ಕೋಲಾರ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೋಲಾರ ನಗರಕ್ಕೆ ಭೇಟಿ ನೀಡಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಹಿನ್ನೆಲೆಯಲ್ಲಿ ಭಾರಿ ಬಂದೋಬಸ್ತ್ ಕಲ್ಪಿಸಲಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ ಪಿ, ಸಿಪಿಐಗಳು ಹಾಗೂ ನೂರಾರು ಪೊಲೀಸರನ್ನು ಸಚಿವರ ಭದ್ರತೆಗೆ ನಿಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಹನಿಟ್ರ್ಯಾಪ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಜಣ್ಣ, ಎಲ್ಲವನ್ನೂ ವಿಧಾನಸಭೆ ಅಧಿವೇಶನದಲ್ಲಿ ವಿವರವಾಗಿ ಹೇಳಿದ್ದೇನೆ. ಅದನ್ನು ಬಿಟ್ಟು ಹೇಳುವಂತಹುದ್ದು ಏನೂ ಇಲ್ಲ. ಇಂತಹ ಪ್ರಕರಣ ಇದೇ ಮೊದಲೂ ಅಲ್ಲ; ಕೊನೆಯೂ ಅಲ್ಲ. ಮುಂದೆಯೂ ನಡೆಯುತ್ತಿರುತ್ತವೆ ಎಂದಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಪ್ರತಿಪಕ್ಷಗಳ ಗದ್ದಲ ಹಾಗೂ ಸದನದಿಂದ 18 ಶಾಸಕರ ಅಮಾನತು ಕುರಿತು ಅವರು ಪ್ರತಿಕ್ರಿಯೆ ನೀಡಿದರು. ಈ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಪ್ಪು ಚುಕ್ಕೆ. ಜನಪರವಾದ ವಿಚಾರದಲ್ಲಿ ಗಲಾಟೆ ನಡೆದಿದ್ದರೆ ಒಪ್ಪಿಕೊಳ್ಳಬಹುದಾಗಿತು. ಬಜೆಟ್ ಮೇಲಿನ ಉತ್ತರಕ್ಕೆ ಅಡ್ಡಿಪಡಿಸಿದ್ದಾರೆ. ಇದೊಂದು ಪೂರ್ವಯೋಜಿತ ಪಿತೂರಿ. ನಾನೇನಾದರೂ ಸ್ಪೀಕರ್ ಆಗಿದ್ದರೆ ಮೊದಲೇ ಅಮಾನತುಗೊಳಿಸುತ್ತಿದ್ದೆ ಎಂದು ಹೇಳಿದರು.
ರಾಜ್ಯ ಬಂದ್ ಬಗೆಗಿನ ಪ್ರಶ್ನೆಗೆ, ಬೆಂಗಳೂರಿನಲ್ಲಿ ಬಂದ್ ಮಾಡಿದರೆ ಬೆಳಗಾವಿಯಲ್ಲಿರುವ ಕನ್ನಡಿಗರಿಗೆ ರಕ್ಷಣೆ ಸಿಗುತ್ತದೆಯೇ ಎಂದು ಮರುಪ್ರಶ್ನೆ ಹಾಕಿದರು.