ಮೈಸೂರು: ಕುಂಭಮೇಳದಲ್ಲಿ ಯಾರಿಗೆ ನಂಬಿಕೆ ಇರುತ್ತದೆಯೋ ಅವರು ಅಲ್ಲಿಗೆ ಹೋಗಿ ಪುಣ್ಯಸ್ನಾನ ಮಾಡುತ್ತಾರೆ, ನಂಬಿಕೆ ಇಲ್ಲದವರು ಹೋಗುವುದಿಲ್ಲ. ನಂಬಿಕೆ ಎನ್ನುವುದು ವೈಯಕ್ತಿಕ ವಿಷಯವಾಗಿದ್ದು, ಯಾರ ಮೇಲೂ ನಮ್ಮ ಅಭಿಪ್ರಾಯವನ್ನು ಹೇರಲಾಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಂಭಮೇಳದಲ್ಲಿ ಸ್ನಾನ ಮಾಡಿದರೆ ಬಡತನ ನೀಗಲ್ಲ ಎಂದಿದ್ದಾರೆ, ಅದು ಅವರ ಅಭಿಪ್ರಾಯ ಮತ್ತು ಎಲ್ಲರೂ ಅದನ್ನು ಗೌರವಿಸಬೇಕು. ಹಾಗೆಯೇ ಕೋಟಿ ಕೋಟಿ ಹಿಂದೂಗಳು ತಮಗೆ ಒಳ್ಳೆಯದಾಗುತ್ತದೆ ಎಂದು ಭಾವಿಸಿ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ, ಅವರ ಭಾವನೆಗಳನ್ನೂ ನಾವು ಗೌರವಿಸಬೇಕು ಎಂದು ಯತೀಂದ್ರ ಹೇಳಿದರು.
ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ಈಗಾಗಲೇ ಅನೇಕ ಸೈಟ್ಗಳನ್ನು ಜಪ್ತಿ ಮಾಡಿದೆ. ಇದೀಗ ಸಿಎಂ ಸಿದ್ದರಾಮಯ್ಯರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಇಡಿ ಈ ರೀತಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಮುಡಾ ನಮ್ಮ ಜಮೀನನ್ನು ಅನಧಿಕೃತವಾಗಿ ವಶಪಡಿಸಿಕೊಂಡಿತ್ತು. ಅದಕ್ಕೆ ಬದಲಿಯಾಗಿ ನಮಗೆ ನಿವೇಶನ ಕೊಟ್ಟಿದ್ದರು. ಭೂಸ್ವಾಧಿನಪಡಿಸಿಕೊಂಡ ಭೂಮಿಯನ್ನು ರೈತರಿಗೆ ನಿವೇಶನ ರೂಪದಲ್ಲಿ ಕೊಟ್ಟಿದ್ದಾರೆ. ಮುಡಾ ಸದಸ್ಯರು ಇದರಲ್ಲಿ ಭಾಗಿಯಾಗಿದ್ದಾರೆ. ಇದಕ್ಕೂ ನಮ್ಮ 14 ನಿವೇಶನಗಳಿಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.