ಸುಪ್ರೀಂ ಕೋರ್ಟ್ ನ ಸದರಿ ತೀರ್ಪು ದೇಶದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ವಿಷಯದಲ್ಲಿ ನಿಜಕ್ಕೂ ಹೆಮ್ಮೆಯ ಮತ್ತು ಚರಿತ್ರಾರ್ಹ ಹೆಜ್ಜೆ. ಈ ತೀರ್ಪಿನಿಂದ ನ್ಯಾಯಾಂಗದ ಘನತೆ ಹೆಚ್ಚುವುದರೊಂದಿಗೆ ಒಕ್ಕೂಟದ ಎಲ್ಲ ರಾಜ್ಯಗಳೂ ತಮ್ಮ ಸ್ವಾಯತ್ತೆಯ ವಿಷಯದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ- ಶ್ರೀನಿವಾಸ ಕಾರ್ಕಳ.
ಸ್ವತಂತ್ರ ಭಾರತದಲ್ಲಿ ರಾಜ್ಯಪಾಲರುಗಳ (ಗವರ್ನರ್) ಪಾತ್ರ ಮತ್ತು ಅಧಿಕಾರ ಹೇಗಿರಬೇಕು ಎಂಬ ಬಗ್ಗೆ ಭಾರತದ ಸಂವಿಧಾನ ರಚನಾ ಸಭೆಯಲ್ಲಿ ವ್ಯಾಪಕ ಚರ್ಚೆಯಾಗಿತ್ತು. ಈ ವಿಚಾರದಲ್ಲಿ, ಡಾ ಬಿ ಆರ್ ಅಂಬೇಡ್ಕರ್ ಅವರ ನಿಲುವು ತುಂಬಾ ಖಚಿತವಾಗಿತ್ತು. ಭಾರತದ ಸಂವಿಧಾನದ ಅಡಿಯಲ್ಲಿ ʼಭಾರತದ ರಾಜ್ಯಪಾಲರುಗಳ ಸ್ಥಾನ ಕೇವಲ ಅಲಂಕಾರಿಕವಾದುದೇ ಹೊರತು, ಅವರಿಗೆ ವಿಶೇಷ ವಿವೇಚನಾ ಅಧಿಕಾರಗಳು ಇಲ್ಲʼ ಎಂದು ಅವರು ಸ್ಪಷ್ಟಪಡಿಸಿದ್ದರು.
ರಾಜ್ಯಪಾಲರು ಸಾಂವಿಧಾನಿಕ ಮುಖ್ಯಸ್ಥರಾಗಿರಬೇಕು. ಅವರು ಸಚಿವ ಸಂಪುಟದ ಸಲಹೆಯ ಮೇರೆಗೆ ವರ್ತಿಸಬೇಕೇ ಹೊರತು, ಸ್ವತಂತ್ರ ಕಾರ್ಯನಿರ್ವಾಹಕ ಅಧಿಕಾರ ಚಲಾಯಿಸುವಂತಿಲ್ಲ. “ಸಂವಿಧಾನದ ಅಡಿಯಲ್ಲಿ ರಾಜ್ಯಪಾಲರು ಸ್ವತಂತ್ರವಾಗಿ ಮಾಡುವ ಯಾವುದೇ ಕಾರ್ಯವಿಲ್ಲ; ಯಾವುದು ಅಂದರೆ ಯಾವುದೂ ಇಲ್ಲ” ಎಂದು ಖಚಿತವಾಗಿ ಹೇಳಿದ್ದರು ಅಂಬೇಡ್ಕರ್.
ಕರಡು ಸಂವಿಧಾನದಲ್ಲಿ ರಾಜ್ಯಪಾಲರುಗಳಿಗೆ ಕೆಲವೊಂದು ವಿವೇಚನಾಧಿಕಾರಗಳನ್ನು ಒದಗಿಸಲಾಗಿದೆ. ಆದರೆ ಅವು ಸೀಮಿತವಾಗಿವೆ ಮತ್ತು ನಿರ್ದಿಷ್ಟವಾಗಿವೆ. ಅಂದರೆ, ವಿಧಾನಸಭಾ ಕಲಾಪ ಕರೆಯುವುದು ಅಥವಾ ವಿಧಾನಸಭೆಯನ್ನು ಬರ್ಖಾಸ್ತು ಮಾಡುವುದು ಇತ್ಯಾದಿ. ಇವನ್ನು ಕೂಡಾ ಸಾಂವಿಧಾನಿಕ ಪರಂಪರೆಗಳು ಮತ್ತು ಸಚಿವ ಸಂಪುಟದ ಸಲಹೆಯ ಮೇರೆಗೇ ಮಾಡಬೇಕು ಎಂದು ಅವರು ಒತ್ತಿ ಹೇಳಿದ್ದರು.
