ಬೋ.. ಮಗ ಅಂದರೆ ಗಂಡನಿಲ್ಲದ ವಿಧವೆಗೆ ಅನೈತಿಕವಾಗಿ ಹುಟ್ಟಿದವ ಎಂದು. ಮಹಿಳೆಯೊಬ್ಬಳು ಘಟನೆಗೆ ಸಂಬಂಧವೇ ಇಲ್ಲದ ಮತ್ತೊಬ್ಬ ಮಹಿಳೆಯನ್ನು ಕೀಳು ದೃಷ್ಟಿಯಿಂದ ಎಳೆದು ತಂದು ಅವಮಾನಿಸುತ್ತಾಳೆ ಎಂದರೆ ಅದು ಸ್ವತಃ ಅವಳನ್ನೇ ಅವಮಾನಿಸಿ ಕೊಂಡಂತೆಯೇ ಅಲ್ಲವೇ?- ಶಂಕರ್ ಸೂರ್ನಳ್ಳಿ, ಸಾಮಾಜಿಕ ಹೋರಾಟಗಾರರು.
ಇತ್ತೀಚೆಗೆ ಕನ್ನಡದ ರಿಯಾಲಿಟಿ ಷೋ ಒಂದರಲ್ಲಿ ಧರ್ಮ ಹಾಗು ಸಂಸ್ಕೃತಿ ರಕ್ಷಣೆಯ ಮಾತಿಗಾಗಿ ಬಹಳೇ ಹೆಸರುವಾಸಿಯಾದ ಹೆಣ್ಣು ಮಗಳೊಬ್ಬಳು ಆಡಿದಂತಹ ಅಸಭ್ಯ ಪದ ಬಹಳ ಚರ್ಚೆಗೊಳಗಾಗಿತ್ತು. ನಂತರ ಕಾರ್ಯಕ್ರಮದ ನಿರೂಪಕರು ಆ ಪದ ಬಳಕೆಯ ಕುರಿತಂತೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದಾಗ ಅದಕ್ಕೂ ಆಕೆ ತನ್ನದೇ ರೀತಿಯ ಸಮರ್ಥನೆ ಕೊಡ ಹೋದದ್ದಲ್ಲದೇ ಬಳಿಕ ಸಹ ಸ್ಪರ್ಧಿಗಳೊಂದಿಗೆ ಮಾತನಾಡುವಾಗಲೂ ತನ್ನನ್ನು ಪ್ರಶ್ನಿಸಿದ ನಿರೂಪಕನ ಆ ನಿಲುವಿನ ಕುರಿತಂತೆ ರೊಳ್ಳೆ ತೆಗೆದಿದ್ದರು. ಅರ್ಥಾತ್ ತನ್ನ ಮಾತಿನ ಕುರಿತಂತೆ ಮೇಲ್ನೋಟದ “ಸಾರಿ..” ಕೇಳುವ ಹೊರತಾಗಿ ಬೇರಾವ ಪಶ್ಚಾತ್ತಾಪವೂ ಈಕೆಗೆ ಇದ್ದಂತಿರಲಿಲ್ಲ.
ನಿರೂಪಕ ಹೇಳಿದಂತೆ ನಿಜಕ್ಕೂ ಅದು ಹೆಣ್ಣನ್ನು ಕೀಳಾಗಿ ಅಪಮಾನಿಸುವಂತಹ ಪದವೇ ಹೌದು. ಅದು ಸಂಸ್ಕೃತಿ ರಕ್ಷಣೆಯ ಸೋಗಿನವರು ಹೇಳಲಿ ಇಲ್ಲಾ ಮಾಮೂಲಿ ಜನ ಸಾಮಾನ್ಯನೇ ಹೇಳಲಿ ಅಪ್ಪನಿಗೆ ಹುಟ್ಟಿದ.., ಒಬ್ಬ ಅಪ್ಪನಿಗೆ ಹುಟ್ಟಿದ.. ಎನ್ನುವಂತಹ ಪದಗಳು ಹೆಣ್ಣನ್ನು ತುಚ್ಛವಾಗಿ ಬಿಂಬಿಸುವುದಲ್ಲದೇ ಬೇರೆ ಯಾವುದೇ ಒಳ್ಳೆಯಭಾವ ಅದರಲ್ಲಿಲ್ಲ. ಹಿಂದೆ ಯುದ್ಧ ಕಾಲದಲ್ಲಿ ವಿರೋಧಿ ಸೈನಿಕರು ಮೊದಲಿಗೆ ಅಲ್ಲಿನ ಹೆಣ್ಣಿನ ಮೇಲೆ ದಾಳಿ ನಡೆಸುತ್ತಿದ್ದರಂತೆ. ಕಾರಣ ಆಕ್ರಮಿತ ಭಾಗದ ಜನರ ನೈತಿಕ ಸ್ಥೈರ್ಯ ಕುಂದಿಸಲು. ಇಲ್ಲಿಯೂ ಕೂಡ ಅದೇ ರೀತಿ ಎದುರಾಳಿಯನ್ನು ಜರೆಯುವಾಗ ಜಗಳದಲ್ಲಿ ಸಂಬಂಧವೇ ಇಲ್ಲದ ತಾಯಿಯೋ ಸಹೋದರಿಯೋ ಹೆಂಡತಿಯನ್ನೋ ಅನಾವಶ್ಯಕವಾಗಿ ಎಳೆದು ತರುತ್ತಾರೆ. ಸೂ.. ಮಗ, ಬೋ.. ಮಗ, ನನ್ ಮಗ್ನೇ.. ಇವೆಲ್ಲ ಇಂತಹ ಅಸಭ್ಯ ಮನಸುಗಳದ್ದೇ ಶೋಧನೆಗಳು. ಇತ್ತೀಚೆಗೆ ಗೌರವಾನ್ವಿತ ಸ್ಥಾನದಲ್ಲಿರುವ ಶಾಸಕನೊಬ್ಬ ಕಂಟ್ರಾಕ್ಟರ್ ಒಬ್ಬನ ಮೇಲೆ ಹಣದ ವಿಚಾರದಲ್ಲಿ ರೇಗಾಡುವಾಗ ಅವರ ತಾಯಿಯನ್ನು ತೀರಾ ಅಸಭ್ಯವಾಗಿ ಬೈದಿದ್ದನ್ನ ಇಡೀ ನಾಡಿಗೆ ನಾಡೇ ಕೇಳಿಸಿಕೊಂಡಿತ್ತು.
ಗಂಡಸರು ಬೈದು ಕೊಳ್ಳುವಾಗ ಸಾಮಾನ್ಯವಾಗಿ ಬಳಸುವ ಬೋ..ಮಗ ಎನ್ನೋ ಬೈಗಳನ್ನು ಕೇಳಿಯೂ ಕೇಳಿಸದಂತೆ ಬಿಡುವುದೇ ಹೆಚ್ಚು. ಆದರೆ, ಇದೇ ಬೈಗಳನ್ನು ಹೆಂಗಸರು ಬಳಸುವಾಗ ಅದು ತೀರಾ ಕೆಟ್ಟದೆನಿಸುತ್ತದೆ. ಕಾರಣ ಇಲ್ಲಿನ ಮಗ ಎನ್ನುವ ಪದ ಗಂಡಸಿಗೆ ಸಂಬಂಧಿಸಿದ್ದೇ ಹೌದಾದರೂ ಅದರ ಹಿಂದಿರುವ ಪದ ಆತನ ತಾಯಿ ಹಾದಿ ತಪ್ಪಿದವಳೆಂದು ದೂರಿ ಜರೆಯುತ್ತದೆ. ಅರ್ಥಾತ್ ಇಲ್ಲಿ ಬೋ.. ಮಗ ಅಂದರೆ ಗಂಡನಿಲ್ಲದ ವಿಧವೆಗೆ ಅನೈತಿಕವಾಗಿ ಹುಟ್ಟಿದವ ಎಂದು. ಮಹಿಳೆಯೊಬ್ಬಳು ಘಟನೆಗೆ ಸಂಬಂಧವೇ ಇಲ್ಲದ ಮತ್ತೊಬ್ಬ ಮಹಿಳೆಯನ್ನು ಕೀಳು ದೃಷ್ಟಿಯಿಂದ ಎಳೆದು ತಂದು ಅವಮಾನಿಸುತ್ತಾಳೆಂದರೆ ಅದು ಸ್ವತಃ ಅವಳನ್ನೇ ಅವಮಾನಿಸಿಕೊಂಡಂತೆಯೇ ಅಲ್ಲವೇ.. ಸಂಸ್ಕೃತಿ ರಕ್ಷಕಿ ಹೇಳಿದಂತಹ ಅಪ್ಪನಿಗೆ ಹುಟ್ಟಿದ್ರೆ.., ಒಬ್ಬ ಅಪ್ಪನಿಗೆ.. ಇವೆಲ್ಲವೂ ಕೂಡ ಇದೇ ರೀತಿಯಲ್ಲಿ ಎದುರಾಳಿಯನ್ನು ನೇರವಾಗಿ ದೂರುವ ಬದಲು ಸಂಬಂಧವೇ ಇಲ್ಲದ ಆತನ ತಾಯಿಯ ಅನೈತಿಕ ನಡೆಯನ್ನ ದೂರುತ್ತದೆ. ಹಾಗಾಗಿ ಒಂದು ಹೆಣ್ಣಾಗಿ ಸಂಸ್ಕೃತಿ ರಕ್ಷಕಿಯ ಈ ನಡೆ ನಿಜಕ್ಕೂ ಅಕ್ಷಮ್ಯ.