ಹನಿಟ್ರ್ಯಾಪ್‌ ಬೀಸುವವವರಿಗೆ ಕಠಿಣ ಶಿಕ್ಷೆಯಾಗಬೇಕು: ಸಚಿವ ಮಹದೇವಪ್ಪ

Most read

ಮೈಸೂರು: ದೇಶದಲ್ಲಿ ಹನಿಟ್ರ್ಯಾಪ್‌ ಗೆ ಸಿಲುಕಿಸುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂಥ ಕಾನೂನು ರೂಪಿಸುವ ಅವಶ್ಯಕತೆ ಇದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಷ್ಟೇ ಅಲ್ಲ. ಎಲ್ಲಾ ಕ್ಷೇತ್ರಗಳಲ್ಲೂ  ಹನಿಟ್ರ್ಯಾಪ್‌  ಬಲೆಬೀಸುವುದು ಹೆಚ್ಚಾಗುತ್ತಿದೆ. ಖಾಸಗಿ ಕ್ಷಣಗಳನ್ನು ಬಹಿರಂಗಗೊಳಿಸಿ ವ್ಯಕ್ತಿತ್ವ ಹರಣ ಮಾಡುವ ಸಂಚು ಇದಾಗಿದ್ದು, ಇದಕ್ಕ ತಕ್ಕೆ ಶಿಕ್ಷೆಯಾಗಬೇಕು. ಇದಕ್ಕಾಗಿ ಸದೃಢವಾದ ಕಾನೂನು ಜಾರಿಗೊಳಿಸಬೇಕು ಎನ್ನುವುದು ನನ್ನ ಒತ್ತಾಯವಾಗಿದೆ ಎಂದರು.

ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಹನಿಟ್ರ್ಯಾಪ್‌ ಗೆ ಸಿಲುಕಿಸಲು ಯತ್ನಿಸಿರುವ ಬಗ್ಗೆ ಉನ್ನತಮಟ್ಟದ ತನಿಖೆ ಆಗುತ್ತದೆ. ಯಾರು ಆ ಕೃತ್ಯ ಮಾಡಿದರು ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕು. ಊಹಾಪೋಹದ ಮಾತುಗಳು ಬೇಡ ಎಂದು ಪ್ರತಿಕ್ರಿಯಿಸಿದರು

ನೀವು ಹಲೋ ಎಂದರೆ ಅವರೂ ಹಲೋ ಎನ್ನುತ್ತಾರೆ’ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅದೆಲ್ಲಾ ನನಗೆ ಗೊತ್ತಾಗುವುದಿಲ್ಲ. ನಾನು ಎಲ್ಲರಿಗೂ ಹಲೋ ಎನ್ನುತ್ತೇನೆ. ಎಲ್ಲರೂ ನನಗೆ ಹಲೋ ಎಂದೇ ಪ್ರತಿಕ್ರಿಯಿಸುತ್ತಾರೆ. ಅದರಿಂದ ಹನಿಟ್ರ್ಯಾಪ್‌ ಆಗಲಿದೆ ಎನ್ನುವುದು ಹೇಗೆ ಎಂದರು. ಸಿಎಂ ಸಿದ್ದರಾಮಯ್ಯ ಪರವಾಗಿ ನಾವು ಮಾತನಾಡಿದರೆ, ಸಣ್ಣ ಮನಸ್ಸಿನ ಕೆಲವರಿಗೆ ಹೊಟ್ಟೆ ಕಿಚ್ಚು ಆಗಬಹುದು. ಆದರೆ, ಅದೇ ಕಾರಣಕ್ಕಾಗಿಯೇ ರಾಜಕೀಯವಾಗಿ ಟಾರ್ಗೆಟ್ ಆಗುತ್ತೇವೆ ಎಂಬುದನ್ನು ಒಪ್ಪುವುದಿಲ್ಲ. ಹನಿಟ್ರ್ಯಾಪ್‌ ಬೀಸುವವರಿಗೆ ಪರ– ವಿರುದ್ಧ ಎಂಬುದು ಯಾವುದೂ ಇರುವುದಿಲ್ಲ. ಇಂತಹ ಪ್ರಕರಣಗಳಿಂದಾಗಿ, ರಾಜಣ್ಣ ಅವರ ಆಕ್ರಮಣಕಾರಿ ಗುಣವೇನೂ ಕಡಿಮೆ ಆಗುವುದಿಲ್ಲ ಎಂದರು.

ಡಿಕೆ ಶಿವಕುಮಾರ್‌  ಮಾಡಿಸಿದ್ದಾರೆ ಎಂಬ ಪ್ರಶ್ನೆಗೆ, ಸುಮ್ಮನೆ ಏನು ಬೇಕಾದರೂ ಹೇಳಿದರೆ ನಡೆಯುವುದಿಲ್ಲ. ನಾಳೆ ಮಹದೇವಪ್ಪ ಮಾಡಿಸಿದ್ದು ಎನ್ನುತ್ತಾರೆ, ಅದಕ್ಕೆ ಅರ್ಥ ಇದೆಯೇ? ರಾಜಣ್ಣ ಯಾರ ಹೆಸರನ್ನಾದರೂ ಹೇಳಿದ್ದಾರಾ? ತನಿಖೆಯಾಗಲಿ, ಯಾರೇ ಇದ್ದರೂ ತಕ್ಕ ಶಿಕ್ಷೆಯಾಗಲಿ. ಸಿದ್ದರಾಮಯ್ಯ ಅವರ ಆರೋಗ್ಯ ರಾಜಕೀಯ ಆರೋಗ್ಯ ಬಹಳ ಚೆನ್ನಾಗಿದೆ. ನಮ್ಮ ಸರ್ಕಾರದ ಅವಧಿ ಇನ್ನೂ ಮೂರು ವರ್ಷ ಇದೆ. ಅವರೇ ವಿತ್ತ ಸಚಿವ ಆಗಿರುವ ಕಾರಣದಿಂದ ಮುಂದಿನ 3 ಬಜೆಟ್‌ಗಳನ್ನೂ ಅವರೇ ಮಂಡಿಸುತ್ತಾರೆ. ಇದರಲ್ಲಿ ಯಾರಿಗೂ ಅನುಮಾನ ಬೇಡ. ಬಿಜೆಪಿಯವರು ಸಿ.ಎಂ ಬದಲಾವಣೆ ಬಗ್ಗೆ ಸುಮ್ಮನೆ ಮಾತನಾಡುತ್ತಾರೆ. ಮೊದಲು ಅವರ ಪಕ್ಷವನ್ನು ಶಿಸ್ತಾಗಿ ಇಟ್ಟುಕೊಳ್ಳಲಿ. ನಮ್ಮ ಬಗ್ಗೆ ಅವರಿಗೇಕೆ ಚಿಂತೆ’ ಎಂದರು.

More articles

Latest article