1935ರ ಕಾಯಿದೆಯ ಪ್ರಕಾರ ರಾಜ್ಯಪಾಲರುಗಳಿಗೆ ವ್ಯಾಪಕ ಅಧಿಕಾರಗಳಿದ್ದವು. ಅಲ್ಲಿ ಸಚಿವ ಸಂಪುಟದ ಸಲಹೆ ಏನೇ ಇರಲಿ, ಅನೇಕ ವಿಷಯಗಳಲ್ಲಿ ಅವರು ಸ್ವತಂತ್ರವಾಗಿ ವರ್ತಿಸಬಹುದಾಗಿತ್ತು. ಆದರೆ ಆ ಅಧಿಕಾರಗಳಿಗೆ ಕತ್ತರಿ ಹಾಕಿದ ಅಂಬೇಡ್ಕರ್, ʼಪ್ರಜಾತಾಂತ್ರಿಕ ತತ್ತ್ವಗಳಿಗೆ ಅನುಗುಣವಾಗಿ ಹೊಸ ಸಂವಿಧಾನವು ರಾಜ್ಯಪಾಲರುಗಳ ಪರಮಾಧಿಕಾರವನ್ನು ಕಿತ್ತು ಹಾಕಿದೆʼ ಎಂದು ಹೇಳಿದರು.
ಅಧಿಕಾರ ದುರುಪಯೋಗದ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸುತ್ತಾ ಅವರು, ರಾಷ್ಟ್ರಪತಿ ಅಥವಾ ಬ್ರಿಟಿಷ್ ರಾಜಪ್ರಭುತ್ವವು ನಿರ್ಬಂಧಕ್ಕೊಳಗಾಗಿರುವಂತೆಯೇ, ರಾಜ್ಯಪಾಲರ ಕಾರ್ಯಾಚರಣೆಗಳು ಸಾಂವಿಧಾನಿಕ ಪರಂಪರೆಗಳ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ. ಆ ಮೂಲಕ ಅವರು ಸರ್ವಾಧಿಕಾರಿ ಆಳರಸರ ಹಾಗೆ ವರ್ತಿಸದೆ ಒಂದು ನಾಮಕಾವಸ್ಥೆ ಮುಖ್ಯಸ್ಥರಂತೆ ಕೆಲಸ ಮಾಡಬೇಕಾಗುತ್ತದೆ ಎಂದು ಒತ್ತಿ ಹೇಳಿದರು.
ಪರಿಚ್ಛೇದ 357ರಂತಹ ಪ್ರಾವಧಾನಗಳನ್ನು ಚರ್ಚಿಸುವಾಗ (ರಾಷ್ಟ್ರಪತಿ ಆಳ್ವಿಕೆ, ಪರೋಕ್ಷವಾಗಿ ರಾಜ್ಯಪಾಲರುಗಳಿಗೆ ಸಂಬಂಧಿತ), ಅಂತಹ ಅಧಿಕಾರಗಳನ್ನು ʼವಿರಳವಾಗಿ, ಅದೂ ಸಾಂವಿಧಾನಿಕ ಬಿಕ್ಕಟ್ಟು ಕಾಣಿಸಿಕೊಂಡ ವಿಪರೀತ ಪ್ರಕರಣಗಳಲ್ಲಿ ಮಾತ್ರ ಬಳಸಬೇಕೇ ಹೊರತು, ರಾಜಕೀಯ ಹಸ್ತಕ್ಷೇಪದ ಸಾಧನವಾಗಿ ಅಲ್ಲʼ ಎಂದು ಆಶಿಸಿದ್ದರು.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ರಾಜ್ಯಪಾಲರು ಸುಗಮ ಪ್ರಜಾತಾಂತ್ರಿಕ ಆಡಳಿತಕ್ಕೆ ಅನುವು ಮಾಡಿಕೊಡಬೇಕೇ ಹೊರತು, ಅದಕ್ಕೆ ಅಡ್ಡಿಪಡಿಸುವುದಲ್ಲ ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು.