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯದ ಕುರಿತಂತೆ “ಮಹಿಳೆಯೊಬ್ಬಳು ಮಧ್ಯರಾತ್ರಿಯಲ್ಲೂ ಕೂಡ ಏಕಾಂಗಿಯಾಗಿ ಎಲ್ಲೂ ಕೂಡ ನಿರ್ಭಯವಾಗಿ ಹೋಗಿ ಬರುವಂತಹ ಸನ್ನಿವೇಶ ಸೃಷ್ಟಿಯಾದಲ್ಲಿ ಮಾತ್ರ ಅದೇ ನಿಜವಾದ ಸ್ವಾತಂತ್ರ್ಯ ಎಂದು ನಂಬುವೆ” ಎಂದಿದ್ದರು. ಆದರೆ ಗಾಂಧಿ ಕಂಡ ಕನಸು ಇಂದಿಗೂ ಬಂದಿಲ್ಲ. ಬದಲಿಗೆ ಅದು ಮತ್ತಷ್ಟು ದಿಕ್ಕು ತಪ್ಪಿ ಹೋಗುತ್ತಲಿದೆ ಎನ್ನುವುದೇ ಖೇದಕರ. ಭೀಕರ ಅತ್ಯಾಚಾರಗಳು ನಡೆದಾಗ ಅವಳು ಧರಿಸಿದ್ಧ ಬಟ್ಟೆಯೇ ಸರಿಯಿಲ್ಲ, ಅವಳು ಆ ಹೊತ್ತಿನಲ್ಲಿ ಯಾಕೆ ಹೋಗಬೇಕಿತ್ತು? ಕೈ ಮುಗಿದು ಅಣ್ಣಾ ಎನ್ನಬೇಕಿತ್ತು ಎನ್ನುವ, ಅತ್ಯಾಚಾರಿಗಳನ್ನು “ಸಂಸ್ಕಾರಿ” ಗಳೆಂದು ಕರೆದು ಹೂಹಾರಹಾಕಿ ಸನ್ಮಾನಿಸುವ, ಸಂತ್ರಸ್ತೆಯ ಮಾನ ಹರಾಜು ಹಾಕುವ, ಒಟ್ಟಾರೆ ಸಂತ್ರಸ್ತೆಯನ್ನೇ ಅಪರಾಧಿ ಸ್ಥಾನದಲ್ಲಿ ಕುಳ್ಳಿರಿಸುವಂತಹ ಇಂದಿನ ಕಾಲದಲ್ಲಿ ಗಾಂಧೀಜಿಯ ಈ ಕನಸು ಅಷ್ಟರಲ್ಲೇ ಇದೆ.
ಗಂಗಾವತಿಯ ಹಿರಿಯ ಹಾಸ್ಯ ಕಲಾವಿದರೊಬ್ಬರು ಹೇಳುವ ಪ್ರಸಿದ್ಧ ಹಾಸ್ಯ (!?) ಪ್ರಸಂಗ ಎಲ್ಲರಿಗೂ ತಿಳಿದದ್ದೇ. ಅವರ ಭಾಗದಲ್ಲಿ ಸೂ.. ಮಗ ಎನ್ನುವ ಪದ ಎಷ್ಟು ಸಾಮಾನ್ಯವಾಗಿದೆಯೆಂದರೆ ಆ ಪದ ಬಳಸದಿದ್ದಲ್ಲಿ ಏನೋ ಒಂದು ಕೊರತೆಯ ಭಾವ ಅಲ್ಲಿನವರಿಗೆ ಎದ್ದು ಕಾಣುತ್ತಿತ್ತಂತೆ. ಇದೇನೂ ದೊಡ್ಡ ಸಂಗತಿಯೇನಲ್ಲ. ಉತ್ತರದ ಕೆಲ ಭಾಗದ ಹಿಂದಿವಾಲಾಗಳು ತಮ್ಮ ಮಾತಿನಲ್ಲಿ ಮಾ.. ಬೆಹನ್.. ಗಳನ್ನು ಮೇಲಿನ ರೀತಿಯೇ ತೀರಾ ಸಹಜವೆಂಬಂತೆ ಎಳೆದು ತರುತ್ತಾರೆ ಸಂಬಂಧಿಗಳ ಜೊತೆ ಮಾತನಾಡುವಾಗಲೂ. ಅಷ್ಟೇ ಯಾಕೆ, ತೀರಾ ಮಾಮೂಲಿ ಬಳಕೆ ಎನ್ನುವಂತೆ ತೋರುವ ಹಿಂದಿಯ “ಸಾಲಾ” ಎನ್ನುವ ಬೈಗುಳವಲ್ಲದ ಬೈಗಳು ಕೂಡ ಸೋದರಿ ಎಂಬ ಹೆಣ್ಣನ್ನು ಅವಮಾನಿಸುವ ಪದವೇ ಆಗಿದೆ. ದೋಸ್ತಿಗಳು ಮಾತನಾಡುವಾಗ ಸಲುಗೆಯಿಂದ ಬಳಸುವ ಸಾಲೆ.. ಅಂದರೆ ಭಾವನೆಂಟ ಎಂದರ್ಥ. ಅರ್ಥಾತ್ ನಿನ್ನ ಸೋದರಿಗೆ ಗಂಡ ನಾನು ಎಂಬ ಭಾವ ಇದರಲ್ಲಿದೆ.
