ದೇಶದಾದ್ಯಂತ ಜಾತಿ ಗಣತಿ, ScSP/TSP ಕಾಯ್ದೆ: AICC ಅಧ್ಯಕ್ಷ ಖರ್ಗೆ ಘೋಷಿಸಿದ ಭಾಗೀದಾರೀ ನ್ಯಾಯದ ಗ್ಯಾರಂಟಿಗಳು

Most read

ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ಹಿಡಿದರೆ ಮಹಿಳೆಯರ ಅಭ್ಯುದಯಕ್ಕಾಗಿ 5 ವಿಶೇಷ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಇತ್ತೀಚೆಗೆ ರಾಹುಲ ಗಾಂಧಿಯವರು ಘೋಷಣೆ ಮಾಡಿದ ಬೆನ್ನಲ್ಲೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಜನತೆಗಾಗಿ “ಪಂಚ ಹಿಸ್ಸೆದಾರಿ ನ್ಯಾಯ ಗ್ಯಾರಂಟಿ”ಗಳನ್ನು ಘೋಷಣೆ ಮಾಡಿದ್ದಾರೆ. ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ಈ ಕಾಂಗ್ರೆಸ್ ನ್ಯಾಯ ಗ್ಯಾರಂಟಿ ಘೋಷಣೆಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿವೆ. ಮಲ್ಲಿಕಾರ್ಜುನ ಖರ್ಗೆ ಅವರು ಘೋಷಣೆ ಮಾಡಿದ 5 ಹಿಸ್ಸೆದಾರಿ ನ್ಯಾಯ ಗ್ಯಾರಂಟಿ ಯೋಜನೆಗಳು ಹೀಗಿವೆ.

