ಬೆಂಗಳೂರು: ಚೀನಾದಲ್ಲಿ ಆತಂಕ ಮೂಡಿಸಿರುವ ಹ್ಯೂಮನ್ ಮೆಟಾನ್ಯುಮೊವೈರಸ್ (ಎಚ್‌ಎಂಪಿವಿ) ಭಾರತದಲ್ಲಿಯೂ ಕಾಣಿಸತೊಡಗಿದೆ. ಈ ವೈರಸ್ ಕೋವಿಡ್ ರೀತಿ ಜನಸಾಮಾನ್ಯರ ಆತಂಕಕ್ಕೆ ಕಾರಣವಾದರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಎಚ್‌ಎಂಪಿವಿ ಎರಡು ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಪ್ರತಿವರ್ಷ ಚಳಿಗಾಲ ಆರಂಭವಾದಾಗ ಶೀತ, ಜ್ವರ ಚಳಿ ಉಂಟಾಗುವುದು ಸಾಮಾನ್ಯ. ಈ ಬದಾವಣೆಗೆ ವೈರಾಣು ಕಾರಣ ಆಗಿರುತ್ತದೆ. ಈ ವೈರಾಣು ಆಗಾಗ ತನ್ನ ಗುಣ ಲಕ್ಷಣಗಳನ್ನು ಬದಲಾಯಿಸುತ್ತಿರುತ್ತದೆ. ಈ ಬಾರಿ ಅದಕ್ಕೆ ಎಚ್ಎಂಪಿವಿ ಎಂದು ಹೆಸರಿಡಲಾಗಿದೆ. ಇದು ಅಪಾಯಕಾರಿ ವೈರಸ್ ಅಲ್ಲ ಇದು ಎಂದು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ. ಧನಂಜಯ ಟಿ. ಎನ್. ತಿಳಿಸಿದ್ದಾರೆ.
ಜ್ವರ, ಶೀತ ಇತ್ತೀಚೆಗೆ ಬಂದವರಿಗೆ ಎಚ್ಎಂಪಿವಿ ಬಂದು ಹೋಗಿರಬಹುದು. ಪರೀಕ್ಷೆ ಮಾಡದೇ ಇರುವುದರಿಂದ ತಿಳಿದು ಬರುವುದಿಲ್ಲ. ಇದು ಸಾಮಾನ್ಯ ವೈರಸ್ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಇಲಾಖೆಯು ವಿಶ್ವ ಅರೋಗ್ಯ ಸಂಸ್ಥೆ, ಭಾರತದ ಅರೋಗ್ಯ ಸಚಿವಾಲಯದ ನಿರ್ದೇಶನದಂತೆ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಸಾರ್ವಜನಿಕರು ಪಾಲಿಸಬೇಕಾಗಿದೆ.
ಏನು ಮಾಡಬೇಕು:
1. ಜನಸಂದಣಿ ಇರುವ ಸ್ಥಳಗಳನ್ನು ತಪ್ಪಿಸಬೇಕು
2. ಕೈಗಳನ್ನು ಸಾಬೂನು ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್‌ನಿಂದ ಆಗಾಗ್ಗೆ ತೊಳೆಯಬೇಕು
3. ಕೆಮ್ಮುವಾಗ, ಸೀನುವಾಗ, ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ಪೇಪರ್‌ನಿಂದ ಮುಚ್ಚಿಕೊಳ್ಳಬೇಕು
4. ಜ್ವರ, ಕೆಮ್ಮು ಮತ್ತು ಸೀನುವಿಕೆ ಇದ್ದಲ್ಲಿ ಸಾರ್ವಜನಿಕ ಸ್ಥಳಗಳಿಂದ ದೂರವಿರಬೇಕು
5. ಮನೆಯಲ್ಲಿಯೇ ಇರಬೇಕು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದರೆ ಇತರರೊಂದಿಗೆ ಸಂಪರ್ಕವನ್ನು ಕಡಿಮೆ ಮಾಡಿಕೊಳ್ಳಬೇಕು
6. ಸಾಕಷ್ಟು ನೀರು ಕುಡಿಯಿರಿ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಬೇಕು
ಏನು ಮಾಡಬಾರದು?
1. ಕಣ್ಣು, ಮೂಗು ಮತ್ತು ಬಾಯಿಯನ್ನು ಆಗಾಗ್ಗೆ ಸ್ಪರ್ಶಿಸಬಾರದು
2. ಅನಾರೋಗ್ಯವಿರುವ ಜನರೊಂದಿಗೆ ನಿಕಟ ಸಂಪರ್ಕ ಹೊಂದಬಾರದು
3. ಟವೆಲ್, ಕರವಸ್ತ್ರ ಇತ್ಯಾದಿಗಳನ್ನು ಹಂಚಿಕೊಳ್ಳಬಾರದು
4. ಟಿಶ್ಯೂ ಪೇಪರ್ ಮತ್ತು ಕೈ ಕರ್ಚೀಫ್ ಮರುಬಳಕೆ ಮಾಡಬಾರದು
4. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು
5. ವೈದ್ಯರನ್ನು ಸಂಪರ್ಕಿಸದೆ ಔಷಧಿ ಸೇವಿಸಬಾರದು, ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬಾರದು