ಇತ್ತೀಚೆಗೆ ಬಿಡುಗಡೆಯಾದ ಭೀಮರಾವ್ ಪಿ ನಿರ್ದೇಶನದ ʼ ಹೆಬ್ಬುಲಿ ಕಟ್ ʼ ಕನ್ನಡ ಸಿನಿಮಾದ ಎಸ್ಟಾಬ್ಲಿಷಿಂಗ್ ಶಾಟ್ ಒಂದು Long Takeನ್ನು ಹೊಂದಿದೆ. ಒಂದು ನಂದೀಬಟ್ಟಲು ಹೂ ಗಿಡದಿಂದ ಕಳಚಿ ಹರಿಯುವ ನೀರಿನಲ್ಲಿ ಬೀಳುತ್ತದೆ. ಆ ನೀರಿನಲ್ಲಿ ಕಲ್ಮಶ ಮತ್ತು ಕೆಲವು ಅಡೆತಡೆಗಳೂ ಇರುತ್ತವೆ. ಆದರೂ ಆ ಹೂವು ತೇಲುತ್ತಲೇ ಹೋಗುತ್ತದೆ. ಧಡಕ್ಕನೆ ಒಂದು ಮೋಟರ್ ಸೈಕಲ್ ಅದರ ಮೇಲೆ ಹಾದು ಹೋಗುತ್ತದೆ! ಈ ಶಾಟ್ ಸಿನಿಮಾದ ವಸ್ತುವಿನ ಮುನ್ನುಡಿಯಂತಿದೆ!
ನಂತರದ ದೃಶ್ಯದಲ್ಲಿ ಸಿಂಗ್ರಾಣಿ ಕಲ್ಲನ್ನು ಎತ್ತುವ ಸ್ಪರ್ಧೆಯನ್ನು ತೋರಿಸಲಾಗಿದೆ. ಮುಖ್ಯ ಅತಿಥಿಯಾಗಿರುವ ರಾಯಚೂರು ಜಿಲ್ಲೆಯ ಒಂದು ಹಳ್ಳಿಯ ಗೌಡ (ಪ್ರಮುಖ) ಯುವಕ “ ಇಲ್ಲಿ 100 ಕೆಜಿ ಸಿಂಗ್ರಾಣಿ ಕಲ್ಲನ್ನು ಎತ್ತುವವರು ಯಾರು ಇಲ್ಲವೇ? “ ಎಂಬ ಸವಾಲನ್ನು ಎಸೆಯುತ್ತಾನೆ. ತರುವಾಯದ ಶಾಟ್‌ನಲ್ಲಿ ಗತ್ತಿನಲ್ಲಿ ನಡೆದು ಬರುವ ಪಾದಗಳನ್ನು ಬಿಂಬಿಸಲಾಗಿದೆ. ಆ ಪಾದಗಳ ವ್ಯಕ್ತಿ ಲೀಲಾಜಾಲವಾಗಿ 100 ಕೆಜಿ ಸಿಂಗ್ರಾಣಿ ಕಲ್ಲನ್ನು ಎತ್ತಿಬಿಡುತ್ತಾನೆ! ಆತ ಆ ಹಳ್ಳಿಯ ದ್ವಿಚಕ್ರ ವಾಹನಗಳ ಮೆಕ್ಯಾನಿಕ್ ರಫೀಕ್ ಆಗಿರುತ್ತಾನೆ! ಮುಖ್ಯವಾಹಿನಿಯ ಸಿನಿಮಾಗಳಲ್ಲಿ ಸ್ಟಾರ್, ಸೂಪರ್ ಸ್ಟಾರ್ ಎಂಟ್ರಿ ಮೇಲೆ ಪ್ರಸ್ತಾಪಿಸಿರುವ ರೀತಿಯಲ್ಲಿ ಇರುತ್ತದೆ. ʼ ಹೆಬ್ಬುಲಿ ಕಟ್ ʼ ಸಿನಿಮಾ ಕೂಡ ಮುಖ್ಯವಾಹಿನಿ ಸಿನಿಮಾದ ಅನೇಕ ಅಂಶಗಳನ್ನು ಒಳಗೊಂಡಿದೆ. ಆದರೆ ಒಂದು ಸಹಾಯಕ ಪಾತ್ರದ ಈ ಪರಿಯ ಎಂಟ್ರಿ ಭಿನ್ನವಾಗಿದೆ; ಗಮನೀಯವಾಗಿದೆ!
