ಮೈಸೂರು : ಯಕ್ಷಗಾನ ಕಲಾವಿದರಲ್ಲಿ ಸಲಿಂಗಕಾಮಿಗಳಿದ್ದಾರೆ ಎಂಬ ತಮ್ಮ ಹೇಳಿಕೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಕ್ಷಮೆ ಯಾಚಿಸಿದ್ದಾರೆ.
ಯಕ್ಷಗಾನ ಕಲಾವಿದರನ್ನು ಅವಮಾನಿಸುವ ಉದ್ದೇಶ ನನಗೆ ಇರಲಿಲ್ಲ. ನಾನು ಯಕ್ಷಗಾನ ಕಲಾವಿದರನ್ನು ಕುರಿತು ಯಾವುದೇ ಕೀಳು ಭಾವನೆ ಹೊಂದಿಲ್ಲ. ಯಕ್ಷಗಾನ ಕಲಾವಿದರ ಬದುಕು ಹಸನಾಗಬೇಕು ಎಂಬುದಷ್ಟೇ ನನ್ನ ಉದ್ಧೇಶವಾಗಿತ್ತು. ಯಕ್ಷಗಾನದಲ್ಲಿ ಈಗ ಸಲಿಂಗಕಾಮ ಇಲ್ಲ. 60-70 ರ ದಶಕದಲ್ಲಿತ್ತು. ನಾನು ವಿದ್ಯಾರ್ಥಿಯಾಗಿದ್ದಾಗ ನೋಡಿದ್ದನ್ನು ಹೇಳಿದ್ದೇನೆಯೇ ಹೊರತು. ಯಾರನ್ನೂ ನೋಯಿಸುವ ಉದ್ದೇಶದಿಂದ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿಡಿಲ್ಲ. ಆದರೂ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ. ಎಂದು ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ನಡೆದ ‘ಧರೆಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು’ ಹಾಗೂ ‘ನಾವು ಕೂಗುವ ಕೂಗು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಅವರು ಯಕ್ಷಗಾನ ಕಲಾವಿದರಲ್ಲಿ ಸಲಿಂಗಿಗಳು ಇರುತ್ತಿದ್ದರು. ಅಲ್ಲಿ ಆಗ ಅಂತಹ ಅನಿವಾರ್ಯತೆ ಇತ್ತು ಎಂದು ಹೇಳಿದ್ದರು.
ಸ್ತ್ರೀ ವೇಷದ ಕಲಾವಿದರು ಸಲಿಂಗಕಾಮವನ್ನು ನಿರಾಕರಿಸಿದರೆ, ಮರು ದಿನ ಭಾಗವತರು ಅವರಿಗೆ ಪದ್ಯವನ್ನೇ ನೀಡುತ್ತಿರಲಿಲ್ಲ. ಮುಂದಿನ ವರ್ಷ ಅವಕಾಶವೂ ಸಿಗುತ್ತಿರಲಿಲ್ಲ. ವೇದಿಕೆಯ ಮೇಲೆ ಅವನ ವಿರುದ್ಧ ಸೇಡು ತೀರಿಸಿಕೊಳ್ಳಲಾಗುತ್ತಿತ್ತು. ಮೇಳದಲ್ಲಿ ಅವಕಾಶ ಇಲ್ಲದೆ ಹೋದಲ್ಲಿ ಬದುಕು ವ್ಯರ್ಥ ಎಂಬ ಒತ್ತಡದಲ್ಲಿ ಕಲಾವಿದರು ಇರುತ್ತಿದ್ದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಕಲಾವಿದರು ಮೇಳಗಳಲ್ಲಿ ಭಾಗವಹಿಸಲು ಏಳೆಂಟು ತಿಂಗಳು ತಿರುಗಾಟದಲ್ಲೇ ಇರುತ್ತಿದ್ದರು. ಮದುವೆಯಾಗಲು ಅವರಿಗೆ ಹೆಣ್ಣು ಕೊಡಲು ಮುಂದೆ ಬರುತ್ತಿರಲಿಲ್ಲ. ಅಲ್ಲಿನ ಸ್ತ್ರೀ ವೇಷಧಾರಿಗಳೂ ಒತ್ತಡದಲ್ಲಿರುತ್ತಿದ್ದರು. ಅವರ ಮೇಲೆ ಇತರರಿಗೆ ಮೋಹ ಹುಟ್ಟುತ್ತಿತ್ತು ಎಂದು ಮಾತನಾಡಿದ್ದರು. ಈಗ ನಾವು ಸಲಿಂಗಕಾಮ ಕುರಿತು ಮಾತನಾಡುತ್ತೇವೆ, ಕೇಳುತ್ತೇವೆ. ಬಹಳ ಹಿಂದೆ ಅಂತಹ ಮುಕ್ತ ವಾತಾವರಣ ಇರಲಿಲ್ಲ. ಯಕ್ಷಗಾನದಲ್ಲಿ ಸ್ತ್ರೀ ವೇಷಧಾರಿಗಳ ಮೇಲೆ ಒತ್ತಡ ಇರುತ್ತಿತ್ತು. ನಾವು ಚಿಕ್ಕವರಿದ್ದಾಗ ನಮ್ಮ ಫಸ್ಟ್ ಕ್ರಶ್ ಸ್ತ್ರೀ ವೇಷಧಾರಿಗಳ ಮೇಲೆ ಆಗಿರುತ್ತಿತ್ತು. ಅವರು ರಂಗದ ಮೇಲೆ ಬಂದು ಕುಣಿದರೆ ನೋಡಲು ಆನಂದವಾಗುತ್ತಿತ್ತು. ಈಗ ಸಿನಿಮಾ ನಟ, ನಟಿಯರ ಮೇಲೆ ಕ್ರಷ್ ಹುಟ್ಟುತ್ತದೆ ಎಂದಿದ್ದರು.
ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿ ವಿವಾದ ಹುಟ್ಟುಹಾಕಿತ್ತು. ಬಿಳಿಮಲೆ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ವಿವಾದಕ್ಕೆ ತೆರೆ ಎಳೆದಿದ್ದಾರೆ.

