ಬೆಂಗಳೂರು: ಮನೆ ಬಾಗಿಲಿಗೆ ಆಗಮಿಸಿ ಆರೋಗ್ಯ ತಪಾಸಣೆ ನಡೆಸಿ ಮಾತ್ರೆಗಳನ್ನು ವಿತರಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಆರೋಗ್ಯ ಯೋಜನೆಗೆ ಇಂದು ಸಂಜೆ ಚಾಲನೆ ನೀಡಲಾಗುತ್ತದೆ.
ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆಗೆ ‘ಗೃಹ ಆರೋಗ್ಯ’ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಕೋಲಾರ ಜಿಲ್ಲೆಯಿಂದ ಯೋಜನೆ ಆರಂಭವಾಗಿ, ಜನವರಿ ತಿಂಗಳಿನಲ್ಲಿ ರಾಜ್ಯಾದ್ಯಂತ ಯೋಜನೆ ಜಾರಿಗೆ ಬರಲಿದೆ.
ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಗ್ರಾಮೀಣ ಪ್ರದೇಶಗಳ ಮನೆ ಮನೆಗೆ ತೆರಳಿ ಜನರ ರಕ್ತದೊತ್ತಡ, ಮಧುಮೇಹ, ಸ್ತನ ಕ್ಯಾನ್ಸರ್, ಬಾಯಿ, ಗರ್ಭಕಂಠದ ತಪಾಸಣೆ ನಡೆಸಲಿದ್ದಾರೆ. ರೋಗದಿಂದ ಬಳಲುತ್ತಿದ್ದರೆ ಸೂಕ್ತ ಔಷಧಿಗಳನ್ನು ನೀಡಲಾಗುತ್ತದೆ.
ಸಾಂಕ್ರಾಮಿಕವಲ್ಲದ ರೋಗಗಳನ್ನು ಹತೋಟಿಗೆ ತರುವುದು ಗೃಹ ಆರೋಗ್ಯ ಯೋಜನೆಯ ಮುಖ್ಯ ಗುರಿಯಾಗಿದೆ. ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಗ್ರಾಮೀಣ ಪ್ರದೇಶಗಳ ಮನೆ ಮನೆಗೆ ತೆರಳಿ 30 ವರ್ಷ ಮೇಲ್ಪಟ್ಟವರ ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸಲಿದ್ದಾರೆ. ರೋಗಕ್ಕೆ ತುತ್ತಾದವರಿಗೆ ಸೂಕ್ತ ಔಷಧಿಗಳನ್ನು ತಲುಪಿಸಲಾಗುತ್ತದೆ. ಇವರು ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರದಂದು ದಿನಕ್ಕೆ 15 ಮನೆಗಳಂತೆ ಭೇಟಿ ನೀಡಿ ತಪಾಸಣೆ ಕಾರ್ಯ ನಡೆಸಲಿದ್ದಾರೆ.