ಸ್ವತಂತ್ರ ಭಾರತದಲ್ಲಿ ರಾಜಭವನ ದುರುಪಯೋಗ
ʼಸಂವಿಧಾನ ಎಷ್ಟೇ ಉತ್ತಮವಾಗಿರಲಿ, ಅದನ್ನು ಜಾರಿಗೊಳಿಸುವವರು ಕೆಟ್ಟವರಾದರೆ ಪರಿಣಾಮವೂ ಕೆಟ್ಟದಾಗುತ್ತದೆ. ಸಂವಿಧಾನ ಎಷ್ಟೇ ಕೆಟ್ಟದಿರಲೀ, ಅದನ್ನು ಜಾರಿಗೊಳಿಸುವವರು ಒಳ್ಳೆಯವರಾದರೆ ಪರಿಣಾಮವೂ ಒಳ್ಳೆಯದಿರುತ್ತದೆʼ ಎಂದು ಆಗಲೇ ಬಾಬಾ ಸಾಹೇಬ್ ಅವರು ಎಚ್ಚರಿಸಿದ್ದರು. ಈ ಮಾತು ಸತ್ಯವಾಗಲು ಬಹಳ ಕಾಲ ಹಿಡಿಯಲಿಲ್ಲ. ರಾಜಭವನಗಳು ಒಂದು ರೀತಿಯ ರಾಜಕೀಯ ಪುನರ್ವಸತಿ ಕೇಂದ್ರಗಳಾದವು. ರಾಜ್ಯಪಾಲರುಗಳನ್ನು ಜನರು ʼಬಿಳಿಯಾನೆಗಳುʼ ಎಂದು ಕರೆದ ಉದಾಹರಣೆಯೂ ಇದೆ. ಸಂವಿಧಾನ ಪ್ರಕಾರ ಕೆಲಸ ಮಾಡಬೇಕಾದ ರಾಜ್ಯಪಾಲರುಗಳು ಕೇಂದ್ರದಲ್ಲಿ ಆಡಳಿತಲ್ಲಿರುವ ಸರಕಾರದ ಏಜಂಟ್ ಗಳಂತೆ ಕೆಲಸ ಮಾಡಲಾರಂಭಿಸಿದರು. ರಾಜಭವನಗಳು ಆಳುವ ಪಕ್ಷದ ಕಚೇರಿಯಂತೆ ಕೆಲಸ ಮಾಡಲಾರಂಭಿಸಿದವು. ಚುನಾಯಿತ ಸರಕಾರಗಳಿಗೆ ಗೌರವ ಕೊಡಬೇಕಾದ ರಾಜ್ಯಪಾಲರುಗಳು ಅವನ್ನು ಸಂವಿಧಾನ ಬಾಹಿರವಾಗಿ ಉರುಳಿಸಿದ ಉದಾಹರಣೆಗಳೂ ಇವೆ. ಅನೇಕ ಸಂದರ್ಭಗಳಲ್ಲಿ ಸಂವಿಧಾನದ ನಿರ್ದೇಶನಗಳನ್ನು ಗಾಳಿಗೆ ತೂರಿ ವಿವೇಚನಾಧಿಕಾರವನ್ನು ಸ್ವತಂತ್ರ ಮತ್ತು ಅಸೀಮ ಅಧಿಕಾರದಂತೆ ಬಳಸಿಕೊಂಡು ಚುನಾಯಿತ ಸರಕಾರಗಳಿಗೆ ಕೆಲಸ ಮಾಡದಂತೆ ಮಾಡಿದ್ದೂ ಇದೆ. ಇವೆಲ್ಲ ಒಂದು ಅತಿಗೆ ಹೋದಾಗ ನಿಜಕ್ಕೂ ಪ್ರಜಾತಂತ್ರಿಕ ಆಡಳಿತ ವ್ಯವಸ್ಥೆಯಲ್ಲಿ ರಾಜ್ಯಪಾಲರ ಹುದ್ದೆಯ ಅಗತ್ಯ ಇದೆಯೇ, ಅದನ್ನು ಈಗಲಾದರೂ ರದ್ದುಗೊಳಿಸಬೇಡವೇ ಎಂಬ ಚರ್ಚೆಗಳೂ ಆರಂಭವಾದವು.
ಕಳೆದ ಒಂದು ದಶಕದಲ್ಲಿ…
2014ರ ವರೆಗೂ ಇವೆಲ್ಲ ಒಂದು ಮಿತಿಯಲ್ಲಿದ್ದವು. ರಾಜ್ಯಪಾಲರುಗಳು ಅಲ್ಲಿನ ಚುನಾಯಿತ ಸರಕಾರದ ಕೆಲಸಗಳಿಗೆ ತೀವ್ರ ಅಡ್ಡಿ ಉಂಟು ಮಾಡಿದ ಮತ್ತು ರಾಜ್ಯಸರಕಾರಗಳು ರಾಜ್ಯಪಾಲರ ವಿರುದ್ಧ ಕೋರ್ಟ್ ಗೆ ಹೋದ ಉದಾಹರಣೆಗಳು ತೀರಾ ವಿರಳ.
ರಾಜಭವನವನ್ನು ಯಾವ ಮಟ್ಟಿಗೆ ದುರುಪಯೋಗ ಮಾಡಿ ಚುನಾಯಿತ ಸರಕಾರಗಳನ್ನೇ ಅಪ್ರಸ್ತುತಗೊಳಿಸಬಹುದು ಎಂಬುದು ರುಜುವಾತಾದುದು, 2014 ರಲ್ಲಿ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ. ಈ ಅವಧಿಯಲ್ಲಿ ರಾಜಭವನಗಳಲ್ಲಿ ಆರ್ ಎಸ್ ಎಸ್ ಒಲವಿನ ವ್ಯಕ್ತಿಗಳನ್ನು ತುಂಬಲಾಯಿತು. (ಇವರಲ್ಲಿ ಅನೇಕರು ಆ ಹುದ್ದೆಗೆ ಯಾವುದೇ ರೀತಿಯಲ್ಲಿ ಅರ್ಹರಲ್ಲದವರು). ಅವರ ಮುಖ್ಯ ಕೆಲಸ ಕೇಂದ್ರದ ಸರಕಾರದ ಮರ್ಜಿಗೆ ಅನುಗುಣವಾಗಿ ಕೆಲಸಮಾಡುವುದು. ಬಿಜೆಪಿಯೇತರ ಪಕ್ಷ ಅಧಿಕಾರದಲ್ಲಿದ್ದರೆ ಅಲ್ಲಿ ಶಾಸಕರ ಖರೀದಿಯ ಆಪರೇಷನ್ ಕಮಲಕ್ಕೆ ನೆರವಾಗುವುದು. ಸರಕಾರಗಳನ್ನು ಉರುಳಿಸಿ ಬಿಜೆಪಿ ಮೈತ್ರಿಕೂಟದ ಸರಕಾರ ಬರುವಂತೆ ನೋಡಿಕೊಳ್ಳುವುದು. ಚುನಾಯಿತ ಸರಕಾರದ ಬಹುಮತದ ನಿರ್ಧಾರಗಳನ್ನು ತಡೆಹಿಡಿಯುವುದು, ಮಸೂದೆಗೆ ಸಹಿ ಹಾಕದೆ ವರುಷಗಟ್ಟಲೆ ಸತಾಯಿಸುವುದು. ಕೆಲವೊಮ್ಮೆ ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಿ ಆ ಮಸೂದೆ ಸತ್ತು ಹೋಗುವಂತೆ ಮಾಡುವುದು.
ಪಂಜಾಬ್, ಕೇರಳ, ತಮಿಳುನಾಡು, ಮಹಾರಾಷ್ಟ್ರ…
ಒಕ್ಕೂಟ ಸರಕಾರವು ರಾಜಭವನವನ್ನು ಯಾವ ಮಟ್ಟದಲ್ಲಿ ದುರುಪಯೋಗಪಡಿಸಿಕೊಂಡು ಅಲ್ಲಿನ ವಿಪಕ್ಷ ಸರಕಾರಗಳ ಕೈಕಟ್ಟಿಹಾಕಬಹುದು ಎಂಬುದಕ್ಕೆ ಇತ್ತೀಚಿನ ಉದಾಹರಣೆ ಪಂಜಾಬ್, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡು.
