ಬೈಕ್ ಟ್ಯಾಕ್ಸಿ ಸ್ಥಗಿತಗೊಳಿಸಲು ಹೈಕೋರ್ಟ್‌ ಸೂಚನೆ

Most read

ಬೆಂಗಳೂರು: ಉಬರ್, ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ನಿಯಮ ರೂಪಿಸಿಲ್ಲ. ನಿಯಮಗಳಿಲ್ಲದೇ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಮಾಡುವಂತಿಲ್ಲ. ಆದ್ದರಿಂದ ಬೈಕ್ ಟ್ಯಾಕ್ಸಿ ಸ್ಥಗಿತಗೊಳಿಸುವಂತೆ ಓಲಾ, ಉಬರ್ ಮತ್ತು ರ್ಯಾಪಿಡೊಗಳಿಗೆ ಆರು ವಾರಗಳ ಕಾಲಾವಕಾಶ ನೀಡಿ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ಮುಂದಿನ 3 ತಿಂಗಳಿನಲ್ಲಿ ನಿಯಮ ರೂಪಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಸರ್ಕಾರಕ್ಕೆ ನಿರ್ದೇಶನ ಕೋರಿ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಎ ಎನ್‌ ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರು ಈ ಆದೇಶ ಹೊರಡಿಸಿದ್ದಾರೆ.

1988 ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಅಗತ್ಯ ನಿಯಮಗಳೊಂದಿಗೆ ಸಂಬಂಧಿತ ಮಾರ್ಗಸೂಚಿಗಳನ್ನು ತಿಳಿಸದ ಹೊರತು ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಆರು ವಾರಗಳ ಒಳಗೆ ಎಲ್ಲಾ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳು ಸ್ಥಗಿತಗೊಳ್ಳುವಂತೆ ನೋಡಿಕೊಳ್ಳಲು ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆಗೆ ನಿರ್ದೇಶನ ನೀಡಿದೆ.

More articles

Latest article