ವಿನ್ಯಾ (ವಿನಯಾ) ಹಳ್ಳಿಯ ಚಮ್ಮಾರನ ಮಗ. ತಾಯಿ ತಂದೆಯೊಡನೆ ತೀರ ಸಾಮಾನ್ಯ ಬಾಳನ್ನು ನಡೆಸುವ ವಿನ್ಯಾನಿಗೆ ತನ್ನ ಸಹಪಾಠಿ ಹುಡುಗಿ ಕುರಿತು ಹದಿಹರೆಯದ ಕ್ರಶ್ ಇರುತ್ತದೆ. ಒಮ್ಮೆ ಆಕೆಯ ಪುಸ್ತಕದಲ್ಲಿ ʼ ಹೆಬ್ಬುಲಿ ʼ ಸಿನಿಮಾದ ಭಿನ್ನ ಬಗೆಯ ಹೇರ್ ಸ್ಟೈಲ್ ಇರುವ ಸುದೀಪರ ಒಂದು ಫೋಟೊ ಇರುವುದು ಆತನಿಗೆ ಕಂಡುಬರುತ್ತದೆ. ಆಕೆಯನ್ನು ಆಕರ್ಷಿಸಲು ತಾನು ಹೆಬ್ಬುಲಿ ಕಟ್ ಮಾಡಿಸಿಕೊಳ್ಳಬೇಕೆಂದು ವಿನ್ಯಾ ನಿರ್ಧರಿಸುತ್ತಾನೆ.. ಆತನ ದೋಸ್ತಿ ರಫೀಕ್(ಈತನೂ ಸುದೀಪರ ಅಭಿಮಾನಿ) ವಿನ್ಯಾನ ಈ ಬಯಕೆಗೆ ಇಂಬನ್ನು ನೀಡುತ್ತಾನೆ. ವಿನ್ಯಾನ ಈ ಬಯಕೆ ಈಡೇರುತ್ತದೆಯೇ ಎಂಬುದು ಸಿನಿಮಾದ ಕ್ಲೈಮ್ಯಾಕ್ಸ್.
ಈ ಸಿನಿಮಾದ ಮೊದಲರ್ಧ ಎಂಟರ್‌ಟೈನಿಂಗ್ ಎನ್ನಬಹುದಾದ ಕೆಲವು ಘಟನೆಗಳನ್ನು ಹೊಂದಿದೆ. ಇಂಟರ್ವಲ್ ನಂತರ ಅದು ಕೆಲವು ತಿರುವುಗಳನ್ನು ಪಡೆದು ವೀಕ್ಷಕರಲ್ಲಿ ಗಹನ ವಿಚಾರಗಳು ಹಾಗೂ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಸ್ವಾತಂತ್ರ್ಯವನ್ನು ಪಡೆದು ಎಪ್ಪತ್ತೆಂಟು ವರ್ಷಗಳಾದರೂ ಹೆಚ್ಚಾಗಿ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಜಾತಿಶೋಷಣೆ( ಇದು ನಗರಗಳಲ್ಲಿ ಬೇರೆಯೇ ರೂಪಗಳನ್ನು ಪಡೆಯುತ್ತದೆ) ಜರುಗುತ್ತ ಬಂದಿರುವುದು ತಿಳಿದ ವಿಷಯವೇ ಸರಿ. ಜಾತಿಶ್ರೇಣೀಕರಣದಲ್ಲಿ ಅತ್ಯಂತ ತಳಸ್ತರದಲ್ಲಿ ಇರುವ ದಲಿತರು ಇಂದಿಗೂ ಹಲವು ಗ್ರಾಮಗಳಲ್ಲಿ ಕ್ಷೌರ ಮಾಡಿಸಿಕೊಳ್ಳಲು ಆಗದಂತಹ ಪರಿಸ್ಥಿತಿಯಿರುವುದು ನಮ್ಮ ಸಾಮಾಜಿಕ ಜೀವನದಲ್ಲಿ ಹಾಸುಹೊಕ್ಕಾಗಿರುವ ಸಾಮಾಜಿಕ ತಾರತಮ್ಯಗಳಿಗೆ ಹಿಡಿದ ಕೈಗನ್ನಡಿ! ಈ ವಿಷಯಕ್ಕೆ ಸಂಬಂಧಿಸಿದಂತೆ, ದಲಿತರು ಥಳಿತಕ್ಕೊಳಗಾಗುತ್ತಿದ್ದಾರೆ; ಕೊಲೆಗಳಿಗೂ ಈಡಾಗುತ್ತಿದ್ದಾರೆ. ಹೇರ್ ಕಟ್ಟಿಂಗ್ ಕುರಿತಂತೆ ಸಿನಿಮಾದಲ್ಲಿ ಜಾತಿಯ ಆಧಾರದ ಶೋಷಣೆಯನ್ನು ವಾಚ್ಯವಾಗಿಸಿಲ್ಲ. ಸೂಕ್ತ ದೃಶ್ಯ ಕಟ್ಟೋಣದ ಮೂಲಕ ಪರಿಣಾಮಕಾರಿಯಾಗಿ ದಾಟಿಸುವುದರಲ್ಲಿ ಯಶಸ್ವಿಯಾಗಿದ್ದಾರೆ ನಿರ್ದೇಶಕರು. ಒಮ್ಮೆ ಹಳ್ಳಿಯ ಗೌಡ ಯುವಕ ತನ್ನ ಬೈಕಿನಲ್ಲಿ ಬರುತ್ತಿದ್ದಾಗ ಮಲದ ಮೇಲೆ ಕಾಲಿಡುತ್ತಾನೆ. ಪಕ್ಕದಲ್ಲಿ ತಿರುಗಿ ಒಂದು ಮನೆಯ ಮುಂದೆ ಕುಳಿತಿದ್ದ ಮುದುಕಿಯನ್ನು ಮೊಮ್ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಬಾರದೇ ಎಂಬರ್ಥದ ಮಾತುಗಳನ್ನು ಬಳಸಿ ವ್ಯಗ್ರವಾಗಿ ನಿಂದಿಸುತ್ತಾನೆ. ನಂತರ ವಿನ್ಯಾನ ತಂದೆಯ ಚಪ್ಪಲಿ ರಿಪೇರಿಯ ಸಣ್ಣ ಅಂಗಡಿ ಮುಂದಿದ್ದ ಗೋಣಿ ತಾಟಿಗೆ ತನ್ನ ಪಾದರಕ್ಷೆಗೆ ಮೆತ್ತಿದ್ದ ಮಲವನ್ನು ಸವರಿ ಬಿಡುತ್ತಾನೆ!
ಪ್ರಸ್ತುತ ಕಾಲದ ಜಾತಿಗಳ ನಡುವೆ ಇರುವ ತಾರತಮ್ಯ, ಮತದ ಒಳಗಿರುವ ಕಟ್ಟುಪಾಡುಗಳು, ಬಹುಸಂಖ್ಯಾತರು ಅಲ್ಪಸಂಖ್ಯಾತರ ಬಗೆಗೆ ಹೊಂದಿರುವ ಧೋರಣೆಗಳು; ಗುಮಾನಿಯ ನಡತೆಗಳನ್ನು ಸಿನಿಮಾದಲ್ಲಿ ನಿರೂಪಿಸಲಾಗಿದೆ. ವಾಟ್ಸಪ್ ಯೂನಿವರ್ಸಿಟಿಯ ಸುಳ್ಳು ಪ್ರಚಾರದಿಂದ ಆಗುವ ಮತೀಯ ಸಂಘರ್ಷದ ಒಂದು ವೃತ್ತಾಂತ ಕೂಡ ಇಲ್ಲಿದೆ. ಆದರೆ ರಫೀಕ್ ವಿನ್ಯಾನನ್ನು ಮುಂಬೈಯಲ್ಲಿ ಮಾರಿಬಿಟ್ಟ ಎಂಬ ಸಂಗತಿ ಅಸಮಂಜಸ ಎಂದೆನಿಸಿತು! ಸಿನಿಮಾದಲ್ಲಿ ಸ್ವಲ್ಪ ಮೌನವಿದ್ದಿದ್ದರೇ ಸಿನಿಮಾ ಎತ್ತುವ ಗಂಭೀರ ಪ್ರಶ್ನೆಗಳನ್ನು ವೀಕ್ಷಕರು ಇನ್ನಷ್ಟು ಗಾಢವಾಗಿ ಯೋಚಿಸುವಂತೆ ಆಗುತ್ತಿತ್ತು! ವಿನ್ಯಾ ಕಾಣುವ ಹಗಲು ಕನಸುಗಳು ಹದಿಹರೆಯದ ನಿರೀಕ್ಷೆಗಳ ಸುಪ್ತಭಾವಗಳ ಅಭಿವ್ಯಕ್ತಿಯಾದರೂ, ಅವು ನಿರ್ದೇಶಕರ ಸಮಸಮಾಜದ ತುಡಿತಗಳು ಎಂದೂ ಭಾವಿಸಬಹುದೇನೋ!