ಪಂಜಾಬ್ ನ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅಲ್ಲಿನ ಆಪ್ ಸರಕಾರದ ಏಳು ಮಸೂದೆಗಳನ್ನು ತಡೆಹಿಡಿದಾಗ ಅಲ್ಲಿನ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿ ನ್ಯಾಯ ಪಡೆದುಕೊಂಡಿತು.
ತೆಲಂಗಾಣದ ಸರಕಾರವೂ ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋಯಿತು.
ಕರ್ನಾಟಕದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು 17 ಮಸೂದೆಗಳಿಗೆ ಸಹಿ ಹಾಕದೆ ಕುಳಿತುಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಉದ್ಧವ ಠಾಕ್ರೆಯವರ ಮಹಾವಿಕಾಸ್ ಅಘಾಡಿ ಸರಕಾರವಿದ್ದಾಗ ಅಲ್ಲಿ ರಾಜ್ಯಪಾಲರಾಗಿದ್ದುದು ಭಗತ್ ಸಿಂಗ್ ಹೋಶಿಯಾರಿ. ಈ ಮನುಷ್ಯ ಉದ್ಧವ್ ಗೆ ಒಂದು ದಿನವೂ ಸರಿಯಾಗಿ ಕೆಲಸ ಮಾಡಲು ಬಿಡಲೇ ಇಲ್ಲ. ವಿಧಾನ ಪರಿಷತ್ತಿಗೆ ನೇಮಕಾತಿಗೆ ಹೆಸರನ್ನು ರಾಜಭವನಕ್ಕೆ ಕಳುಹಿಸಿದರೆ ಅದನ್ನು ವರುಷಗಟ್ಟಲೆ ಕುಂಡೆಯ ಅಡಿಗೆ ಹಾಗಿ ಕುಳಿತರು ರಾಜ್ಯಪಾಲರು. ಅಂತಿಮವಾಗಿ ಏಕನಾಥ ಶಿಂಧೆಯಿಂದ ಸರಕಾರ ಉರುಳಿಸುವಲ್ಲಿಯೂ ಪರೋಕ್ಷ ಕೆಲಸ ಮಾಡಿ ಇದಕ್ಕೆ ಸುಪ್ರೀಂ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡದ್ದೂ ಆಯಿತು.
ಕೇರಳದಲ್ಲಿ ಇದುವರೆಗೂ ಬಿಜೆಪಿಗೆ ಒಂದು ಬಾರಿಯೂ ಅಧಿಕಾರ ಹಿಡಿಯಲು ಸಾಧ್ಯವಾಗಿಯೇ ಇಲ್ಲ. ಅದಕ್ಕೆ ಕೇಂದ್ರದ ಮೋದಿ ಸರಕಾರ ಹೇಗೆ ಸೇಡು ತೀರಿಸಿಕೊಂಡಿತು ಗೊತ್ತೇ? ಅಲ್ಲಿರುವ ಪಿಣರಾಯಿ ನೇತೃತ್ವದ ಎಡಪಕ್ಷದ ಸರಕಾರವನ್ನು ಇದ್ದೂ ಇಲ್ಲದಂತೆ ಮಾಡಲು ಆರಿಫ್ ಮೊಹಮದ್ ಖಾನ್ ರನ್ನು ರಾಜ್ಯಪಾಲರನ್ನಾಗಿ ಕಳುಹಿಸಿಕೊಟ್ಟಿತು. ಕುಟಿಲ ಆಟ ತಕ್ಷಣ ಶುರುವಾಯಿತು. ಆರಿಫ್ ಮೊಹಮದ್ ಖಾನ್ ಮೊದಲ ದಿನದಿಂದಲೇ ಚುನಾಯಿತ ಸರಕಾರವನ್ನು ಠೀಕಿಸಲು, ನಿಂದಿಸಲು, ಅದರ ಕೆಲಸದಲ್ಲಿ ನಡುವೆ ಕೈಹಾಕಲು, ಬೀದಿಯಲ್ಲಿ ಪ್ರತಿಭಟನೆಯ ನಾಟಕವಾಡಲು ಶುರುಮಾಡಿದರು. ಮಸೂದೆಗಳಿಗೆ ಸಹಿ ಹಾಕಲಿಲ್ಲ. ವಿವಿಗಳ ಕುಲಪತಿ ನೇಮಕದಲ್ಲೂ ಹಸ್ತಕ್ಷೇಪ. ಇತ್ತೀಚೆಗೆ ಕೇರಳದಿಂದ ಬಿಹಾರಕ್ಕೆ ಅವರ ವರ್ಗಾವಣೆ ಆಗುವವರೆಗೂ ಆ ಮನುಷ್ಯ ಆಡಿದ ಆಟಗಳನ್ನು ಗೂಗಲ್ ಸರ್ಚ್ ಮಾಡಿದರೆ ದಂಡಿಯಾಗಿ ವೀಡಿಯೋ ಸಹಿತ ವರದಿಗಳು ಸಿಗುತ್ತವೆ. ಕೇರಳ ರಾಜ್ಯಪಾಲರ ವಿರುದ್ಧ ಅಲ್ಲಿನ ಸರಕಾರದ ಮೇಲ್ಮನವಿ ಈಗಲೂ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿದೆ.
