರಕರಣಗಳನ್ನು ದಾಖಲಿಸಿ, 7.62 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ.
ಒಟ್ಟು ಪ್ರಕರಣಗಳ ಪೈಕಿ 722 ನೋ ಎಂಟ್ರಿ ಮತ್ತು 590 ಒನ್ ವೇ ಉಲ್ಲಂಘನೆ ಪ್ರಕರಣಗಳಿದ್ದವು. ಅಕ್ರಮ ಪಾರ್ಕಿಂಗ್ (127 ಪ್ರಕರಣಗಳು), ಫುಟ್ ಪಾತ್ ರೈಡಿಂಗ್ ಸಂಬಂಧ 68 ಪ್ರಕರಣಗಳು ದಾಖಲಾಗಿವೆ.

ಸಂಚಾರ ನಿಯಮಗಳನ್ನು ಕುರಿತೂ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಂಚಾರಿ ಪೊಲೀಸರು ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಮ ಜಾಗೃತಿ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಮತ್ತು ವಿವಿಧ ಸ್ಥಳಗಳಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

“ಒಂದು ‘ಕ್ಷಿಪ್ರ ಕರೆ’ ನಿಮ್ಮ ಕೊನೆಯ ತಪ್ಪಾಗಲು ಬಿಡಬೇಡಿ. ನಿಮ್ಮ ಜೀವನ ಮತ್ತು ಇತರರದ್ದು ಸಹ—ಅಪಾಯದಲ್ಲಿದೆ ಎಂಬ ಅರಿವಿರಲಿ. ಈಗ ವಾಹನ ಚಲಾಯಿಸಿ, ನಂತರ ಕರೆ ಮಾಡಿ.” ಎಂದು ವಾಹನ ಚಾಲನೆ ವೇಳೆ ಮೊಬೈಲ್ ಬಳಸುವವರನ್ನು ಟ್ರಾಫಿಕ್ ಪೊಲೀಸರು ಎಚ್ಚರಿಸಿದ್ದಾರೆ.

More articles

Latest article