Monday, March 31, 2025

ಸರ್ಕಾರಿ ಜಮೀನು ಒತ್ತುವರಿ ಆರೋಪ: ಕೇಂದ್ರ ಸಚಿವ ಕುಮಾರಸ್ವಾಮಿ ಅರ್ಜಿ ಆದೇಶ ವಿಸ್ತರಿಸಿದ ಹೈಕೋರ್ಟ್‌

Most read

ಬೆಂಗಳೂರು: ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ರಾಮನಗರ ತಹಶೀಲ್ದಾರ್‌ ಅವರು, ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನೀಡಿರುವ ನೋಟಿಸ್‌ ಅನ್ವಯ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂಬ ಈ ಹಿಂದಿನ ಆದೇಶವನ್ನು ಹೈಕೋರ್ಟ್‌ ವಿಸ್ತರಿಸಿ ಆದೇಶ ನೀಡಿದೆ.

ಈ ಸಂಬಂಧ ಎಚ್‌.ಡಿ.ಕುಮಾರ ಸ್ವಾಮಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎನ್‌.ಎಸ್‌.ಸಂಜಯಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಕಿರಣ್‌ ವಿ.ರೋಣ ಅವರು, ಕರ್ನಾಟಕ ಭೂ ಕಂದಾಯ ಕಾಯ್ದೆ – 1964 ಕ್ಕೆ ತಿದ್ದುಪಡಿ ತರುವ ಮೂಲಕ ಸರ್ಕಾರಿ ಜಮೀನು ಒತ್ತುವರಿ ಕುರಿತಂತೆ ಒತ್ತುವರಿದಾರರಿಂದ ವಿವರಣೆ ಪಡೆದು ಮುಂದಿನ ಕ್ರಮ ಜರುಗಿಸಲು ತಹಶೀಲ್ದಾರ್‌ಗೆ ಅಧಿಕಾರ ನೀಡಲಾಗಿದೆ. ಅದರಂತೆ ಈ ಪ್ರಕರಣದಲ್ಲೂ ತಹಶೀಲ್ದಾರ್‌ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕುಮಾರಸ್ವಾಮಿ ಅವರಿಗೆ ನೋಟಿಸ್‌ ನೀಡಿದ್ದಾರೆ. ಹಾಗಾಗಿ, ಈ ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದರು.

ಈ ವಾದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಪರ ಹಿರಿಯ ವಕೀಲ ಉದಯ ಹೊಳ್ಳ ಅವರು ತಹಶೀಲ್ದಾರ್ ನೋಟಿಸ್ ನೀಡುವುದಕ್ಕೆ ಅವಕಾಶ ಕಲ್ಪಿಸಿರುವ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತರಲಾಗಿರುವ ತಿದ್ದುಪಡಿಯ ಸಿಂಧುತ್ವವನ್ನೇ ಪ್ರಶ್ನಿಸಲಾಗುತ್ತದೆ. ಈ ಸಂಬಂಧ ಅರ್ಜಿಯನ್ನು ತಿದ್ದುಪಡಿ ಮಾಡುತ್ತೇವೆ. ಅದಕ್ಕಾಗಿ ಸಮಯಾವಕಾಶ ನೀಡಬೇಕು ಎಂದು ಕೋರಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂಬ ಮಧ್ಯಂತರ ಆದೇಶವನ್ನು ವಿಸ್ತರಿಸಿ ವಿಚಾರಣೆಯನ್ನು ಏಪ್ರಿಲ್‌ 1ಕ್ಕೆ ಮುಂದೂಡಿತು.

ಕೇತಗಾನಹಳ್ಳಿ ಸರ್ವೇ ನಂಬರ್‌ 7 ಮತ್ತು 8ರಲ್ಲಿ ಪೋಡಿ ದುರಸ್ತಿಯಾಗದ ಜಮೀನಿನಲ್ಲಿ ನೀವು ಅನಧಿಕೃತವಾಗಿ ಒತ್ತುವರಿ ಮಾಡಿ ಸ್ವಾಧೀನಾನುಭವ ಹೊಂದಿದ್ದೀರಿ. ಹಾಗಾಗಿ, ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ಕಲಂ 94ರ ಅಡಿಯಲ್ಲಿ ಏಕೆ ನಿಮ್ಮಿಂದ ದಂಡ ವಸೂಲಿ ಮಾಡಬಾರದು ಎಂಬುದಕ್ಕೆ ಸಮಜಾಯಿಷಿ ನೀಡಬೇಕು. ಈ ಕುರಿತಂತೆ ನಿಮ್ಮ ಬಳಿ ಇರುವ ದಾಖಲೆಗಳನ್ನು ಸಲ್ಲಿಸಿ. ಇಲ್ಲವಾದಲ್ಲಿ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ರಾಮನಗರ ತಾಲ್ಲೂಕು ತಹಶೀಲ್ದಾರ್‌ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಇದೇ 18ರಂದು ಒತ್ತುವರಿ ತೆರವು ನೋಟಿಸ್‌ ನೀಡಿದ್ದರು.

More articles

Latest article