ಮೋದಿಯ ಖಾಲಿ ಚೊಂಬು ದೇವೇಗೌಡರಿಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದ್ದು ಹೇಗೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

Most read

ಬಂಗಾರಪೇಟೆ (ಕೋಲಾರ): ಚಿಕ್ಕಬಳ್ಳಾಪುರದಲ್ಲಿ ಹಾಲಿ ಪ್ರಧಾನಿ ಮೋದಿ,ಮಾಜಿ ಪ್ರಧಾನಿ ದೇವೇಗೌಡರು ಒಟ್ಟಾಗಿ ಜಿಲ್ಲೆಯ ಜನತೆಗೆ ಜೋಡಿ ಸುಳ್ಳುಗಳನ್ನು ಹೇಳಿ ಹೋಗಿದ್ದಾರೆ‌. ಮೋದಿ ಕೊಟ್ಟ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಎಂದು ದೇವೇಗೌಡರು ರೈಲು ಬಿಟ್ಟಿದ್ದಾರೆ. ಖಾಲಿ ಚೊಂಬು ನಿಮ್ಮ ಕಣ್ಣಿಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದರೆ ರಾಜ್ಯದ ಪಾಲಿನ ತೆರಿಗೆ ಹಣ ವಾಪಾಸ್ ಯಾಕೆ ಬರಲಿಲ್ಲ? ಬರಗಾಲದ ಅನುದಾನ ಏಕೆ ಬರಲಿಲ್ಲ? ಪ್ರವಾಹದ ವೇಳೆ ರಾಜ್ಯದ ಅನುದಾನ ಏಕೆ ಬರಲಿಲ್ಲ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

ಮೋದಿಯವರ ಚೊಂಬು ನಿಮಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದ್ರೆ, ರಾಜ್ಯದ ರೈತರ ಸಾಲ ಏಕೆ ಮನ್ನಾ ಮಾಡುತ್ತಿಲ್ಲ? ಮೋದಿಯವರ ಚೊಂಬು ನಿಮಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದ್ರೆ, ಮೋದಿಯವರೇಕೆ ರಾಜ್ಯದ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುತ್ತಿಲ್ಲ? ಮೋದಿಯವರ ಚೊಂಬು ಅತ್ಯಂತ ಶ್ರೀಮಂತರ, ಉದ್ಯಮಿಗಳ ಲಕ್ಷ ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಇದು ಅತೀ ಶ್ರೀಮಂತರ ಅಕ್ಷಯ ಪಾತ್ರೆ. ಭಾರತೀಯರ ಪಾಲಿಗೆ, ನಾಡಿನ ಜನರ ಪಾಲಿಗೆ ಖಾಲಿ ಚೊಂಬು ಅಷ್ಟೆ ಅಲ್ವಾ ದೇವೇಗೌಡರೇ ಎಂದು ಬಂಗಾರಪೇಟೆಯಲ್ಲಿ ನಡೆದ ಬೃಹತ್ ರೋಡ್ ಶೋ ಸಂದರ್ಭದಲ್ಲಿ ಅವರು ಕಿಡಿಕಾರಿದರು.

ಹದಿನೈದನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಮಾಡಿದ ಮೋಸವನ್ನು ಮೋದಿಯವರ ಖಾಲಿ ಚೊಂಬು ಸಾಕ್ಷಿಯಾಗಿದೆ. ದೇವೇಗೌಡರೇ ಈ ಚೊಂಬು ನಿಮ್ಮ ಕಣ್ಣಿಗೆ ಅಕ್ಷಯ ಪಾತ್ರೆಯಾಗಿದ್ದರೆ 15 ನೇ ಹಣಕಾಸು ಆಯೋಗದಲ್ಲಿ‌ ಆಗಿರುವ ನಷ್ಟ, ಅನ್ಯಾಯವನ್ನು ತುಂಬಿ ಕೊಡಿಸಿ. ಅಕ್ಷಯ ಪಾತ್ರೆಯಿಂದ ಉದುರಿಸಿ ನೋಡೋಣ ಎಂದು ಸವಾಲು ಹಾಕಿದರು.

ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಎಂದಿದ್ದ ದೇವೇಗೌಡರು, ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುವುದಾಗಿ ಘೋಷಿಸಿದ್ದ ದೇವೇಗೌಡರು ಈಗ ಮೋದಿ ಮತ್ತು ತಾವು ಭಾಯಿ ಭಾಯಿ ಎನ್ನುತ್ತಿದ್ದಾರೆ. ಈಗ ಇದೇ ದೇವೇಗೌಡರು ಮೋದಿಯವರ ಖಾಲಿ ಚೊಂಬನ್ನು ಅಕ್ಷಯ ಪಾತ್ರೆ ಎನ್ನುತ್ತಿದ್ದಾರೆ. ಆದ್ದರಿಂದ ಕೋಲಾರದಲ್ಲಿ ದೇವೇಗೌಡರು ಮತ್ತು ಮೋದಿಯವರ ಖಾಲಿ ಚೊಂಬನ್ನು ಸೋಲಿಸಿ ನಮ್ಮ ಗ್ಯಾರಂಟಿಗಳಿಗೆ ಆಶೀರ್ವದಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಗೌತಮ್ ಗೆಲುವು ನಿಶ್ಚಿತವಾಗಿದೆ. ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಬಹುಮತ ನೀಡಿ ಶಾಸಕ ನಾರಾಯಣಸ್ವಾಮಿಯವರಿಗೆ ಹೆಚ್ಚಿನ ಶಕ್ತಿ ನೀಡಿ ಎಂದು ಅವರು ಮನವಿ ಮಾಡಿದರು.

ರೋಡ್ ಶೋ ನಲ್ಲಿ ಚೊಂಬಿನ ಸದ್ದು

ಬಂಗಾರಪೇಟೆಯಲ್ಲಿ ಸಾರ್ವಜನಿಕ ರೋಡ್ ಶೋ ನಲ್ಲಿ ಕೇಂದ್ರ ಸರ್ಕಾರದ ಖಾಲಿ ಚೊಂಬು ಜೋರು ಸದ್ದು ಮಾಡಿತು.

ಮುಖ್ಯಮಂತ್ರಿಗಳು ಸಾರ್ವಜನಿಕರಿಗೆ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಜನತೆ ಚೊಂಬು ಚೊಂಬು ಎಂದು ಕೂಗಿದರು.

ಮೋದಿಯವರು ನಿಮ್ಮ ಅಕೌಂಟಿಗೆ 15 ಲಕ್ಷ ಹಾಕ್ತೀನಿ ಎಂದಿದ್ದರಲ್ಲಾ , ಎಷ್ಟು ಹಣ ಬಂತು ಎಂದು ಕೇಳಿದರು. ಜನತೆ ಚೊಂಬು ಎಂದು ಕೂಗಿದರು.

ಮೋದಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಎಂದಿದ್ದರಲ್ಲಾ , ಎಷ್ಟು ಜನರಿಗೆ ನೇಮಕಾತಿ ಆದೇಶ ಬಂತು ಎಂದು ಕೇಳಿದರು. ಜನತೆ ಚೊಂಬು ಎಂದು ಕೂಗಿದರು

ಮೋದಿಯವರು ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದರಲ್ಲಾ , ಎಷ್ಟು ರೈತರಿಗೆ ದುಪ್ಪಟ್ಟು ಹಣ ಬಂತು ಎಂದು ಕೇಳಿದರು. ಜನತೆ ಚೊಂಬು ಎಂದು ಕೂಗಿದರು.

More articles

Latest article