ರಾಜ್ಯಪಾಲರ ಹುದ್ದೆಗೇ ಕಳಂಕ ತರುವಂತೆ ನಡೆದುಕೊಂಡು ಚರಿತ್ರೆ ನಿರ್ಮಿಸಿದ್ದು ಮಾತ್ರ ತಮಿಳುನಾಡಿನ ರಾಜ್ಯಪಾಲ ಆರ್ ಎನ್ ರವಿ. ಈ ಮನುಷ್ಯನಿಗೆ ರಾಜ್ಯಪಾಲರ ಅಧಿಕಾರದ ಮಿತಿಯೇ ಗೊತ್ತಿಲ್ಲವೇನೋ ಎಂಬಂತೆ ಅವರು ಆರಂಭದಿಂದಲೂ ನಿಂತುದು ಅಲ್ಲಿನ ಸ್ಟಾಲಿನ್ ಸರಕಾರದ ವಿರುದ್ಧ. ಸರಕಾರ ಕೊಟ್ಟ ಭಾಷಣವನ್ನು ಅವರು ವಿಧಾನಸಭೆಯಲ್ಲಿ ಓದಲು ನಿರಾಕರಿಸಿದರು. ತಮಿಳುನಾಡಿನ ನಾಡಗೀತೆಗೂ ಅವಮಾನ ಮಾಡಿದರು. ಸಾಂವಿಧಾನಿಕ ಹುದ್ದೆಯಲ್ಲಿ ಇದ್ದುಕೊಂಡೇ ಸೆಕ್ಯುಲರಿಸಂ ನ ವಿರುದ್ಧ ಮಾತನಾಡಿದರು (ಇತ್ತೀಚೆಗೆ ಒಂದು ಸಭೆಯಲ್ಲಿ ʼಜೈ ಶ್ರೀರಾಮ್ʼ ಎಂದು ಹೇಳುವಂತೆ ಸಭಿಕರನ್ನು ಆಗ್ರಹಿಸಿ ತಾನೂ ಜೈಶ್ರೀರಾಮ್ ಎಂದು ಜೋರಾಗಿ ಕೂಗಿದರು). ಒಂದಲ್ಲ ಎರಡಲ್ಲ ಹತ್ತಕ್ಕೂ ಅಧಿಕ ಮಸೂದೆಗಳನ್ನು ಸಹಿಹಾಕಲು ನಿರಾಕರಿಸಿ ಚುನಾಯಿತ ಸರಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದರು. ರಾಜ್ಯಪಾಲರ ವಿರುದ್ಧ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್ ನಲ್ಲಿ ಬಹಳ ದೀರ್ಘ ಹೋರಾಟ ನಡೆಸುವಂತಾಯಿತು. ಅದರ ಪರಿಣಾಮವೇ ಮೊನ್ನೆ ಮೊನ್ನೆಯಷ್ಟೇ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪು.
