ಹಿಮಾಲಯದ ಭೂಕುಸಿತಗಳು ಹಾಗೂ ಪಶ್ಚಿಮ ಘಟ್ಟದ ಗುಡ್ಡಜರಿತಗಳು

Most read

ತೀವ್ರ ಮಳೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಮನುಷ್ಯ ಹಸ್ತ ಕ್ಷೇಪಿತ ಬೆಟ್ಟಗಳು ಕಳೆದುಕೊಂಡಿರುವಾಗ ಭೂಮಿ ಕುಸಿಯುವುದು ಸಹಜ. ನಿಸರ್ಗ ತನಗೆ ಆಗುತ್ತಿರುವ ವೇದನೆಗಳ ಸೂಚನೆಗಳನ್ನು ಆಗಾಗ ಹೀಗೆ ಯಾವುದೋ ರೂಪದಲ್ಲಿ ಕೊಡುತ್ತಲೇ ಇರುತ್ತದೆ. ಅದನ್ನು ಕೇಳಿಸಿಕೊಳ್ಳುವ ಸಂವೇದನೆ, ಅದಕ್ಕೆ ಸ್ಪಂದಿಸುವ ವಿವೇಕ ಮನುಷ್ಯರಿಗೆ ಇರಬೇಕಷ್ಟೆ – ನಾಗರಾಜ  ಕೂವೆ, ಪರಿಸರ ಬರಹಗಾರರು.

 ಪಶ್ಚಿಮ ಘಟ್ಟದ ಹಲವು ಭಾಗಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ  ಭೂಕುಸಿತಗಳು ಹೆಚ್ಚುತ್ತಿವೆ. ಹಾಗೆಯೇ ಹಿಮಾಲಯದ ತಪ್ಪಲಿನ ಪ್ರದೇಶಗಳು ಕೂಡಾ ಹಲವು ವರ್ಷಗಳಿಂದ ಭೂಕುಸಿತಕ್ಕೆ ತುತ್ತಾಗುತ್ತಲೇ ಬಂದಿವೆ. ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ಅವೈಜ್ಞಾನಿಕ ಚಟುವಟಿಕೆಗಳು ಗುಡ್ಡಜರಿತದ ತೀವ್ರತೆಯನ್ನು ಹೆಚ್ಚಿಸುತ್ತಿವೆ. ಅಷ್ಟಕ್ಕೂ ದೇಶದ ಹಿಮಾಲಯ ಮತ್ತು ಪಶ್ಚಿಮ ಘಟ್ಟ ಶ್ರೇಣಿಗಳಲ್ಲಿ ಪದೇ ಪದೇ ಭೂಕುಸಿತ  ಸಂಭವಿಸಲು ಕಾರಣವೇನು? ಎಂಬ ಪ್ರಶ್ನೆಗೆ ಉತ್ತರ ಬೇಕೆಂದರೆ, ನಾವು ಆ ಪರ್ವತ ಶ್ರೇಣಿಗಳ ರಚನೆ ಮತ್ತು ಸಂಯೋಜನೆಗಳನ್ನು ಅರ್ಥಮಾಡಿಕೊಳ್ಳಬೇಕು. ಜೊತೆಗೆ ಕಳೆದ ಕೆಲವು ದಶಕಗಳಿಂದ ಆ ಸೂಕ್ಷ್ಮ ವಲಯಗಳನ್ನು ನಾವು ಹೇಗೆಲ್ಲಾ ನಿರ್ಹಹಿಸುತ್ತಿದ್ದೇವೆ ಎಂಬುದನ್ನು ಗಮನಿಸಬೇಕು.