ಇವತ್ತಿನ ಮನರಂಜನಾ ಮಾಧ್ಯಮಗಳಲ್ಲಿ ಹೆಣ್ಣಿನ ಕುರಿತಂತಿರುವ ಇಂತಹ ಅಸಭ್ಯ ಬೈಗುಳಗಳ ಬಳಕೆ ಸರ್ವೇ ಸಾಮಾನ್ಯ ಎಂಬಂತೆ ಬಳಕೆಯಲ್ಲಿದೆ. ಸಂಭಾಷಣೆಗಳಲ್ಲಿ, ಹಾಡುಗಳಲ್ಲಿ ಇವೆಲ್ಲ ನುಸುಳಿಕೊಂಡು ಸಾಮಾಜಿಕವಾಗಿ ಇವೆಲ್ಲ ಒಪ್ಪಿತ ಎಂಬಂತೆ ಚಿತ್ರಿತವಾಗತೊಡಗಿದೆ. ಇತ್ತೀಚೆಗೆ ಬಂದ ಭೀಮ ಎಂಬ ಒಳ್ಳೆಯ ಹೆಸರಿನ ಚಿತ್ರದಲ್ಲಿನ ಮಹಿಳಾ ಪೊಲೀಸ್ ಒಬ್ಬರು ಬಳಸುವ ಭಾಷೆಯೋ ತೀರಾ ಖತರ್ ನಾಕ್ ಆಗಿದೆ. ಹಿಂದೆ ರಾಜ್ ಕುಮಾರ್ ಚಿತ್ರವೊಂದರಲ್ಲಿ ರಾಜ್ ಕುಮಾರ್ ರವರ ಬಾಯಿಂದ ಬಂದ ಒಂದು ಸಾಮಾನ್ಯ ಬಳಕೆಯ ಗಾದೆ ಮಾತು ಮಹಿಳೆಯನ್ನು ಅವಮಾನಿಸುತ್ತದೆ ಎಂದು ಮರಳಿ ಅದನ್ನು ಕಿತ್ತು ಹಾಕಲಾಗಿತ್ತು. ಆ ಗಾದೆ ಮಾತೆಂದರೆ “ಕಳ್ಳನ ಹೆಂಡತಿ ಮುಂ…” ಎಂದು. ಇವತ್ತಿನ ಕಾಲವೋ ಯಾವ ಕೆಟ್ಟಾ ಕೊಳಕು ಅಸಭ್ಯ ಬೈಗುಳಕ್ಕೂ ಕೂಡ ಲಂಗು ಲಗಾಮಿಲ್ಲ.
ಹೆಣ್ಣಿಗೆ ದೇವತೆಯ ಸ್ಥಾನ ಕೊಟ್ಟಂತವರು ನಾವು.. ಹೆಣ್ಣನ್ನು ಪೂಜಿಸುವವರು ನಾವು.. ಎಂಬ ಸಬೂಬುಗಳೇನೇ ಇರಲಿ, ಹೆಣ್ಣಿಗೆ ಬೇಕಿರುವುದು ದಾಸೀತನವೂ ಅಲ್ಲ ಅದೇ ರೀತಿ ದೈವತ್ವವೂ ಅಲ್ಲ. ಹೆಣ್ಣನ್ನು ಮನುಷ್ಯಳಾಗಿ ಕಂಡರೆ ಅದೇ ದೊಡ್ಡ ಭಾಗ್ಯ. ಆಗ ಯಾವನೋ ತಲೆಕೆಟ್ಟವನ/ಳ ಬಾಯಿ ಚಪಲದ ಬೈಗುಳಕ್ಕೆ ಆಕೆ ಆಹಾರವಾಗುವುದಾದರೂ ತಪ್ಪೀತು.
ಶಂಕರ್ ಸೂರ್ನಳ್ಳಿ
ಸಾಮಾಜಿಕ ಹೋರಾಟಗಾರರು
ಇದನ್ನೂ ಓದಿ- ಮರಕುಂಬಿ ದಲಿತ ದೌರ್ಜನ್ಯ ಪ್ರಕರಣ: ನ್ಯಾಯಾಲಯದ ಚಾರಿತ್ರಿಕ ತೀರ್ಪು!