ಹೆಚ್ಎಂಪಿ ವೈರಸ್ ಆತಂಕ ಬೇಡ; ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

Most read

ಬೆಂಗಳೂರು: ಕೋವಿಡ್-19 ಹೊಡೆತದಿಂದ ಆರ್ಥಿಕವಾಗಿ ತತ್ತರಿಸುವ ಜನರು ಇನ್ನೂ ಚೇತರಿಸಿಕೊಳ್ಳುತ್ತಲೇ ಇದ್ದಾರೆ. ವಾಸ್ತವ ಪರಿಸ್ಥಿತಿ ಹೀಗಿರುವಾಗಲೇ ಚೀನಾದಲ್ಲಿ ಮತ್ತೊಂದು ವೈರಸ್ ತಾಂಡವವಾಡುತ್ತಿದೆ ಎಂಬ ಮಾಹಿತಿ ಕರ್ನಾಟಕ ಸೇರಿದಂತೆ ಇಡೀ ದೇಶವನ್ನು ಬೆಚ್ಚಿ ಬೀಳುವಂತೆ ಮಾಡಿದೆ.  ಹೀಗಿರುವಾಗ ಬೆಂಗಳೂರಿನಲ್ಲೂ ಹೆಚ್​​ಎಂಪಿ ವೈರಸ್ ಪತ್ತೆಯಾಗಿದ್ದು, ಬೆಂಗಳೂರಿನ ನಾಗರೀಕರು ಆತಂಕಕ್ಕೀಡಾಗಿದ್ದಾರೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಸಭೆ ನಡೆಸಿದ  ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹೆಚ್ಎಂಪಿ ವೈರಸ್ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ, ಆದರೆ ಮುಂಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಆರೋಗ್ಯಸೌಧದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಹೆಚ್​​ಎಂಪಿ ವೈರಸ್​  ಹೊಸದೇನಲ್ಲ. ಬಹಳ ವರ್ಷಗಳಿಂದ ಹೆಚ್​​ಎಂಪಿ ವೈರಸ್ ಜಗತ್ತಿನಾದ್ಯಂತ ಇದೆ. ಹೆಚ್​​ಎಂಪಿ ವೈರಸ್​​ನಿಂದ ಜೀವಕ್ಕೆ ಯಾವುದೇ ಅಪಾಯ ಇಲ್ಲ ಎಂದು ತಿಳಿಸಿದ್ದಾರೆ. ಚೀನಾದಲ್ಲಿ ಮ್ಯೂಟೆಟ್​ ಆಗಿದೆಯೋ ಏನೋ ನನಗೆ ತಿಳಿದಿಲ್ಲ. ಚೀನಾದಲ್ಲಿನ ವೈರಸ್ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಬೇಕು. ದೇಶದಲ್ಲಿ ಹೆಚ್​​ಎಂಪಿ ವೈರಸ್​ ಮಾದರಿಯ ನೂರಾರು ವೈರಸ್​ಗಳಿವೆ. 2001ರಲ್ಲಿ ಪ್ರಥಮ ಬಾರಿಗೆ ಹೆಚ್ಎಂಪಿ ವೈರಸ್ ಪತ್ತೆಹಚ್ಚಲಾಗಿದೆ. 8 ತಿಂಗಳ ಮಗುವಿನ ಆರೋಗ್ಯ ಸ್ಥಿರವಾಗಿದೆ.  ಇಂದು ಅಥವಾ ನಾಳೆ ಆಸ್ಪತ್ರೆಯಿಂದ ಮಗುವನ್ನು ಮನೆಗೆ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ 2 ಲಕ್ಷ 36 ಸಾವಿರ ಐಎಲ್ಐ ಕೇಸ್​ಗಳಿವೆ. ಐಎಲ್ಐ ಕೇಸ್​ನಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಪುದುಚೆರಿ, ಗುಜರಾತ್​ನಲ್ಲಿ ಹೆಚ್ಎಂಪಿ ವೈರಸ್ ಪ್ರಕರಣವಿದೆ. ಕೇಂದ್ರ ಸರ್ಕಾರದ ಮಾಹಿತಿ ಅನ್ವಯ ಐಎಲ್​​ಐ ಕೇಸ್ ಹೆಚ್ಚಾಗಿಲ್ಲ. ಚಳಿಗಾಲದಲ್ಲಿ ಸಹಜವಾಗಿ ಶೀತ, ಕೆಮ್ಮು, ಕಫ ಇದ್ದೇ ಇರುತ್ತೆ. ಆದರೆ ಇಂತಹ ಆರೋಗ್ಯ ಲಕ್ಷಣ ಹೆಚ್ಎಂಪಿವಿ ಪ್ರಕರಣವಲ್ಲ. ರಾಜ್ಯ ಆರೋಗ್ಯ ಇಲಾಖೆಯಲ್ಲಿ ಹಣಕಾಸಿನ ಕೊರತೆಯಿಲ್ಲ. ವೈದ್ಯಕೀಯ ಪರಿಕರ ಖರೀದಿ ಸಹಜವಾಗಿಯೇ ನಡೆಯುತ್ತಿದೆ. ಆಯಾ ಆಸ್ಪತ್ರೆಗಳಿಂದಲೇ ವೈದ್ಯಕೀಯ ಸಾಮಗ್ರಿ ಖರೀದಿ ಮಾಡಲಾಗುವುದು ಎಂದಿದ್ದಾರೆ.

ಕೇಂದ್ರ ಸರ್ಕಾರ ಐಸಿಎಂಆರ್ ಸರ್ವಲೆನ್ಸ್ ಮಾಡುತ್ತಿದೆ. ಐಸಿಎಂಆರ್ ಪ್ರಕಾರ ಶೇ 1ರಷ್ಟು ಹೆಚ್​​​​ಎಂಪಿವಿ ಬರುತ್ತದೆ. ಈ ವೈರಸ್​​ನಿಂದ ಮರಣ ಪ್ರಮಾಣ ಕಡಿಮೆ. ಬಂದರೂ ಗುಣಮುಖರಾಗುತ್ತಾರೆ. ಹೆಚ್​​​​ಎಂಪಿ  ಬಂದ ಎರಡು ಮಕ್ಕಳು ಗುಣಮುಖರಾಗಿದ್ದಾರೆ. ಮಾಸ್ಕ್ ಹಾಕಬೇಕು, ಲಾಕ್ ಡೌನ್ ಮಾಡಬೇಕು ಎಂಬ ನಿಯಮವೇನೂ ಇಲ್ಲ. ಆದರೆ ಎಚ್ಚರಿಕೆಯಿಂದ ಇರಬೇಕು ಅಷ್ಟೇ. ಈಗಾಗಲೇ ನಾವು ಕೂಡ ಮಾರ್ಗಸೂಚಿ ಬಿಡುಗಡೆ ಮಾಡಿದ್ದೇವೆ. ಏನು ಮಾಡಬೇಕು, ಏನು ಮಾಡಬಾರದು ಎಂದೂ ಹೇಳಲಾಗಿದೆ ಎಂದು ತಿಳಿಸಿದ್ದಾರೆ.

More articles

Latest article