ಸುಪ್ರೀಂ ಕೋರ್ಟ್ ನ ಐತಿಹಾಸಿಕ ತೀರ್ಪು
ರಾಜ್ಯಪಾಲರುಗಳ ಅಧಿಕಾರದ ಮಿತಿಗೆ ಸಂಬಂಧಿಸಿದಂತೆ ಇದೇ ಎಪ್ರಿಲ್ 8, 2025 ರಂದು ಐತಿಹಾಸಿಕ ತೀರ್ಪೊಂದನ್ನು ನೀಡಿದ ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್ ಮಾಧವನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು, ತಮಿಳುನಾಡಿನ ರಾಜ್ಯಪಾಲ ಆರ್ ಎನ್ ರವಿಯವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ರಾಜ್ಯಪಾಲರು ಚುನಾಯಿತ ಸರಕಾರದ ಪಾಲಿಗೆ ಒಬ್ಬ ʼಮಾರ್ಗದರ್ಶಕʼನಾಗಬೇಕೇ ಹೊರತು ʼಮಾರ್ಗದ ಅಡ್ಡಿʼಯಾಗಬಾರದು ಎಂದ ಸುಪ್ರೀಂ ಕೋರ್ಟ್ ಆರ್ ಎನ್ ರವಿ ಯವರು ದುರುದ್ದೇಶದಿಂದ ತಡೆಹಿಡಿದಿದ್ದ10 ಮಸೂದೆಗಳನ್ನು ಅವು ರಾಜ್ಯಪಾಲರ ಅಂಗೀಕಾರ ಮುದ್ರೆ ಪಡೆದಿವೆ ಎಂದು ಪರಿಗಣಿಸತಕ್ಕದ್ದು ಎಂದು ಹೇಳಿತು.
ಆ ತೀರ್ಪಿನ ಕೆಲವು ಮುಖ್ಯ ಅಂಶಗಳು ಹೀಗಿವೆ:
ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ತಡೆಹಿಡಿಯಲು ರಾಜ್ಯಪಾಲರಿಗೆ ಗರಿಷ್ಠ ಒಂದು ತಿಂಗಳ ಸಮಯ ನಿಗದಿಪಡಿಸಲಾಗಿದೆ.
ಒಂದು ವೇಳೆ ಮಸೂದೆಗೆ ಅಂಗೀಕಾರ ನೀಡದಿದ್ದರೆ, ಕಾರಣ ಸಹಿತ ಸಂದೇಶದೊಂದಿಗೆ ಮಸೂದೆಯನ್ನು ಮರಳಿಸಲು ಗರಿಷ್ಠ ಮೂರು ತಿಂಗಳ ಸಮಯವನ್ನು ನಿಗದಿಪಡಿಸಲಾಗಿದೆ.
ರಾಜ್ಯ ವಿಧಾನಸಭೆಯು ಪುನ: ಅಂಗೀಕರಿಸಿದ ಮಸೂದೆಗೆ, ಪರಿಚ್ಛೇದ 200 ರ ಅಡಿಯಲ್ಲಿ, ಗರಿಷ್ಠ ಒಂದು ತಿಂಗಳೊಳಗಾಗಿ ರಾಜ್ಯಪಾಲರು ಅಂಗೀಕಾರದ ಮುದ್ರೆ ಒತ್ತಬೇಕು.
ಸಚಿವ ಸಂಪುಟದ ಸಲಹೆಯನ್ನು ಒಪ್ಪಿಕೊಳ್ಳದೆ ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಕೊಡುವುದಾದರೆ ಅದಕ್ಕೆ ರಾಜ್ಯಪಾಲರಿಗೆ ಗರಿಷ್ಠ ಮೂರು ತಿಂಗಳ ಸಮಯ ನಿಗದಿಪಡಿಸಲಾಗಿದೆ.
ಮಸೂದೆಯನ್ನು ರಾಜ್ಯಪಾಲರ ಮುಂದೆ ಇರಿಸಿದ ಬಳಿಕ ರಾಜ್ಯಪಾಲರಿಗೆ ಇರುವುದು ಕೇವಲ ಮೂರು ಆಯ್ಕೆಗಳು. ಮಸೂದೆಯನ್ನು ಸ್ವೀಕರಿಸುವುದು, ತಿರಸ್ಕರಿಸುವದು ಅಥವಾ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡುವುದು. ಈ ಮೂರು ಆಯ್ಕೆಗಳಲ್ಲಿ ಒಂದನ್ನು ಆರಿಸಿಕೊಳ್ಳುವ ಹೊಣೆಗಾರಿಕೆ ರಾಜ್ಯಪಾಲರಿಗೆ ಇದೆ. ಅನಿರ್ದಿಷ್ಟ ಕಾಲ ಮಸೂದೆಗಳನ್ನು ತಡೆಹಿಡಿದು ಕೂರುವಂತಿಲ್ಲ. ʼಸಾಧ್ಯವಾದಷ್ಟು ಬೇಗನೇʼ ಎಂದು ಪರಿಚ್ಛೇದ 200 ಹೇಳಿರುವುದರ ಅರ್ಥ- ʼತಡಮಾಡದೆʼ ಎಂದು.