ಕೋಟ್ಯಂತರ ವರ್ಷಗಳ ಹಿಂದೆ ಭಾರತ ಉಪಖಂಡವು ಇಂದಿನ ಆಸ್ಟ್ರೇಲಿಯಾ, ಅಂಟಾರ್ಕಟಿಕಾ ಭೂಭಾಗಗಳನ್ನು ಒಳಗೊಂಡಿದ್ದ ಗೊಂಡ್ವಾನ ಭೂಖಂಡಕ್ಕೆ ತಾಗಿಕೊಂಡಿತ್ತು. ನಂತರದ ಕಾಲಚಕ್ರದಲ್ಲಿ ಗೊಂಡ್ವಾನ ಭೂಖಂಡದಿಂದ ಬೇರ್ಪಟ್ಟು ಉತ್ತರಕ್ಕೆ ಚಲಿಸಿ, ಯುರೇಶಿಯನ್ ಭೂಖಂಡಕ್ಕೆ ಡಿಕ್ಕಿ ಹೊಡೆದು, ಹಿಮಾಲಯ ಪರ್ವತ ಶ್ರೇಣಿ ಸೃಷ್ಟಿಯಾಯಿತು. ಹೀಗೆ ಚಲಿಸುವಾಗ, ಭೂಮಿಯ ತಳದಿಂದ ಲಾವಾರಸ ಹೊರಚಿಮ್ಮಿ ಪಶ್ಚಿಮದ ಸಮುದ್ರದಂಚಿಗೆ ಬಸಿದು ಗಟ್ಟಿಯಾದ ರಚನೆಯಾಯಿತು. ಹೀಗೆ ರಚಿತವಾದ ಪರ್ವತ ಶ್ರೇಣಿಗಳೇ ಪಶ್ಚಿಮ ಘಟ್ಟಗಳು. ಪಶ್ಚಿಮ ಘಟ್ಟದ ಭೂಗರ್ಭವು ಹಿಮಾಲಯಕ್ಕಿಂತ ಹಳೆಯದು, ಅದಕ್ಕಿಂತಲೂ ತಟಸ್ಥ. ಈ ಪಶ್ಚಿಮ ಘಟ್ಟವು ಸುಮಾರು ಸಾವಿರದ ಆರುನೂರು ಕಿಲೋಮೀಟರ್ ಉದ್ದಕ್ಕೆ ಗುಜರಾತ್ ನ ತಾಪಿ ನದಿಯಿಂದ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಹರಡಿಕೊಂಡಿದೆ. ಈ ಘಟ್ಟ ಶ್ರೇಣಿಯ ಭೂಗರ್ಭದಾಳದ ಶಿಲಾವಲಯಗಳಲ್ಲಿ ಬಿರುಕು, ಖಾಲಿ ಜಾಗಗಳಿವೆ. ಹೀಗಾಗಿಯೇ ಇಲ್ಲಿ ಆಗಾಗ ಭೂಮಿ ಕಂಪಿಸುವುದು ಹಾಗೂ ಗುಡ್ಡ ಕುಸಿಯುವುದು. 

