ತುಮಕೂರು : ನಗರದಲ್ಲಿ ಇದೇ ಭಾನುವಾರ (05-01-2025) ದಂದು ನಾಡೋಜ ಪ್ರೊ. ಬರಗೂರು ಸ್ನೇಹ ಬಳಗದವರು “ಬರಗೂರು ಮೀಮಾಂಸೆ ಮತ್ತು ಬರಗೂರರಿಗೆ ತವರು ಜಿಲ್ಲೆಯ ಗೌರವ” ಎಂಬ ಕಾರ್ಯಕ್ರಮವನ್ನು ಜಿಲ್ಲಾ ಗ್ರಂಥಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವು ಬೆಳಗ್ಗೆ 10:15 ರಿಂದ ಸಾಯಂಕಾಲ 6:30 ರವರೆಗೆ ನಡೆಯಲಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ನೆರವೇರಿಸಲಿದ್ದು, ದಿಕ್ಸೂಚಿ ನುಡಿಗಳನ್ನು ಡಾ. ಅರುಣ ಜೋಳದ ಕೂಡ್ಲಿಗಿ ಅವರು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೊರೈರಾಜ್ ಅವರು ನಿರ್ವಹಿಸುತ್ತಿದ್ದು, ವಿಶೇಷ ಉಪಸ್ಥಿತಿಯಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಸಚಿವರು ನಾಹೀದ ಜಮ್ ಜಮ್ ಹಾಗೂ ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ಅವರು ಇರಲಿದ್ದಾರೆ.
ಕಾರ್ಯಕ್ರಮವು ಎರಡು ಗೋಷ್ಠಿಯನ್ನು ಒಳಗೊಂಡಿದ್ದು, ಮೊದಲ ಗೋಷ್ಠಿಯಲ್ಲಿ ಬರಗೂರು ಸಾಹಿತ್ಯದಲ್ಲಿ ಸಾಮಾಜಿಕ – ಆರ್ಥಿಕ ಮೀಮಾಂಸೆಯ ಕುರಿತು ಡಾ.ಕಿರಣ್ ಗಾಜನೂರು ಹಾಗೂ ಬರಗೂರು ಸಾಹಿತ್ಯದಲ್ಲಿ ಮಹಿಳಾ ಮೀಮಾಂಸೆಯ ಕುರಿತು ಡಾ.ಪುಷ್ಪ ಭಾರತಿ ಮಾತನಾಡಲಿದ್ದಾರೆ. ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ಪತ್ರಕರ್ತರಾದ ಗಂಗಾಧರ ಮೊದಲಿಯಾರ್ ಅವರು ನಿರ್ವಹಿಸುತ್ತಿದ್ದಾರೆ.
ಎರಡನೇ ಗೋಷ್ಠಿಯಲ್ಲಿ “ಕವಿತೆಯಲ್ಲಿ ಕಂಡ ಬರಗೂರು” ಎಂಬ ವಿಷಯದ ಕುರಿತು ಆಶಯ ನುಡಿಯನ್ನು ಡಾ.ಮುಮ್ತಾಜ್ ಬೇಗಂ ಹಾಗೂ ಅಧ್ಯಕ್ಷತೆಯನ್ನು ಬಾ.ಹ.ರಮಾಕುಮಾರಿ ನಿರ್ವಹಿಸುತ್ತಿದ್ದಾರೆ. ಜೊತೆಗೆ ಬರಗೂರರನ್ನು ಕುರಿತ ಸ್ವರಚಿತ ಕವಿತೆಗಳ ವಾಚನವನ್ನು ಖ್ಯಾತ ಸಾಹಿತಿಗಳಾದ ಕೆ. ಷರೀಫಾ, ಶೈಲಾ ನಾಗರಾಜ, ಅನಸೂಯ ಕಾಂಬ್ಳೆ, ಪಿ ಆರ್ ವೆಂಕಟೇಶ್, ಗೀತಾ ವಸಂತ, ಅನ್ನಪೂರ್ಣ ಪದ್ಮಸಾಲಿ, ಟಿ ಎಲ್ಲಪ್ಪ, ವಿಜಯಲಕ್ಷ್ಮಿ ಕೊಟಗಿ, ಅನಿತ ಮಂಗಲ, ಮಮತಾ ಅರಸೀಕೆರೆ, ಸಿದ್ಧರಾಮ ಹೊನ್ಕಲ್, ಬಿದಲೋಟಿ ರಂಗನಾಥ್, ಮಾರುತಿ ಗೋಪಿಕುಂಟೆ, ಶಿವಣ್ಣ ಹೆಂದೊರೆ, ಓ ನಾಗರಾಜ್, ಸತ್ಯಮಂಗಲ ಮಹಾದೇವ, ಸೋಮಶೇಖರ್ ಕದಿರೇಹಳ್ಳಿ ವಾಚನ ಮಾಡಲಿದ್ದಾರೆ.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಮತ್ತು ಸಹಕಾರ ಖಾತೆ ಸಚಿವರಾದ ಕೆ.ಎನ್.ರಾಜಣ್ಣ ಭಾಗವಹಿಸಲಿದ್ದಾರೆ. ವಿಶೇಷ ಉಪಸ್ಥಿತಿಯಲ್ಲಿ ಪ್ರಜಾಪ್ರಗತಿ ಸಂಪಾದಕರಾದ ನಾಗಣ್ಣ ಹಾಗೂ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸಿದ್ದಲಿಂಗಪ್ಪ ಜೊತೆಗೆ ಶುಭಹಾರೈಕೆ ನುಡಿಗಳನ್ನು ತುಮಕೂರು ಜಿಲ್ಲಾಧಿಕಾರಿಗಳಾದ ಶುಭಾ ಕಲ್ಯಾಣ್ ಭಾಗಿಯಾಗಲಿದ್ದಾರೆ.