ನವದೆಹಲಿ: ಯಾವುದೇ ಪಕ್ಷ ಚುನಾವಣೆಗೂ ಮುನ್ನ ಪ್ರಕಟಿಸುವ ಚುನಾವಣಾ ಪ್ರಣಾಳಿಕೆಯಲ್ಲಿರುವ ಘೋಷಣೆಗಳು ಚುನಾವಣಾ ಅಕ್ರಮ ಹೇಗಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
2023ರ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿದ್ದರಿಂದ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿ ಕೆ.ಶಂಕರ್ ಎಂಬವರು ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ರಾ ಅವರ ದ್ವಿಸದಸ್ಯ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿಚಾರಣೆಯ ಆರಂಭದಲ್ಲೇ ಈ ಅರ್ಜಿ ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿಗಳು ಪ್ರಕಟಿಸಿದರು.
ಆಗ ಅರ್ಜಿದಾರರ ಪರ ವಕೀಲರು, ಚುನಾವಣೆಗೆ ಮುನ್ನ ನೀಡಿದ ಭರವಸೆಗಳು ಚುನಾವಣಾ ಅಕ್ರಮವಾಗುತ್ತದೆಯೇ ಎಂಬ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ . ಇಂತಹುದೇ ಮತ್ತೊಂದು ಪ್ರಕರಣದಲ್ಲಿ ಪ್ರತಿವಾದಿಗಳಿಗೆ ನ್ಯಾಯಪೀಠ ನೋಟಿಸ್ ನೀಡಿದೆ ಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದರು. ಆಗ ನ್ಯಾಯಪೀಠವು, ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿಗೊಳಿಸಲು ಸೂಚಿಸಿತು.
ಹೈಕೋರ್ಟ್ ನಲ್ಲಿಯೂ ಸಿಎಂ ಸಿದ್ದರಾಮಯ್ಯ ಅವರು ಚುನಾವಣಾ ಅಕ್ರಮ ನಡೆಸಿ ಗೆಲುವು ಸಾಧಿಸಿದ್ದಾರೆ. ಆದ್ದರಿಂದ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು.