ಹಿಮಾಚಲ ಪ್ರದೇಶದಲ್ಲಿ ಭೂಕುಸಿತ

ಈ ಭೂಕುಸಿತ ಎನ್ನುವುದು ಜಾಗತಿಕ ವಿದ್ಯಮಾನವಾದರೂ ಅದು ಘಟಿಸುವುದಕ್ಕೆ ಇರುವ ಕಾರಣಗಳು ಜಾಗತಿಕವಾಗಿ ಒಂದೇ ಅಲ್ಲ. ಭೂ ಸ್ವರೂಪದ ವ್ಯತ್ಯಾಸದೊಂದಿಗೆ ಅದರ ಕುಸಿತದ ಕಾರಣಗಳೂ ಬದಲಾಗುತ್ತವೆ. ನಮ್ಮ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಅನಾದಿ ಕಾಲದಿಂದಲೂ ಭೂಕುಸಿತ ಉಂಟಾಗುತ್ತಿದ್ದರೂ ಅಲ್ಲಿನ ಭೂಕುಸಿತಕ್ಕೂ ಪಶ್ಚಿಮ ಘಟ್ಟದ ಭೂಕುಸಿತಕ್ಕೂ ಇರುವ ಕಾರಣಗಳು ಸಂಪೂರ್ಣ ಭಿನ್ನ. ಹಿಮಾಲಯ ಶ್ರೇಣಿಯಲ್ಲಿ ಮೇಘ ಸ್ಪೋಟ, ಹಿಮ ಪ್ರವಾಹ, ಜ್ವಾಲಾಮುಖಿ, ಭೂಕಂಪ, ಬೋಳು ಶಿಖರಗಳ ಕಡಿದಾದ ಇಳಿಜಾರು ಮೊದಲಾದವುಗಳು ಪರ್ವತಗಳನ್ನು ನಡುಗಿಸಿ, ಬೀಳಿಸುತ್ತವೆ. ಮೂಲತಃ ಹಿಮಾಲಯ ಪರ್ವತ ಶ್ರೇಣಿಗಳ ಆಂತರಿಕ ಮತ್ತು ಬಾಹ್ಯ ಸ್ವರೂಪವೇ ಅಲ್ಲಿನ ಭೂಕುಸಿತಕ್ಕೆ ಕಾರಣ. ಆದರೆ ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಡೆಯುತ್ತಿರುವ ಭೂಕುಸಿತ ಆ ಬಗೆಯದಲ್ಲ. ಇಲ್ಲಿನ ಭೂಕುಸಿತ ಅರ್ಥೈಸಿಕೊಳ್ಳಲು ನಾವು ಪಶ್ಚಿಮ ಘಟ್ಟದ ಮೇಲ್ಮೈ ರಚನೆ ಹಾಗೂ ನಿರ್ವಹಣೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು.

ಪಶ್ಚಿಮ ಘಟ್ಟದ ಬಹುಪಾಲು ಮೇಲ್ಪದರದಲ್ಲಿರುವುದು ಬಸಾಲ್ಟ್ ಬಿರಿದು ನಿರ್ಮಾಣವಾಗಿರುವಂತಹ ಗುಂಡುಕಲ್ಲುಗಳು. ಇದು ಬಹು ಸಡಿಲವಾದ ಪದರು. ಭೂಮಿಯ ಆಳದಲ್ಲಿನ ಶಿಲಾವಲಯದಲ್ಲಿ ಮಳೆ ಬಿಸಿಲಿನಂತಹ ನೈಸರ್ಗಿಕ ಶಕ್ತಿ ಮತ್ತದರಿಂದ ಪ್ರೇರಿತವಾಗುವ ರಾಸಾಯನಿಕ ಪ್ರಕ್ರಿಯೆಗಳಿಂದಾಗಿ ಶಿಲಾವಲಯ ಒಡೆದು ಚೂರಾಗಿ ಮಣ್ಣಾಗುತ್ತಿರುವ ಸುಣ್ಣದ ಕಲ್ಲು, ಜಂಬಿಟ್ಟಿಗೆ ಕಲ್ಲಿನಂತಹ ರೂಪಾಂತರ ಕಲ್ಲಿನ ಮಿಶ್ರಣದ ಸ್ವರೂಪದಲ್ಲಿದೆ. ಆಳದಲ್ಲಿ ಇದನ್ನು ಹೊತ್ತು ನಿಂತಿರುವಂತಹ ಗ್ರಾನೈಟ್ ಸ್ತರ ಮೇಲ್ಪದರದಂತೆ ಬಹು ಸಡಿಲವಾಗಿರದೆ ಗಟ್ಟಿಯಾಗಿರಬಹುದು. ಆದರೆ ವಾಸ್ತವದಲ್ಲಿ ಈ ಮಣ್ಣು ಗಟ್ಟಿಯಾಗಿ ಬೆಸೆದು ನಿಂತಿರುವುದು ಮೇಲೆ ಆವರಿಸಿರುವಂತಹ ಮರಗಿಡಗಳ ಬೇರಿನ ಜಾಲ ಮತ್ತು ಜೀವಜನ್ಯ ವಸ್ತುಗಳು ಕೊಳೆತು ನಿರ್ಮಿಸಿರುವ ‘ಹ್ಯೂಮಸ್’ ನಿಂದ. ಇವೆರಡೂ ಒಟ್ಟಾಗಿ ಸೃಷ್ಟಿಸಿರುವ ನೈಸರ್ಗಿಕ ಬಲೆಯಿಂದಾಗಿ ಮಾತ್ರವೇ ಆ ಮಣ್ಣು ಗಟ್ಟಿಯಾಗಿ ಬೆಸೆದು ನಿಲ್ಲಲು ಸಾಧ್ಯ. 

