ಬೆಂಗಳೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನಗಳ ಅಕ್ರಮ ಹಂಚಿಕೆ ಆರೋಪದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿದ್ದ ಇಸಿಐಆರ್ ಅನ್ನು (ಎನ್‌ಫೋರ್ಸ್‌ಮೆಂಟ್ ಕೇಸ್ ಇನ್‌ಫಾರ್ಮೇಶನ್ ರಿಪೋರ್ಟ್) ಹೈಕೋರ್ಟ್ ರದ್ದುಗೊಳಿಸಿದೆ. ಇಂದು ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಇಡಿ ಸಮನ್ಸ್ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಬಜೆಟ್ ಮಂಡಿಸಿ ಒಂದು ನಿರಾಳತೆ ಹೊಂದಿದ್ದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ರೀತಿಯ ರಿಲೀಫ್ ಸಿಕ್ಕಂತಾಗಿದೆ. ಅವರ ಪತ್ನಿ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನಿರಾಳಾಗಿದ್ದಾರೆ.
ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿರುವುದನ್ನು ಹಾಗೂ ಇಸಿಐಆರ್ ದಾಖಲಿಸಿರುವುದನ್ನು ರದ್ದುಗೊಳಿಸಬೇಕು ಎಂದು ಕೋರಿ ಪಾರ್ವತಿ ಮತ್ತು ಸುರೇಶ್ ಸಲ್ಲಿಸಿದ್ದ ಅರ್ಜಿ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿತು.
ಪಾರ್ವತಿ ಅವರ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸಿ ಅಕ್ಟೋಬರ್ 1, 2024 ರಂದು ವಿವಾದಕ್ಕೆ ಆಸ್ಪದ ನೀಡಿದ್ದ ನಿವೇಶನಗಳನ್ನು ಮುಡಾಗೆ ಹಿಂದಿರುಗಿಸಿದ್ದಾರೆ. 14 ನಿವೇಶನಗಳಷ್ಟೇ ಅಲ್ಲದೆ 1708 ನಿವೇಶನಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ಜಾರಿ ನಿರ್ದೇಶನಾಲಯ ಈಗಾಗಲೇ 160 ನಿವೇಶನಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಇಡಿ ತನ್ನ ಕಾರ್ಯವ್ಯಾಪ್ತಿ ಮೀರಿ ಪರ್ಯಾಯ ತನಿಖೆ ನಡೆಸುತ್ತಿದೆ. ಇಡಿ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಹಲವು ಅಂಶಗಳನ್ನು ಪ್ರಸ್ತಾಪಿಸಿದೆ. ಭೂಸ್ವಾಧೀನ, ಭೂಪರಿವರ್ತನೆ ಮತ್ತಿತರ ಅಂಶಗಳನ್ನು ಕುರಿತೂ ತನಿಖೆ ನಡೆಸಿದೆ. ಲೋಕಾಯುಕ್ತ ಪೊಲೀಸರ ತನಿಖಾ ವ್ಯಾಪ್ತಿಯಲ್ಲಿ ಇಡಿ ಪ್ರವೇಶಿಸಿದೆ ಎಂದು ವಾದಿಸಿದ್ದರು.
ಇಡಿ ಪಾರ್ವತಿ ಅವರು ಮುಡಾಗೆ ಹಿಂತಿರುಗಿಸಿರುವ 14 ನಿವೇಶನಗಳನ್ನು ಜಪ್ತಿ ಮಾಡಿಲ್ಲ. ಆದರೆ ಇತರೆ 160 ನಿವೇಶನಗಳನ್ನು ಜಪ್ತಿ ಮಾಡಿದೆ. ಈಗಾಗಲೇ ಲೋಕಾಯುಕ್ತ ಪೊಲೀಸರು ತನಿಖೆಯಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲವೆಂದು ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಎಂಬುದನ್ನೂ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ವಾದ ಪ್ರತಿವಾದ ಆಲಿಸಿದ್ದ ಹೈಕೋರ್ಟ್, ಜನವರಿ 27ರಂದು ಇಡಿ ಸಮನ್ಸ್ಗೆ ತಡೆ ನೀಡಿ ತೀರ್ಪು ಕಾಯ್ದಿರಿಸಿತ್ತು.