ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದ ಔತಣಕೂಟದ ಸಭೆಯಲ್ಲಿ ರಾಜಕೀಯವಾಗಿ ಯಾವುದೇ ಚರ್ಚೆಗಳಾಗಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರತಿಕಿಯಿಸಿದ್ದಾರೆ. ಈ ಸಬೆಯಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ. ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಎಲ್ಲವೂ ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಷಯ. ಬದಲಾವಣೆ ಮಾಡುವುದು ಬಿಡುವುದು ಹೈಕಮಾಂಡ್ ತೀರ್ಮಾನ ಎಂದರು.
ಊಟದ ಸಭೆಯಲ್ಲಿ ರಾಜ್ಯ ರಾಜಕೀಯ ಕುರಿತು ಚರ್ಚೆಯಾಗಿಲ್ಲ. ಮಹದೇವಪ್ಪ ಮತ್ತು ಪರಮೇಶ್ವರ್ ಅವರ ಅಭಿಪ್ರಾಯ ಅವರದ್ದು. ಹೊಸ ವರ್ಷದ ನೆಪದಲ್ಲಿ ಊಟಕ್ಕೆ ಸೇರಿದ್ದೇವೆಯೇ ಹೊರತು ಬೇರೆ ಯಾವುದೇ ಕಾರಣಗಳಿಲ್ಲ ಎಂದರು. ಒಬ್ಬರಿಗೆ ಒಂದೇ ಹುದ್ದೆ ಎಂಬ ಚರ್ಚೆ ಎಲ್ಲಾ ಕಾಲದಲ್ಲಿಯೂ ಇದೆ. ದೇವರಾಜ ಅರಸು ಕಾಲದಲ್ಲಿಯೂ ಕೂಡ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಇತ್ತು. ದೇವರಾಜ ಅರಸು ಅವರು ಎರಡು ಹುದ್ದೆಗಳಲ್ಲಿ ಮುಂದುವರಿಯುತ್ತೇನೆ ಎಂದಾಗ ಪಕ್ಷ ಅವರನ್ನೇ ತೆಗೆದ ಉದಾಹರಣೆ ಇದೆ. ನಮ್ಮ ಹೈಕಮಾಂಡ್ ಗಟ್ಟಿಯಾಗಿದೆ. ಹೈಕಮಾಂಡ್ ಹೇಳಿದರೆ ಡಿಕೆ ಶಿವಕುಮಾರ್ ಅವರೇ ಮುಂದುವರಿಯಲಿ. ಅವರ ನೇತೃತ್ವದಲ್ಲೇ ಚುನಾವಣೆ ಗೆದ್ದಿದ್ದೇವೆ ಎಂದರು. ನನಗಂತೂ ಯಾವ ಹುದ್ದೆಯೂ ಬೇಡ, ಬೇಕಿದ್ದಲ್ಲಿ ಸಚಿವ ಸ್ಥಾನವನ್ನೂ ವಾಪಸ್ ತೆಗೆದುಕೊಳ್ಳಲಿ. ನಮ್ಮ ಪಕ್ಷದ ಹೈಕಮಾಂಡ್ ಗಟ್ಟಿಯಾಗಿದೆ. ಎಲ್ಲವೂ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಕೆಎನ್ ರಾಜಣ್ಣ ಮತ್ತೊಮ್ಮೆ ಸ್ಪಷ್ಟಪಡಿಸಿದರು.