ಭೂಮಿಯಾಳದಲ್ಲಿ ಕಲ್ಲುಗಳ ಬಿರುಕು, ಒಣಮಣ್ಣು, ಜೀವಜನ್ಯ ಅವಶೇಷಗಳಿಂದ ಖಾಲಿ ಪ್ರದೇಶಗಳು ನಿರ್ಮಾಣವಾಗಿರುತ್ತವೆ. ಭಾರಿ ಮಳೆ ಬಂದಾಗ ಒದ್ದೆಯಾಗುವ ಮೇಲ್ಮೈ ಮಣ್ಣು ಒಮ್ಮೆಲೇ ಭೂಮಿಯಾಳದ ಆ ಖಾಲಿ ಪ್ರದೇಶಗಳ ಮೇಲೆ ಕುಸಿದು, ದೊಡ್ಡ ಶಬ್ದ ಹೊರಬರುವುದಿದೆ. ಕಳೆದ ನಾಲ್ಕೈದು ವರ್ಷಗಳ ಹಿಂದೆ ವಿಪರೀತ ಮಳೆಯಿಂದಾಗಿ ಭೂ ಪದರಗಳಲ್ಲಿ ನೀರು ಜೋರಾಗಿ ಹರಿಯುತ್ತಿದ್ದರಿಂದ ಆ ಶಬ್ದದ ಪ್ರತಿಧ್ವನಿ ‘ಗುಡುಗುಡು…. ಗುಡುಗುಡು…. ಗುಡುಗುಡು’ ಎಂಬ ಶಬ್ದದ ರೂಪದಲ್ಲಿ ಪಶ್ಚಿಮ ಘಟ್ಟದ ತಪ್ಪಲಿನ ಕೆಲವು ಹಳ್ಳಿಗಳ ಜನರಿಗೆ ಕೇಳಿಸಿದೆ. ಇದನ್ನು ದೃಶ್ಯ ಮಾಧ್ಯಮಗಳು ತಮ್ಮ ಟಿಆರ್ಪಿಗಾಗಿ ಗುಲ್ಲೆಬ್ಬಿಸಿದ್ದು ಬಿಟ್ಟರೆ, ವಾಸ್ತವದಲ್ಲಿ ಅದೇನು ಅಪಾಯಕಾರಿಯೂ ಅಲ್ಲ, ಆತಂಕಪಡುವಂತಹ ವಿಚಾರವೂ ಅಲ್ಲ.