ವಿನ್ಯಾ ತನ್ನ ಸಹಪಾಠಿ ಹುಡುಗಿಯ ರಿಪೇರಿಗೊಂಡ ಚಪ್ಪಲಿಗಳನ್ನು ವಾಪಸ್ಸು ಕೊಡಲು ಆಕೆಯ ಮನೆಗೆ ಹೋದಾಗ ಕತ್ತಲಾಗಿರುತ್ತದೆ. ಆಗ ಆ ಮನೆಯ ಒಳಗೆ ಬೆಳಕು ಢಾಳಾಗಿರುತ್ತದೆ. ಹೊರಗಡೆ ಕತ್ತಲಿರುತ್ತದೆ. ಮನೆಯ ಮುಂದೆ ದೊಡ್ಡ ಬೈಕ್ ನಿಂತಿರುತ್ತದೆ. ಅದಕ್ಕೆ ಎದುರಾಗಿ ದೂರದಲ್ಲಿ ವಿನ್ಯಾ ತನ್ನ ಹಳೆಯ ಸೈಕಲನ್ನು ನಿಲ್ಲಿಸುತ್ತಾನೆ. ನಂತರ ಮನೆಯ ಜಗಲಿಯ ಮೇಲೆ ಚಪ್ಪಲಿಯಿರುವ ಚೀಲವನ್ನು ಇರಿಸಿ, ವಾಪಸ್ಸಾಗುತ್ತಾನೆ! ಈ ದೃಶ್ಯ ಅರ್ಥಗರ್ಭಿತ! ಹಾಗೆಯೇ ಸಿನಿಮಾದ ಕೊನೆಯಲ್ಲಿ “ ಹಿಂದೂ” ಎನ್ನುವ ಪದ ಕಾಣಿಸಲಾರದಷ್ಟು, “ ನಾವೆಲ್ಲ “ ಎಂಬ ಪದ ಮಸುಕಾಗಿ ಮೂಡಿಬಂದಿರುವುದು ಕೂಡ. ವಿನ್ಯಾ ತನ್ನ ತಂದೆ-ತಾಯಿಯ ಜೊತೆ ನಡೆದುಕೊಂಡು ಹೋಗುವ ಲಾಂಗ್ ಶಾಟ್ ಸಿನಿಮಾದ ಪರಿಕಲ್ಪನೆಯ ಹಾದಿ ದೂರ ಎಂಬುದನ್ನು ಸೂಚಿಸುತ್ತದೆ!
ವಿನ್ಯಾ ಪಾತ್ರದಲ್ಲಿ ಮೌನೇಶ್ ನಟರಂಗ ಸಹಜವಾಗಿ ನಟಿಸಿದ್ದಾನೆ. ಸಹಪಾಠಿ ಹುಡುಗಿಯ ಪಾತ್ರಕ್ಕೆ ಹೆಚ್ಚು ಸಂಭಾಷಣೆಗಳಿಲ್ಲ. ಆದರೆ ಆ ಪಾತ್ರವನ್ನು ನಿರ್ವಹಿಸಿರುವ ಅನನ್ಯ ಕಣ್ಭಾಷೆಯನ್ನು ಚೆನ್ನಾಗಿ ಬಳಸಿದ್ದಾಳೆ. ವಿನ್ಯಾನ ತಂದೆ ಮತ್ತು ತಾಯಿಯಾಗಿ ಮಹದೇವ ಹಡಪದ್ ಮತ್ತು ವೈ ಜಿ ಉಮಾ ತಮ್ಮ ಪಾತ್ರಗಳಿಗೆ ನ್ಯಾಯವನ್ನು ಒದಗಿಸಿದ್ದಾರೆ ; ಲೀಲಾಜಾಲವಾಗಿ ನಟಿಸಿದ್ದಾರೆ. ರಫೀಕ್‌ನ ಪಾತ್ರಧಾರಿ ಪುನೀತ್ ಶೆಟ್ಟಿಯವರ ನಟನೆ ಗಮನೀಯ. ತಾಂತ್ರಿಕ ವರ್ಗದವರ ಕೊಡುಗೆ ಸಿನಿಮಾದ ಓಘಕ್ಕೆ ಪೂರಕವಾಗಿದೆ. ಅನಂತ್ ಶಾಂದ್ರೇಯ ಅವರ ಚಿತ್ರಕಥೆ ಅನೇಕೆಡೆ ಬಿಗಿಯಾಗಿಯೇ ಇದೆ. ರಾಯಚೂರು ಸೀಮೆಯ ಕನ್ನಡವನ್ನು ಬಳಸಿರುವುದು ಈ ಸಿನಿಮಾದ ಹೈಲೈಟ್.
ಒಟ್ಟಿನಲ್ಲಿ ಸೂಕ್ಷ್ಮ, ಸಕಾಲಿಕ, ಗಹನ ವಿಷಯಗಳ ಒಂದು ಸಿನಿಮಾವನ್ನು ದಿಟ್ಟತನದಿಂದ ನೀಡಿರುವ ನಿರ್ದೇಶಕ, ನಿರ್ಮಾಪಕ ಮತ್ತು ಅವರ ತಂಡದ ಸದಸ್ಯರು ಅಭಿನಂದನಾರ್ಹರು. ದೃಶ್ಯ ಭಾಷೆಯ ಮೂಲಕ ಕಥನವನ್ನು ಸಮರ್ಥವಾಗಿ ರವಾನಿಸಿರುವ ನಿರ್ದೇಶಕರು ಭರವಸೆಯನ್ನು ಮೂಡಿಸುತ್ತಾರೆ.
ಮ ಶ್ರೀ ಮುರಳಿ ಕೃಷ್ಣ
ಲೇಖಕರು