ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಬಿಗ್‌ ರಿಲೀಫ್;‌ ಆರೋಪ ನಿಗದಿ ಪ್ರಕ್ರಿಯೆ ಆರಂಭಿಸದಿರಲು ಹೈಕೋರ್ಟ್‌ ತಡೆ

Most read

ಬೆಂಗಳೂರು:  ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ. ಅತ್ಯಾಚಾರ ಪ್ರಕರಣ ರದ್ದು ಕೋರಿ ಪ್ರಜ್ವಲ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ  ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಡೆ ನೀಡಿದೆ. ಮುಂದಿನ ಆದೇಶದ ವರೆಗೆ ಆರೋಪ ನಿಗದಿ ಮಾಡದಂತೆ ಹೈಕೋರ್ಟ್ ಸೂಚನೆ ನೀಡಿ ಜ.16ಕ್ಕೆ ವಿಚಾರಣೆಯನ್ನು ಮುಂದೂಡಿದರು. ಜನವರಿ 13ಕ್ಕೆ ವಿಚಾರಣಾಧೀನ ಕೋರ್ಟ್‌ನಲ್ಲಿ ಆರೋಪ ನಿಗದಿ ಪ್ರಕ್ರಿಯೆ ಆರಂಭಿಸಲು ದಿನಾಂಕ ನಿಗದಿಯಾಗಿತ್ತು. ಈಗಿನ ಹೈಕೋರ್ಟ್ ಆದೇಶದಿಂದ ಪ್ರಜ್ವಲ್‌ ನಿಟ್ಟುಸಿರು ಬಿಡುವಂತಾಗಿದೆ. ಕೆ.ಆರ್. ನಗರ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ತಮ್ಮ ಹೆಸರು ಕೈಬಿಡುವಂತೆ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ  ಫೆ.7ರಂದು ಇತ್ಯರ್ಥಪಡಿಸುವುದಾಗಿಯೂ ನ್ಯಾಯಪೀಠ ತಿಳಿಸಿದೆ.

ಪ್ರಜ್ವಲ್ ರೇವಣ್ಣಗೆ ಸ್ಥಳೀಯ ಮತ್ತು ಹೈಕೋರ್ಟ್‌ನಲ್ಲಿಯೂ ಜಾಮೀನು ಸಿಕ್ಕಿರಲಿಲ್ಲ. ಜಾಮೀನಿಗಾಗಿ ಪ್ರಜ್ವಲ್ ರೇವಣ್ಣ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬೇಲಾ ತ್ರಿವೇದಿ ಅವರ ಪೀಠ ‘ಆರೋಪಿ ಸೋ ಪವರ್ ಫುಲ್’ ಎಂದು ಒಂದು ಸಾಲಿನ ಆದೇಶದ ಮೂಲಕ ಪ್ರಜ್ವಲ್ ರೇವಣ್ಣ ಅವರ ಅರ್ಜಿಯನ್ನು ವಜಾಗೊಳಿಸಿತ್ತು.

ಈ ಹಿಂದೆ ನವಂಬರ್‌ ನಲ್ಲಿ ನಡೆದ ವಿಚಾರಣೆಯಲ್ಲಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತ್ತು.

 ಜನಪ್ರತಿನಿಧಿ ಮಹಿಳೆಯೊಬ್ಬರು ದೂರು ನೀಡಿ 2021ರಲ್ಲಿ ಹಾಸನದ ವಸತಿ ನಿಲಯ ಸಂಬಂಧ ಚರ್ಚಸಿಲು ಪ್ರಜ್ವಲ್ ರೇವಣ್ಣ ಅವರ ಕಚೇರಿಗೆ ತೆರಳಿದ್ದೆ. ಆಗ ಅವರು ಪಿಸ್ತೂಲು ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿದ್ದರು. ಈ ದೃಶ್ಯವನ್ನು ಮೊಬೈಲ್‌ ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದರು. ಆನಂತರವೂ ವಿಡಿಯೋ ತೋರಿಸಿ ನಗ್ನವಾಗುವಂತೆ ಬೆದರಿಸಿದ್ದರು. ಈ ವಿಷಯವನ್ನು ಬಾಯಿ ಬಿಟ್ಟರೆ ವಿಡಿಯೋ ಲೀಕ್‌ ಮಾಡುವುದಾಗಿಯೂ ಹೆದರಿಸಿದ್ದರು ಎಂದು ದೂರು ಸಲ್ಲಿಸಿದ್ದರು. ಈ ಸಂಬಂಧ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ದೂರು ದಾಖಲಾಗಿತ್ತು.
ಜೆಡಿಎಸ್ ನಾಯಕರೂ ಆಗಿರುವ ಪ್ರಜ್ವಲ್  ವಿರುದ್ಧ ಎರಡು ಅತ್ಯಾಚಾರ ಪ್ರಕರಣಗಳು ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 23 ರಂದು 2,144 ಪುಟಗಳ ಮೊದಲ ಚಾರ್ಜ್ ಶೀಟ್ ಮತ್ತು ಸೆಪ್ಟೆಂಬರ್ 9 ರಂದು 1652 ಪುಟಗಳ ಎರಡನೇ ದೋಷಾರೋಪಣ ಪಟ್ಟಿಯನ್ನು ವಿಶೇಷ ತನಿಖಾ ದಳವು (ಎಸ್‌ಐಟಿ) ಬೆಂಗಳೂರಿನ ಸಿಸಿಹೆಚ್-42 ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ಪ್ರಕರಣದ ಕುರಿತು ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ಸಮಗ್ರ ತನಿಖೆಗಾಗಿ ಏಪ್ರಿಲ್ 28 ರಂದು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.

More articles

Latest article