  1. ಸಮಗ್ರ ಗಣತಿ ಖಾತರಿ: ಜನಸಂಖ್ಯೆ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ, ರಾಷ್ಟ್ರೀಯ ಸಂಪತ್ತಿನ ಪಾಲು ಮತ್ತು ಎಲ್ಲಾ ಜಾತಿಗಳು ಮತ್ತು ಸಮುದಾಯಗಳ ಆಡಳಿತದ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವನ್ನು ಸಮೀಕ್ಷೆ ಮಾಡುವ ಸಮಗ್ರ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಜನಗಣತಿ ಮಾಡುವ ಮೂಲಕ ಕ್ರಾಂತಿಕಾರಿ ಭಾರತ ನಿರ್ಮಾಣಕ್ಕೆ ದೃಢವಾದ ಕ್ರಮ ವಹಿಸುವ ಬಗ್ಗೆ ಕಾಂಗ್ರೆಸ್ ಖಾತರಿಪಡಿಸುತ್ತದೆ.
  • ಮೀಸಲಾತಿ ಮಿತಿ ರದ್ದು: ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯಲ್ಲಿ ಇರುವ ಶೇ.50 ಮಿತಿಯನ್ನು ಹೆಚ್ಚಿಸುವ ಸಾಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸುವುದಾಗಿ ಕಾಂಗ್ರೆಸ್ ತನ್ನ ಎರಡನೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆ.
  • SC/ST ಉಪಯೋಜನೆಗೆ ಕಾನೂನು ಗ್ಯಾರಂಟಿ: ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಉಪಯೋಜನೆ (ಎಸ್ಸಿಪಿ/ಟಿಎಸ್ಪಿ) ಖಾತರಿಗಾಗಿ 1970 ರ ದಶಕದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಪರಿಚಯಿಸಿದ ವಿಶೇಷ ಘಟಕ ಯೋಜನೆಯನ್ನು 2014 ರಲ್ಲಿ ಮೋದಿ ಸರಕಾರ ರದ್ದುಗೊಳಿಸಿತು. ಆದರೆ ಕಾಂಗ್ರೆಸ್ ಸರಕಾರ ಇರುವ ಕೆಲವು ರಾಜ್ಯಗಳಲ್ಲಿ ಇದನ್ನು ಕಾನೂನಿನ ಮೂಲಕ ಜಾರಿಗೆ ತಂದಿದೆ. ಇದೇ ರೀತಿ ಈ ವಿಶೇಷ ಖಟಕ ಯೋಜನೆಯನ್ನು ಕಾನೂನಿನ ಮೂಲಕ ಜಾರಿಗೊಳಿಸುವ ಖಾತರಿಯನ್ನು ಕಾಂಗ್ರೆಸ್ ತನ್ನ ಮೂರನೇ ನ್ಯಾಯ ಗ್ಯಾರಂಟಿಯಲ್ಲಿ ಘೋಷಣೆ ಮಾಡಿದೆ. ಈ ಮೂಲಕ SC ಯೋಜನೆ ಮತ್ತು ST ಉಪ ಯೋಜನೆಯು ಬಜೆಟ್‌ನ ಶೇಕಡಾವಾರು ಮೊತ್ತವನ್ನು SC ಮತ್ತು ST ಗಳಿಗೆ ಅವರ ಜನಸಂಖ್ಯೆಯ ಶೇಕಡಾವಾರು ಪ್ರಮಾಣಕ್ಕೆ ಅನುಗುಣವಾಗಿ ಮೀಸಲಿಡಲಾಗುವುದು ಎಂದು ಕಾಂಗ್ರೆಸ್ ಖಚಿತಪಡಿಸಿದೆ.
  • ಆದಿವಾಸಿಗಳ ಅರಣ್ಯ ಹಕ್ಕು ರಕ್ಷಣೆ: ಆದಿವಾಸಿಗಳ ಹಕ್ಕು ರಕ್ಷಣೆಯಲ್ಲಿ ವಿಶೇಷ ಕಾಳಜಿ ಹೊಂದಿರುವ ಕಾಂಗ್ರೆಸ್ ಜಂಗಲ್ ಜಮೀನ ಕಾನೂನಿನ ಹಕ್ಕಿನ ಮೂಲಕ ಆದಿವಾಸಿಗಳ ಅರಣ್ಯ ಹಕ್ಕುಗಳ ರಕ್ಷಣೆಯ ಖಾತರಿಯನ್ನು ನೀಡುತ್ತದೆ. ಇಲ್ಲಿಯವರೆಗೆ ಅರಣ್ಯ ಹಕ್ಕು ಕಾಯಿದೆಯಡಿ ಬಾಕಿ ಉಳಿದಿರುವ ಎಲ್ಲ ಹಕ್ಕುದಾರಿಕೆಯ ಅರ್ಜಿಗಳನ್ನು ಒಂದು ವರ್ಷದೊಳಗೆ ಪರಿಹರಿಸಲು ಮತ್ತು ತಿರಸ್ಕರಿಸಿದ ಹಕ್ಕುಗಳನ್ನು ಆರು ತಿಂಗಳಲ್ಲಿ ಪರಿಶೀಲಿಸಲು ಪಾರದರ್ಶಕ ಕ್ರಮಗಳನ್ನು ಕೈಗೊಳ್ಳುವ ಖಾತರಿಯನ್ನು ಕಾಂಗ್ರೆಸ್ ತನ್ನ ನಾಲ್ಕನೇ ನ್ಯಾಯ ಗ್ಯಾರಂಟಿಯಲ್ಲಿ ಘೋಷಣೆ ಮಾಡಿದೆ. ಸಣ್ಣ ಅರಣ್ಯ ಉತ್ಪನ್ನಗಳಿಗೆ MSP ಗ್ಯಾರಂಟಿಯನ್ನು ವಿಸ್ತರಿಸುವ ಜೊತೆಗೆ ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ದೆ ಮತ್ತು ಭೂ ಸ್ವಾಧೀನ ಕಾಯ್ದೆಗೆ ಎಲ್ಲಾ ಬುಡಕಟ್ಟು ವಿರೋಧಿ ತಿದ್ದುಪಡಿಗಳನ್ನು ಹಿಂಪಡೆಯುವ ಖಾತರಿಯನ್ನೂ ಘೋಷಣೆ ಮಾಡಿದೆ.
  • ನಮ್ಮ ಭೂಮಿ-ನಮ್ಮ ಆಡಳಿತ: ಅಪನಿ ಧರತಿ, ಅಪನಾ ರಾಜ್ ಘೋಷಣೆಯ ಮೂಲಕ ಆದಿವಾಸಿಗಳಿಗೆ ಸ್ವಯಂ ಆಡಳಿತ ಮತ್ತು ಸಾಂಸ್ಕೃತಿ ಹಕ್ಕುಗಳ ರಕ್ಷಣೆಗೆ ಕಾಂಗ್ರೆಸ್ ಖಾತರಿ ಒದಗಿಸಿದೆ. ಎಸ್.ಟಿ. ಸಮುದಾಯದವರು ಅತಿ ದೊಡ್ಡ ಸಾಮಾಜಿಕ ಗುಂಪಾಗಿರುವ ಎಲ್ಲ ವಸತಿಗಳನ್ನು ಪರಿಶಿಷ್ಟ ಪ್ರದೇಶಗಳಾಗಿ ಘೋಷಿಸಲು ಕಾಂಗ್ರೆಸ್ ಬದ್ಧವಾಗಿದೆ. ಪರಿಶಿಷ್ಟ ಪ್ರದೇಶಗಳ ಪಂಚಾಯತ್ ವಿಸ್ತರಣೆ ಕಾಯಿದೆ(PESA) ದಲ್ಲಿ ಹೇಳಿದಂತೆ ‘ಗ್ರಾಮ ಸರ್ಕಾರ’ ಮತ್ತು ‘ಸ್ವಾಯತ್ತ ಜಿಲ್ಲಾ ಸರ್ಕಾರ’ ಸ್ಥಾಪಿಸಲು ಕಾಯಿದೆಗೆ ಅನುಗುಣವಾಗಿ ರಾಜ್ಯ ಕಾನೂನುಗಳನ್ನು ಜಾರಿಗೊಳಿಸುವ ಖಾತರಿಯನ್ನು ಕಾಂಗ್ರೆಸ್ ತನ್ನ ಐದನೇ ಹಿಸ್ಸೆದಾರಿ ನ್ಯಾಯ ಗ್ಯಾರಂಟಿಯಲ್ಲಿ ತಿಳಿಸಿದೆ.

More articles

Latest article