ಲಿಂಗಾಯತ ಸ್ವಾಮೀಜಿ ಟೀಕಿಸಿದ್ದ ಕಾಡಸಿದ್ದೇಶ್ವರ ಸ್ವಾಮೀಜಿ; ವಿಜಯಪುರ ಪ್ರವೇಶ ನಿರ್ಬಂಧ ಎತ್ತಹಿಡಿದ ಹೈಕೋರ್ಟ್‌

Most read

ಬೆಂಗಳೂರು: ಲಿಂಗಾಯತ ಮಠಾಧಿಪತಿಗಳ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿ ನಿಂದಿಸಿದ್ದಾರೆ ಎಂ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ಇದೇ 16ರಿಂದ ಡಿಸೆಂಬರ್ 14ರವರೆಗೆ ವಿಜಯಪುರ ಜಿಲ್ಲೆ ಪ್ರವೇಶಿಸದಂತೆ ವಿಜಯಪುರ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಇಂದು ವಿಜಯಪುರದಲ್ಲಿ ಆಯೋಜಿಸಲಾಗಿದ್ದ ಸಮರ್ಥ ಸದ್ಗುರು ಶ್ರೀ ಸಿದ್ದರಾಮೇಶ್ವರ ಮಹಾರಾಜರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು.

ವಿಜಯಪುರ ಜಿಲ್ಲೆ ಪ್ರವೇಶಿಸುವುದಕ್ಕೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಪ್ರಶ್ನಿಸಿ ಕಾಡಸಿದ್ದೇಶ್ವರ ಸ್ವಾಮೀಜಿ ಹೈಕೋರ್ಟ್ ನಲ್ಲಿ ರಿಟ್ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರ ಏಕಸದಸ್ಯ ನ್ಯಾಯಪೀಠ ಇಂದು ಪ್ರಕಟಿಸಿದೆ.

ರಾಜ್ಯ ಸರ್ಕಾರದ ಪರ ವಾದ ಹಾಜರಾಗಿದ್ದ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಸ್ವಾಮೀಜಿ ಅವರ ಹಿತದೃಷ್ಟಿಯಿಂದಲೇ ಅವರ ವಿಜಯಪುರ ಭೇಟಿಯನ್ನು ಪ್ರತಿಬಂಧಿಸಲಾಗಿದೆ ಎಂದು ವಾದಿಸಿದ್ದರು.

ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಬೀಳೂರು ಗ್ರಾಮದ ಸಮಾರಂಭವೊಂದರಲ್ಲಿ ಕಾಡಸಿದ್ದೇಶ್ವರ ಮಠದ ಸ್ವಾಮೀಜಿ ಮಾತನಾಡುತ್ತಾ ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ಮುಖ್ಯಮಂತ್ರಿಗಳ ಕೃಪಾಪೋಷಿತ ನಾಟಕ ಮಂಡಳಿಯಾಗಿದೆ. ದೇವರು ಗುಡ್ಯಾಗ ಇಲ್ಲ. ಗುಡಿಗೆ ಹೋಗಬ್ಯಾಡ್ರಿ, ಮನ್ನಾಗಿನ ದೇವರುಗಳನ್ನು ತಗೊಂಡು ಹೊಳ್ಯಾಗ ಹಾಕಿ. ಹೋಟೆಲ್‌ದಾಗ ಹೋಗಿ ದಾರು ಕುಡೀರಿ. ಆರಾಮಾಗಿರಿ, ಮಾಂಸ ತಿನ್ನಿ ಎಂದು ಬೋಧನೆ  ಮಾಡುತ್ತಿದ್ದಾರೆ ಎಂದು ಭಾಷಣ ಮಾಡಿದ್ದರು. ಜತೆಗೆ  ಲಿಂಗಾಯತ ಮಠಾಧಿಪತಿಗಳ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿ ನಿಂದಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕಾಡಸಿದ್ದೇಶ್ವರ ಸ್ವಾಮೀಜಿ ಅವರ ವಿಜಯಪುರ ಜಿಲ್ಲೆಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರು.

More articles

Latest article