ವಯನಾಡು

ಜಗತ್ತಿನ ಅತೀ ಸೂಕ್ಷ್ಮ ಪರಿಸರಗಳಲ್ಲಿ ಒಂದಾದ ಪಶ್ಚಿಮ ಘಟ್ಟದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆದ್ದಾರಿ, ರೈಲು ಮಾರ್ಗ, ಜಲವಿದ್ಯುತ್ ಯೋಜನೆ, ಅಣುವಿದ್ಯುತ್ ಸ್ಥಾವರ, ಗಣಿಗಾರಿಕೆ, ರೆಸಾರ್ಟ್,  ಪ್ರವಾಸೋದ್ಯಮ, ಕಾಫಿ-ಟೀ-ರಬ್ಬರ್ ತೋಟಗಳು, ಬೋರ್ ವೆಲ್ ಗಳು ಇತ್ಯಾದಿಗಳನ್ನು ಹೆಚ್ಚಿಸಲಾಗಿದೆ. ಜೆಸಿಬಿ, ಹಿಟಾಚಿಗಳಿಂದ ಗುಡ್ಡಗಳನ್ನು ಬೇಕಾಬಿಟ್ಟಿ ಕತ್ತರಿಸಲಾಗುತ್ತಿದೆ. ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಭೂಗರ್ಭದಾಳದ ಮಣ್ಣನ್ನು ತೆಗೆದು ಹಾಕಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಹಸಿರು ಹೊದಿಕೆ ತನ್ನ ಗಾಢತೆಯನ್ನು ಕಳೆದುಕೊಂಡಿರುವುದರಿಂದ ಅದರ ಮೇಲ್ಮೈ ಪದರ ಸಡಿಲವಾಗಿದೆ. ಮಾನವನ ಇನ್ನಿಲ್ಲದ ಹಸ್ತಕ್ಷೇಪಗಳಿಂದ ಶೋಲಾ ಅರಣ್ಯದ ಒಳಗಿನ ಶಿಲಾಪದರದ ಅಂತರವೂ ಹೆಚ್ಚಾಗಿದೆ. ಒಟ್ಟಾರೆ ಮಣ್ಣು ಸಡಿಲವಾಗಿದೆ. ಮಳೆಗಾಲದಲ್ಲಿ ಭಾರಿ ಮಳೆಯಿಂದ ಬಂದ ನೀರು ಇಳಿದು ನದಿ ಸೇರುವ ಬದಲು, ಮಣ್ಣಿನ ಪದರದ ರಂಧ್ರಗಳಲ್ಲಿ ಇಳಿದಿದೆ. ಖನಿಜಾಂಶಗಳು ಕರಗಿದಂತೆ ಖಾಲಿ ಪ್ರದೇಶಗಳ ಗಾತ್ರ ಹಿಗ್ಗಿ, ಇಳಿಯುವ ನೀರೂ ಹೆಚ್ಚಿ, ಧಾರಣಾ ಶಕ್ತಿಗಿಂತ ಹೆಚ್ಚು ನೀರು ಪ್ರವಹಿಸಿ, ಒಳ ಒತ್ತಡ ಏರಿ, ಜಲಸ್ಫೋಟವಾಗಿ, ಮಣ್ಣು ತಗ್ಗಿನೆಡೆ ಜಾರಿ, ಭೂಕುಸಿತಗಳು ಸಂಭವಿಸಿವೆ. 

ಪಶ್ಚಿಮ ಘಟ್ಟದುದ್ದಕ್ಕೂ ಅರಣ್ಯ ನಾಶವಾಗಿ, ಹಸಿರು ಹೊದಿಕೆ ಮಾಯವಾಗಿ, ಮಣ್ಣು ಸಡಿಲವಾಗಿ, ದೊಡ್ಡ ಪ್ರಮಾಣದ ಮಳೆ ನೀರು ಒಮ್ಮೆಲೇ ಭೂಮಿಯೊಳಗೆ ಇಳಿದಿದ್ದರಿಂದ ಭೂಕುಸಿತವಾಯಿತೇ ಹೊರತು ಎಲ್ಲೂ ಭೂಕುಸಿತ ಉಂಟಾಗಲು ಭೂಗರ್ಭದಾಳದ ಸಮಸ್ಯೆಗಳು ಇರಲಿಲ್ಲ. ಎಲ್ಲಕ್ಕೂ ಮೂಲ ಕಾರಣ ಮಾನವನ ಹಸ್ತಕ್ಷೇಪ. ಭಾರಿ ಮಳೆ ಇದಕ್ಕೊಂದು ಪ್ರಚೋದನೆ ಕೊಟ್ಟಿತಷ್ಟೇ.

ನಾಗರಾಜ ಕೂವೆ

ಪರಿಸರ ಬರಹಗಾರರು

ಇದನ್ನೂ ಓದಿ- ವಯನಾಡು ದುರಂತಗಳಿಗೆ ಯಾರು ಹೊಣೆ ?


More articles

Latest article