ರಾಜ್ಯಪಾಲರುಗಳು ತಮ್ಮ ನಡೆಯು ಸಂವಿಧಾನದ ತತ್ತ್ವಗಳಿಗೆ ಮತ್ತು ಜನರ ಆಶೋತ್ತರಗಳಿಗೆ ಅನುಗುಣವಾಗಿದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನರ ಆಶೋತ್ತರಗಳಿಗೆ ಅನುಗುಣವಾಗಿ ರಾಜ್ಯ ವಿಧಾನಸಭೆಯು ಅಂಗೀಕರಿಸಿದ ಮಸೂದೆಗೆ ಅಂಗೀಕಾರ ನೀಡದೆ ದೀರ್ಘ ಕಾಲ ಕಾಲಹರಣ ಮಾಡಿದರೆ ಆ ಮಸೂದೆಗಳು ಕೇವಲ ಕಾಗದದ ತುಣುಕುಗಳಾಗಿ ಉಳಿದುಬಿಡುತ್ತವೆ. ರಾಜ್ಯ ವಿಧಾನಸಭೆಯು ಅಂಗೀಕರಿಸಿದ ಮಸೂದೆಯನ್ನು ಅಪ್ರಸ್ತುತಗೊಳಿಸುವ ಯಾವ ಅಧಿಕಾರವೂ ರಾಜ್ಯಪಾಲರಿಗಿಲ್ಲ.
ಸುಪ್ರೀಂ ಕೋರ್ಟ್ ನ ಸದರಿ ತೀರ್ಪು ದೇಶದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ವಿಷಯದಲ್ಲಿ ನಿಜಕ್ಕೂ ಹೆಮ್ಮೆಯ ಮತ್ತು ಚರಿತ್ರಾರ್ಹ ಹೆಜ್ಜೆ. ಈ ತೀರ್ಪಿನಿಂದ ನ್ಯಾಯಾಂಗದ ಘನತೆ ಹೆಚ್ಚುವುದರೊಂದಿಗೆ ಒಕ್ಕೂಟದ ಎಲ್ಲ ರಾಜ್ಯಗಳೂ ತಮ್ಮ ಸ್ವಾಯತ್ತೆಯ ವಿಷಯದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಅಂದ ಹಾಗೆ, ರಾಜ್ಯಪಾಲರ ಅಧಿಕಾರಗಳ ಮಿತಿಗಳ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಚಾರಿತ್ರಿಕವಾಗಿರುವಂತೆಯೇ ತಮಿಳುನಾಡಿನಲ್ಲೂ ಒಂದು ಚಾರಿತ್ರಿಕ ಘಟನೆ ಸಂಭವಿಸಿತು.. ಕೋರ್ಟ್ ತನ್ನ ತೀರ್ಪನ್ನು ತನ್ನ ಜಾಲ ತಾಣದಲ್ಲಿ ಪ್ರಕಟಿಸುತ್ತಿದ್ದಂತೆಯೇ ತಮಿಳುನಾಡು ಸರಕಾರ ಗವರ್ನರ್ ಆರ್ ಎನ್ ರವಿ ಅಂಗೀಕರಿಸದ ಹತ್ತೂ ಮಸೂದೆಗಳನ್ನು ಸುಪ್ರೀಂ ಕೋರ್ಟ್ ತೀರ್ಪು ಪ್ರಕಾರ ʼಅವು ಕಾಯ್ದೆಗಳಾದವುʼ ಎಂದು ತನ್ನ ರಾಜ್ಯಪತ್ರದಲ್ಲಿ ಪ್ರಕಟಿಸಿತು.
ಶ್ರೀನಿವಾಸ ಕಾರ್ಕಳ
ಚಿಂತಕರು
ಈ ಸುದ್ದಿಯನ್ನೂ ಓದಿ- ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಷ್ಟ್ರಪತಿಗಳಿಗೂ ಕಾಲಮಿತಿ ವಿಧಿಸಿದ ಸುಪ್ರೀಂಕೋರ್ಟ್